news18-kannada Updated:January 4, 2021, 1:02 PM IST
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
ಬೆಂಗಳೂರು(ಜ.04): ಜನರು ಆರ್ಥಿಕ ಸಂಕಷ್ಟದ ಸಮಯದಲ್ಲಿರುವಾಗ ಬೆಂಗಳೂರು ನಾಗರಿಕರ ಮೇಲೆ ಬಿಬಿಎಂಪಿ ಅನೇಕ ತೆರಿಗೆ ಹೊರೆಯನ್ನು ವಿಧಿಸುತ್ತಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ರಾಜ್ಯ ಬಿಜೆಪಿ ಸರ್ಕಾರ ಮತ್ತು ಬಿಬಿಎಂಪಿ ವಿರುದ್ದ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಬೆಂ. ಕೇಂದ್ರ , ದಕ್ಷಿಣ ಮತ್ತು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ವತಿಯಿಂದ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಬಿ.ಕೆ.ಹರಿಪ್ರಸಾದ್, ಶಾಸಕ ರಿಜ್ವಾನ್ ಅರ್ಷದ್ , ಮಾಜಿ ಮೇಯರ್ ಬಿ.ಎನ್. ಮಂಜುನಾಥ್, ಪದ್ಮಾವತಿ, ರಾಮಚಂದ್ರಪ್ಪ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ.
ಪ್ರತಿಭಟನಾಕಾರರು ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಹೊರಟು ಬಿಬಿಎಂಪಿಗೆ ಮುತ್ತಿಗೆ ಹಾಕಲಿದ್ದಾರೆ. ಕಾಂಗ್ರೆಸ್ ವತಿಯಿಂದ ನಡೆಯುತ್ತಿರುವ ಈ ಬಿಬಿಎಂಪಿ ಚಲೋ ವಿಚಾರದಲ್ಲಿ ಅನೇಕ ಹಕ್ಕೊತ್ತಾಯಗಳಿವೆ.
ಕಾಂಗ್ರೆಸ್ ನಿಂದ ಹಕ್ಕೊತ್ತಾಯಗಳು
- ಹೈದರಾಬಾದ್ ಪಾಲಿಕೆ ಮಾದರಿಯಲ್ಲಿ ಆಸ್ತಿ ತೆರಿಗೆ ವಿನಾಯಿತಿ.
- ಕಟ್ಟಡ ನಿರ್ಮಾಣ ನಕ್ಷೆ ಮಂಜೂರಾತಿಗೆ ದುಪ್ಪಟ್ಟ ವಸೂಲಿ ಶುಲ್ಕ ವಾಪಸ್.
- ಕಸದ ಮೇಲೆ ವಿಧಿಸಿರುವ ಸಸ್ 200ರೂ ರದ್ದು ಮಾಡಬೇಕು.
- ರಸ್ತೆ ಸಾರಿಗೆಗೆ ವಿಧಿಸಿರುವ 2% ಟ್ಯಾಕ್ಸ್ ರದ್ದು ಮಾಡಬೇಕು.
- ಮೂರು ಸಾವಿರ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ ಮಾಡಬೇಕು.
- ಇಂದಿರಾ ಕ್ಯಾಂಟಿನ್ ಮುಂದುವರೆಸಬೇಕು.
- ಸಾರ್ವಜನಿಕರ ಶೌಚಾಲಯ ಸುಸುಜ್ಜಿತವಾಗಿರಬೇಕು.
- ಕಸ ಮುಕ್ತ, ಪ್ಲಾಸ್ಟಿಕ್ ಮುಕ್ತ ಬೆಂಗಳೂರು ಮಾಡಬೇಕು.
- ಲಾಕ್ಡೌನ್ ವೇಳೆ ನಡೆದ ಅವ್ಯವಹಾರಗಳ ಬಗ್ಗೆ ತನಿಖೆಯಾಗಬೇಕು.
- ಕೊರೋನಾದಿಂದ ನಿಧನರಾದ ಕುಟುಂಬಗಳಿಗೆ ಪರಿಹಾರ ನೀಡಬೇಕು.
- ಮಳೆಯಿಂದ ಆಗುತ್ತಿರುವ ಸಮಸ್ಯೆಗಳಿಗೆ ವಿಶೇಷ ಕಾರ್ಯಪಡೆ ಸ್ಥಾಪಿಸಬೇಕು.
ಈ ವೇಳೆ ಮಾತನಾಡಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಬಿಬಿಎಂಪಿಯಲ್ಲಿ ಮತ್ತೆ ಚುನಾವಣೆ ನಡೆಯಬೇಕಿದೆ. ಹಿಂದೆ ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ 11 ಆಸ್ತಿ ಅಡಮಾನ ಇಟ್ಟಿದ್ರು. ಮೆಟ್ರೋ ಬೆಂಗಳೂರು ಅಂತ ಹೆಸರಿತ್ತು. ಇವರ ಆಡಳಿತ ವೈಫಲ್ಯದಿಂದ ಕಸ ಎತ್ತಿಲ್ಲ, ಕಾಮಗಾರಿ ನಡೆಯುತ್ತಿಲ್ಲ. ಕಂಟ್ರಾಕ್ಟರ್ ಗಳಿಗೆ ಮೂರು ಸಾವಿರ ಕೋಟಿ ಬಾಕಿ ನೀಡಬೇಕಿದೆ. ಹಣ ನೀಡದಿದ್ರೆ ಕೆಲಸ ಯಾವ ಕಂಟ್ರಾಕ್ಟರ್ ಮಾಡ್ತಾರೆ. ಕಟ್ಟಡ ನಿರ್ಮಾಣ ಪ್ಲಾನ್ ಮಂಜೂರು ಮಾಡಿಸಿಕೊಳ್ಳಲು ಹಣ ಹೆಚ್ಚು ಮಾಡಿದ್ದಾರೆ. 20x30 ಸೈಟಿಗೆ 2 ಲಕ್ಷ ಜಾಸ್ತಿ ಮಾಡಿದ್ದಾರೆ. ಇದೇ ರೀತಿ ಮುಂದುವರೆದ್ರೆ ಯಾರೂ ಮನೆಯೇ ಕಟ್ಟಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
Bangalore Airport: ಮೆಜೆಸ್ಟಿಕ್ನಿಂದ ಕೇವಲ 10 ರೂ.ಗೆ ಬೆಂಗಳೂರು ಏರ್ಪೋರ್ಟ್ಗೆ ರೈಲು ಸಂಚಾರ ಆರಂಭ
ಮುಂದುವರೆದ ಅವರು, ಬಡವರ ಹೊಟ್ಟೆ ತುಂಬಿಸಲು ಇಂದಿರಾ ಕ್ಯಾಂಟಿನ್ ತಂದೋ. ಇಂದಿರಾ ಹೆಸರಿದೆ ಅನ್ನೋ ಕಾರಣಕ್ಕೆ ಆ ಯೋಜನೆಯನ್ನ ಮೂಲೆಗುಂಪು ಮಾಡಿದ್ದಾರೆ. ಎಲ್ಲಿ ಯಾವ ಮೂಲೆಗೋದ್ರೂ ರಸ್ತೆಗುಂಡಿಗಳು ಕಾಣುತ್ತಿವೆ. ಬಿಬಿಎಂಪಿಯಲ್ಲಿ ಜನ ಸಾಮಾನ್ಯರಿಗೆ ಸಿಗಬೇಕಿದ್ದ ಯಾವುದೇ ಯೋಜನೆ ಸಿಗುತ್ತಿಲ್ಲ. ಸ್ಟ್ರೀಟ್ ಲೈಟ್ ಮೇಂಟೆನೆನ್ಸ್ ಒಬ್ಬರಿಗೇ ಗುತ್ತಿಗೆ ನೀಡಿದ್ದು, ಇನ್ನೂ ಕೆಲಸ ಪ್ರಾರಂಭಿಸಿಲ್ಲ. ಇಂದು ನಡೆಯುತ್ತಿರೋ ಪ್ರತಿಭಟನೆ ಒಂದೇ ದಿನಕ್ಕೆ ಸೀಮಿತವಾಗಿಲ್ಲ. ಪ್ರತೀ ವಲಯ, ವಿಧಾನಸಭಾ ಕ್ಷೇತ್ರದಲ್ಲಿ ಮಾಡುತ್ತೇವೆ ಎಂದರು.
ಪ್ರತಿಭಟನೆ ಸಮಯದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮೊದಲಿಗೆ ಭಾರತ್ ಮಾತಾಕೀ ಜೈ ಅಂತ ಘೋಷಣೆ ಕೂಗಿದರು. ಬಳಿಕ, ಈ ವರ್ಷವನ್ನು ಹೋರಾಟದ ಮತ್ತು ಸಂಘಟನೆ ವರ್ಷ ಅಂತ ಕಾಂಗ್ರೆಸ್ ಘೋಷಣೆ ಮಾಡಿದೆ. ನಮ್ಮ ನಗರದಲ್ಲಿರೋ ಸಮಸ್ಯೆ ಮುಂದಿಟ್ಟುಕೊಂಡು ಪ್ರತೀ ಕ್ಷೇತ್ರದಲ್ಲಿ ಹೋರಾಟ ಮಾಡುತ್ತೇವೆ. ಮೊದಲು 150 ಕ್ಷೇತ್ರದಲ್ಲಿ ಹೋರಾಟ ಮಾಡೋ ಗುರಿ ಇದೆ. ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಹೋಗಿ ಸಮಸ್ಯೆ ಆಲಿಸುತ್ತೇವೆ. ಜನರ ಬಳಿ ಹೋಗಿ ಸಮಸ್ಯೆ ಆಲಿಸುತ್ತೇವೆ. ಬೆಂಗಳೂರು ನಗರದಲ್ಲಿರೋ ಜ್ವಲಂತ ಸಮಸ್ಯೆಗಳ ಆಲಿಸೋ ಕೆಲಸ ಮಾಡುತ್ತಿದ್ದೇವೆ. ಮೈಸೂರು ಬ್ಯಾಂಕ್ ವೃತ್ತದಿಂದ ಕಾರ್ಯಕ್ರಮ ಆರಂಭಿಸುತ್ತಿದ್ದೇವೆ. ಬಿಜೆಪಿ ಸರ್ಕಾರಕ್ಕೆ ಕೇಳುತ್ತೇನೆ. ನೀವು ವಾಮ ಮಾರ್ಗದ ಮೂಲಕ ಅಧಿಕಾರಕ್ಕೆ ಬಂದಿದ್ದೀರಾ? ಬಿಬಿಎಂಪಿಯಲ್ಲಿ ಚುನಾವಣೆ ನಡೆಸಲು ನೀವು ಮುಂದಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಮತ್ತು ರಾಷ್ಟ್ರ ಸಂಪೂರ್ಣ ತತ್ತರಿಸಿದೆ. ಹಳ್ಳಿ ಜನರ ಬದುಕು ಹಸನು ಮಾಡುವುದು ಬೆಂಗಳೂರು ನಗರ. ಇಲ್ಲಿರೋ ಒಂದುವರೆ ಕೋಟಿ ಜನರು, ರಾಜ್ಯದ ಮುಕ್ಕಾಲು ಭಾಗವನ್ನು ಸಾಕಿ ಸಲಹುತ್ತಿದೆ. ಇದು ಸ್ವಚ್ಚ, ಹಸಿರು ಬೆಂಗಳೂರು. ಇದಕ್ಕೆ ತನ್ನದೇ ಆದ ಇತಿಹಾಸವಿದೆ. ಕೆಂಪೇಗೌಡರು ಕಟ್ಟಿರೋ ಈ ನಾಡಲ್ಲಿ ಎಲ್ಲಾ ಜಾತಿ, ಜನಾಂಗದವರಿದ್ದಾರೆ. ಆದ್ರೆ ನೀವು ಲಂಚಕೋರರು. ಕಚೇರಿ ಬಾಗಿಲು ಮುಟ್ಟಿದ್ರೆ ಒಂದು ರೇಟ್ ಫಿಕ್ಸ್ ಮಾಡಿದ್ದೀರಿ. ಒಬ್ಬ ರೋಗಿ ಆಚೆ ಬರಲು ಸಾಧ್ಯವಾಗಲಿಲ್ಲ. ನೀವು ಎಂತ ಸಚಿವರನ್ನ ಇಟ್ಟುಕೊಂಡಿದ್ದೀರಿ ಎಂದು ತೋರಿಸಲು ಕನ್ನಡಿಯನ್ನು ಇಡಬೇಕಾಗಿದೆ. ಹತ್ತು ಸಾವಿರ ಕೊಟ್ಟು ದಾಖಲಾಗೋ ಪರಿಸ್ಥಿತಿ ಬಂದಿದೆ. 800 ರೋಗಿಗಳಿಗೆ 10 ಸಾವಿರ ಬೆಡ್ ಮಾಡಿದ್ದೀರಾ. ಅದನ್ನು ಅಧಿಕಾರಿಗಳ ಮನೆಗೆ, ಸಚಿವರ ಮನೆಗೆ ಹಾಕಿಕೊಳ್ಳಲು ಹೇಳಿ. ಕೊರೋನಾ ಸಂದರ್ಭದಲ್ಲಿ ಯಾರಿಗೂ ವ್ಯಾಪಾರ ಇಲ್ಲ. ಲಾಕ್ ಡೌನ್, ಸೀಲ್ ಡೌನ್ ಮಾಡುವಂತೆ ಹೇಳಿದ್ದೀರಿ. ಜನರಿಗೆ ಉದ್ಯೋಗ ಇಲ್ಲ, ಬ್ಯಾಂಕ್ ಹಣ ಸಹಾಯ ಮಾಡೋದಾಗಿ ಹೇಳಿದ್ರಿ ಯಾರಿಗೂ ತಲುಪಿಲ್ಲ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ಕಿಡಿಕಾರಿದರು.
Published by:
Latha CG
First published:
January 4, 2021, 1:02 PM IST