HOME » NEWS » State » STATE CABINET MEETING DECISION TO STRICTLY IMPLEMENT COVID MEASURES SNVS

ಕೋವಿಡ್ ನಿಯಮಗಳ ಕಡ್ಡಾಯ ಪಾಲನೆ; ಅಭಿವೃದ್ಧಿ ಕಾಮಗಾರಿಗಳಿಗೆ ಮಾತ್ರ ಅನುದಾನ: ಸಚಿವ ಸಂಪುಟದಿಂದ ಕೈಗೊಂಡ ನಿರ್ಣಯಗಳು ಇವು

ಸಿಎಂ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲ ಪ್ರಮುಖ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ. ಹಾಗೆಯೇ ಹೊಸ ನಿರ್ಬಂಧಗಳ ಬದಲು ಹಳೆಯ ಕೋವಿಡ್ ನಿಯಮಗಳನ್ನೇ ಕಟ್ಟುನಿಟ್ಟಾಗಿ ಜಾರಿಗೆ ತರಲು ತೀರ್ಮಾನಿಸಲಾಗಿದೆ.

news18-kannada
Updated:March 22, 2021, 12:39 PM IST
ಕೋವಿಡ್ ನಿಯಮಗಳ ಕಡ್ಡಾಯ ಪಾಲನೆ; ಅಭಿವೃದ್ಧಿ ಕಾಮಗಾರಿಗಳಿಗೆ ಮಾತ್ರ ಅನುದಾನ: ಸಚಿವ ಸಂಪುಟದಿಂದ ಕೈಗೊಂಡ ನಿರ್ಣಯಗಳು ಇವು
ಸಂಪುಟ ಸಭೆಯಲ್ಲಿ ಸಿಎಂ ಯಡಿಯೂರಪ್ಪ
  • Share this:
ಬೆಂಗಳೂರು(ಮಾ. 22): ಹೆಚ್ಚುತ್ತಿರುವ ಕೋವಿಡ್ ನಿಯಮಗಳ ಹಿನ್ನೆಲೆಯಲ್ಲಿ ಇಂದು ಸಚಿನ ಸಂಪುಟ ಸಭೆಯಲ್ಲಿ ಕಟ್ಟುನಿಟ್ಟಿನ ನಿಯಮ ಮತ್ತು ನಿರ್ಬಂಧಗಳು ಹೊರಹೊಮ್ಮುವ ನಿರೀಕ್ಷೆ ಹುಸಿಯಾಗಿದೆ. ಈಗಾಗಲೇ ಚಾಲ್ತಿಯಲ್ಲಿರುವ ಕೋವಿಡ್ ನಿಯಂತ್ರಣ ನಿಯಮಗಳನ್ನ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮಾಡಿದ ಶಿಫಾರಸುಗಳನ್ನು ಸದ್ಯಕ್ಕೆ ಸಭೆಯಲ್ಲಿ ಕೈಬಿಡಲಾಗಿದೆ. ನಾಲ್ಕೈದು ದಿನಗಳ ಬಳಿಕ ಪರಿಸ್ಥಿತಿ ಅವಲೋಕಿಸಿ ಮುಂದೆ ಇನ್ನಷ್ಟು ಬಿಗಿ ಕ್ರಮಗಳನ್ನ ಕೈಗೊಳ್ಳಲು ತೀರ್ಮಾನಿಸಲಾಗಿದೆ.

ರಾಜ್ಯಾದ್ಯಂತ ಯಾವುದೇ ಸಭೆ ಸಮಾರಂಭ ಮಾಡಬೇಕಿದ್ದರೂ ಆಯಾ ಜಿಲ್ಲಾಧಿಕಾರಿಗಳ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಗಡಿ ಜಿಲ್ಲೆಗಳಲ್ಲಿ ಅಗತ್ಯ ಎಚ್ಚರಿಕೆ ಕ್ರಮ ವಹಿಸಬೇಕು. ಜನರು ಮನೆಯಿಂದ ಹೊರಗೆ ಹೋದಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಗುಂಪುಗೂಡದ ರೀತಿ ಎಚ್ಚರವಹಿಸಬೇಕು. ಶಾಲಾ ಕಾಲೇಜುಗಳಲ್ಲಿ ಕೋವಿಡ್ ನಿಯಮಗಳ ಪಾಲನೆಗೆ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಈ ಸಭೆಯಲ್ಲಿ ಕೋವಿಡ್ ನಿಯಮಗಳ ಪಾಲನೆ ಜೊತೆಗೆ ಇನ್ನೂ ಹಲವು ನಿರ್ಧಾರಗಳನ್ನ ಕೈಗೊಳ್ಳಲಾಗಿದೆ. ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಮಾತ್ರ ಅನುದಾನ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ. ಈ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳು ಈ ಕೆಳಕಂಡಂತಿವೆ.

* ಕೋವಿಡ್ ನಿಯಮಗಳನ್ನ ಕಟ್ಟುನಿಟ್ಟಾಗಿ ಅನುಸರಿಸುವಂತೆ ನೋಡಿಕೊಳ್ಳುವುದು

* ಸರ್ವೋಚ್ಛ ನ್ಯಾಯಾಲಯದಲ್ಲಿ ಮೀಸಲಾತಿ ಕುರಿತು ಪ್ರಕರಣ ಬಾಕಿ ಹಿನ್ನೆಲೆಯಲ್ಲಿ, ಬಾಕಿ ಇರುವ ಸಿವಿಲ್ ಅಪೀಲ್ ಸಂಖ್ಯೆ 3123/2020ಕ್ಕೆ ಸಂಬಂಧಿಸಿದಂತೆ ರಾಜ್ಯದ ನಿಲುವನ್ನು ಪ್ರಕಟಿಸುವ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ.

* 2020-21ನೇ ಸಾಲಿಗೆ ರಸಗೊಬ್ಬರ ಕಾಪು ದಾಸ್ತಾನು ಮಾಡಲು ನಿರ್ಧಾರ

* ರಾಜ್ಯ ಸಹಕಾರ ಮಹಾ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತವು 150 ಕೋಟಿಗಳ ಬ್ಯಾಂಕ್ ಸಾಲ ಪಡೆಯಲು ರಾಜ್ಯ ಸರ್ಕಾರದ ಖಾತ್ರಿ.ಇದನ್ನೂ ಓದಿ: ಬಾಂಬೆ ಟೀಂನವರ ಕ್ಷೇತ್ರಗಳೀಗ ಭೂಲೋಕದ ಸ್ವರ್ಗಗಳಾಗಿವೆಯೇ?; ಸಿಎಂಗೆ ಹೆಚ್​.ಡಿ ಕುಮಾರಸ್ವಾಮಿ ಪ್ರಶ್ನೆ

* ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಟಾನ ಟ್ರಸ್ಟ್‌ನ ಕ್ರಿಯಾ ಯೋಜನೆ-3ರಲ್ಲಿ ಅನುಮೋದಿತವಾಗಿರುವ ಹೊಸಪೇಟೆ ತಾಲೂಕಿನ ಸರ್ಕಾರಿ ಆಸ್ಪತ್ರೆಯನ್ನು 100 ಹಾಸಿಗೆ ಯಿಂದ 250 ಹಾಸಿಗೆ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಲು 104 ಕೋಟಿ ರೂ. ಅಂದಾಜು ಮೊತ್ತದ ಕಾಮಗಾರಿಗೆ ಅನುಮೋದನೆ.

* ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಗೆ ಅವಶ್ಯವಿರುವ ಉಪಕರಣ, ಪೀಠೋಪಕರಣ ಮತ್ತಿತರೆ ಪರಿಕರಗಳನ್ನು ಖರೀದಿಸಲು 24.83 ಕೋಟಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ.

* ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ನಿರ್ಮಿಸುತ್ತಿರುವ ಹೊಸ 15 ಓಟಿ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿಗೆ 39.98 ಕೋಟಿ ಪರಿಷ್ಕೃತ ಅಂದಾಜಿಗೆ ಅನುಮೋದನೆ.

* ಕೈದಿಗಳ ಗುರುತಿನ (ಕರ್ನಾಟಕ ತಿದ್ದುಪಡಿ) ವಿಧೇಯಕ 2021, ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021ಕ್ಕೆ ಅನುಮೋದನೆ.

* ರಾಜ್ಯಾದ್ಯಂತ ಸರ್ಕಾರಿ ಮಾಲೀಕತ್ವದಲ್ಲಿರುವ ಘೋಷಿತ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ನಿಗದಿಪಡಿಸಿರುವ ದರ ಪರಿಷ್ಕರಣೆಗೆ ಒಪ್ಪಿಗೆ.

* ದಕ್ಷಿಣ ಜಿಲ್ಲೆ ಕೊಡಯಾಲ ಬೈಲ್ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರ್ ವಿಠ್ಠಲ ಕಿಣಿ ಅವರಿಗೆ 0.05 ಎಕರೆ (ಐದು ಸೆಂಟ್ಸ್) ನಿವೇಶನ ಮಂಜೂರು.

* ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ತಿದ್ದುಪಡಿ) ವಿಧೇಯಕ, 2021ಕ್ಕೆ ಅನುಮೋದನೆ.

* ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ವಿಧೇಯಕ 2021ಕ್ಕೆ ಅನುಮೋದನೆ.

* ಮೈಸೂರು- ಹುಣಸೂರು ರಸ್ತೆ ಹೊರ ವರ್ತುಲ ರಸ್ತೆ ಜಂಕ್ಷನ್‌ನಲ್ಲಿ ಗ್ರೇಡ್ ಸಪರೇಟರ್ ನಿರ್ಮಾಣ ಕಾಮಗಾರಿಯ 22.81 ಕೋಟಿ ಪರಿಷ್ಕೃತ ಅಂದಾಜು ಪಟ್ಟಿಗೆ ಒಪ್ಪಿಗೆ.

* ಮಂಗಳೂರು ಮಹಾನಗರ ಪಾಲಿಕೆ ಕಂಕನಾಡಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಆರ್ಥಿಕ ಮಾದರಿ ಪರಿಷ್ಕರಣೆ

* ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಆದೇಶದನ್ವಯ ರಾಜ್ಯದಲ್ಲಿ ಕಲುಷಿತಗೊಳ್ಳುತ್ತಿರುವ 17 ನದಿ ಪಾತ್ರದಲ್ಲಿ ಬರುವ ನಗರ ಪಟ್ಟಣಗಳ ಒಳಚರಂಡಿ ಕಾಮಕಾರಿಯ 400 ಕೋಟಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ.

* ನಾರಾಯಣಪುರ ಬಲದಂಡೆ ಕಾಲುವೆ 0.00 ಕಿ.ಮೀ ರಿಂದ 95 ಕಿಮೀ ಆಧುನೀಕರಣ ಕಾಮಗಾರಿಯ 2794 ಕೋಟಿ ಮೊತ್ತದ ಪರಿಷ್ಕೃತ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ.

* ಕೃಷ್ಣಾ ನದಿಯಿಂದ ಲ್‌ಟಿ ಮುಖಾಂತರ ರಾಯಚೂರು ತಾಲೂಕಿನ 18 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು 192.00 ಕೋಟಿಗಳ ಅಂದಾಜು ಮೊತ್ತಕ್ಕೆ ಘಟನೋತ್ತರ ಅನುಮತಿ.

* ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ಬೀಳಗಿ ಮತ ಕ್ಷೇತ್ರದಲ್ಲಿನ 16 ಸಾವಿರ ಹೆಕ್ಟೇರ್ ನೀರಾವರಿ ವಂಚಿತ ಪ್ರದೇಶಕ್ಕೆ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ನೀರನ್ನು ಎತ್ತಿ ನೀರಾವರಿಗೊಳಪಡಿಸುವ ಕೆರೂರ್ ಏತ ನೀರಾವರಿ ಯೋಜನೆಯ 525 ಕೋಟಿಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆಗೆ ಘಟನೋತ್ತರ ಅನುಮತಿ.

ವರದಿ: ಕೃಷ್ಣ ಜಿ.ವಿ.
Published by: Vijayasarthy SN
First published: March 22, 2021, 12:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories