ಸಿದ್ಧಾರ್ಥರ ಕಾಫಿ ಡೇ ಸಾಮ್ರಾಜ್ಯ ರಕ್ಷಣೆಗೆ ಮುಂದಾದ ರಾಜ್ಯ ಸರ್ಕಾರ; ಗ್ಲೋಬಲ್ ವಿಲೇಜ್ ಟೆಕ್ ಮಾರಾಟಕ್ಕಿದ್ದ ತೊಡಕು ನಿವಾರಣೆ

ಗ್ಲೋಬಲ್ ಟೆಕ್ ಪಾರ್ಕ್​ನ ಮೌಲ್ಯವಾದ 2700 ಕೋಟಿ ಹಣವನ್ನು ಕೊಟ್ಟು ಅದನ್ನು ಕೊಳ್ಳುವುದಕ್ಕೆ ಮುಂದೆ ಬಂದಿರುವ ಕಂಪೆನಿ ಬ್ಲ್ಯಾಕ್ ಸ್ಟೋನ್. ಐಟಿ ಕಂಪೆನಿಗಳ ಪೈಕಿ ಪ್ರತಿಷ್ಠಿತ ಕಂಪೆನಿ ಎನಿಸಿಕೊಂಡಿರುವ ಬ್ಲ್ಯಾಕ್ ಸ್ಟೋನ್ ಈಗಾಗಲೇ ಅಂತಿಮ ಹಂತದ ಮಾತುಕತೆಯನ್ನು ಕೂಡ ಗ್ಲೋಬಲ್ ಟೆಕ್ ಪಾರ್ಕ್ ಆಡಳಿತ ಮಂಡಳಿ ಜತೆ ಪೂರ್ಣಗೊಳಿಸಿದೆ. ಮಾತುಕತೆ ಯಶಸ್ವಿಯೂ ಆಗಿದೆ.

news18-kannada
Updated:January 11, 2020, 4:20 PM IST
ಸಿದ್ಧಾರ್ಥರ ಕಾಫಿ ಡೇ ಸಾಮ್ರಾಜ್ಯ ರಕ್ಷಣೆಗೆ ಮುಂದಾದ ರಾಜ್ಯ ಸರ್ಕಾರ; ಗ್ಲೋಬಲ್ ವಿಲೇಜ್ ಟೆಕ್ ಮಾರಾಟಕ್ಕಿದ್ದ ತೊಡಕು ನಿವಾರಣೆ
ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್.
  • Share this:
ಬೆಂಗಳೂರು: ಇದು ನಿಜಕ್ಕೂ ಒಂದು ಒಳ್ಳೆಯ ಬೆಳವಣಿಗೆಯೇ ಸರಿ. ಕಾಫಿಯ ಪ್ರಾದೇಶಿಕ ಘಮಲನ್ನು ಜಾಗತಿಕ ಮಟ್ಟಕ್ಕೆ ವ್ಯಾಪಿಸಿದ ಸಿದ್ಧಾರ್ಥ ನಿಜಕ್ಕೂ ಕನ್ನಡ ನಾಡಿನ ಹೆಮ್ಮೆ. 50 ಸಾವಿರದಷ್ಟು ಜನರಿಗೆ ಉದ್ಯೋಗ ಕಲ್ಪಿಸುವಂಥ ಕಾಫಿ ಡೇ ಎನ್ನುವಂಥ ಪ್ರಪಂಚವನ್ನು ಸೃಷ್ಟಿಸಿದವರು. ಅವರ ಬಗ್ಗೆ ಇರುವ ನೂರಾರು ಅಪವಾದ-ದೂರುಗಳನ್ನು ದೂರ ಮಾಡುವುದಕ್ಕೆ ಈ ಒಂದು ಸಾಧನೆಯೇ ಸಾಕು. ಆದರೆ, ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ ಸಿದ್ಧಾರ್ಥ್ ಅದನ್ನು ಎದುರಿಸಲಾಗದೆ ಆತ್ಮಹತ್ಯೆಗೆ ಶರಣಾದರು. 

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಪ್ರಾಯಶಃ ಮುಳುಗುವ ಹಡಗಿನಂತಾಗಿರುವ ಕಾಫಿ ಡೇ ಸಾಮ್ರಾಜ್ಯವನ್ನು ರಕ್ಷಿಸುವ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರವೇ ಹೊತ್ತುಕೊಂಡಿರುವುದು ಸಮಾಧಾನದ ಸಂಗತಿ. ಸಿದ್ಧಾರ್ಥ ಕಷ್ಟಪಟ್ಟು, ತೀವ್ರ ಆಸ್ಥೆಯಿಂದ ಕಟ್ಟಿ ಬೆಳೆಸಿ, ದಶಕಗಳವರೆಗೂ ಮುನ್ನಡೆಸಿದ ಕಾಫಿ ಡೇ ಸಾಮ್ರಾಜ್ಯದ ಸ್ಥಿತಿ ಇವತ್ತು ಸರಿಯಿಲ್ಲ. ಬ್ಯಾಂಕ್​ಗಳಲ್ಲಿ ಮಾಡಿಕೊಂಡಿರುವ ಸಾವಿರಾರು ಕೋಟಿ ಸಾಲದ ಕಾರಣಕ್ಕೆ ಇವತ್ತು ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗಿವೆ. ಒಂದು ಕಡೆ ಸಾಲ ಕೊಟ್ಟ ಬ್ಯಾಂಕ್​ಗಳ ಬ್ಯಾಕ್ ಟು ಬ್ಯಾಕ್ ಟು ನೋಟಿಸ್, ಇನ್ನೊಂದೆಡೆ ಸಿದ್ಧಾರ್ಥ್ ಉಳಿಸಿಕೊಂಡು ಬಂದಿದ್ದ ಗೌರವ-ಘನತೆಗೆ ಉಂಟಾಗುತ್ತಿರುವ ಧಕ್ಕೆ, ಇದೆಲ್ಲ ಪರಿಗಣಿಸಿಯೇ ಅವರ ಕುಟುಂಬದ ಹಿರಿಯರು ಹೇಗಾದರೂ ಮಾಡಿ ಸಾಲದ ಹೊರೆ ಕಡಿಮೆ ಮಾಡಿಕೊಳ್ಳುವ ದಾರಿ ಹುಡುಕಿಕೊಳ್ಳುತ್ತಲೇ ಇದ್ದರು. ಸರ್ಕಾರದ ಮಟ್ಟದಲ್ಲಿಯೂ ಈ ಬಗ್ಗೆ ನಿರಂತರ ಮಾತುಕತೆ ನಡೆಯುತ್ತಲೇ ಇತ್ತು. ಅಂತಿಮವಾಗಿ ಸರ್ಕಾರವೇ ಇದಕ್ಕೊಂದು ಮಾರ್ಗ ಕಂಡುಕೊಂಡಿದೆ.

ಗ್ಲೋಬಲ್ ವಿಲೇಜ್ ಟೆಕ್ ಮಾರಾಟಕ್ಕಿದೆ!

ಈ ಮಾಹಿತಿ ಕೇಳಿದರೆ ಬಹುತೇಕರಿಗೆ ಶಾಕ್ ಇನ್ನಷ್ಟು ಜನರಿಗೆ ಆಶ್ಚರ್ಯ ಎನಿಸಬಹುದು. ಆದರೆ ಇದು ಸತ್ಯ, ಸಿದ್ಧಾರ್ಥ್ ಮಾಲೀಕತ್ವದ ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ ಮಾರಾಟಕ್ಕಿದೆ. ಈ ವಿಚಾರ ಇವತ್ತು ನಮಗೆ ಗಾಬರಿ ಮೂಡಿಸಬಹುದು. ಆದರೆ, ಸಿದ್ಧಾರ್ಥ್ ನಿಧನ ಬಳಿಕ, ಸಾಲ ತೀರಿಸುವುದಕ್ಕೆ ಗ್ಲೋಬಲ್ ಟೆಕ್ ಪಾರ್ಕ್ ಮಾರಾಟದ ಪ್ರಸ್ತಾಪ ಕುಟುಂಬದಲ್ಲಿ ನಡೆದಿತ್ತಂತೆ. ಸರ್ಕಾರದ ಮಟ್ಟದಲ್ಲಿಯೂ ಈ ಬಗ್ಗೆ ಮಾತುಕತೆ ನಡೆದಿತ್ತಂತೆ. ಆದರೆ ಮಾರ್ಗೋಪಾಯಗಳಿಲ್ಲದ ಕಾರಣಕ್ಕೆ ಈ ಪ್ರಸ್ತಾಪ ನನೆಗುದಿಗೆ ಬಿದ್ದಿತ್ತಷ್ಟೆ. ಆದರೆ ಇದೀಗ ಸರ್ಕಾರವೇ ಮಾರಾಟಕ್ಕಿದ್ದ ತೊಡಕನ್ನು ನಿವಾರಿಸಿದೆ. ಗ್ಲೋಬಲ್ ಟೆಕ್ ಪಾರ್ಕ್ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ. ಸರ್ಕಾರ ಮಾಲೀಕತ್ವ ಮಾರಾಟಕ್ಕಿದ್ದ ತೊಡಕನ್ನು ಹೇಗೆ ನಿವಾರಿಸಲು  ಕಾನೂನನ್ನೇ  ತಿದ್ದುಪಡಿ ಮಾಡಿದೆ. ಕಂದಾಯ ಸಚಿವ ಆರ್.ಅಶೋಕ್ ಅವರೆ ಇದನ್ನು ಸ್ಪಷ್ಟಪಡಿಸಿದ್ದಾರೆ. ಕರ್ನಾಟಕ ಭೂ ಸುಧಾರಣಾ ಕಾಯ್ದೆ 109ನೇ  ತಿದ್ದುಪಡಿ ತಂದು ಮಾರಾಟದ ತೊಡಕನ್ನು ನಿವಾರಿಸಿದೆ. ಇದರಿಂದಾಗಿ ಗ್ಲೋಬಲ್ ಟೆಕ್ ಪಾರ್ಕ್ ಕೊಳ್ಳುವ ಮತ್ತೊಂದು ಐಟಿ ಕಂಪೆನಿ ಕೊಡುವ ಹಣ ನೇರವಾಗಿ ಬ್ಯಾಂಕ್ ಗೆ ಸಂದಾಯವಾಗಲಿದೆ.ಈ ಸಾಲದ ಹಣವನ್ನು ಬ್ಯಾಂಕ್ ಗಳು ತೀರಿಸಿಕೊಳ್ಳಲಿವೆ. ಇದರಿಂದಾಗಿ  ಸಿದ್ದಾರ್ಥ್ ಕುಟುಂಬದ ಸಾಲದ ಹೊರೆಯೂ ಕಡಿಮೆಯಾಗಲಿದೆ. ಸುಸ್ತಿದಾರ ಎನ್ನುವ ಕಳಂಕವೂ ದೂರವಾಗಲಿದೆ.

ಸಾಲದ‌ ಕಾರಣಕ್ಕೆ ಕಂಪೆನಿಗಳನ್ನು‌ ಮುಚ್ಚುವ ಪ್ರಮೇಯವೂ ಸೃಷ್ಟಿಯಾಗೊಲ್ಲ ಎಲ್ಲಕ್ಕಿಂತ ಹೆಚ್ಚಾಗಿ ನೌಕರರು ಕೆಲಸ ಕಳೆದುಕೊಂಡು ಬೀದಿಗೆ ಬೀಳುವುದು ತಪ್ಪಲಿದೆ. ಸರ್ಕಾರ ತೆಗೆದುಕೊಂಡಿರುವ ಇಂತದ್ದೊಂದು ಐತಿಹಾಸಿಕ ನಿರ್ಧಾರದಿಂದ ಇದೇ ಪರಿಸ್ಥಿತಿಯಲ್ಲಿರುವ ಮತ್ತಷ್ಟು ಕಂಪೆನಿಗಳಿಗೆ ಲಾಭವಾಗಲಿದೆ. ಬ್ಯಾಂಕ್​ಗಳ ಸಾಲ ಬಾಕಿ ಉಳಿಸಿಕೊಂಡಿರುವ ಎಷ್ಟೋ ಕಂಪೆನಿಗಳಿಗೂ ಪ್ರಯೋಜನವಾಗಲಿದೆ. ಬ್ಯಾಂಕ್​ಗಳಿಗೂ  ಬಾಕಿ ಸಾಲ ಪಾವತಿಯಾಗಲಿದೆ. ಕಂಪೆನಿಗಳಿಗೂ ವಂಚನೆಯ ಕಳಂಕ ತಟ್ಟುವುದಿಲ್ಲ.

ಗ್ಲೋಬಲ್ ವಿಲೇಜ್  ಟೆಕ್ ಪಾರ್ಕ್ ನ ಮಾಲೀಕರು ಸಿದ್ಧಾರ್ಥ್. ಅದನ್ನು ಮಾರಲು ಸರ್ಕಾರವೇಕೆ ಅನುಮತಿ ನೀಡಬೇಕು? ಇದರಲ್ಲಿ ಸರ್ಕಾರದ ಪಾತ್ರವೇನು ಎನ್ನುವ ಪ್ರಶ್ನೆ ಮೂಡಬಹುದು. ಮಾಲೀಕ ಸಿದ್ಧಾರ್ಥ್ ಆಗಿದ್ದರೂ ಅದು ಮಂಜೂರಾಗಿದ್ದು ಸರ್ಕಾರದಿಂದ. ಎಸ್​ಇಝಡ್ ಅಂದರೆ ವಿಶೇಷ ಆರ್ಥಿಕ ವಲಯ ಕೋಟಾದಲ್ಲಿ ಸಿದ್ಧಾರ್ಥ್​ಗೆ ಉದ್ಯಮ ಆರಂಭಿಸುವುದಕ್ಕೆ ಸರ್ಕಾರ ಮಂಜೂರು ಮಾಡಿತ್ತು. ಸಿದ್ಧಾರ್ಥ್ ಅಲ್ಲಿ ಟೆಕ್ ಪಾರ್ಕ್ ನಿರ್ಮಿಸಿ ಐಟಿ ದಿಗ್ಗಜ ಸಂಸ್ಥೆಗಳಿಗೆ ನೀಡಿದ್ದರು. ಅದರ ಲಾಭವೆಲ್ಲಾ ಇಷ್ಟು ವರ್ಷ ಅನುಭವಿಸಿದ್ದು ಕೂಡ ಸಿದ್ಧಾರ್ಥ್ ಅವರೆ. ತೆರಿಗೆಯಿಂದ ಬಹುತೇಕ ವಿನಾಯ್ತಿ ಸಿಕ್ಕಿದ್ದರಿಂದ ಸಿದ್ಧಾರ್ಥ್ ಅವರಿಗೆ ಗ್ಲೋಬಲ್ ಟೆಕ್ ಪಾರ್ಕ್ ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದ್ದುದು ಕೂಡ ಸತ್ಯ. ಸಿದ್ಧಾರ್ಥ್ ಹೆಗಲ ಮೇಲಿದ್ದ ಸಾಲ ಎಷ್ಟು ಗೊತ್ತಾ. ಇದು ಜಗಜ್ಜಾಹೀರಾಗಿರುವ ಸತ್ಯ. ನ್ಯೂಸ್ 18 ಕನ್ನಡಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ 4,970 ಕೋಟಿ. ಅದರಲ್ಲಿ ಕಾಫಿ ಡೇ ಎಂಟರ್ ಪ್ರೈಸಸ್ 480 ಕೋಟಿ, ಕಾಫಿ ಡೇ ಗ್ಲೋಬಲ್ ಲಿಮಿಟೆಡ್ 1,097 ಕೋಟಿ, ವೇ ಟು ವೆಲ್ತ್  ಸೆಕ್ಯೂರಿಟಿಸ್ ಪ್ರೈವೇಟ್ ಲಿಮಿಟೆಡ್ 121 ಕೋಟಿ, ಟ್ಯಾಂಗ್ಲಿನ್ ಡೆವಲಪರ್ಸ್ 1,622 ಕೋಟಿ, ಟ್ಯಾಂಗ್ಲಿನ್ ರಿಯಾಲಿಟಿ ಡೆವಲಪರ್ಸ್ ಲಿಮಿಟೆಡ್ 15 ಕೋಟಿ ಹಾಗೂ ಕಾಫಿ ಡೇ ಹೊಟೇಲ್ಸ್ ಅಂಡ್ ರೆಸಾರ್ಟ್ 137 ಕೋಟಿ ಸಾಲ ಹೊಂದಿದ್ದವು. ಇದರ ಜತೆಗೆ ಸಿಕಲ್ ಲಾಜಿಸ್ಟಿಕ್ಸ್ ಲಿಮಿಟೆಡ್ 1,488 ಕೋಟಿ ಹಾಗೂ ಮಾಗ್ನಸಾಫ್ಟ್ 10 ಕೋಟಿ ಸಾಲ ಹೀಗೆ ಎಲ್ಲಾ ಸೇರಿ 4,970 ಕೋಟಿ ಸಾಲದ ಹೊರೆಗೆ ಸಿಲುಕಿ, ತತ್ತರಿಸಿತ್ತು ಸಿದ್ದಾರ್ಥರ ಕಾಫಿ ಡೇ ಸಮೂಹ ಉದ್ಯಮದ ಸಾಮ್ರಾಜ್ಯ. ಸಿದ್ಧಾರ್ಥ ನಿಧನದ ನಂತರ ಬ್ಯಾಂಕ್ ಗಳಿಂದ ಬರಲಾರಂಭಿಸಿದ ಬ್ಯಾಕ್ ಟು ಬ್ಯಾಕ್ ನೊಟೀಸ್​ನಿಂದ ತೀವ್ರ ಕಂಗೆಟ್ಟ ಕುಟುಂಬದವರು ಒಂದಷ್ಟನ್ನಾದರೂ ತೀರಿಸಿ ಹೊರೆ ಕಡಿಮೆ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದರು. ಅದಕ್ಕೆ ಹೊಳೆದ ಉಪಾಯವೇ ಗ್ಲೋಬಲ್ ಟೆಕ್ ಪಾರ್ಕ್ ಮಾರಾಟ.

ಗ್ಲೋಬಲ್ ಟೆಕ್ ಪಾರ್ಕ್ ನ ಮೌಲ್ಯ ಎಷ್ಟು ಗೊತ್ತಾ?ಬಹಳಷ್ಟು ಜನರಿಗೆ ಕುತೂಹಲ ಇದೆ. 90 ಎದರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಗ್ಲೋಬಲ್ ಟೆಕ್ ಪಾರ್ಕ್​ನ ಇವತ್ತಿನ ಮಾರುಕಟ್ಟೆ ಮೌಲ್ಯ ಬರೋಬ್ಬರಿ 2700 ಕೋಟಿ. ಇದನ್ನು ಅಧಿಕೃತವಾಗಿಯೇ ಅಂದಾಜು ಮಾಡಲಾಗಿದೆ. ಇದು ಮಾರಾಟವಾದರೆ 4,970 ಕೋಟಿ  ಸಾಲದ ಪೈಕಿ ಬಹುತೇಕ ಅರ್ಧ ಸಾಲ ತೀರಿದಂಗಾಗುತ್ತೆ. ಸಿದ್ಧಾರ್ಥ್ ಸಾಮ್ರಾಜ್ಯವು ಸ್ವಲ್ಪ ನೆಮ್ಮದಿಯ ನಿಟ್ಟುಸಿರನ್ನು ಬಿಡಬಹುದು. ಈ ಕಾರಣಕ್ಕೇನೆ ಗ್ಲೋಬಲ್ ಟೆಕ್ ಪಾರ್ಕ್ ಅನ್ನು ಐಟಿ ಕಂಪೆನಿಯೊಂದಕ್ಕೆ ಮಾರಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇದನ್ನು ಓದಿ: ವಿದೇಶಿ ಸಂಸ್ಕೃತಿಯ ಕಾಫಿ ಡೇ ಉದ್ಯಮ ಹುಟ್ಟುಹಾಕುವ ಮೂಲಕ ಕಾಫಿ ಜಗತ್ತಿನ ರಾಜನಾಗಿ ಸಿದ್ದಾರ್ಥ ಬೆಳೆದ ಕಥೆ

ಗ್ಲೋಬಲ್ ಟೆಕ್ ಪಾರ್ಕ್ ಕೊಳ್ಳುವ ದಿಗ್ಗಜ ಐಟಿ ಕಂಪೆನಿ ಯಾವುದು ಗೊತ್ತಾ?

ಗ್ಲೋಬಲ್ ಟೆಕ್ ಪಾರ್ಕ್​ನ ಮೌಲ್ಯವಾದ 2700 ಕೋಟಿ ಹಣವನ್ನು ಕೊಟ್ಟು ಅದನ್ನು ಕೊಳ್ಳುವುದಕ್ಕೆ ಮುಂದೆ ಬಂದಿರುವ ಕಂಪೆನಿ ಬ್ಲ್ಯಾಕ್ ಸ್ಟೋನ್. ಐಟಿ ಕಂಪೆನಿಗಳ ಪೈಕಿ ಪ್ರತಿಷ್ಠಿತ ಕಂಪೆನಿ ಎನಿಸಿಕೊಂಡಿರುವ ಬ್ಲ್ಯಾಕ್ ಸ್ಟೋನ್ ಈಗಾಗಲೇ ಅಂತಿಮ ಹಂತದ ಮಾತುಕತೆಯನ್ನು ಕೂಡ ಗ್ಲೋಬಲ್ ಟೆಕ್ ಪಾರ್ಕ್ ಆಡಳಿತ ಮಂಡಳಿ ಜತೆ ಪೂರ್ಣಗೊಳಿಸಿದೆ. ಮಾತುಕತೆ ಯಶಸ್ವಿಯೂ ಆಗಿದೆ. ಹಾಗಾಗಿ ಕೊನೇ ಹಂತದ ಒಂದಷ್ಟು ಪ್ರಕ್ರಿಯೆಗಳು ಮುಗಿದರೆ ಇನ್ಮುಂದೆ ಗ್ಲೋಬಲ್ ಟೆಕ್ ಪಾರ್ಕ್​ ಒಡೆತನ ಬ್ಲ್ಯಾಕ್ ಸ್ಟೋನ್ ವ್ಯಾಪ್ತಿಗೊಳಪಡಲಿದೆ.

ಒಟ್ಟಿನಲ್ಲಿ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಒಡೆದ ಹಾಗೆ ಒಂದು ಕಾಯ್ದೆ ತಿದ್ದುಪಡಿಯಿಂದಾಗಿ ಸಿದ್ಧಾರ್ಥ ಅವರ ಹೆಸರು-ಪ್ರತಿಷ್ಟೆ ಉಳಿಸಿದ ಹೆಗ್ಗಳಿಕೆ ಸರ್ಕಾರಕ್ಕೆ ಸಲ್ಲಲಿದೆ. ಮತ್ತೊಂದೆಡೆ ಸಿದ್ಧಾರ್ಥರ ಸಾಲದ ಹೊರೆಯೂ ಅರ್ಧಕ್ಕರ್ಧ ತಗ್ಗಲಿದೆ.
First published: January 11, 2020, 4:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading