ಬೆಂಗಳೂರು(ನ. 23): ಡಿಸೆಂಬರ್ವರೆಗೂ ಶಾಲೆಗಳನ್ನ ಪ್ರಾರಂಭಿಸುವುದು ಸೂಕ್ತ ಅಲ್ಲ ಎಂದು ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ಮಾಡಿದ ಶಿಫಾರಸನ್ನು ಸರ್ಕಾರ ಸ್ವೀಕರಿಸಿದ್ದು, ಡಿಸೆಂಬರ್ವರೆಗೂ ಶಾಲೆ ಮರುಪ್ರಾರಂಭ ಮಾಡದಿರಲು ನಿರ್ಧರಿಸಿದೆ. ವಿಧಾನಸೌಧದಲ್ಲಿ ಇಂದು ಸೋಮವಾರ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇಂದು ಎಂಟು ಇಲಾಖೆಗಳ ಕಾರ್ಯದರ್ಶಿ ಹಾಗೂ ತಜ್ಞರು ಸಭೆಯಲ್ಲಿ ಭಾಗವಹಿಸಿದ್ದರು. ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಕೂಡ ಹೈದರಾಬಾದ್ನಿಂದಲೇ ವಿಡಿಯೋ ಕಾನ್ಫೆರೆನ್ಸ್ ಮೂಲಕ ಪಾಲ್ಗೊಂಡಿದ್ದರು. ಸಭೆಯಲ್ಲಿ ಸಾಕಷ್ಟು ಸಮಾಲೋಚನೆ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಸುಧಾಕರ್ ಅವರು ತಾಂತ್ರಿಕ ಸಲಹಾ ಸಮಿತಿ ಶಿಫಾರಸನ್ನು ಒಪ್ಪಿಕೊಂಡು ಶಾಲೆಗಳನ್ನ ತೆರೆಯದಿರುವ ತೀರ್ಮಾನಕ್ಕೆ ಬಂದಿದ್ದಾರೆ.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಡಿಸೆಂಬರ್ವರೆಗೂ ಶಾಲೆ ಆರಂಭಿಸದಿರಲು ಈ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದೇವೆ. ಡಿಸೆಂಬರ್ ನಂತರ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ತರಗತಿಗಳನ್ನ ಪ್ರಾರಂಭ ಮಾಡುವ ಬಗ್ಗೆ ಮತ್ತೊಂದು ಸಭೆ ಮಾಡಲಾಗುವುದು ಎಂದಿದ್ಧಾರೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ಶಾಲೆ ಪ್ರಾರಂಭಿಸದಿರುವ ಸರ್ಕಾರದ ನಿರ್ಧಾರಕ್ಕೆ ಬದ್ಧವಾಗಿದ್ದು, ಸೂಕ್ತ ಕ್ರಮಗಳನ್ನ ಇಲಾಖೆ ವತಿಯಿಂದ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ನಮಗೆ ಈ ವರ್ಷ ಒಂದರಿಂದ ಎಂಟನೇ ತರಗತಿಗಳನ್ನ ತೆರೆಯುವ ಯೋಚನೆ ಇರಲಿಲ್ಲ. ಆದರೆ, ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ 9, 10 ಮತ್ತು ಪಿಯುಸಿ ತರಗತಿ ತೆರೆಯುವ ಬಗ್ಗೆ ಮಾತ್ರ ನಮ್ಮ ಯೋಚನೆ ಇದ್ದದ್ದು. ಮಕ್ಕಳ ಜೀವ ಮುಖ್ಯ ಎಂದು ಹೇಳಿರುವ ಆರೋಗ್ಯ ಇಲಾಖೆ ಮಾತಿಗೆ ನಾವು ಮನ್ನಣೆ ನೀಡಿದ್ದೇವೆ. ಸಿಎಂ ನಿರ್ಧಾರವೇ ಅಂತಿಮ. ಮಕ್ಕಳ ಯೋಗ ಕ್ಷೇಮವೇ ನಮ್ಮ ಆದ್ಯತೆ. ಡಿಸೆಂಬರ್ ನಂತರ ಈ ನಾಲ್ಕು ತರಗತಿಗಳನ್ನ ತೆರೆಯುವ ಬಗ್ಗೆ ಮತ್ತೊಂದು ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ನಲ್ಲೂ ಶಾಲೆಗಳನ್ನ ತೆರೆಯದಿರಿ: ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸು
ವಿದ್ಯಾಗಮ ಕಾರ್ಯಕ್ರಮ ಪುನಾರಂಭ ಸದ್ಯಕ್ಕೆ ಇಲ್ಲ. ಶಾಲೆಗಳು ಪ್ರಾರಂಭವಾಗದಿದ್ದರೂ ಚಂದನ ವಾಹಿನಿಯಲ್ಲಿ ಸಂವೇದನಾ ಮೂಲಕ ಶಿಕ್ಷಣ ಕಾರ್ಯಕ್ರಮ ಮುಂದುವರಿಯುತ್ತದೆ. ಯೂಟ್ಯೂಬ್ನಲ್ಲಿ ಪಾಠಗಳನ್ನ ಡೌನ್ಲೋಡ್ ಮಾಡಿಕೊಳ್ಳಬಹುದು. ಜಿಯೋ ಟಿವಿಯವರು ಉಚಿತ ಪಠ್ಯ ಬೋಧನೆಗೆ ಮುಂದೆ ಬಂದಿದ್ದಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ಟಿವಿ ಮೂಲಕ ಶಿಕ್ಷಣ ಕೊಡುತ್ತೇವೆ ಎಂದಿದ್ದಾರೆ.
ಈ ವರ್ಷ 10ನೇ ತರಗತಿಯಲ್ಲಿ 9,59,566 ಮಕ್ಕಳು ಇದ್ದಾರೆ. ದ್ವಿತೀಯ ಪಿಯುಸಿಯಲ್ಲಿ 5,70,126 ಮಕ್ಕಳು ಇದ್ದಾರೆ. ಸದ್ಯದಲ್ಲೇ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವೇಳಾಪಟ್ಟಿ ಪ್ರಕಟ ಮಾಡುತ್ತೇವೆ. ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ವೇಳಾಪಟ್ಟಿ ಇರಲಿದೆ. ವಿದ್ಯಾಗಮ ಯೋಜನೆಯನ್ನ ಸದ್ಯಕ್ಕೆ ಪುನಾರಂಭಿಸುವುದಿಲ್ಲ ಎಂದು ಸುರೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ಧಾರೆ.
ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದ್ದೇನು?
“ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಮಾಣ ಕಡಿಮೆಯಾಗುತ್ತಿದೆ. ಈಗ ನಿತ್ಯ 1,700 ಪ್ರಕರಣಗಳು ಹಾಗೂ 20 ಸಾವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕಳೆದ ಎಂಟು ತಿಂಗಳಲ್ಲಿ ಬಹಳ ಶ್ರಮ ವಹಿಸಿ ಕೋವಿಡ್ ಅನ್ನು ನಿಯಂತ್ರಣಕ್ಕೆ ತರಲಾಗಿದೆ. ದೆಹಲಿ, ಹರಿಯಾಣ, ಗುಜರಾತ್, ರಾಜಸ್ಥಾನ್ ಮೊದಲಾದ ರಾಜ್ಯಗಳಲ್ಲಿ ಕೋವಿಡ್ ಸೋಂಕಿನ ಮತ್ತೊಂದೆ ಅಲೆ ಎದ್ದಿದೆ. ಜೊತೆಗೆ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಚಳಿ ಹೆಚ್ಚಾಗಿದ್ದು, ಈ ಅವಧಿಯಲ್ಲಿ ಕೋವಿಡ್-19 ಸೇರಿದಂತೆ ಶ್ವಾಸಕೋಶ ಸಂಬಂಧಿತ ಸೋಂಕು ಕೂಡ ಹೆಚ್ಚಾಗಿರುತ್ತದೆ. ಸೆಪ್ಟೆಂಬರ್ನಲ್ಲಿ ನಡೆಸಲಾದ ಸಮೀಕ್ಷೆಯ ಪ್ರಕಾರ, ಕಡಿಮೆ ಮಟ್ಟದಲ್ಲಿ ಕೋವಿಡ್ ಇರುವ ಜಿಲ್ಲೆಗಳಲ್ಲಿ ಡಿಸೆಂಬರ್ ನಂತರ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಸಮಾಲೋಚನೆ ನಡೆಸಿದ್ದು, ಡಿಸೆಂಬರ್ನಲ್ಲಿ ಶಾಲೆಗಳನ್ನ ತೆರೆಯುವುದು ಸೂಕ್ತ ಅಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದೇವೆ. ಡಿಸೆಂಬರ್ ಕೊನೆಯ ವಾರದಲ್ಲಿ ಮತ್ತೊಮ್ಮೆ ಪರಿಸ್ಥಿತಿ ಅವಲೋಕಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಬಹುದು” ಎಂದು ತಾಂತ್ರಿಕ ಸಲಹಾ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.
ಡಾ. ಎಂ ಕೆ ಸುದರ್ಶನ್ ಅಧ್ಯಕ್ಷತೆಯ ಈ ತಾಂತ್ರಿಕ ಸಲಹಾ ಸಮಿತಿಯಲ್ಲಿ ವಿವಿಧ ವೈದ್ಯಕೀಯ ತಜ್ಞರಿದ್ದಾರೆ. ಕಳೆದ ಏಳೆಂಟು ತಿಂಗಳಲ್ಲಿ 40ಕ್ಕೂ ಹೆಚ್ಚು ಸಭೆಗಳನ್ನ ನಡೆಸಿ ಕಾಲಾನುಕಾಲಕ್ಕೆ ಪರಿಸ್ಥಿತಿಯನ್ನು ಅವಲೋಕಿಸಿ ಸರ್ಕಾರಕ್ಕೆ ಸಲಹೆ ನೀಡುವ ಕೆಲಸ ಮಾಡುತ್ತಾ ಬರುತ್ತಿದೆ. ಸಮಿತಿಯ ಶಿಫಾರಸುಗಳನ್ನ ಒಪ್ಪಿಕೊಳ್ಳುವುದು ಬಿಡುವುದು ಈಗ ಸರ್ಕಾರದ ಕೈಯಲ್ಲಿದೆ.
ವರದಿ: ಕೃಷ್ಣ ಜಿ.ವಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ