‘ಕನ್ನಡ ಭಾಷೆ ಮತ್ತು ಸಂಸ್ಕೃತಿ ಗೌರವಿಸುವುದು ನಮ್ಮ ಜವಾಬ್ದಾರಿ‘: ಖಾಸಗಿ ಸಂಸ್ಥೆಗಳಿಗೆ ಹೈಕೋರ್ಟ್​​​ ಛೀಮಾರಿ

ಮೊದಲಿಗೆ ಕನ್ನಡ ನಾಮಫಲಕ ಕಡ್ಡಾಯ ಪ್ರಶ್ನಿಸಿ ರೀಟೇಲರ್ಸ್ ಆಸೋಸಿಯೇಷನ್ಸ್ ಆಫ್ ಇಂಡಿಯಾ ಸಂಸ್ಥೆ ತಕರಾರು ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ಬೆನ್ನಲ್ಲೇ ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ ಕೂಡ ಅರ್ಜಿ ಸಲ್ಲಿಸಿತ್ತು. ಹಾಗಾಗಿ ಒಂದರ ನಂತರ ಮತ್ತೊಂದು ಅರ್ಜಿ ವಿಚಾರಣೆ ನಡೆಸಬೇಕಾದ ಕಾರಣ ವಿಚಾರಣೆ ಹೈಕೋರ್ಟ್​​ ಜನವರಿಗೆ ಮುಂದೂಡಿತ್ತು.

ಕನ್ನಡ ಬಾವುಟ.

ಕನ್ನಡ ಬಾವುಟ.

 • Share this:
  ಬೆಂಗಳೂರು(ಡಿ.28): ಕನ್ನಡ ಭಾಷೆಯಲ್ಲಿ ನಾಮಫಲಕ ಹೊಂದಿಲ್ಲದ ಅಂಗಡಿ ಮುಂಗಟ್ಟು, ಕಚೇರಿ ಇತ್ಯಾದಿಗಳ ಪರವಾನಿಗೆ ಹಿಂಪಡೆಯಲು ಬಿಬಿಎಂಪಿ ತೀರ್ಮಾನ ಮಾಡಿದ ಬೆನ್ನಲ್ಲೇ ಕೆಲವು ವಾಣಿಜ್ಯ ಖಾಸಗಿ ಸಂಸ್ಥೆಗಳು ಸುಪ್ರೀಂಕೋರ್ಟ್​​ ಮೊರೆ ಹೋಗಿವೆ. ಬೆಂಗಳೂರಿನ ಸುಮಾರು 13 ಸಾವಿರ ಅಂಗಡಿ, ಮುಂಗಟ್ಟು ಮತ್ತು ಮಳಿಗೆಗಳಿಗೆ ಬಿಬಿಎಂಪಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಿ ಎಂದು ನೀಡಿದ ನೋಟೀಸ್ ರದ್ದು ಮಾಡುವಂತೆ ಈ ಸಂಸ್ಥೆಗಳು ಮನವಿ ಅರ್ಜಿ ಸಲ್ಲಿಸಿವೆ. ಸದ್ಯದಲ್ಲೇ ಸುಪ್ರೀಂಕೋರ್ಟ್​ ಈ ಬಗ್ಗೆ ಚರ್ಚೆ ನಡೆಸಿ ತೀರ್ಪು ನೀಡಲಿದೆ. 

  ಈ ಮುನ್ನ ಕಳೆದ ನವೆಂಬರ್ 30ರೊಳಗೆ ಕನ್ನಡ ನಾಮಫಲಕ ಹಾಕಿಲ್ಲದ ಅಂಗಡಿಗಳ ಲೈಸೆಲ್ಸ್ ರದ್ದುಗೊಳಿಸುವುದಾಗಿ ಬಿಬಿಎಂಪಿ ನೋಟೀಸ್ ನೀಡಿದ್ದರ ವಿರುದ್ಧ ಮೆಟ್ರೋ ಕ್ಯಾಶ್​​ ಅಂಡ್​​ ಕ್ಯಾರಿ ಎಂಬ ಸಂಸ್ಥೆಯೂ ಹೈಕೋರ್ಟ್​​ ಮೆಟ್ಟಿಲೇರಿತ್ತು. ಕನ್ನಡದಲ್ಲಿ ನಾಮಫಲಕ ಕಡ್ಡಾಯ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠ ಸಂಸ್ಥೆಗೆ ಛೀಮಾರಿ ಹಾಕಿತ್ತು. ನೀವಿರೋದು ಕನ್ನಡ ನಾಡಿನಲ್ಲಿ, ಇಲ್ಲಿನ ಭಾಷೆ ಮತ್ತು ಸಂಸ್ಕೃತಿ ಗೌರವಿಸುವುದು ನಿಮ್ಮ ಜವಾಬ್ದಾರಿ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನ ಗೌರವಿಸಿ ಎಂದು ಅರ್ಜಿದಾರರಿಗೆ ಮೌಖಿಕವಾಗಿಯೇ ಹೈಕೋರ್ಟ್​​ ಕಿವಿಮಾತು ಹೇಳಿತ್ತು.

  ಮೊದಲಿಗೆ ಕನ್ನಡ ನಾಮಫಲಕ ಕಡ್ಡಾಯ ಪ್ರಶ್ನಿಸಿ ರೀಟೇಲರ್ಸ್ ಆಸೋಸಿಯೇಷನ್ಸ್ ಆಫ್ ಇಂಡಿಯಾ ಸಂಸ್ಥೆ ತಕರಾರು ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ಬೆನ್ನಲ್ಲೇ ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ ಕೂಡ ಅರ್ಜಿ ಸಲ್ಲಿಸಿತ್ತು. ಹಾಗಾಗಿ ಒಂದರ ನಂತರ ಮತ್ತೊಂದು ಅರ್ಜಿ ವಿಚಾರಣೆ ನಡೆಸಬೇಕಾದ ಕಾರಣ ವಿಚಾರಣೆ ಹೈಕೋರ್ಟ್​​ ಜನವರಿಗೆ ಮುಂದೂಡಿತ್ತು.

  ಬಿಬಿಎಂಪಿಯ ನಿಯಮಾವಳಿ ಪ್ರಕಾರ, ಯಾವುದೇ ಅಂಗಡಿ ಅಥವಾ ಮಳಿಗೆಯು ತನ್ನ ನಾಮಫಲಕದಲ್ಲಿ ಕನಿಷ್ಠ ಶೇ. 60ರಷ್ಟು ಕನ್ನಡ ಭಾಷೆ ಬಳಕೆ ಮಾಡಬೇಕು. ಇನ್ನುಳಿದ ಭಾಗವನ್ನು ಯಾವುದೇ ಭಾಷೆಯಲ್ಲಾದರೂ ಬರೆದುಕೊಳ್ಳಬಹುದು. ನವೆಂಬರ್ 1ರಂದೇ ಈ ಕ್ರಮ ಅನುಷ್ಠಾನಕ್ಕೆ ಬರಬೇಕಿತ್ತು. ಆದರೆ, ನೂತನ ಬೆಂಗಳೂರು ಮೇಯರ್ ಗೌತಮ್ ಕುಮಾರ್ ಜೈನ್ ಅವರು ಕನ್ನಡ ನಾಮಫಲಕ ಅಳವಡಿಕೆಗೆ ನವೆಂಬರ್ 30ವರೆಗೆ ಗಡುವು ನೀಡಿದ್ದರು.

  “ನಾಮಫಲಕದಲ್ಲಿ ಶೇ. 60ರಷ್ಟು ಭಾಗ ಕನ್ನಡ ಭಾಷೆಯಲ್ಲಿರಬೇಕು. ಇದನ್ನು ಅಳವಡಿಸಿಕೊಳ್ಳದಿದ್ದರೆ ಅವರ ಪರವಾನಿಗೆ ರದ್ದುಗೊಳಿಸಲಾಗುವುದು. ಈ ನಿಯಮ ಪಾಲಿಸದ ಹೊಸ ಉದ್ಯಮಕ್ಕೂ ಲೈಸೆನ್ಸ್ ಕೊಡುವುದಿಲ್ಲ. ಕನ್ನಡ ನಾಮಫಲಕ ಇಲ್ಲದಿದ್ದರೆ ದಂಡ ಹಾಕುವ ಬದಲು ಲೈಸೆನ್ಸ್ ರದ್ದುಗೊಳಿಸುವ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ನ್ಯೂಸ್18 ವಾಹಿನಿಗೆ ಮೇಯರ್ ತಿಳಿಸಿದ್ದರು.

  ಇದನ್ನೂ ಓದಿ: ನ. 30ರ ನಂತರ ಕನ್ನಡ ನಾಮಫಲಕ ಇಲ್ಲದಿದ್ದರೆ ಲೈಸೆನ್ಸ್ ರದ್ದು: 13 ಸಾವಿರ ಅಂಗಡಿಗಳಿಗೆ ಬಿಬಿಎಂಪಿ ನೋಟೀಸ್

  ಬೆಂಗಳೂರಿನಲ್ಲಿ ಪರವಾನಿಗೆ ಪಡೆದು ನಿರ್ವಹಿಸುತ್ತಿರುವ 20,689 ಅಂಗಡಿಗಳ ಪೈಕಿ 7,734 ಅಂಗಡಿಗಳು ಮಾತ್ರ ಕನ್ನಡ ನಾಮಫಲಕ ಬಳಸುತ್ತಿರುವುದು ಕಂಡು ಬಂದಿದೆ. ಇನ್ನುಳಿದ 13 ಸಾವಿರಕ್ಕಿಂತ ಹೆಚ್ಚು ಅಂಗಡಿಗಳು ಈ ನಿಯಮ ಪಾಲಿಸುತ್ತಿಲ್ಲ. ಇಂಥ ಅಂಗಡಿಗಳನ್ನು ಗುರುತಿಸಿ ನೋಟೀಸ್ ಕೊಡಲಾಗಿದೆ.

  ಆದರೆ, ಬಿಬಿಎಂಪಿಯ ಈ ಕ್ರಮಕ್ಕೆ ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್​ಕೆಸಿಸಿಐ) ಕನ್ನಡ ನಾಮಫಲಕ ಅಳವಡಿಕೆಯನ್ನು ಅನುಷ್ಠಾನಕ್ಕೆ ತರುವುದು ಕಷ್ಟಸಾಧ್ಯ. ಇದಕ್ಕೆ ಇನ್ನೂ ಹೆಚ್ಚಿನ ಕಾಲಾವಕಾಶ ಕೊಡಬೇಕು ಎಂದು ಅಭಿಪ್ರಾಯಪಟ್ಟಿದೆ.“ಉದ್ದಿಮೆ ಮತ್ತು ವ್ಯಾಪಾರಿಗಳ ಹಿಂದೆ ಬೀಳುವ ಬದಲು ಬಿಬಿಎಂಪಿಯು ರಸ್ತೆ ಗುಂಡಿಗಳನ್ನು ಮುಚ್ಚಲು ಗಮನ ಹರಿಸಬೇಕು. ಆರ್ಥಿಕ ಹಿಂಜರಿತದಿಂದಾಗಿ ನಮಗೆ ಎದುರಾಗಿರುವ ಸಮಸ್ಯೆಗಳನ್ನು ಅವರು ಅರಿತುಕೊಳ್ಳಬೇಕು” ಎಂದು ಎಫ್​ಕೆಸಿಸಿಐ ಅಧ್ಯಕ್ಷ ಸಿ.ಆರ್. ಜನಾರ್ಧನ ಅವರು ಹೇಳಿದ್ದರು. ಈ ಬೆನ್ನಲ್ಲೀಗ ಈ ಸಂಸ್ಥೆಗಳು ಕನ್ನಡ ನಾಮಫಲಕ ಕಡ್ಡಾಯಗೊಳಿಸಿ ಎಂಬ ನೋಟಿಸ್​​ ರದ್ದುಗೊಳಿಸಿ ಎಂದು ಸುಪ್ರೀಂಕೋರ್ಟ್​ ಮೊರೆ ಹೋಗಿವೆ.
  Published by:Ganesh Nachikethu
  First published: