news18-kannada Updated:November 18, 2020, 3:51 PM IST
ಶಶಿಕಲಾ ಜೋಲ್ಲೆ
ಬೆಂಗಳೂರು(ನ. 18): ಕರ್ನಾಟಕದಲ್ಲಿರುವ ಬೆಳಗಾವಿ, ನಿಪ್ಪಾಣಿ ಮತ್ತು ಕಾರವಾರ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಆ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಎನ್ಸಿಪಿ ಮುಖಂಡ ಅಜಿತ್ ಪವಾರ್ ಅವರು ನೀಡಿದ ಹೇಳಿಕೆಗೆ ರಾಜ್ಯದಲ್ಲಿ ವ್ಯಾಪಕ ಖಂಡನೆ ಮತ್ತು ಪ್ರತಿಭಟನೆ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಪವಾರ್ ಹೇಳಿಕೆಯನ್ನು ಖಂಡಿಸಿದರು. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳು ಉದ್ಧಟತನದ ಹೇಳಿಕೆ ಕೊಟ್ಟಿದ್ದಾರೆ. ಬೆಳಗಾವಿ ನಮ್ಮ ರಾಜ್ಯದ ಅವಿಭಾಜ್ಯ ಅಂಗ. ಮಹಾಜನ್ ಆಯೋಗದ ವರದಿ ಅಂತಿಮ. ರಾಜ್ಯದಲ್ಲಿರುವ ಮರಾಠಿಗರೂ ಕನ್ನಡಿಗರೇ. ನಾನು ನಿಗಮ ಮಾಡಿರುವುದು ಮರಾಠ ಜನಾಂಗದ ಅಭಿವೃದ್ಧಿ ಮಾಡಲು. ಅಜಿತ್ ಪವಾರ್ ಅವರು ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಇದನ್ನ ನಾನು ಖಂಡಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.
ಇನ್ನು, ಬೆಂಗಳೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೂಡ ಪವಾರ್ ಹೇಳಿಕೆಯನ್ನು ಬಲವಾಗಿ ಖಂಡಿಸಿದರು. ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಹೇಳಿಕೆಯನ್ನು ಖಂಡಿಸುತ್ತೇನೆ. ಕಾರವಾರ, ನಿಪ್ಪಾಣಿ, ಬೆಳಗಾವಿ ನಮ್ಮ ರಾಜ್ಯದ ಅವಿಭಾಜ್ಯ ಅಂಗಗಳಾಗಿವೆ. ಜೊತೆಗೆ ಮಹಾಜನ್ ವರದಿಯಂತೆ ಮಹಾರಾಷ್ಟ್ರದಲ್ಲಿರುವ ಸೋಲಾಪುರವೂ ನಮಗೆ ಬರಬೇಕು ಎಂದು ಖಂಡ್ರೆ ಅಭಿಪ್ರಾಯಪಟ್ಟರು.
ಚಿಕ್ಕೋಡಿ ಜಿಲ್ಲೆಯ ರಾಜಕೀಯ ನಾಯಕರು ಅಜಿತ್ ಪವಾರ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ಈ ವಿಚಾರದ ಕೇಸ್ ಇರುವಾಗ ಇಂಥ ಮಾತುಗಳನ್ನಾಡುವುದು ತಪ್ಪು. ಭಾಷಾವಾರು ಪ್ರಾಂತ್ಯಗಳ ವಿಂಗಣೆ ಆದಾಗ ಕರ್ನಾಟಕದ ರಚನೆ ಆಗಿದೆ. ಇದೇನು ಅವರ ಸ್ವತ್ತಲ್ಲ. ನಾವು ಬಿಟ್ಟುಕೊಡಲು ತಯಾರಿಲ್ಲ. ನಮ್ಮ ಅಖಂಡತೆಯನ್ನು ನಮ್ಮದಾಗಿಟ್ಟುಕೊಳ್ಳಲು ನಮ್ಮ ಪ್ರಯತ್ನ ಇದೆ. ಅವರು ಏನಾದರೂ ಹೇಳಿಕೊಳ್ಳಲಿ. ನಾವು ನಮ್ಮೊಳಗೆ ಜಗಳವಾಡದೆ ಕರ್ನಾಟಕದ ರಕ್ಷಣೆ ಮಾಡಲು ಸಮರ್ಥರಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೋಲ್ಲೆ ನಿಪ್ಪಾಣಿಯಲ್ಲಿ ಹೇಳಿದರು.
ಬೆಳಗಾವಿಯ ನಿಪ್ಪಾಣಿಯಲ್ಲಿ ಮಾತನಾಡಿದ ಮತ್ತೊಬ್ಬ ಸಚಿವ ಪ್ರಭು ಚೌವ್ಹಾನ್, ಏ ಕರ್ನಾಟಕ ಉಸ್ಕಾ ಬಾಪ್ ಕಾ ನಯೀ, ಮಹಾರೆ ಹೈ ಎಂದು ಹಿಂದಿಯಲ್ಲಿ ಹೇಳಿ ತಿರುಗೇಟು ನೀಡಿದರು.
ಇದನ್ನೂ ಓದಿ: ರಾಜ್ಯದ ಮರಾಠ ಜನರ ಅಭಿವೃದ್ಧಿಗೆ ಪ್ರಾಧಿಕಾರ; ಮರಾಠಿ ಭಾಷೆಗೂ ಇದಕ್ಕೂ ಸಂಬಂಧವಿಲ್ಲ; ಸಿಎಂ ಬಿಎಸ್ವೈ ಸ್ಪಷ್ಟನೆ
ಕುಡಚಿ ಶಾಸಕ ಹಾಗೂ ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಪಿ ರಾಜೀವ್ ಮಾತನಾಡುತ್ತಾ, ಅಜಿತ್ ಪವಾರ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು. ಬೆಳಗಾವಿ ಕರ್ನಾಟಕದ ಕಿರೀಟ ಇದ್ದ ಹಾಗೆ, ಇದು ನಮ್ಮ ರಾಜ್ಯದ ಅವಿಭಾಜ್ಯ ಅಂಗವಾಗಿದೆ. ಮಹಾರಾಷ್ಟ್ರದಲ್ಲಿ ಇಂಥ ಎಷ್ಟೋ ಹೇಳಿಕೆಗಳನ್ನ ಕೊಟ್ಟ ವ್ಯಕ್ತಿಗಳು ಅಸ್ತಿತ್ವ ಇಲ್ಲದ ಹ ಆಗೆ ಕೊನೆಯಾಗಿದ್ದಾರೆ. ಕರ್ನಾಟಕದಲ್ಲಿ ರಾಜಾಹುಲಿ ಯಡಿಯೂರಪ್ಪ ಅವರ ಸರ್ಕಾರ ಇದೆ ಎನ್ನುವುದನ್ನು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ತಮ್ಮ ಪ್ರಜ್ಞೆಯಲ್ಲಿ ಇಟ್ಟುಕೊಳ್ಳಬೇಕು. ಇಂಥ ಹೇಳಿಕೆಗಳಿಗೆ ನಾವು ಪ್ರಾಮುಖ್ಯತೆ ಕೊಡಬೇಕಿಲ್ಲ ಎಂದು ಪಿ. ರಾಜೀವ್ ಅವರು ಬೆಳಗಾವಿಯ ರಾಯಭಾಗದ ಹಾರೋಗೆರೆಯಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
ವಿಜಯಪುರದ ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ ಪಾಟೀಲ ಅವರೂ ಅಜಿತ್ ಪವಾರ್ ಬಗ್ಗೆ ಅಸಮಾಧಾನ ಹೊರಹಾಕಿದರು. ಪ್ರಜ್ಞಾವಂತ ನಾಯಕರೆನಿಸಿದರು ತಮ್ಮ ಮಿತಿಗಳನ್ನ ಮೀರಿ ಮಾತನಾಡಬಾರದು. ಇಂಥ ಸೂಕ್ಷ್ಮ ವಿಷಯಗಳನ್ನ ಕೆದಕಿ ಜನರಲ್ಲಿ ಕಿಚ್ಚು ಹಚ್ಚುವ ಕೆಲಸ ಮಾಡಬಾರದು. ಸಣ್ಣ ವಿಚಾರಗಳನ್ನ ರಾಜಕೀಯವಾಗಿ ಬಳಕೆ ಮಾಡಬಾರದು. ಅದು ಅಂದಿಗೆ ಮುಗಿದ ಹೋದ ವಿಚಾರ. ಈಗ ಮತ್ತೆ ಕೆದಕುವ ಪ್ರಶ್ನೆ ಇಲ್ಲ. ನಾವೆಲ್ಲರೂ ಈ ದೇಶದಲ್ಲಿ ಅಣ್ಣ ತಮ್ಮಂದಿರಂತೆ ಬಾಳಿ ಬದುಕಬೇಕಿದೆ. ಈ ರೀತಿ ಕಿಡಿ ಹೊತ್ತಿಸುವುದು ಸರಿಯಲ್ಲ ಎಂದು ಕಾಂಗ್ರೆಸ್ ಶಾಸಕ ಹೇಳಿಕೆ ನೀಡಿದರು.
ಇದನ್ನೂ ಓದಿ: ಡಾರ್ಕ್ ವೆಬ್ ಮೂಲಕ ಅಕ್ರಮ ನಡೆಸುತ್ತಿದ್ದ ಬೆಂಗಳೂರಿನ ಕುಖ್ಯಾತ ಹ್ಯಾಕರ್ ಶ್ರೀಕಿ ಬಂಧನ
ಇನ್ನು, ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಯಿತು. ಅಜಿತ್ ಪವಾರ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.
ಅಜಿತ್ ಪವಾರ್ ಹೇಳಿಕೆ ವಿಚಾರವಾಗಿ ರಾಜ್ಯ ಸರ್ಕಾರವನ್ನೂ ಕರವೇ ತರಾಟೆಗೆ ತೆಗೆದುಕೊಂಡಿದೆ. ಮರಾಠಾ ಅಭಿವೃದ್ಧಿ ನಿಗಮದ ಮೂಲಕ ಮರಾಠರನ್ನು ಓಲೈಕೆ ಮಾಡುತ್ತಿರುವ ಪರಿಣಾಮ ಇದು ಎಂದು ಕರವೇ ಟೀಕಿಸಿದೆ.
Published by:
Vijayasarthy SN
First published:
November 18, 2020, 2:00 PM IST