ಆಯುಧ ಹಿಡಿದ ಕೈಯಲ್ಲಿ ಸ್ಟೆತಸ್ಕೋಪ್ - ಕೊಲೆ ಶಿಕ್ಷೆಗೆ ಗುರಿಯಾದಾತ ಈಗ ಜೀವದಾತ ವೈದ್ಯ

ಜೈಲಿನಿಂದ ಹೊರಬಂದ ನಂತರ ಧೃತಿಗೆಡದೆ ಸುಭಾಷ್ ಪಾಟೀಲ್, ಎಂಬಿಬಿಎಸ್ ಪದವಿ ಮುಂದುವರೆಸಿದ. ಕೊನೆಗೂ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ದಾನೆ. ಎಂ.ಆರ್.ವೈದ್ಯಕೀಯ ಕಾಲೇಜಿನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪಡೆದುಕೊಂಡು ಸಂಭ್ರಮಿಸಿದ್ದಾರೆ.

news18-kannada
Updated:February 16, 2020, 7:43 AM IST
ಆಯುಧ ಹಿಡಿದ ಕೈಯಲ್ಲಿ ಸ್ಟೆತಸ್ಕೋಪ್ - ಕೊಲೆ ಶಿಕ್ಷೆಗೆ ಗುರಿಯಾದಾತ ಈಗ ಜೀವದಾತ ವೈದ್ಯ
ವೈದ್ಯ ಸುಭಾಷ್ ಪಾಟೀಲ್
  • Share this:
ಕಲಬುರ್ಗಿ(ಫೆ.16) : ಕೊಲೆಯೊಂದರ ಆರೋಪ ಹೊತ್ತ ವ್ಯಕ್ತಿಯೋರ್ವ ಇದೀಗ ಜೀವ ರಕ್ಷಿಸುವ ವೈದ್ಯನಾಗಿ ಹೊರಹೊಮ್ಮಿದ್ದಾನೆ. ಕಲಬುರ್ಗಿಯ ಎಂ.ಆರ್.ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದುಕೊಂಡಿದ್ದಾನೆ. 14 ವರ್ಷಗಳ ಜೈಲುವಾಸದಿಂದ ಹೊರ ಬಂದ ಈತ, ಎಂಬಿಬಿಎಸ್ ಪೂರೈಸಿ, ಮಾರಕಾಸ್ತ್ರ ಹಿಡಿದ ಕೈಯಲ್ಲಿ ಸ್ಟೆತಸ್ಕೋಪ್ ಹಿಡಿದಿದ್ದಾನೆ. 

ಕೆಲವೊಮ್ಮೆ ಮನುಷ್ಯ ಸಂದರ್ಭದ ಕೂಸಾಗಿರುತ್ತಾನೆ. ಯಾವುದೋ ಸಂದರ್ಭದಲ್ಲಿ ಯಾವುದೋ ಉದ್ವೇಗಕ್ಕೆ ಒಳಗಾಗಿ ಏನೋ ಮಾಡಿ, ಮುಂದೆ ಪಶ್ಚಾತ್ತಾಪ ಪಡುತ್ತಾನೆ. ಇಂಥದ್ದೇ ಒಂದು ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ನಡೆದಿದೆ. ಕೊಲೆಯೊಂದನ್ನು ಮಾಡಿ, ಕೊಲೆಗಡುಕ ಪಟ್ಟ ಕಟ್ಟಿಕೊಂಡ ವ್ಯಕ್ತಿಯೋರ್ವ, ಇದೀಗ ಜೀವದಾನ ಮಾಡುವ ವೈದ್ಯನಾಗಿ ಹೊರಹೊಮ್ಮಿದ್ದಾನೆ. ಹಾಗೆ ಕೊಲೆಗಡುಕ ಪಟ್ಟದಿಂದ ಮುಕ್ತಿ ಹೊಂದಿ ಸ್ಟೆತಸ್ಕೋಪ್ ಹಿಡಿದ ವ್ಯಕ್ತಿ ಕಲಬುರ್ಗಿಯ ಸುಭಾಷ್ ಪಾಟೀಲ್. 2002ರಲ್ಲಿ ನಡೆದ ಅಶೋಕ್ ಗುತ್ತೇದಾರ ಕೊಲೆ ಪ್ರಕರಣದಲ್ಲಿ ಸುಭಾಷ್ ಪಾಟೀಲ್ ಬಂಧನಕ್ಕೊಳಗಾಗಿದ್ದ. ಅಶೋಕ್ ಗುತ್ತೇದಾರನ ಪತ್ನಿ ಪದ್ಮಾವತಿ ಜೊತೆ ಇಟ್ಟುಕೊಂಡ ಅಕ್ರಮ ಸಂಬಂಧ ಕೊಲೆಗೆ ಪ್ರೇರಣೆ ನೀಡಿತ್ತು ಎನ್ನಲಾಗಿದೆ.

ಆರೋಪ ಸಾಬೀತಾಗಿ ಸುಭಾಷ್ ಪಾಟೀಲ ಮತ್ತು ಪದ್ಮಾವತಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಸನ್ನಡತೆ ಆಧಾರದ ಮೇಲೆ 14 ವರ್ಷ ಜೈಲು ಶಿಕ್ಷೆ ಅನುಭವಿಸಿದ ನಂತರ 2016ರಲ್ಲಿ ಇಬ್ಬರು ಬಿಡುಗಡೆ ಹೊಂದಿ, ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹೀಗೆ ಜೈಲು ಶಿಕ್ಷೆಗೆ ಗುರಿಯಾಗುವ ಮುನ್ನವೇ ಸುಭಾಷ್ ಪಾಟೀಲ್ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದ ಎನ್ನೋದು ವಿಶೇಷ. ಎರಡು ವರ್ಷಗಳ ಕಾಲ ಎಂಬಿಬಿಎಸ್ ಪೂರೈಸಿದ್ದ ಸುಭಾಷ್, ಪರಸಂಗಕ್ಕೆ ಹೋಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ. ಪರಪ್ಪನ ಅಗ್ರಹಾರದಿಂದ ಕಲಬುರ್ಗಿ ಜೈಲಿಗೆ ವರ್ಗಾವಣೆಗೊಂಡು, ಇಲ್ಲಿಂದಲೇ ಬಿಡುಗಡೆಯ ಭಾಗ್ಯ ಪಡೆದಿದ್ದ.

ಕೊರೊನಾ ಭೀತಿ - ಚೀನಾದಿಂದ ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ ಕನ್ನಡಿಗ

ಜೈಲಿನಿಂದ ಹೊರಬಂದ ನಂತರ ಧೃತಿಗೆಡದೆ ಸುಭಾಷ್ ಪಾಟೀಲ್, ಎಂಬಿಬಿಎಸ್ ಪದವಿ ಮುಂದುವರೆಸಿದ. ಕೊನೆಗೂ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ದಾನೆ. ಎಂ.ಆರ್.ವೈದ್ಯಕೀಯ ಕಾಲೇಜಿನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪಡೆದುಕೊಂಡು ಸಂಭ್ರಮಿಸಿದ್ದಾರೆ.

ಜೀವನದಲ್ಲಿ ಒಮ್ಮೆ ತಪ್ಪು ಮಾಡಿದ್ದಕ್ಕಾಗಿ ದೊಡ್ಡ ಶಿಕ್ಷೆ ಅನುಭವಿಸಿದ್ದೇನೆ. ನಾನು ಮತ್ತೆ ಎಂಬಿಬಿಎಸ್ ಮಾಡಲು ಹೋದಾಗ ನನ್ನ ಸಹಪಾಠಿಗಳೇ ಗುರುಗಳ ಸ್ಥಾನದಲ್ಲಿ ನಿಂತಿದ್ದರು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ನಿಷ್ಠೆಯಿಂದ ಅಬ್ಯಾಸ ಮಾಡಿ, ಪದವಿ ಪೂರೈಸಿದ್ದೇನೆ. ಇನ್ನು ಮುಂದೆ ವೈದ್ಯನಾಗಿ ಜನರ ಜೀವ ಉಳಿಸುವ ಕೆಲಸ ಮಾಡುತ್ತೇನೆ. ಕೈದಿ ಮತ್ತು ಸೈನಿಕರ ಕುಟುಂಬಕ್ಕೆ ಉಚಿತ ಚಿಕಿತ್ಸೆ ಕೊಡುತ್ತೇನೆ. ಪೊಲೀಸರಿಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುತ್ತೇನೆ. ಸನ್ನಡತೆ ಆಧಾರದಲ್ಲಿ ಜೈಲಿನಿಂದ ಬಿಡುಗಡೆ ಪಡೆದಿದ್ದು, ಅದೇ ಸನ್ನಡೆತೆಯೊಂದಿಗೆ ಸಮಾಜದಲ್ಲಿ ಬದುಕುತ್ತೇನೆ ಸುಭಾಷ್ ಪಾಟೀಲ್ ಹೇಳುತ್ತಾರೆ.

ಹೆಂಡತಿ ಪದ್ಮಾವತಿ ಜೊತೆ ಸುಭಾಷ್​ ಪಾಟೀಲ್​​​
ಗಂಡನ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದ ಪದ್ಮಾವತಿ, ತನ್ನ ಪ್ರಿಯಕರ ಸುಭಾಷ್ ಪಾಟೀಲ್ ಗೆ ಮತ್ತಷ್ಟು ಹತ್ತಿರವಾಗಿದ್ದಳು. ಜೈಲಿನಲ್ಲಿದ್ದಾಗಲೇ ಎಂಎ ಪತ್ರಿಕೊದ್ಯಮ ಪೂರೈಸಿದ್ದ ಪದ್ಮಾವತಿ, ಜೈಲಿನಿಂದ ಹೊರ ಬಂದ ನಂತರ ಅಧಿಕೃತವಾಗಿ ಪಾಟೀಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹೊಸ ಜೀವನ ಆರಂಭಿಸಿದ ಸಂದರ್ಭದಲ್ಲಿಯೇ ಸಾಕಷ್ಟು ಕಷ್ಟಗಳನ್ನು ಎದುರಿಸುವಂತಾಯಿತು. ಎಂಬಿಬಿಎಸ್ ಪೂರೈಸಲು ತನ್ನ ಗಂಡ ಹಗಲಿರುಳು ಶ್ರಮಿಸಿದ್ದಾರೆ. ಕಷ್ಟಗಳ ಮೇಲೆ ಕಷ್ಟಗಳು ಬಂದರೂ ಅದಕ್ಕೆ ಸೆಡ್ಡು ಹೊಡೆದು ನಿಂತಿದ್ದಕ್ಕಾಗಿ ಕೊನೆಗೂ ಫಲ ಸಿಕ್ಕಿದೆ. ಪುಟ್ಟ ಕ್ಲಿನಿಕ್ ತೆಗೆದು, ಅದರ ಮೂಲಕವೇ ತಮ್ಮ ಭವಿಷ್ಯ ರೂಪಿಸಿಕೊಳ್ಳೋದಾಗಿ  ಎಂದು ಸುಭಾಷ ಪಾಟೀಲ್​​ ಹೆಂಡತಿ ಪದ್ಮಾವತಿ ಹೇಳುತ್ತಾರೆ.

ಕಲಬುರ್ಗಿಗೆ ಕೈತಪ್ಪಿದ ಜವಳಿ ಪಾರ್ಕ್ ; ಉಮೇಶ ಮನವಿ ಜಾಧವ್ ಎಂದು ಬಿಜೆಪಿ ಸಂಸದರ ಕಾಲೆಳೆಯುತ್ತಿರುವ ಜನರು

ಸುಭಾಷ್ ಪಾಟೀಲ ಬೆಂಗಳೂರು ಜೈಲಿನಲ್ಲಿದ್ದಾಗಲೇ ಡಿಪ್ಲೊಮಾ ಇನ್ ಜರ್ನಲಿಸಂ ಮತ್ತು ಎಂಎ ಪತ್ರಿಕೋದ್ಯಮ ಪದವಿ ಪೂರೈಸಿದ್ದಾರೆ. ಇದೀಗ ಎಂಬಿಬಿಎಸ್ ಪದವಿಯನ್ನೂ ಪೂರೈಸಿ ಮಾರಕಾಸ್ತ್ರ ಹಿಡಿದ ಕೈಯಲ್ಲಿ ಸ್ಟೆತಸ್ಕೋಪ್ ಹಿಡಿದು, ಜೀವ ರಕ್ಷಿಸಲು ಮುಂದಾಗಿದ್ದಾರೆ. ಸುಭಾಷ್ ಪಾಟೀಲ ಶ್ರದ್ಧೆ ಮತ್ತು ಪ್ರಯತ್ನಕ್ಕೆ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ.
First published: February 16, 2020, 7:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading