ಬೆಂಗಳೂರು(ಜೂ.29): ಕೇಂದ್ರ ಸರ್ಕಾರದ ಇಂಧನ ಬೆಲೆ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಿಂದ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಸೈಕಲ್, ಜಟಕಾ ಗಾಡಿ ಇನ್ನಿತರ ವಾಹನಗಳಲ್ಲಿ ಆಗಮಿಸಿ ಬೆಂಗಳೂರಿನ ಇಂಡಿಯನ್ ಎಕ್ಸ್ ಪ್ರೆಸ್ ಸಮೀಪ ಇರುವ ಆದಾಯ ತೆರಿಗೆ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನಾಯಕರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಕೇಂದ್ರ ಸರ್ಕಾರದ ವಿರುದ್ಧ ಎರಡು ಗಂಟೆಗಳ ಸಾಂಕೇತಿಕ ಮುಷ್ಕರಕ್ಕೆ ಕರೆ ಕೊಟ್ಟಿದ್ದೆವು. ಪಕ್ಷದ ಹೈಕಮಾಂಡ್ ನೀಡಿದ ಕರೆಗೆ ನಾವು ದೇಶಾದ್ಯಂತ ಏಕಕಾಲಕ್ಕೆ ಹೋರಾಟ ನಡೆಸಿದ್ದೇವೆ. ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ರಾಜ್ಯದಲ್ಲಿ ಕೂಡ ಪ್ರದೇಶ ಕಾಂಗ್ರೆಸ್ ಸಮಿತಿ ಸೈಕಲ್ ಜಾಥಾ ನಡೆಸಿ, ಕೇಂದ್ರ ಸರ್ಕಾರದ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಗಮನ ಸೆಳೆಯುವ ಕಾರ್ಯ ಮಾಡಿದೆ ಎಂದರು.
ಇದು ಕೇವಲ ಸಾಂಕೇತಿಕ ಮುಷ್ಕರ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ ಸ್ವಲ್ಪಮಟ್ಟಿನ ಇಂದಿನ ಬೆಲೆ ಏರಿಕೆಯಾದರೆ ಬಿಜೆಪಿ ಪಕ್ಷ ಬೀದಿಗಿಳಿದು ಹೋರಾಡುತ್ತಿತ್ತು. ನರೇಂದ್ರ ಮೋದಿ 2014ರ ಅಧಿಕಾರಕ್ಕೆ ಬಂದು ಆರು ವರ್ಷ ಆಡಳಿತ ನಡೆಸಿದ್ದಾರೆ. ಒಂದು ಪೆಟ್ರೋಲ್ ರೇಟ್ ಹೇರಿಕೆಗೆ ಕಚ್ಚಾತೈಲ ಬೆಲೆ ಏರಿಕೆ ಕಾರಣವಾಗಿತ್ತು. ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿತ್ತು. 1 ಬ್ಯಾರೆಲ್ ಗೆ 120 ರಿಂದ 130 ಡಾಲರ್ ಬೆಲೆ ಇತ್ತು. ಇದರಿಂದ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಒಂದೆರಡು ಬಾರಿ ಅಲ್ಪಪ್ರಮಾಣದ ಬೆಲೆ ಏರಿಕೆ ಮಾಡಿತ್ತು. ರೈತರಿಗೆ, ಬಡವರಿಗೆ, ಮಧ್ಯಮ ವರ್ಗದವರಿಗೆ ಹಾಗೂ ಇತರರಿಗೆ ತೊಂದರೆಯಾಗದಂತೆ ಸಬ್ಸಿಡಿ ನೀಡಿ ಬೆಲೆ ಏರಿಕೆ ಮಾಡುತ್ತಿದ್ದರು. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಬೆಲೆ ಏರಿಕೆ ಮಾಡಿದ್ದರು ಎಂದು ವಿವರಿಸಿದರು.
ಮುಂದುವರೆದ ಅವರು, ನರೇಂದ್ರ ಮೋದಿ ಒಮ್ಮೆ ಹಿಂತಿರುಗಿ ನೋಡಬೇಕಾಗಿದೆ. ದೇಶದ ಜನ ಇಂದು ಪರಿಸ್ಥಿತಿಯನ್ನ ಅರ್ಥಮಾಡಿಕೊಳ್ಳಬೇಕು. ಕಚ್ಚಾತೈಲ ಬೆಲೆ 30ರಿಂದ 40 ಡಾಲರ್ ಮಟ್ಟಕ್ಕೆ ಇಳಿದಿದೆ. 20 ಡಾಲರ್ ಗೂ ಇಳಿದಿತ್ತು. ಆದರೆ ಮೋದಿ ಸರ್ಕಾರ ದಿನೇ ದಿನೇ ಇಂಧನ ಬೆಲೆ ಹೆಚ್ಚಿಸುತ್ತಿದೆ. ಯುಪಿಎ ಸರ್ಕಾರದ ಸಂದರ್ಭ ಕಚ್ಚಾತೈಲ ಬೆಲೆ ಗರಿಷ್ಠ ಮಟ್ಟಕ್ಕೇರಿದ 70 ರೂಪಾಯಿಗಿಂತ ಹೆಚ್ಚು ಬೆಲೆ ಏರಿಕೆ ಆಗಿರಲಿಲ್ಲ. ಇಂಧನ ಬೆಲೆ 18 ರೂಪಾಯಿಗಿಂತ ಹೆಚ್ಚು ಮೂಲ ಬೆಲೆ ಹೊಂದಿಲ್ಲ. ಇಂಡಿಯಾ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದು ದಿನ 25 ರೂಪಾಯಿ ಏರಿಕೆ ಮಾಡಿತ್ತು. ಯಾವುದೇ ಸಬ್ಸಿಡಿ ಕೂಡ ನೀಡುತ್ತಿಲ್ಲ. ಸಾಮಾನ್ಯ ನಾಗರಿಕರ ರಕ್ತವನ್ನು ಹೀರಿ ಸರ್ಕಾರದ ಬೊಕ್ಕಸ ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಳೆದ ಆರು ವರ್ಷಗಳಲ್ಲಿ ಮೋದಿ ಸರ್ಕಾರ 18 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ಕೇವಲ ಅಬಕಾರಿ ಸುಂಕದ ರೂಪ ಒಂದರಲ್ಲೇ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಜನರಿಗೆ ಬದುಕು ಕಷ್ಟವಾಗಿದೆ, ಇಂಧನವನ್ನು ಬಡವರು ಹೆಚ್ಚಾಗಿ ಬಳಸುತ್ತಾರೆ. ದುಬಾರಿ ಬೆಲೆ ತೆತ್ತು ಬದುಕು ದೂಡುವ ಸಂಕಷ್ಟದ ಸ್ಥಿತಿಯನ್ನು ಮೋದಿ ನಿರ್ಮಿಸಿದ್ದಾರೆ. ಮೋದಿ ಜನರ ರಕ್ತ ಹೀರುತ್ತಿದ್ದಾರೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡುತ್ತಿರುವುದು ಸರಿಯಲ್ಲ. ಯುವಕರು ನಿರುದ್ಯೋಗಿಗಳಾಗಿದ್ದಾರೆ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಮಾನವೀಯತೆ ಮರೆಯುವ ಕಾರ್ಯವನ್ನು ಮಾಡಿದ್ದಾರೆ. ನಿಮ್ಮನ್ನ ರಾಕ್ಷಸರು ಎಂದು ಕರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇವರು ರಾಕ್ಷಸೀ ಪ್ರವೃತ್ತಿಯ ಜನ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
Unlock 2.0 Guidelines: ನಾಳೆಗೆ ಅನ್ ಲಾಕ್ -1 ಮುಕ್ತಾಯ; ಜುಲೈ 1ರಿಂದ ಅನ್ ಲಾಕ್ -2 ಜಾರಿ, ಏನಿರಲಿದೆ? ಏನಿರಲ್ಲ?
ಈ ಸಂದರ್ಭದಲ್ಲಿ 20 ರೂಪಾಯಿಗೆ ಡೀಸೆಲ್ ಹಾಗೂ 25 ರೂಪಾಯಿಗೆ ಪೆಟ್ರೋಲ್ ನೀಡಬೇಕಿತ್ತು ಮೋದಿ ಸರ್ಕಾರ. ಬೆಲೆ ಏರಿಕೆ ಇಳಿಸಲು ನಿಮಗೆ ಏನು ಬಂದಿದೆ ರೋಗ? ಇದು ಜನಸಾಮಾನ್ಯರ ಧ್ವನಿ. ಇದು ಕೇವಲ ಸಾಂಕೇತಿಕ ಪ್ರತಿಭಟನೆ. ಒಂದೊಮ್ಮೆ ಬೆಲೆ ಇಳಿಸದಿದ್ದರೆ, ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮೋದಿ ತಮ್ಮ ಜೇಬು ತುಂಬಿಕೊಳ್ಳುತ್ತಿದ್ದಾರೆ; ಖರ್ಗೆ ಕಿಡಿ
ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಬೆಲೆ ಏರಿಕೆ ವಿರುದ್ಧ ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕರು ಗಮನ ಸೆಳೆಯುವ ಸಲುವಾಗಿ ರಾಷ್ಟ್ರೀಯ ಕಾಂಗ್ರೆಸ್ ಹೋರಾಟಕ್ಕೆ ಕರೆ ಕೊಟ್ಟಿದೆ. ಊಹೆಗೂ ಮೀರಿದ ಮಟ್ಟದಲ್ಲಿ ಇಂಧನ ಬೆಲೆ ಏರಿಕೆ ಆಗಿದೆ. ಸಾಮಾನ್ಯ ಜನ ಬಳಸುವ ಡೀಸೆಲ್ ಇಂದು ಪೆಟ್ರೋಲ್ ಗಿಂತ ಹೆಚ್ಚಿನ ಬೆಲೆ ಒಂದು ಸ್ಥಿತಿ ಎದುರಿಸುತ್ತಿದೆ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಸಾಮಾನ್ಯ ಜನರಿಗೆ ಹೊಡೆತ ಬೀಳಬಾರದು ಎಂದು ಎಂದು ಬೆಲೆ ಏರಿಕೆಯನ್ನು ಸಾಕಷ್ಟು ನಿಯಂತ್ರಣದಲ್ಲಿ ಇರಿಸಿದ್ದೆವು. ಸೋನಿಯಾ ಗಾಂಧಿ ಪತ್ರ ಬರೆದು ಬೆಲೆ ಏರಿಕೆ ವಿಚಾರವನ್ನು ಪ್ರಧಾನಿಗೆ ಪತ್ರ ಬರೆದು ವಿವರಿಸುವ ಕಾರ್ಯ ಮಾಡಿದ್ದಾರೆ ಎಂದರು.
ಮುಂದುವರೆದ ಅವರು, 2 ಲಕ್ಷ 60 ಸಾವಿರ ಕೋಟಿ ರೂ ಮೊತ್ತದ ಸಬ್ಸಿಡಿಯನ್ನು ಹಿಂದಿನ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ನೀಡಿತ್ತು. ಈ ಸರ್ಕಾರ ಕಳೆದ ಒಂದು ತಿಂಗಳಲ್ಲಿ 11 ರೂಪಾಯಿ ನಷ್ಟು ಇಂಧನ ಬೆಲೆ ಏರಿಕೆ ಆಗಿದೆ. ಅಲ್ಲಿಗೆ ಮೂಲ ಬೆಲೆಗಿಂತ 35 ಸಾವಿರ ಕೋಟಿ ರೂಪಾಯಿಯಷ್ಟು ಹೆಚ್ಚುವರಿ ಮೊತ್ತ ಕೇಂದ್ರ ಸರ್ಕಾರದ ಖಜಾನೆ ಸೇರಿದೆ. 18 ಲಕ್ಷ ಕೋಟಿ ರೂಪಾಯಿ ನಿಮ್ಮ ಬಳಿ ಇರುವ ಬಡವರ ಕೈಗೆ ಹಣ ನೀಡಿ ಎಂದು ಆಗ್ರಹಿಸುತ್ತಿದ್ದೇವೆ ಎಂದು ಖರ್ಗೆ ಹೇಳಿದರು.
ಬಡವರಿಗೆ ಖರೀದಿ ಮಾಡುವ ಶಕ್ತಿ ಹೆಚ್ಚಾಗಬೇಕು. ಆಗ ಉತ್ಪಾದನೆ ಕೂಡ ಹೆಚ್ಚಾಗಿ ದೇಶದ ಆರ್ಥಿಕ ಸ್ಥಿತಿ ಸುಧಾರಣೆ ಆಗುತ್ತದೆ. ಆದರೆ ನರೇಂದ್ರ ಮೋದಿ ಇದ್ಯಾವ ಕಾರ್ಯವನ್ನು ಮಾಡುತ್ತಿಲ್ಲ. ಜನರ ಜೇಬು ತುಂಬುವ ಬದಲು ತಮ್ಮ ಜೇಬು ತುಂಬಿಕೊಳ್ಳುವ ಕಾರ್ಯವನ್ನು ಮಾಡುತ್ತಿದ್ದಾರೆ. ದೇಶದ ರಕ್ಷಣೆ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿಯ ಹಣ ನೀಡುವ ಕಾರ್ಯ ಕೇಂದ್ರ ಸರ್ಕಾರದಿಂದ ಆಗುತ್ತಿಲ್ಲ. ಅಭಿವೃದ್ಧಿ ಕೆಲಸಕ್ಕೆ ಸೂಕ್ತ ಬಜೆಟ್ ನೀಡುತ್ತಿಲ್ಲ, ನೀಡಿದ ಮೊತ್ತವನ್ನು ಸಮರ್ಪಕವಾಗಿ ಬಳಸುತ್ತಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆ ಕೊನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ದೇಶದ ಇತಿಹಾಸದಲ್ಲೇ ಅತ್ಯಂತ ಕಡಿಮೆ ಇರಬೇಕಿದ್ದ ಬೆಲೆ ಅತಿ ಹೆಚ್ಚು ಮೊತ್ತಕ್ಕೆ ಏರಿದೆ. ದಿಲ್ಲಿಯಲ್ಲಿ ಇಂದು ಪೆಟ್ರೋಲ್ ಬೆಲೆಗಿಂತ ಡೀಸೆಲ್ ಬೆಲೆ ಹೆಚ್ಚಾಗುವ ಸ್ಥಿತಿ ನಿರ್ಮಾಣವಾಗಿದೆ. ವಾಹನ ನಡೆಸುವವರ ರಕ್ತವನ್ನು ಹೀರಿ ತಾನು ಉದ್ಧಾರವಾಗುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಕೇವಲ ತೆರಿಗೆಯನ್ನು ಹೆಚ್ಚಿಸಿ ಹಣ ವಸೂಲಿ ಮಾಡುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಿದೆ. ಕೋವಿಡ್ ದೊಡ್ಡ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ. ನೇರವಾಗಿ ಪ್ರಧಾನಿಯೇ ಇದಕ್ಕೆ ಕಾರಣ. ರೋಗವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರದಿಂದ ಸಾಧ್ಯವಾಗಿಲ್ಲ. ಜನರಿಂದ ತೆರಿಗೆ ರೂಪದಲ್ಲಿ ಪಡೆದ ಹಣವನ್ನು ಇದೀಗ ಜನರ ಅನುಕೂಲಕ್ಕೆ ನೀಡಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದರು.
ಇದೇ ವೇಳೆ, ಮೋದಿ ಹಾಗೂ ಯಡಿಯೂರಪ್ಪನವರಿಗೆ ಕಣ್ಣು ಕಿವಿ ಬಾಯಿ ಹಾಗೂ ಹೃದಯವೇ ಇಲ್ಲ. ನಿಮ್ಮ ಬಾಯಿ ಇರುವುದು ಕೇವಲ ಸಾಮಾನ್ಯ ಜನರ ಬಾಯಿ ಮುಚ್ಚಿಸುವ ಸಲುವಾಗಿ. ವಿವಿಧ ಸರ್ಕಾರಿ ಕಚೇರಿಗಳ ನಡುವೆ ನಿಂತು ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ನಮಗೆ ಇಂದು ಪೊಲೀಸ್ ಇಲಾಖೆಯಿಂದ ಕೂಡ ಪರವಾನಗಿ ಸಿಕ್ಕಿಲ್ಲ. ಹೋರಾಟಕ್ಕೆ ನಮಗೆ ಅದರ ಅಗತ್ಯವೂ ಇಲ್ಲ. ಜನರ ಧ್ವನಿ ಎತ್ತಲು ನಮಗೆ ಯಾರ ಪರವಾಗಿಯೂ ಅಗತ್ಯವಿಲ್ಲ ಎಂದರು.
ದನಿ ಎತ್ತುವ ಶಕ್ತಿಯನ್ನು ಜನ ನೀಡಿದ್ದಾರೆ ಅವರ ಪರವಾಗಿ ಹೋರಾಡುತ್ತೇವೆ. ಜು.4 ರಿಂದ 7 ರವರೆಗೆ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ನಡೆಯಲಿದೆ. ಆದರೆ ಕೇವಲ ನಾಲ್ಕು ಮಂದಿಗೆ ಮಾತ್ರ ಇಂದು ಭೇಟಿಗೆ ಅವಕಾಶ ನೀಡಲಾಗಿದೆ. ಎಲ್ಲರ ಪರವಾಗಿ ನಾಲ್ವರು ನಾಯಕರು ತೆರಳಿ ಕೇಂದ್ರ ಸರ್ಕಾರದ ಆಡಳಿತಕ್ಕೆ ನಾವು ಮನವಿ ಸಲ್ಲಿಸುತ್ತೇವೆ. ರಾಷ್ಟ್ರಪತಿಗಳಿಗೆ ನಮ್ಮ ದೂರನ್ನು ತಲುಪಿಸುವ ಕಾರ್ಯವನ್ನು ರಾಜ್ಯಪಾಲರಿಗೆ ದೂರು ಕೊಡುವ ಮೂಲಕ ಮಾಡಲಿದ್ದೇವೆ. ಜನರು ಬದುಕಿರುವ ಸಂದರ್ಭವೇ ನೀವು ಕೊಲ್ಲುವ ಕೆಲಸ ಮಾಡುತ್ತಿದ್ದೀರಿ. ಪೆಟ್ರೋಲ್ ಡೀಸೆಲ್ ನಿಂದಲೇ ಜನರನ್ನು ಸುಡುವ ಕಾರ್ಯ ಮಾಡುತ್ತಿದ್ದೀರಿ. ಇದೇನಾ ಅಚ್ಚೆ ದಿನ್. ಬೇಸತ್ತ ಇದೇ ಜನ ನಿಮ್ಮನ್ನು ಮುಂದೆ ಅಧಿಕಾರದಿಂದ ಕೆಳಗಿಳಿಸುವ ಕಾರ್ಯ ಮಾಡಲಿದ್ದಾರೆ ಎಂದು ಎಚ್ಚರಿಸಿದರು.
ಜನರ ಹೋರಾಟ ದೇಶದ ಇತಿಹಾಸ. ಜನರ ಪರವಾಗಿ ನಾವು ಕೂಡ ಹೋರಾಡುತ್ತೇವೆ. ಜನರ ಹೋರಾಟವನ್ನು ಗೆಲ್ಲಿಸುತ್ತೇವೆ. ಪ್ರಾಣ ಹೋದರೂ ಜನರನ್ನು ಉಳಿಸುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.