ಪೊಲೀಸರನ್ನು ತಪ್ಪಿತಸ್ಥರ ಜಾಗದಲ್ಲಿ ನಿಲ್ಲಿಸುವುದು ತಪ್ಪು: ಎಚ್​​.ಡಿ ಕುಮಾರಸ್ವಾಮಿ ವಿರುದ್ಧ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಿಡಿ

ಇನ್ನು, ಮಾಜಿ ಸಿಎಂ ಕುಮಾರಸ್ವಾಮಿ ಘಟನೆಯನ್ನು ತಿರುಚಿ ಹೇಳಲು ಮುಂದಾಗಿದ್ದಾರೆ. ಶಾಂತವಾಗಿದ್ದ ರಾಜ್ಯವನ್ನು ಕೆಣಕುವ ಕೆಲಸ ಕುಮಾರಸ್ವಾಮಿ ಮಾಡಿದ್ದಾರೆ. ತಾವು ಬಿಡುಗಡೆ ಮಾಡಿದ ವಿಡಿಯೋ ಮ್ಯಾಜಿಸ್ಟ್ರಿಯಲ್ ತನಿಖೆ ಮಾಡುವವರಿಗೆ ಕೊಡಲಿ. ನಾನು ಈ ವಿಡಿಯೋಗಳ ಪರಿಶೀಲಿಸಿ ಎಂದು ಜಿಲ್ಲಾಧಿಕಾರಿಗೆ ಹೇಳಿದ್ದೇವೆ ಎಂದರು.

news18-kannada
Updated:January 10, 2020, 3:11 PM IST
ಪೊಲೀಸರನ್ನು ತಪ್ಪಿತಸ್ಥರ ಜಾಗದಲ್ಲಿ ನಿಲ್ಲಿಸುವುದು ತಪ್ಪು: ಎಚ್​​.ಡಿ ಕುಮಾರಸ್ವಾಮಿ ವಿರುದ್ಧ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಿಡಿ
ಗೃಹ ಸಚಿವ ಬಸವರಾಜ ಬೊಮ್ಮಾಯಿ
  • Share this:
ಬೆಂಗಳೂರು(ಜ.10):ಮಂಗಳೂರು ಗಲಭೆ ಕುರಿತಾದ ಪೊಲೀಸರ ದೌರ್ಜ್ಯದ ವಿಡಿಯೋ ಬಿಡುಗಡೆ ಮಾಡಿದ ಮಾಜಿ ಮುಖ್ಯಮಂತ್ರಿ ಎಚ್​​.ಡಿ ಕುಮಾರಸ್ವಾಮಿ ವಿರುದ್ಧ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗಾರರ ಜತೆಗೆ ಮಾತಾಡಿದ ಗೃಹ ಸಚಿವರು, ಎಚ್​​.ಡಿ ಕುಮಾರಸ್ವಾಮಿ ಬೇಜವಾಬ್ದಾರಿ ನಡವಳಿಕೆ ತೋರಿದ್ದಾರೆ. ಪೊಲೀಸರು‌ ಗಲಭೆ ಮಾಡುವುದಿಲ್ಲ, ಬದಲಿಗೆ ನಿಯಂತ್ರಿಸುತ್ತಾರೆ ಎಂದು ಕುಟುಕಿದರು.

ಎಚ್​​.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೂ ಇದೇ ಪೊಲೀಸರು ಇದ್ದರು. ಪೊಲೀಸರನ್ನು ತಪ್ಪಿತಸ್ಥರು ಎಂದು ಹೇಳುವುದು ಸರಿಯಿಲ್ಲ. ಕುಮಾರಸ್ವಾಮಿ ಬಿಡುಗಡೆ ಮಾಡಿದ ವಿಡಿಯೋ ಸರಿಯಿಲ್ಲ. ವೀಡಿಯೋದಲ್ಲಿ ಹಿಂದೆ ಇರೋದು ಮುಂದೆ, ಮುಂದೆ ಇರೋದು ಹಿಂದೆ ಹಾಕಿ ತೋರಿಸಿದ್ದಾರೆ. ಜನ ಸೇರಿದಾಗ, ಕಲ್ಲು ಎಸೆದಾಗ ಲಾಠಿ ಚಾರ್ಜ್ ಆಗಿದೆ. ಶಸ್ತ್ರಾಸ್ತ್ರ ಸಂಗ್ರಹಣೆ ಮಾಡಿದ್ದ ಸ್ಥಳಕ್ಕೆ ದಾಳಿ ಮಾಡಲು ಮುಂದಾದಾಗ ಗೋಲಿಬಾರ್ ಆಗಿದೆ ಎಂದು ಪೊಲೀಸರ ನಡೆಯನ್ನು ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ.

ಇನ್ನು, ಮಾಜಿ ಸಿಎಂ ಕುಮಾರಸ್ವಾಮಿ ಘಟನೆಯನ್ನು ತಿರುಚಿ ಹೇಳಲು ಮುಂದಾಗಿದ್ದಾರೆ. ಶಾಂತವಾಗಿದ್ದ ರಾಜ್ಯವನ್ನು ಕೆಣಕುವ ಕೆಲಸ ಕುಮಾರಸ್ವಾಮಿ ಮಾಡಿದ್ದಾರೆ. ತಾವು ಬಿಡುಗಡೆ ಮಾಡಿದ ವಿಡಿಯೋ ಮ್ಯಾಜಿಸ್ಟ್ರಿಯಲ್ ತನಿಖೆ ಮಾಡಲಿ. ನಾನು ಈ ವಿಡಿಯೋಗಳ ಪರಿಶೀಲಿಸಿ ಎಂದು ಜಿಲ್ಲಾಧಿಕಾರಿಗೆ ಹೇಳಿದ್ದೇವೆ ಎಂದರು.

ಪೊಲೀಸರೇ ಪ್ರಚೋದನೆ ಕೊಟ್ಟರು ಎಂದು ಕುಮಾರಸ್ವಾಮಿ ಹೇಳಿದ್ಧಾರೆ. ಇದು ತಪ್ಪು, ಬೇಜವಾಬ್ದಾರಿಯುತ ಹೇಳಿಕೆ. ಅವರು ಸಿಎಂ ಆಗಿದ್ದಾಗ ಎಲ್ಲೆಲ್ಲಿ ಗಲಭೆ ಆಯ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಮತ್ತಷ್ಟು ವೀಡೀಯೋ ಇದೆ ಅಂದಿದಾರೆ. ಅವುಗಳನ್ನು ಕುಮಾರಸ್ವಾಮಿ ಬಿಡುಗಡೆ ಮಾಡಲಿ. ಒಬ್ಬ ಮಾಜಿ ಮುಖ್ಯಮಂತ್ರಿ ಹೀಗೆ ನಡೆದುಕೊಳ್ಳೋದು ಸರಿಯಿಲ್ಲ ಎಂದು ಗುಟುರು ಹಾಕಿದರು.

ಇದನ್ನೂ ಓದಿ: ಮಂಗಳೂರು ಗಲಭೆಯಲ್ಲಿ ಪೊಲೀಸರ ದೌರ್ಜನ್ಯದ ಹೊಸ ವಿಡಿಯೋ ಬಿಡುಗಡೆ ಮಾಡಿದ ಮಾಜಿ ಸಿಎಂ ಎಚ್​ಡಿಕೆ

ಈಗಾಗಲೇ ಮಂಗಳೂರು ಗಲಭೆ ಕುರಿತಂತೆ ಪೊಲೀಸರು ವಿಡಿಯೋ ಬಿಡುಗಡೆ ಮಾಡಿದ ನಂತರ ಈಗ ಮಾಜಿ ಸಿಎಂ ಕುಮಾರಸ್ವಾಮಿ ಪೊಲೀಸರ ವಿರುದ್ಧ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿ ಪತ್ರಕರ್ತರಿಗೆ ವಿಡಿಯೋ ಪ್ರದರ್ಶಿಸಿ ಕುಮಾರಸ್ವಾಮಿ ಕೆಲವು ಚಿತ್ರಗಳನ್ನೂ ಬಿಡುಗಡೆ ಮಾಡಿದ್ದಾರೆ. ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಪೊಲೀಸರು ಅಮಾಯಕರನ್ನು, ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯಾವಳಿಗಳಿವೆ.

ಸಿಎಎ-ಎನ್‌ಆರ್‌ಸಿ ಪ್ರತಿಭಟನೆ ಸಂಬಂಧ ಮಂಗಳೂರಿನಲ್ಲುಂಟಾದ ಗಲಭೆ ಕುರಿತು ಸರ್ಕಾರದ ತಪ್ಪುಗಳನ್ನು ಮುಚ್ಚಿಹಾಕುವ ಯತ್ನ ಮಾಡುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಅಲ್ಲದೇ ಈ ಸಂಭಂದ ಹಲವು ಮಾಹಿತಿ ಸಂಗ್ರಹ ಮಾಡಿದ್ದೇನೆ. ಇನ್ನೂ ಕೆಲವು ಮಾಹಿತಿ ಸಂಗ್ರಹಿಸುತ್ತಿದ್ದೇನೆ ಈ ಬಗ್ಗೆ ಹೋರಾಟ ಮಾಡುತ್ತೇನೆ ಎಂದಿದ್ದಾರೆ.
Published by: Ganesh Nachikethu
First published: January 10, 2020, 1:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading