ನವದೆಹಲಿ (ನ. 18): ರಾಜ್ಯ ಸಚಿವ ಸಂಪುಟದ ವಿಸ್ತರಣೆ ಅಥವಾ ಪುನಾರಚನೆ ಕಸರತ್ತು ಮತ್ತೆ ನನೆಗುದಿಗೆ ಬಿದ್ದಿರುವಂತಹ ವಾತಾವರಣ ಕಂಡುಬರುತ್ತಿದೆ. ಉಪ ಚುನಾವಣೆಗಳನ್ನು ಗೆದ್ದ ಭಾರೀ ಉತ್ಸಾಹದೊಂದಿಗೆ ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಬುಧವಾರ ಅವಸವಸರವಾಗಿ ದೆಹಲಿಗೆ ದೌಡಾಯಿಸಿದ್ದರು. ಆದರೆ ಹೈಕಮಾಂಡ್ ನಾಯಕರಿಂದ ಅಂಥ ಉತ್ಸಾಹ ಕಂಡುಬಂದಿಲ್ಲ.
ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ಬಂದ ಮೇಲೂ ಅವರಿಗೆ ನಿಗದಿಪಡಿಸಿದ್ದ ಸಮಯಾವಕಾಶವನ್ನು ಪದೇ ಪದೇ ಮುಂದೂಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಅಂತಿಮವಾಗಿ 4.45ಕ್ಕೆ ಭೇಟಿಗೆ ಅವಕಾಶ ಮಾಡಿಕೊಟ್ಟರು. ಇದಾದ ಬಳಿಕ ಜೆ.ಪಿ. ನಡ್ಡ ಮತ್ತು ಯಡಿಯೂರಪ್ಪ ಸುಮಾರು 20 ನಿಮಿಷಗಳ ಕಾಲ ಸಮಾಲೋಚನೆ ನಡೆಸಿದರು. ಆದರೆ ಯಡಿಯೂರಪ್ಪ ಅವರ ಪ್ರಸ್ತಾಪಕ್ಕೆ ಜೆ.ಪಿ. ನಡ್ಡ ಪೂರಕವಾಗಿ ಸ್ಪಂದಿಸಿಲ್ಲ ಎಂಬುದು ಬಿಎಸ್ ವೈ ಮಾತುಗಳಿಂದಲೇ ವ್ಯಕ್ತವಾದವು.
ಜೆ.ಪಿ. ನಡ್ಡ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸಂಪುಟ ವಿಸ್ತರಣೆ ಮಾಡಬೇಕೋ ಅಥವಾ ಪುನಾರಚನೆ ಮಾಡಬೇಕೋ ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ. ನನ್ನ ಅಭಿಪ್ರಾಯ ಕೇಳಿದರು. ವಿಸ್ತರಣೆ ಅಥವಾ ಪುನಾರಚನೆ ಮಾಡುವ ಬಗ್ಗೆ ನನ್ನ ಅಭಿಪ್ರಾಯವನ್ನು ತಿಳಿಸಿದ್ದೇನೆ ಎಂದು ಹೇಳಿದರು.
ಇದನ್ನು ಓದಿ: ಜೆಪಿ ನಡ್ಡಾ-ಯಡಿಯೂರಪ್ಪ ಭೇಟಿ; 20 ನಿಮಿಷ ಚರ್ಚೆ; ಹೈಕಮಾಂಡ್ ನಿರ್ದೇಶನದ ಮೇರೆಗೆ ಮುಂದಿನ ನಿರ್ಧಾರ ಎಂದ ಸಿಎಂ
ಸಂಪುಟ ಪುನಾರಚನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಒಪ್ಪಿಗೆ ನೀಡಬೇಕಿದೆ ಎಂದು ಹೇಳಲಾಗುತ್ತಿದೆ. ಆದರೆ ಯಡಿಯೂರಪ್ಪ ಅವರಿಗೆ ಅಮಿತ್ ಶಾ ಭೇಟಿಗೆ ಅವಕಾಶ ಸಿಗಲಿಲ್ಲ. ಅಮಿತ್ ಶಾ ಭೇಟಿ ಸಾಧ್ಯವಾಗುತ್ತಿಲ್ಲ. ನೇರವಾಗಿ ಬೆಂಗಳೂರಿಗೆ ತೆರಳುತ್ತಿದ್ದೇನೆ ಎಂದು ಸ್ವಂತ ಯಡಿಯೂರಪ್ಪ ಅವರೇ ತಿಳಿಸಿದರಲ್ಲದೆ ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ