news18-kannada Updated:August 24, 2020, 8:44 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು; ದೇಶದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹಬ್ಬುತ್ತಲೇ ಇದೆ. ಮಾರಕ ಸೋಂಕು ನಿಯಂತ್ರಣಕ್ಕೆ ಸರ್ಕಾರ ಲಾಕ್ಡೌನ್, ಸೀಲ್ಡೌನ್, ಕ್ವಾರಂಟೈನ್ ಸೇರಿ ಹತ್ತು ಹಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿತ್ತು. ಇದೀಗ ಸೋಂಕು ಹೆಚ್ಚಾಗುತ್ತಿರುವುದರ ನಡುವೆಯೂ ಸರ್ಕಾರ ಲಾಕ್ಡೌನ್ ನಿಯಮಾವಳಿಗಳನ್ನು ಹಂತಹಂತವಾಗಿ ಸಡಿಲಿಕೆ ಮಾಡುತ್ತಿದೆ. ಈ ಮೊದಲು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣ ಮಾಡುವವರು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಬೇಕಿತ್ತು. ಇದೀಗ ಸರ್ಕಾರ ಆ ನಿಯಮವನ್ನು ಬದಲಿದ್ದು, ಕ್ವಾರಂಟೈನ್ ನಿಯಮ ತೆಗೆದುಹಾಕಿದೆ.
ಕೋವಿಡ್ ಸಂಬಂಧಿತವಾಗಿ ರಾಜ್ಯ ಸರ್ಕಾರ ಹೇರಿದ್ದ ಎಲ್ಲಾ ನಿಯಮಗಳು ರದ್ದು ಮಾಡಿದೆ. ಈ ಮೊದಲು ಸೇವಾ ಸಿಂಧು ಪೋರ್ಟಲ್ನಲ್ಲಿ ಅಂತಾರಾಜ್ಯ ಪ್ರಯಾಣಕ್ಕೆ ನೋಂದಣಿ ಮಾಡಿಸಿಕೊಳ್ಳಬೇಕಿತ್ತು. ಗಡಿಯಲ್ಲಿ ಆರೋಗ್ಯ ತಪಾಸಣೆ, ಕ್ವಾರಂಟೈನ್ ನಿಯಮಗಳನ್ನು ಹೇರಲಾಗಿತ್ತು. ಇದೀಗ ಆ ಯಾವ ನಿಯಮ ಇರುವುದಿಲ್ಲ.
ಇದನ್ನು ಓದಿ: Coronavirus Karnataka Update : ರಾಜ್ಯದಲ್ಲಿ ಇಂದು ಒಂದೇ ದಿನ 5851 ಕೊರೋನಾ ಕೇಸ್ ಪತ್ತೆ, 130 ಮಂದಿ ಸಾವು
ದೇಶದ ಯಾವುದೇ ಮೂಲೆಯಿಂದ ರಾಜ್ಯಕ್ಕೆ ಜನ ಮತ್ತು ಸರಕು ಬರಲು ಅನುಮತಿ ಕಡ್ಡಾಯವಾಗಿತ್ತು. ಜನರು ಆಗಮಿಸುವಾಗ ಕೋವಿಡ್ ಸಂಬಂಧಿತ ರೋಗಲಕ್ಷಣ ಇದ್ದರೆ ಜನ ತಾವಾಗಿಯೇ ಪ್ರತ್ಯೇಕವಾಗಿ ಇದ್ದು ಆರೋಗ್ಯ ಇಲಾಖೆಯ ಸಹಾಯವಾಣಿಗೆ ಕರೆ ಮಾಡಬೇಕಿತ್ತು. ಆದಾಗ್ಯೂ ಜನರೇ ಬಂದರೆ 14 ದಿನಗಳವರೆಗೆ ತಮ್ಮ ಆರೋಗ್ಯದ ಮೇಲೆ ನಿಗಾ ಇರಿಸಲು ಸೂಚನೆ ನೀಡಲಾಗಿತ್ತು. ಈಗ ಎಲ್ಲಾ ನಿಯಮಗಳನ್ನು ತೆರವುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಪ್ರತಿದಿಂದ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಕರ್ನಾಟಕದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 5851 ಕೋವಿಡ್ 19 ಸೋಂಕು ಪ್ರಕರಣಗಳು ವರದಿಯಾಗಿವೆ. ಈ ನಿರ್ದಿಷ್ಟ ಅವಧಿಯಲ್ಲಿ ಕೊರೋನಾಗೆ 130 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
Published by:
HR Ramesh
First published:
August 24, 2020, 8:44 PM IST