ಚಾಮರಾಜನಗರ: ಜಿಲ್ಲೆಯಲ್ಲಿ ಮತ್ತೊಂದು ಗಣಿ ದುರಂತ (Mining) ನಡೆದು ಮೂವರು ಕಾರ್ಮಿಕರು (Workers Death) ಧಾರುಣವಾಗಿ ಮೃತಪಟ್ಟಿದ್ದಾರೆ. ಚಾಮರಾಜನಗರ ತಾಲೂಕಿನ ಬಿಸಿಲವಾಡಿಯಲ್ಲಿ (Bisilawadi, Chamarajanagar) ರೇಣುಕಾದೇವಿ ಎಂಬವರಿಗೆ ಸೇರಿದ ಬಿಳಿಕಲ್ಲು ಗಣಿಗಾರಿಕೆಯಲ್ಲಿ ಕಲ್ಲಿನ ಗುಡ್ಡ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಕಾಗಲವಾಡಿ ಮೋಳೆ ಗ್ರಾಮದ ಕುಮಾರ್, ಶಿವರಾಜು ಮೃತಪಟ್ಟ ಕಾರ್ಮಿಕರಾಗಿದ್ದಾರೆ. ಮತ್ತೋರ್ವ ಕಾರ್ಮಿಕರ ಹೆಸರು ತಿಳಿದು ಬಂದಿಲ್ಲ. ಕ್ವಾರಿ 200 ಅಡಿ ಆಳವಿದ್ದು ಒಬ್ಬ ಕಾರ್ಮಿಕ ಗಣಿಯ ಗೋಡೆಯಲ್ಲಿ ಕುಳಿ ಕೊರೆಯುತ್ತಿದ್ದಾಗ ಕಲ್ಲಿನ ಗುಡ್ಡ ಕುಸಿದಿದೆ. ಈತನು ಸೇರಿದಂತೆ ಕೆಳಗೆ ಕೆಲಸ ಮಾಡುತ್ತಿದ್ದ ಇನ್ನಿಬ್ಬರು ಕಾರ್ಮಿಕರ ಮೇಲೆ ಕಲ್ಲಿನ ಗುಡ್ಡ (Stone) ಕುಸಿದು ಮೂವರು ಸಹ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ತಕ್ಷಣ ಭೇಟಿ ನೀಡಿ ಮೃತರ ಶವಗಳನ್ನು ಸಿಮ್ಸ್ ಆಸ್ಪತ್ರೆಗೆ ಸಾಗಿಸಿದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ನಂಜುಂಡಸ್ವಾಮಿ,ಅವೈಜ್ಞಾನಿಕ ಗಣಿಗಾರಿಕೆಯೆ ದುರಂತಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಕ್ರಿಮಿನಲ್ ಪ್ರಕರಣ ದಾಖಲು
ಬಹಳ ಆಳವಾಗಿ ಗಣಿಗಾರಿಕೆ ಮಾಡಿರುವುದು ಕಂಡು ಬಂದಿದ್ದು ಈ ಹಿಂದೆ ಗಣಿ ಮಾಲೀಕರಿಗೆ ಹಲವು ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೂ ಎಚ್ಚೆತ್ತುಕೊಂಡಿಲ್ಲ. ಕೂಡಲೇ ಈ ಗಣಿಗಾರಿಕೆ ಬಂದ್ ಮಾಡಿ ಗಣಿ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.
ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ
ಕಳೆದ 20-25 ವರ್ಷಗಳಿಂದ ನಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಸುಮಾರು 200 ರಿಂದ 250 ಅಡಿ ಆಳದಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಲಾಗುತ್ತಿದೆ. 10 ವರ್ಷಗಳ ಹಿಂದೆಯೇ ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗಣಿಗಾರಿಕೆ ನಿಲ್ಲಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿತ್ತು ಎಂದು ಸ್ಥಳೀಯ ನಿವಾಸಿ ರವಿ ಹೇಳುತ್ತಾರೆ.
ನಿರಂತರ ಗಣಿಗಾರಿಕೆಯಿಂದ ಅಂತರ್ಜಲಮಟ್ಟ ಸಹ ಕುಸಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಎರಡೂ ಲೈಸೆನ್ಸ್ಗಳನ್ನು ನೀಡಲಾಗಿದೆ. ಅಧಿಕಾರಿಗಳು ಹಣದ ಆಸೆಗಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತ ಪರಿಣಾಮ ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ರವಿ ಆರೋಪಿಸಿದರು.
ನಿಯಮಗಳ ಉಲ್ಲಂಘನೆ
ದಿನಕ್ಕೆ ಇಷ್ಟು ಪ್ರಮಾಣ ಮಾತ್ರ ಗಣಿಗಾರಿಕೆ ನಡೆಸಬೇಕೆಂಬ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಗಣಿಗಾರಿಕೆ ನಡೆಸುವ ಮಾಲೀಕರು ಕಾರ್ಮಿಕರಿಗೆ ಯಾವುದೇ ರಕ್ಷಣಾ ಸಾಧನಗಳನ್ನು ಸಹ ನೀಡಲ್ಲ ಎಂದು ರವಿ ಹೇಳಿದರು.
ಕಳೆದ ಮಾರ್ಚ್ 4 ರಂದು ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿಯಲ್ಲಿ ಇದೇ ರೀತಿ ಗಣಿ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಗಣಿ ದುರಂತ ನಡೆದಿದೆ.
ಇದನ್ನೂ ಓದಿ: Chamarajanagara: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬಿದ್ದು ಸಾವು; ಜೀಪ್ನಲ್ಲಿದ್ದ ಸಿಬ್ಬಂದಿ ಅಮಾನತು
ಬೆಂಕಿ ಅವಘಡ, ವಸ್ತುಗಳು ಬೆಂಕಿಗಾಹುತಿ!
ಶಿವಮೊಗ್ಗ ಜಿಲ್ಲೆಯ ಸಾಗರದ ಹೊರವಲಯದ ಗಿಫ್ಟ್ ತಯಾರಿಕಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಲಾವಣ್ಯ ಎಂಬವರಿಗೆ ಸೇರಿದ ರಾಜ್ ಹ್ಯಾಂಡಿಕ್ರಾಫ್ಟ್ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಖ್ಯ ಶಿಕ್ಷಕಿ ಅಮಾನತಿಗೆ ಪಟ್ಟು!
ಚಿಕ್ಕಮಗಳೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ವಿರುದ್ಧ ಅಕ್ರಮ ಆರೋಪ ಕೇಳಿ ಬರ್ತಿದೆ. ಶಾಲಾ ಅಭಿವೃದ್ಧಿಗೆ ಸರ್ಕಾರದಿಂದ ಲಕ್ಷಾಂತರ ಅನುದಾನ ಬಿಡುಗಡೆಯಾಗಿದೆ. ಆದ್ರೆ ಸರ್ಕಾರದಿಂದ ಬಂದ ಲಕ್ಷಾಂತರ ಹಣವನ್ನು ಮುಖ್ಯ ಶಿಕ್ಷಕಿ ದುರುಪಯೋಗ ಪಡಿಸಿಕೊಂಡಿದ್ದಾರಂತೆ.
ಅಲ್ಲದೇ ಶಾಲಾ ಕಟ್ಟಡ ಹರಾಜು, ಮೇಲ್ಛಾವಣಿಗೆ ಬಳಸಿದ್ದ ಸಿಮೆಂಟ್ ಶೀಟುಗಳ ಮಾರಾಟ ಮಾಡಿರುವ ಆರೋಪಿವಿದೆ. ಈ ಹಿನ್ನೆಲೆ ಮೂಡಿಗೆರೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಜನರು ಪ್ರತಿಭಟನೆ ನಡೆಸಿ, ಮುಖ್ಯ ಶಿಕ್ಷಕಿ ಅಮಾನತಿಗೆ ಆಗ್ರಹಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ