ಬೆಂಗಳೂರು: ಆರ್ಥಿಕ ಸಂಕಷ್ಟ, ಕೇಂದ್ರದಿಂದ ರಾಜ್ಯಕ್ಕೆ ಬಾರದ ಜಿಎಸ್ಟಿ ಪರಿಹಾರ, ಬಜೆಟ್ ಗಾತ್ರಕ್ಕಿಂತಲೂ ಹೆಚ್ಚಿರುವ ಸಾಲ ಮತ್ತು ಕೊರೋನಾ ಉಂಟು ಮಾಡಿರುವ ಆರ್ಥಿಕ ಸಂಕಷ್ಟದಿಂದಾಗಿ ಕರ್ನಾಟಕದ ಖಜಾನೆ ಅಕ್ಷರಶಃ ಖಾಲಿಯಾಗಿದೆ. ಹೀಗಾಗಿ ಈ ಬಾರಿ ಬಜೆಟ್ ಮಂಡಿಸುವುದೇ ರಾಜ್ಯ ಸರ್ಕಾರಕ್ಕೆ ದುಸ್ತರವಾಗಿದ್ದು, ಈ ವರ್ಷ ಕೊರತೆಯ ಬಜೆಟ್ ದಾಖಲಿಸಲಿರುವುದಾಗಿ ರಾಜ್ಯ ಸರ್ಕಾರವೂ ಈಗಾಗಲೇ ಸುಳಿವು ನೀಡಿದೆ. ಈ ನಡುವೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಸೋಮವಾರ ತಮ್ಮ ಎಂಟನೇ ಬಜೆಟ್ ಮಂಡನೆಗೆ ಸನ್ನದ್ಧರಾಗಿದ್ದು, ಅನೇಕ ನಿರೀಕ್ಷೆಗಳೂ ಸಹ ಗರಿಗೆದರಿರುವುದು ಸುಳ್ಳಲ್ಲ. ಇಂದು ಮಧ್ಯಾಹ್ನ ಯಡಿಯೂರಪ್ಪ ಅವರು ಬಜೆಟ್ ಮಂಡನೆಯಾಗಲಿದೆ.
ಬಿ.ಎಸ್. ಯಡಿಯೂರಪ್ಪ ಅವರು 2019 ಜುಲೈ 26ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಇದು ಎರಡನೇ ಬಾರಿ ಬಜೆಟ್ ಮಂಡಿಸಲಿದ್ದಾರೆ. ಆರ್ಥಿಕ ಸಂಕಟ, ಪ್ರವಾಹ, ಹೆಚ್ಚಾದ ಸಾಲ ಪ್ರಮಾಣಗಳ ನಡುವೆ ನಾಳೆ ಸಿಎಂ ಬಿಎಸ್ವೈ ಮಂಡಿಸುವ ಬಜೆಟ್ ಮೇಲೆ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.
ರಾಜ್ಯ ಸರ್ಕಾರ ಸುಮಾರು 3 ಲಕ್ಷ ಕೋಟಿ ಸಾಲದ ಸುಳಿಯಲ್ಲಿದೆ. ಹಾಗೇ ನೋಡಿದರೆ ಇದು ರಾಜ್ಯ ಬಜೆಟ್ಗಿಂತಲೂ ದೊಡ್ಡ ಗಾತ್ರದ ಸಾಲವಾಗಿದೆ. ದೂರದೃಷ್ಟಿಯ ಅಭಿವೃದ್ಧಿ ಬಜೆಟ್ಗಿಂತ ಮತಕ್ಕಾಗಿ ಜನಪ್ರಿಯ ಯೋಜನೆಗಳ ಘೋಷಣೆಯೇ ಈ ಸಾಲದ ಬಾಬ್ತು ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಈ ನಿಟ್ಟಿನಲ್ಲಿ ಬಿಎಸ್ವೈ ನಾಳೆ ಮಂಡಿಸುವ ಬಜೆಟ್ ಹೊಸ ಯೋಜನೆ ಘೋಷಣೆಕ್ಕಿಂತ ಮುಖ್ಯವಾಗಿ ಆಯವ್ಯಯದ ಮೇಲೆ ವೆಚ್ಚ ಕಡಿತಕ್ಕೆ ಹೆಚ್ಚು ಗಮನ ಹರಿಸುವ ಸಾಧ್ಯತೆ ಇದೆ ಎಂದು ಅರ್ಥ ತಜ್ಞರು ವಿಶ್ಲೇಷಿಸಿದ್ದಾರೆ.
ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದ್ದ ಜಿಎಸ್ಟಿ ಪರಿಹಾರವೂ ಸಕಾಲಕ್ಕೆ ಬಂದಿಲ್ಲ. ಕೇಂದ್ರ ಸರ್ಕಾರದಿಂದ 2019-20ರ ತೆರಿಗೆ ಹಂಚಿಕೆಯಲ್ಲಿ 8887 ಕೋಟಿ ರೂಪಾಯಿ ಕೊರತೆಯಾಗಲಿದೆ. ಜಿಎಸ್ಟಿ ಪರಿಹಾರದಲ್ಲಿ 4600 ಕೋಟಿ ಬರುವುದು ಬಾಕಿ ಇದೆ. ಈ ನಡುವೆ 2020-21ರ ಜಿಎಸ್ಟಿ ಲೆಕ್ಕ ಈವರೆಗೆ ಸಿಕ್ಕಿಲ್ಲ. ಇನ್ನು 15ನೇ ಹಣಕಾಸು ಆಯೋಗದ ಅಂದಾಜಿನಂತೆ ಕೇಂದ್ರದ ತೆರಿಗೆ ಹಂಚಿಕೆಯಲ್ಲಿ 2020-21ರಲ್ಲಿ 11215 ಕೋಟಿ ರೂಪಾಯಿ ಕಡಿತವಾಗಲಿದೆ. ಭವಿಷ್ಯದಲ್ಲಿ ಈ ಕಡಿತದ ಪ್ರಮಾಣ ಹೆಚ್ಚಾಗಲಿದ್ದು, ರಾಜ್ಯದ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ. ಇದು ಕೂಡ ಸಿಎಂ ಬಿಎಸ್ವೈ ಅವರಿಗೆ ದೊಡ್ಡ ತಲೆ ನೋವಾಗಿದೆ.
ಇದನ್ನೂ ಓದಿ: Anant Kumar Hegde: ಸಂಸದ ಅನಂತ ಕುಮಾರ್ ಹೆಗಡೆಗೆ ಶಸ್ತ್ರ ಚಿಕಿತ್ಸೆ; ಇನ್ನು ಒಂದು ವರ್ಷ ಎಲ್ಲೂ ಓಡಾಡೋ ಹಾಗಿಲ್ಲ!
ಈಗಾಗಲೇ ಏಳು ಬಜೆಟ್ಗಳನ್ನು ಮಂಡಿಸಿರುವ ಬಿ.ಎಸ್.ಯಡಿಯೂರಪ್ಪ ಸೋಮವಾರ ಎಂಟನೇ ಆಯವ್ಯಯ ಮಂಡಿಸಲಿದ್ದಾರೆ. ಕೃಷಿ ಬಜೆಟ್, ಸೈಕಲ್ ವಿತರಣೆ, ಭಾಗ್ಯಲಕ್ಷ್ಮೀ ಬಾಂಡ್, ಮಠಗಳಿಗೆ ಅನುದಾನ ಸೇರಿದಂತೆ ಪ್ರತಿ ಬಜೆಟ್ನಲ್ಲೂ ವಿಶೇಷತೆ ಮೆರೆದಿದ್ದ ಬಿಎಸ್ವೈ ಅವರಿಗೆ ಎಂಟನೇ ಬಜೆಟ್ ಸವಾಲಿನದ್ದಾಗಿದೆ. ಈ ಹಿಂದಿನ ಬಜೆಟ್ಗಳಲ್ಲಿ ಘೋಷಣೆ ಮಾಡಿದ್ದಂತೆ ಹೊಸ ಯೋಜನೆಗಳನ್ನು ಈ ಬಾರಿ ಘೋಷಿಸುವುದು ಅನುಮಾನ ಎನ್ನಲಾಗುತ್ತಿದೆ. ಆದರೆ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲ ಯೋಜನೆ ಪ್ರಕಟಿಸಬಹುದು ಎಂದೂ ಅಂದಾಜಿಸಲಾಗಿದೆ.
ಫಸಲ್ ಬಿಮಾ ಯೋಜನೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಆದ್ಯತೆ, ರೈತರ ಆದಾಯ ದುಪ್ಪಟ್ಟು ಮಾಡುವ ಪ್ರಧಾನಿ ಆಶಯಕ್ಕೆ ತಕ್ಕಂತೆ ಕಾರ್ಯಕ್ರಮಗಳು, ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಇಳುವರಿಯಲ್ಲಿ ಆಗುವ ಕುಸಿತ, ನಷ್ಟ ತಪ್ಪಿಸಲು ಹೊಸ ಚಿಂತನೆ, ರೈತರ ಹೊಲಗಳಿಗೆ ಕೃಷಿ ಇಲಾಖೆ ಅಧಿಕಾರಿಗಳನ್ನು ಕಳಿಸಿ, ಮಾರ್ಗದರ್ಶನ ನೀಡುವ ವ್ಯವಸ್ಥೆ, ಕೃಷಿ ಭಾಗ್ಯ ಯೋಜನೆಯಲ್ಲಿನ ದೋಷಗಳನ್ನು ಸರಿಪಡಿಸಲು ಬಿಎಸ್ವೈ ತಮ್ಮ ಬಜೆಟ್ನಲ್ಲಿ ಆದ್ಯತೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ