ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಜನವರಿ 9 ರಂದು ರಾಜ್ಯಾದ್ಯಂತ ರೈಲು ಬಂದ್ ಚಳವಳಿ: ವಾಟಾಳ್ ನಾಗರಾಜ್

ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಮುಂದಿನ ತಿಂಗಳು ಎರಡನೇ ಹಂತದ ಚಳವಳಿ ಆರಂಭಿಸಲಾಗುತ್ತಿದ್ದು, ಜನವರಿ 9 ರಂದು ರಾಜ್ಯಾದ್ಯಂತ ರೈಲು ತಡೆ ಚಳವಳಿ ನಡೆಸಲಾಗುವುದು

ವಾಟಾಳ್ ನಾಗರಾಜ್

ವಾಟಾಳ್ ನಾಗರಾಜ್

  • Share this:
ಚಾಮರಾಜನಗರ(ಡಿಸೆಂಬರ್. 14): ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ರಾಜ್ಯಾದ್ಯಂತ ಜನವರಿ 9 ರಂದು ರೈಲು ಬಂದ್ ಚಳವಳಿ ನಡೆಸಲಾಗುವುದು ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ. ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದ ಅವರು ಜಿಲ್ಲಾಡಳಿತ ಭವನದ ಮುಂದೆ ತಮ್ಮ ಬೆಂಬಲಿಗರೊಂದಿಗೆ ರಾಜ್ಯ ಸರ್ಕಾರದ ವಿರುದ್ದ ದಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಮುಂದಿನ ತಿಂಗಳು ಎರಡನೇ ಹಂತದ ಚಳವಳಿ ಆರಂಭಿಸಲಾಗುತ್ತಿದ್ದು ಜನವರಿ 9 ರಂದು ರಾಜ್ಯಾದ್ಯಂತ ರೈಲು ತಡೆ ಚಳವಳಿ ನಡೆಸಲಾಗುವುದು, ರಾಜ್ಯದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಹಾಗು ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ಹಾದು ಹೋಗಿರುವ ರೈಲು ಹಳಿಗಳ ಮೇಲೆ ಕುಳಿತು ಸತ್ಯಗ್ರಹ ನಡೆಸಿ ರೈಲು ತಡೆ ನಡೆಸಲಾಗುವುದು ಎಂದರು.  

ರಾಜ್ಯಾದ್ಯಂತ ಈಗಾಗಲೇ  ಎರಡು ಸಾವಿರ ಕನ್ನಡಪರ ಸಂಘಟನೆಗಳು ಈ  ಪ್ರತಿಭಟನೆಗೆ   ಬೆಂಬಲ ನೀಡುತ್ತಿವೆ ಎಂದು ತಿಳಿಸಿದ್ದಾರೆ. ಅಂದು ಪ್ರಯಾಣಿಕರು ರೈಲು ನಿಲ್ದಾಣದ ಕಡೆ ಬರಬಾರದು ಎಂದು ಅವರು ಮನವಿ ಮಾಡಿದರು. ಇದು ಕನ್ನಡಿಗರ ಉಳಿವಿನ ಪ್ರಶ್ನೆಯಾಗಿದ್ದು, ನಮ್ಮ ಹೋರಾಟ ಯಾವುದೇ ಕಾರಣಕ್ಕು ನಿಲ್ಲುವುದಿಲ್ಲ ಎಂದು ವಾಟಾಳ್ ಹೇಳಿದರು

ಇದನ್ನೂ ಓದಿ : ಕೋಡಿಹಳ್ಳಿ ಚಂದ್ರಶೇಖರ್​​ ಗೂ ಸಾರಿಗೆ ಸಂಸ್ಥೆಗೂ ಏನ್ ಸಂಬಂಧ: ಸಂಸದೆ ಶೋಭಾ ಕರಂದ್ಲಾಜೆ ಕಿಡಿ

ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಹೊರನಾಡು ಗೊತ್ತಿಲ್ಲ. ಗಡಿನಾಡು ಗೊತ್ತಿಲ್ಲ. ಸಾಂಸ್ಕೃತಿಕವಾದ ಚಿಂತನೆ ಇಲ್ಲ. ಬಹುಸಂಖ್ಯಾತರಿದ್ದಾರೆ ಎಂದು ನಿಗಮ ಮಾಡಲು ಹೊರಟಿದ್ದಾರೆ. ನಾಳೆ ತಮಿಳರು, ಮಾರ್ವಾಡಿಗಳಿಗೂ ಕೊಡಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಒಂದು ಕಡೆ ಎಂಇಎಸ್ ಬೆಳಗಾವಿಯಲ್ಲಿ ಪ್ರತಿನಿತ್ಯ ಗೂಂಡಾಗಿರಿ ಮಾಡುತ್ತಿದ್ದಾರೆ. ಶಿವಸೇವೆ ಅವರು ಕಾರವಾರ, ನಿಪ್ಪಾಣಿ ನಮಗೆ ಸೇರಬೇಕು ಎಂದು ಹೇಳುತ್ತಿದ್ದಾರೆ. ನಿಗಮ ರಚನೆಯಿಂದಾಗಿ ಮುಂದಿನ ದಿನಗಳಲ್ಲಿ ನಾವು ಭಾರಿ ಏಟು ತಿನ್ನಬೇಕಾಗುತ್ತದೆ ಎಂದು ವಾಟಾಳ್ ನಾಗರಾಜ್ ಹೇಳಿದರು.
Published by:G Hareeshkumar
First published: