Ramesh Jarkiholi CD Case: ಕೋರ್ಟ್ನಲ್ಲಿ ಸಂತ್ರಸ್ತ ಯುವತಿಯ ಹೇಳಿಕೆ; ಆಯುಕ್ತರ ಜೊತೆ ಸಭೆ ನಡೆಸಿದ ಎಸ್ಐಟಿ ತಂಡ
ಹಲವು ಬಾರಿ ನೋಟಿಸ್ ನೀಡಿದರು ಪತ್ತೆಯಾಗದ ಸಂತ್ರಸ್ತೆ, ಸದ್ಯ ಇಂದು ಪ್ರತ್ಯಕ್ಷವಾಗಿದ್ದು, ಮುಂದಿನ ಪ್ರಕ್ರಿಯೆಗಳ ಬಗ್ಗೆ ಹಿರಿಯ ಅಧಿಕಾರಿಗಳಿಂದ ಚರ್ಚೆ ನಡೆಸಲಾಗಿದೆ ಎನ್ನಲಾಗುತ್ತಿದೆ.
ಬೆಂಗಳೂರು (ಮಾರ್ಚ್ 30); ಕಳೆದ ಒಂದು ತಿಂಗಳಿನಿಂದ ರಾಜ್ಯ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುತ್ತಿರುವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ಕೊನೆಗೂ ತಾರ್ಕಿಕ ಅಂತ್ಯದತ್ತ ಸಮೀಪಿಸಿದೆ. ಇಷ್ಟು ದಿನಗಳ ಕಾಲ ತಲೆ ಮರೆಸಿಕೊಂಡಿದ್ದ ಸಂತ್ರಸ್ತ ಯುವತಿ ಇಂದು ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಿ ತನ್ನ ಹೇಳಿಕೆಯನ್ನು ದಾಖಲಿಸಿದ್ದಾಳೆ. ಹೀಗಾಗಿ ನ್ಯಾಯಾಧೀಶರೂ ಸಹ ಆಕೆಯನ್ನು ವೈಧ್ಯಕೀಯ ಪರೀಕ್ಷೆಗೆ ಒಳಪಡಿಸಲು ಸೂಚನೆ ನೀಡಿದ್ದಾರೆ. ಸಂತ್ರಸ್ತ ಯುವತಿ ತನ್ನ ಮೇಲೆ ಅತ್ಯಾಚಾರ ನಡೆದದ್ದು ಸತ್ಯ ಎಂದು ಹೇಳಿಕೆ ನೀಡಿದರೆ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಬಂಧನ ಖಚಿತವಾಗಲಿದೆ. ಇದೇ ಕಾರಣಕ್ಕೆ ನ್ಯಾಯಾಲಯದಲ್ಲಿ ಒಂದೆಡೆ ಯುವತಿ ತನ್ನ ಹೇಳಿಕೆಯನ್ನು ದಾಖಲಿಸುತ್ತಿದ್ದರೆ, ಮತ್ತೊಂದೆಡೆ ಪ್ರಕರಣದ ವಿಚಾರಣೆ ಜವಾಬ್ದಾರಿ ಹೊತ್ತಿರುವ ಎಸ್ಐಟಿ ತಂದ ಪೊಲೀಸ್ ಆಯುಕ್ತರ ಜೊತೆ ಮುಂದಿನ ಕ್ರಮದ ಬಗ್ಗೆ ಸುದೀರ್ಘ ಸಭೆ ನಡೆಸಿ ಚರ್ಚಿಸಿದ್ದಾರೆ ಎಂಬ ಮಾಹಿತಿಗಳು ಇದೀಗ ನ್ಯೂಸ್18ಗೆ ಲಭ್ಯವಾಗಿದೆ.
ಎಸ್ಐಟಿ ತಂಡ ಮತ್ತು ಪೊಲೀಸ್ ಆಯುಕ್ತರು ಕಳೆದ ಒಂದು ಗಂಟೆಯಿಂದ ಸಭೆ ನಡೆಸುತ್ತಿದ್ದು, ಸಭೆಯಲ್ಲಿ ಎಸ್ಐಟಿ ಈವರೆಗೂ ಸಂಗ್ರಹಿಸಲಾದ ಮಾಹಿತಿ, ಹೇಳಿಕೆಗಳ ಬಗ್ಗೆ ಚರ್ಚೆ ನಡೆಸಿದೆ ಎನ್ನಲಾಗಿದೆ. ಸದ್ಯ ಎಸ್ ಐಟಿ ಬಳಿ ಇದೆ ಸಿಡಿ ಹಿಂದಿನ ಮೂರು ಕೇಸ್ಗಳಿವೆ. ಕಿಡ್ನಾಪ್, ಸಿಡಿ ಷಡ್ಯಂತ್ರ ಹಾಗೂ ಸಂತ್ರಸ್ತೆ ದೂರಿನ ಕುರಿತು ಅವರು ವಿಚಾರಣೆ ನಡೆಸಬೇಕಿದೆ. ಈವರೆಗೂ ಕೇಸ್ ನಲ್ಲಿ ಹಲವು ಮಂದಿಯ ವಿಚಾರಣೆ ನಡೆಸಿರುವ ಎಸ್ ಐಟಿ, ನೆನ್ನೆ ಸಂತ್ರಸ್ತೆ ದೂರು ಸಂಬಂಧ ರಮೇಶ್ ಜಾರಿಕಿಹೊಳಿ ಹೇಳಿಕೆ ಪಡೆದಿದ್ದರು.
ಹಲವು ಬಾರಿ ನೋಟಿಸ್ ನೀಡಿದರು ಪತ್ತೆಯಾಗದ ಸಂತ್ರಸ್ತೆ, ಸದ್ಯ ಇಂದು ಪ್ರತ್ಯಕ್ಷವಾಗಿದ್ದು, ಮುಂದಿನ ಪ್ರಕ್ರಿಯೆಗಳ ಬಗ್ಗೆ ಹಿರಿಯ ಅಧಿಕಾರಿಗಳಿಂದ ಚರ್ಚೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಅಲ್ಲದೆ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಬಂಧನ ಬಹುತೇಕ ಖಚಿತ ಎಂದೂ ಹೇಳಲಾಗುತ್ತಿದೆ.
ಇದಕ್ಕೂ ಮೊದಲು ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ಸಿಡಿ ಬಿಡುಗಡೆಯಾದ ದಿನದಿಂದ ಆ ವಿಡಿಯೋದಲ್ಲಿದ್ದ ಯುವತಿ ತಲೆಮರೆಸಿಕೊಂಡಿದ್ದರು. ಅಜ್ಞಾತವಾಗಿದ್ದುಕೊಂಡೇ 5 ವಿಡಿಯೋ ಸಂದೇಶಗಳನ್ನು ಕಳುಹಿಸಿದ್ದ ಸಂತ್ರಸ್ಥ ಯುವತಿ ಕೊನೆಗೂ ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ. ತಮ್ಮ ವಕೀಲರ ತಂಡದ ಜೊತೆ ಇಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವ ಯುವತಿಗೆ ನಾಲ್ಕು ಕಾರುಗಳು ಬೆಂಗಾವಲು ಭದ್ರತೆ ಒದಗಿಸಲಾಗಿತ್ತು.
ಭದ್ರತೆಯೊಂದಿಗೆ ಬೆಂಗಳೂರಿಗೆ ಆಗಮಿಸಿರುವ ಯುವತಿ ಗುರುನಾನಕ್ ಭವನದಲ್ಲಿರೋ ಕೋರ್ಟ್ ಹಾಲ್ ನಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿದ್ದಾರೆ. ಅಲ್ಲದೆ, ಒಂದು ಗಂಟೆಯ ಅವಧಿಯಲ್ಲಿ ತನ್ನ ಹೇಳಿಕೆಯನ್ನು ದಾಖಲು ಮಾಡಿರುವ ಯುವತಿಯನ್ನು ವೈಧ್ಯಕೀಯ ತಪಾಸಣೆಗೆ ಒಳಗಾಗುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ. ಹೀಗಾಗಿ ಪೊಲೀಸರು ಸಂತ್ರಸ್ತ ಯುವತಿಯನ್ನು ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ