ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಅವಧಿ ಮುಕ್ತಾಯಗೊಂಡ ನಂತರ ಸಾರಿಗೆ ನೌಕರ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು. ನಾವು ಹಲವಾರು ಬಾರಿ ಮುಷ್ಕರ ನಿರತ ನೌಕರರಲ್ಲಿ ಈಗಾಗಲೇ ಮನವಿ ಮಾಡಿಕೊಂಡಿದ್ದೇವೆ. ಆದರೆ ಇದಕ್ಕೆ ಕೆಲವು ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳು ಹುಳಿ ಹಿಂಡುತ್ತಾ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತಿದ್ದಾರೆ. ಇದರಿಂದಾಗಿ ದಿನದಿಂದ ದಿನಕ್ಕೆ ಈ ಮುಷ್ಕರವು ಸಾರ್ವಜನಿಕರ ಸಹಾನುಭೂತಿಯನ್ನೂ ಕಳೆದುಕೊಳ್ಳುತ್ತಿದೆ. ಇದರಿಂದ ಹತಾಶೆಗೊಂಡಿರುವ ಕೆಲವರು ದಿನದಿಂದ ದಿನಕ್ಕೆ ವಾಮಮಾರ್ಗದ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಾ, ಸಾರ್ವಜನಿಕರ ದೃಷ್ಟಿಯಲ್ಲಿ ನಗೆಪಾಟಲಿಗೆ ಈಡಾಗುತ್ತಿದ್ದಾರೆ. ಇದು ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಖುಷಿಪಡುವ ಯತ್ನ ಎಂಬ ಸತ್ಯವನ್ನು ಸಾರಿಗೆ ನೌಕರರು ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಸಮಸ್ಯೆಯನ್ನು ಬಗೆಹರಿಸಲು ವಿವೇಚನೆಯಿಂದ ಸರ್ಕಾರ ಹೆಜ್ಜೆ ಇಡುತ್ತಿದೆ. ಆದರೆ ಇದನ್ನು ನಮ್ಮ ದೌರ್ಬಲ್ಯ ಎಂದು ಯಾರೂ ಪರಿಗಣಿಸಬಾರದು. ನಮ್ಮ ತಾಳ್ಮೆಯನ್ನು ಮತ್ತಷ್ಟು ಪರೀಕ್ಷಿಸಲು ಯಾರಾದರೂ ಮುಂದಾದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಸಿದ್ದ ಎಂದು ಡಿಸಿಎಂ ಲಕ್ಷ್ಮಣ ಸವದಿ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ: ಕೆಎಸ್ಆರ್ಟಿಸಿ, ಬಿಎಂಟಿಸಿ ಖಾಸಗಿಯವರಿಗೆ ಮಾರುವ ಒಳಸಂಚು ನಡೆದಿದೆ; ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ
ಇದು ಬೇವು ಬೆಲ್ಲದ ಹಬ್ಬವಾದ ಯುಗಾದಿಯ ಪುಣ್ಯ ಸಂದರ್ಭ. ಸಾರಿಗೆ ನೌಕರರ ಬದುಕಿನಲ್ಲಿ ಬೇವಿಗಿಂತ ಬೆಲ್ಲದ ಸಿಹಿಯೇ ಹೆಚ್ಚು ಸಿಗುವಂತಾಗಲಿ ಎಂದು ಶುಭ ಹಾರೈಸುತ್ತೇನೆ. ಬದುಕಿನಲ್ಲಿ ಬೆಲ್ಲದ ಸವಿ ಹೆಚ್ಚಾಗಲು ಸಾರಿಗೆ ನೌಕರರು ಕೂಡಲೇ ತಮ್ಮ ಕರ್ತವ್ಯಕ್ಕೆ ಹಾಜರಾಗಿ ಜನರ ಪ್ರೀತಿ ವಿಶ್ವಾಸಕ್ಕೆ ಭಾಜನರಾಗಬೇಕೆಂದು ನಾನು ಪುನರುಚ್ಛರಿಸುತ್ತೇನೆ ಎಂದು ಸಾರಿಗೆ ನೌಕರರಲ್ಲಿ ಸವದಿ ಮನವಿ ಮಾಡಿದ್ದಾರೆ.
ಆರನೇ ವೇತನ ಆಯೋಗ ಜಾರಿ ಮಾಡುವಂತೆ ಆಗ್ರಹಿಸಿ ಸಾರಿಗೆ ನೌಕರರು ಕಳೆದ ಐದು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಈವರೆಗೂ ಸರ್ಕಾರ ಹಾಗೂ ಪ್ರತಿಭಟನಾನಿರತ ನೌಕರರ ನಡುವೆ ಯಾವುದೇ ಮಾತುಕತೆ ನಡೆದಿಲ್ಲ. ಸಾರಿಗೆ ನೌಕರರಿಗೆ ಆರನೇ ವೇತನ ಆಯೋಗ ಜಾರಿ ಮಾಡುವುದು ಅಸಾಧ್ಯ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ಜೊತೆಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಖಾಸಗಿ ಬಸ್ಸುಗಳ ಮಾಲೀಕರೊಂದಿಗೆ ಮಾತನಾಡಿ, ಖಾಸಗಿ ಬಸ್ಸುಗಳಲ್ಲಿ ಸಾರ್ವಜನಿಕರ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಅಲ್ಲದೇ ಪ್ರತಿಭಟನೆಯಲ್ಲಿ ಭಾಗಿಯಾಗಿರುವವರ ಕೆಲವರನ್ನು ಅಮಾನತು ಮಾಡಿದರೆ, ಇನ್ನು ಕೆಲವರನ್ನು ಕ್ವಾಟ್ರಸ್ ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡಿದೆ. ಸರ್ಕಾರ ಎಷ್ಟೇ ಎಚ್ಚರಿಕೆ ನೀಡಿದರೂ, ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದರೂ ನೌಕರರು ತಮ್ಮ ಪಟ್ಟು ಸಡಿಲಿಸದೆ ಹೋರಾಟ ಮುಂದುವರೆಸಿದ್ದಾರೆ. ಇಂದು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಸಾರಿಗೆ ನೌಕರರು ತಟ್ಟೆ-ಲೋಟ ಬಡಿಯುವ ಮೂಲಕ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಹೋರಾಟ ಮುಂದುವರೆದಿದ್ದು, ಇನ್ನು ಎಷ್ಟು ದಿನ ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ