ಆಪರೇಷನ್ ಕಮಲದ ಕಾರಣಕ್ಕೆ ರಾಜ್ಯದಲ್ಲಿ ಕುಗ್ಗಿರುವ ಜೆಡಿಎಸ್ ಪಕ್ಷದ ಪ್ರಭಾವವನ್ನು ಮತ್ತೆ ಬೇರು ಮಟ್ಟದಿಂದ ಸಂಘಟಿಸುವ ಹಾಗೂ ರಾಜ್ಯದಲ್ಲಿ ಪಕ್ಷದ ಭವಿಷ್ಯವನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಜೆಡಿಯು ಉಚ್ಛಾಟಿತ ನಾಯಕ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರನ್ನು ಜೆಡಿಎಸ್ ಪಕ್ಷಕ್ಕೆ ಕರೆತರಲು ತೆನೆ ನಾಯಕರು ಅವರನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರದ ಸಿಎಎ ಮತ್ತು ಎನ್ಆರ್ಸಿಗೆ ಜೆಡಿಯು ಪಕ್ಷ ಬೆಂಬಲ ಸೂಚಿಸಿದ ಹಿನ್ನೆಲೆ ಬಿಹಾರದ ಸಿಎಂ ನಿತೀಶ್ ಕುಮಾರ್ ಅವರ ನಿಲುವನ್ನು ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ಬಹಿರಂಗವಾಗಿ ಟೀಕಿಸಿದ್ದರು. ಅಲ್ಲದೆ, ಈ ಕುರಿತು ನಿತೀಶ್ ಕುಮಾರ್ ಹಾಗೂ ಪ್ರಶಾಂತ್ ಕಿಶೋರ್ ನಡುವೆ ಟ್ವಿಟರ್ನಲ್ಲಿ ಮಾತಿನ ಸಮರವೂ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಸೂಚನೆ ಮೇರೆಗೆ ಕಿಶೋರ್ ಅವರನ್ನು ಬುಧವಾರ ಜೆಡಿಯು ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನದಿಂದ ಉಚ್ಛಾಟನೆ ಮಾಡಲಾಗಿದೆ.
ಅಸಲಿಗೆ 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಮತ್ತು ಬಿಜೆಪಿ ರಾಷ್ಟ್ರದಾದ್ಯಂತ ಅಧಿಕ ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವಲ್ಲಿ ಪ್ರಶಾಂತ್ ಕಿಶೋರ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದೇ ಕಾರಣಕ್ಕೆ ಇವರನ್ನು ಚುನಾವಣಾ ತಂತ್ರಜ್ಞ ಎಂದೇ ಕರೆಯಲಾಗುತ್ತದೆ. ಇದೀಗ ಜೆಡಿಯು ಪಕ್ಷದಿಂದ ಹೊರ ನಡೆದಿರುವ ಕಿಶೋರ್ ಬಿಜೆಪಿ ಮತ್ತು ಜೆಡಿಯು ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಪರವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಐ-ಪಿಎಸಿ ಎಂಬ ಹೆಸರಿನ ಚುನಾವಣಾ ಸಲಹಾ ಸಂಸ್ಥೆ ಸ್ಥಾಪಿಸಿದ್ದ ಪ್ರಶಾಂತ್ ಕಿಶೋರ್ ಈ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆ ಭಾಗಿ ಕೆಲಸ ನಿರ್ವಹಿಸಿದ್ದಾರೆ. ಅಲ್ಲದೆ, ಆಂಧ್ರಪ್ರದೇಶ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಗೆಲುವಿನಲ್ಲೂ ಕಿಶೋರ್ ಪಾತ್ರ ಪ್ರಮುಖವಾದದ್ದು. ಇದೀಗ ಆಮ್ ಆದ್ಮಿಯಲ್ಲಿ ಅವರು ಕೆಲಸ ನಿರ್ವಹಿಸುತ್ತಿದ್ದಾರೆ.
ಪ್ರಶಾಂತ್ ಕಿಶೋರ್ ಚುನಾವಣಾ ರಣತಂತ್ರ ಹೆಣೆದರೆ ಗೆಲುವು ಖಚಿತ ಎಂಬ ಮಾತು ರಾಷ್ಟ್ರದಾದ್ಯಂತ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದೆ. ಇದೇ ಕಾರಣಕ್ಕೆ ರಾಜ್ಯದಲ್ಲಿ ಪ್ರಸ್ತುತ ಕುಗ್ಗಿರುವ ಜೆಡಿಎಸ್ ಬಲವನ್ನು ಹೆಚ್ಚಿಸುವ ಸಲುವಾಗಿ, ಪಕ್ಷ ಸಂಘಟನೆ ಹಾಗೂ ಚುನಾವಣಾ ರಣತಂತ್ರ ಕುರಿತು ಸೂತ್ರ ರೂಪಿಸಲು ಕಾರ್ಯಕರ್ತರ ಒತ್ತಾಯದ ಮೇರೆಗೆ ಪ್ರಶಾಂತ್ ಕಿಶೋರ್ ಅವರನ್ನು ಜೆಡಿಎಸ್ ಪಕ್ಷಕ್ಕೆ ಕರೆತರಲು ಇಲ್ಲಿನ ನಾಯಕರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ನಾಥೂರಾಮ್ ಗೋಡ್ಸೆ ಮತ್ತು ನರೇಂದ್ರ ಮೋದಿ ಈ ಇಬ್ಬರದ್ದೂ ಒಂದೇ ಸಿದ್ಧಾಂತ; ರಾಹುಲ್ ಗಾಂಧಿ ವಾಗ್ದಾಳಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ