ಮಹದೇಶ್ವರ ಬೆಟ್ಟಕ್ಕೆ ತಿರುಪತಿ ಮಾದರಿಯಲ್ಲಿ ಮೆಟ್ಟಿಲು ನಿರ್ಮಾಣ ಯೋಜನೆಗೆ ಚಾಲನೆ

ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗಿನ‌  ಬಸವನ ಹಾದಿ 9.4 ಕಿಲೋಮೀಟರ್ ದೂರವಿದೆ. ಲಕ್ಷಾಂತರ ಭಕ್ತಾದಿಗಳು ಮಹದೇಶ್ವರನ  ದೇವಸ್ಥಾನಕ್ಕೆ ಈ ಹಾದಿಯಲ್ಲೇ ನಡೆದು ಬರುವುದರಿಂದ ಈ ಮಾರ್ಗದ  ಪುನಶ್ಚೇತನ ‌ಕಾರ್ಯ‌ ಪ್ರಾರಂಭವಾಗಿದೆ

ಮೆಟ್ಟಿಲು ನಿರ್ಮಾಣ ಯೋಜನೆಗೆ ಚಾಲನೆ

ಮೆಟ್ಟಿಲು ನಿರ್ಮಾಣ ಯೋಜನೆಗೆ ಚಾಲನೆ

 • Share this:
  ಚಾಮರಾಜನಗರ (ಏ.15) ಮಹದೇಶ್ವರ ಬೆಟ್ಟಕ್ಕೆ ಭಕ್ತರು ಕಾಲ್ನಡಿಗೆ ಮೂಲಕ ತೆರಳುವ ಬಸವನ ಹಾದಿಯನ್ನು ಸುಗಮಗೊಳಿಸಲು ತಿರುಪತಿ ಮಾದರಿಯಲ್ಲಿ ಮೆಟ್ಟಿಲುಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. 27 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಕಳೆದ ನವೆಂಬರ್‌ 25 ರಂದು ಮುಖ್ಯ ಮಂತ್ರಿ ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ತಾಳಬೆಟ್ಟದ ಮುಖ್ಯ ದ್ವಾರದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಇಷ್ಟಾರ್ಥ ಸಿದ್ದಿಗಾಗಿ ಮಹದೇಶ್ವರನ ಭಕ್ತರು ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಬರುವುದಾಗಿ ಹರಕೆ ಹೊರುವುದು ಸಾಮಾನ್ಯವಾಗಿದೆ. ಇಲ್ಲಿನ ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ  ಬಸವನಹಾದಿ ಹಾಗೂ ಸರ್ಪನ ಹಾದಿ ಎಂಬ ಎರಡು ದಾರಿಗಳಿದ್ದು  ಬಸವಹಾದಿ ದಟ್ಟಾರಣ್ಯದ  ಬೆಟ್ಟಗುಡ್ಡಗಳಿಂದ ಕೂಡಿದೆ. ಸರ್ಪನ ಹಾದಿ ರಸ್ತೆ ಮೂಲಕವೇ ಸಾಗುತ್ತದೆ. ಆದರೆ ಬಸವನಹಾದಿಯ ಮೆಟ್ಟಿಲುಗಳು ಶಿಥಿಲಗೊಂಡಿವೆ. ಹಾಗಾಗಿ ಭಕ್ತರು ಕಲ್ಲು ಮುಳ್ಳು ಗಳ ನಡುವೆ ಬೆಟ್ಟ ಹತ್ತಿ ಬರಬೇಕಿತ್ತು  

  ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗಿನ‌  ಬಸವನ ಹಾದಿ 9.4 ಕಿಲೋಮೀಟರ್ ದೂರವಿದೆ. ಲಕ್ಷಾಂತರ ಭಕ್ತಾದಿಗಳು ಮಹದೇಶ್ವರನ  ದೇವಸ್ಥಾನಕ್ಕೆ ಈ ಹಾದಿಯಲ್ಲೇ ನಡೆದು ಬರುವುದರಿಂದ ಈ ಮಾರ್ಗದ  ಪುನಶ್ಚೇತನ ‌ಕಾರ್ಯ‌ ಪ್ರಾರಂಭವಾಗಿದೆ. ಸುಮಾರು 6900  ಮೆಟ್ಟಿಲುಗಳು ಹಾಗು 13100 ನೆಲಹಾಸುಗಳನ್ನು  ಈ ಯೋಜನೆ ಒಳಗೊಂಡಿವೆ. ಖಾಸಗಿ ಕಂಪನಿಯೊಂದು ಕಾಮಗಾರಿಯ ಟೆಂಡರ್ ಪಡೆದಿದ್ದು ಎರಡು ವರ್ಷದೊಳಗೆ ಮೆಟ್ಟಿಲು ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

  ದಶಕಗಳ ಹಿಂದೆಯೇ ಈ ಕೆಲಸ ಆಗಬೇಕಿತ್ತು. ಲೋಕೋಪಯೋಗಿ ಇಲಾಖೆಯ ಅಂದಿನ ಸೂಪರಿಂಟೆಂಡೆಂಟ್ ಇಂಜಿನಿಯರ್ ಆಗಿದ್ದ  ( ಪ್ರಸ್ತುತ ಚೀಫ್ ಇಂಜನಿಯರ್ ) ವೀರಭದ್ರಯ್ಯ  ತಮ್ಮ ತಂಡದೊಂದಿಗೆ 2020ರ ಜನವರಿಯಲ್ಲಿ ಬಸವನ ಹಾದಿಯ ಮೆಟ್ಟಿಲುಗಳನ್ನು  ಹತ್ತಿ,  ವಿಸ್ತ್ರತ ಯೋಜನಾ ವರದಿಯನ್ನು ತಯಾರಿಸಿ‌ ನೀಡಿದ್ದರು. ಈ ವರದಿಯನ್ನು 2020 ರ ಮಾರ್ಚ್ ‌19 ರಂದು ನಡೆದ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಸಭೆಗೆ ಮಂಡಿಸಿ ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿತ್ತು, ಲೋಕೋಪಯೋಗಿ ಇಲಾಖೆ ಟೆಂಡರ್ ಪ್ರಕ್ರಿಯೆ  ಪೂರ್ಣಗೊಳಿಸಿದ ನಂತರ ಶಂಕುಸ್ಥಾಪನೆ  ಮಾಡಿಸಿ ಇದೀಗ ಎಲ್ಲ ಅಡತಡೆಗಳನ್ನು ನಿವಾರಿಸಿಕೊಂಡು ಕಾಮಗಾರಿ ಆರಂಭಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ

  ಮೆಟ್ಟಿಲುಗಳನ್ನು ಹತ್ತಿ ದಣಿದು ಬರುವ ಭಕ್ತರ ವಿಶ್ರಾಂತಿ ಗಾಗಿ ರಂಗಸ್ವಾಮಿ ಒಡ್ಡು, ಆನೆತಲೆದಿಂಬ ಸೇರಿದಂತೆ ಮೂರು ಕಡೆ ವಿಶ್ರಾಂತಿ ಕೊಠಡಿ, ಶೌಚಾಲಯ ನಿರ್ಮಿಸಲು ಸಹ ಯೋಜಿಸಲಾಗಿದೆ. ಮೆಟ್ಟಿಲುಗಳ ನಿರ್ಮಾಣಕ್ಕೆ ಬಳಸುವ ಒಂದು ಕಲ್ಲಿಗೆ ಸರಿಸುಮಾರು ಹತ್ತು ಸಾವಿರ ರೂಪಾಯಿ ವೆಚ್ಚ ತಗುಲುವ ಅಂದಾಜಿದೆ. ಈ ಕಾರ್ಯಕ್ಕೆ ದೇಣಿಗೆ ನೀಡುವವರು ಪ್ರಾಧಿಕಾರದ ವೆಬ್ ಸೈಟ್ www.mmhillstemple.comಗೆ ಲಾಗಿನ್ ಆಗಿ ನೇರವಾಗಿ donation ಪಾವತಿಸಬಹುದು ಅಥವಾ ದೇವಾಲಯಕ್ಕೆ ಬಂದು ಮಾಹಿತಿ‌ ಕೇಂದ್ರದಲ್ಲಿ ಪಾವತಿಸಿ‌‌ ರಸೀದಿ‌ ಪಡೆಯಬಹುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ

   (ವರದಿ: ಎಸ್.ಎಂ.ನಂದೀಶ್)
  Published by:Seema R
  First published: