State Budget 2021: ನಾಳಿನ ರಾಜ್ಯ ಬಜೆಟ್​ ಮೇಲೆ ಮಹತ್ತರ ನಿರೀಕ್ಷೆ ಇಟ್ಟುಕೊಂಡಿರುವ ರಾಯಚೂರಿನ ಜನರು

ನಾರಾಯಣಪುರ ಬಲದಂಡೆ ನಾಲೆಯಲ್ಲಿ ಈಗಾಗಲೇ 96 ಕಿಮೀ ವರೆಗೂ ನಾಲೆ ಪೂರ್ಣಗೊಂಡಿದೆ, ಇನ್ನೂ 147 ಕಿಮೀ ವರೆಗೂ ನಾಲೆ ಪೂರ್ಣಗೊಳ್ಳಲು ಹಣಕಾಸು ನೀಡಬೇಕಾಗಿದೆ. ಜಿಲ್ಲೆಯಲ್ಲಿ ಜಲಜೀವನ ಮಿಷನ್ ಹಾಗು ಜಲಧಾರೆ ಯೋಜನೆಯಲ್ಲಿ ಬೃಹತ್ ಯೋಜನೆಗಳು ಮಂಜೂರಾಗಿವೆ. ಅದಕ್ಕೂ ಸರಕಾರದಿಂದ ಅನುದಾನ ನೀಡಬೇಕಾಗಿದೆ.

ಸಿಎಂ ಬಿಎಸ್​ ಯಡಿಯೂರಪ್ಪ

ಸಿಎಂ ಬಿಎಸ್​ ಯಡಿಯೂರಪ್ಪ

  • Share this:
ರಾಯಚೂರು(ಮಾ.07):  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಳೆ ವಿಧಾನಸೌಧದಲ್ಲಿ 2021-22 ನೆಯ ಸಾಲಿನ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್ ಮೇಲೆ ಹಿಂದುಳಿದಿರುವ ರಾಯಚೂರು ಜಿಲ್ಲೆಯ ಜನತೆ ಹಲವಾರು ನಿರೀಕ್ಷೆ ಇಟ್ಟುಕೊಂಡಿದ್ದಾರೆ, ಮಸ್ಕಿ ಬೈ ಎಲೆಕ್ಷನ್ ಹಿನ್ನಲೆಯಲ್ಲಿ ಏನೆಲ್ಲ ನಿರೀಕ್ಷೆಗಳಿಗೆ ಏನೆಲ್ಲ ಗಿಫ್ಟ್ ಕೊಡುತ್ತಾರೆ ಎಂದು ಆಶಾಭಾವನೆಯಿಂದ ನೋಡುತ್ತಿದ್ದಾರೆ.

ಕಳೆದ ಒಂದು ವರ್ಷದಿಂದ ಕೊರೊನಾ ಅಲೆಯಿಂದ ತತ್ತರಿಸಿದ ರಾಜ್ಯದಲ್ಲಿ ನಾಳೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಂಡಿಸುವ ರಾಜ್ಯ ಬಜೆಟ್ ಮೇಲೆ ಹಲವು ನಿರೀಕ್ಷೆಗಳಿವೆ, ದಶದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಕೊಂಡಿರುವ ರಾಯಚೂರು ಜಿಲ್ಲೆಯಲ್ಲಿಯೂ ಹಲವು ನಿರೀಕ್ಷೆಗಳಿವೆ, ಈ ನಿರೀಕ್ಷೆಗಳಿಗೆ ಸಿಎಂ ಸ್ಪಂದಿಸಿ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಅದರಲ್ಲಿ ಕೆಲವು ಪ್ರಮುಖ ನಿರೀಕ್ಷೆಗಳೇನು ಎಂಬುವುದನ್ನು ನೋಡುವುದಾದರೆ.

ನೀರಾವರಿ: ರಾಜ್ಯದಲ್ಲಿ ದಾಖಲೆಯಲ್ಲಿ ಅತಿ ಹೆಚ್ಚು ನೀರಾವರಿ ಪ್ರದೇಶ ಎಂದು ಗುರುತಿಸಿಕೊಂಡಿರುವ ರಾಯಚೂರು ಜಿಲ್ಲೆಯಲ್ಲಿ ನೀರಾವರಿಯ ಹಲವಾರು ಸಮಸ್ಯೆಗಳಿವೆ ಅದರಲ್ಲಿ ಮುಖ್ಯವಾಗಿ ತುಂಗಭದ್ರಾ ಎಡದಂಡೆ ಹಾಗು ನಾರಾಯಣಪುರ ಬಲದಂಡೆ ನಾಲೆಯ ಸಮಸ್ಯೆಗಳು. ತುಂಗಭದ್ರಾ ಎಡದಂಡೆ ನಾಲೆಯಿಂದ ಈಗ ಸಿಂಧನೂರು ತಾಲೂಕಿನ ನಂತರ ಮಸ್ಕಿ, ಮಾನವಿ, ಸಿರವಾರ ಹಾಗು ರಾಯಚೂರು ತಾಲೂಕಿನ ನಾಲೆಯ ಕೊನೆಯ ಭಾಗದ ರೈತರ ಭೂಮಿಗೆ ನೀರು ಹರಿಯುತ್ತಿಲ್ಲ.

ನೀರನ್ನು ಕದಿಯಲಾಗುತ್ತಿದೆ ಎಂಬ ಆರೋಪ ಒಂದು ಕಡೆಯಾದರೆ ನಾಲೆಯಲ್ಲಿ ವಿತರಣಾ ನಾಲೆಯಲ್ಲಿಯ ತೂಬುಗಳು ಸರಿ ಇಲ್ಲದೆ ಇರುವುದು, ಗೇಜ್ ಗಳು ಸರಿ ಇಲ್ಲದೆ ಇರುವುದು, ತುಂಗಭದ್ರಾ ಜಲಾಶಯದಲ್ಲಿ ಸುಮಾರು 34 ಟಿಎಂಸಿಯಷ್ಟು ಹೂಳು ತುಂಬಿದ್ದರಿಂದ ನಾಲೆಯಲ್ಲಿ ನೀರು ಹರಿವಿನ ಪ್ರಮಾಣ ಕಡಿಮೆಯಾಗಿ ರೈತರಿಗೆ ನೀರು ಸಿಗುತ್ತಿಲ್ಲ. ನಾಲೆಯ ವ್ಯಾಪ್ತಿಯಲ್ಲಿ ಸಮರ್ಪಕ ನೀರು ಹರಿವಿಕೆಗಾಗಿ ಈಗಾಗಲೇ ಮಂಜೂರಾಗಿರುವ ನವಲಿ ಸಮಾನಾಂತರ ಜಲಾಶಯ ನಿರ್ಮಾಣವಾಗಬೇಕು, ಈ ಬಗ್ಗೆ ಬೇಗನೆ ಯೋಜನಾ ಪಟ್ಟಿ ಸಿದ್ದವಾಗಿ ಕಾಮಗಾರಿ ಆರಂಭವಾಗಬೇಕು.

ಇನ್ನೂ ಕೃಷ್ಣಾ ನದಿಯಲ್ಲಿ ಮಳೆಗಾಲದಲ್ಲಿ ಮಹಾಪ್ರವಾಹ ಉಂಟಾಗಿ ಅಪಾರ ಪ್ರಮಾಣದ ನೀರು ನದಿಯಿಂದ ತೆಲಂಗಾಣ ಹಾಗು ಆಂಧ್ರಕ್ಕೆ ಹರಿದು‌ಹೋಗುತ್ತಿದೆ, ಈ ಮಧ್ಯೆ ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನಂತೆ ರಾಜ್ಯವು ತನ್ನ ಪಾಲಿನ 170 ಟಿಎಂಸಿ ನೀರು ಬಳಸಿಕೊಳ್ಳಲು ಅವಕಾಶವಿದೆ, ಈ ಕಾರಣಕ್ಕಾಗಿ ತಿಂಥಣಿ ಬಳಿಯಲ್ಲಿ 36 ಟಿಎಂಸಿ ಸಾಮರ್ಥ್ಯದ ಇನ್ನೊಂದು ಜಲಾಶಯ ನಿರ್ಮಾಣ ಮಾಡಲು ಕಳೆದ ಅಯವ್ಯಯದಲ್ಲಿ ಘೋಷಣೆಯಾಗಿದೆ. ಈಗ ತಿಂಥಣಿ ಬಳಿಯ ಜಲಾಶಯಕ್ಕೆ ಯೋಜನಾ ಪಟ್ಟಿ ತಯಾರಿಸಲು 50 ಕೋಟಿ ರೂಪಾಯಿ ನೀಡಬೇಕಾಗಿದೆ.

ನಾರಾಯಣಪುರ ಬಲದಂಡೆ ನಾಲೆಯಲ್ಲಿ ಈಗಾಗಲೇ 96 ಕಿಮೀ ವರೆಗೂ ನಾಲೆ ಪೂರ್ಣಗೊಂಡಿದೆ, ಇನ್ನೂ 147 ಕಿಮೀ ವರೆಗೂ ನಾಲೆ ಪೂರ್ಣಗೊಳ್ಳಲು ಹಣಕಾಸು ನೀಡಬೇಕಾಗಿದೆ. ಜಿಲ್ಲೆಯಲ್ಲಿ ಜಲಜೀವನ ಮಿಷನ್ ಹಾಗು ಜಲಧಾರೆ ಯೋಜನೆಯಲ್ಲಿ ಬೃಹತ್ ಯೋಜನೆಗಳು ಮಂಜೂರಾಗಿವೆ. ಅದಕ್ಕೂ ಸರಕಾರದಿಂದ ಅನುದಾನ ನೀಡಬೇಕಾಗಿದೆ.

ಶಿಕ್ಷಣ: ಯಾದಗಿರಿ ಹಾಗೂ ರಾಯಚೂರು ಜಿಲ್ಲೆ ವ್ಯಾಪ್ತಿಯ ರಾಯಚೂರು ವಿಶ್ವವಿದ್ಯಾಲಯ ಈ ಶೈಕ್ಷಣಿಕ ವರ್ಷದಿಂದ ಆರಂಭವಾಗಲಿದೆ, ಈ ಸಂದರ್ಭದಲ್ಲಿ ವಿವಿ ಆರಂಭದಲ್ಲಿ ಮೂಲಸೌಕರ್ಯ, ವಿವಿಧ ಕೋರ್ಸ್ ಗಳ ಆರಂಭಕ್ಕಾಗಿ ಒಟ್ಟು 600 ಕೋಟಿ ರೂಪಾಯಿ ಕೇಳಲಾಗಿದೆ. ಈ ವರ್ಷ 150 ಕೋಟಿ ರೂಪಾಯಿ ಬಿಡುಗಡೆ ಮಾಡುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.ರಾಯಚೂರಿನಲ್ಲಿ ಐಐಟಿ ಬದಲಿಗೆ ಐಐಟಿ ಆರಂಭವಾಗಿದೆ. ತ್ರಿಬಲ್ಐಐಟಿಗೆ ಮೂಲ ಸೌಕರ್ಯಕ್ಕಾಗಿ ಅನುದಾನ ನಿರೀಕ್ಷೆ ಇದೆ.

ಕೊಡಗು: ಜೀತ ವಿಮುಕ್ತಿ ಪಡೆದರೂ ಸಂಕಷ್ಟದ ಸಂಕೋಲೆಯಲ್ಲಿ ಕಾರ್ಮಿಕರು

ಆರೋಗ್ಯ: ರಾಯಚೂರು ನಗರದಲ್ಲಿರುವ ಓಪೆಕ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಈಗ ಆಸ್ಪತ್ರೆಯಿದ್ದರೂ ಸಾರ್ವಜನಿಕರಿಗೆ ನಿರೀಕ್ಷೆ ಅಷ್ಟು ವೈದ್ಯಕೀಯ ಸೇವೆ ಸಿಗುತ್ತಿಲ್ಲ, ಈ ಕಾರಣಕ್ಕಾಗಿ ಓಪೆಕ್ ಮೇಲ್ದರ್ಜೆಗೇರಿಸಿ ಸುಪರಸ್ಪೆಶಾಲಿಟಿ ಆಸ್ಪತ್ರೆಗೆ ಅನುದಾನ ಬೇಕಾಗಿದೆ. 

ಮೂಲಸೌಕರ್ಯ: ಈ ಮಧ್ಯೆ ರಾಯಚೂರಿನ ಯರಮರಸ್ ಬಳಿಯಲ್ಲಿ ವಿಮಾನ ನಿಲ್ದಾಣ ಯೋಜನೆ ನೆನೆಗುದಿಗೆ ಬಿದ್ದಿದೆ, ಈ ನಿಟ್ಟಿನಲ್ಲಿ ಈಗಾಗಲೇ ಕಲ್ಯಾಣಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 50 ಕೋಟಿ ಅನುದಾನ ನೀಡಲಾಗಿದೆ, ವಿಮಾನ ನಿಲ್ದಾಣ ಪೂರ್ಣಗೊಳ್ಳಲು ಸರಕಾರ ಸಾಕಷ್ಟು ಅನುದಾನ ನೀಡಬೇಕಾಗಿದೆ.

ರಾಯಚೂರು ಹಾಗು ಸಿಂಧನೂರು ನಗರದಲ್ಲಿ ರಿಂಗ್ ರೋಡ್ ಗಳಿಗೆ ಅನುದಾನ ನಿರೀಕ್ಷೆ ಇದೆ. ಇದೇ ವೇಳೆ ರಾಯಚೂರು, ಮಸ್ಕಿ ತಾಲೂಕಿನಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಮಂತ್ರಾಲಯ ಹಾಗೂ ಗಾಣದಾಳ ಮಧ್ಯೆ ಬ್ರಿಜ್ ಕಂ‌ ಬ್ಯಾರೇಜ್ ನಿರ್ಮಾಣಕ್ಕಾಗಿ ಕುಮಾರಸ್ವಾಮಿ ಸರಕಾರ ಮಂಜೂರು ಮಾಡಿದ್ದು ಅದಕ್ಕೆ ಅನುದಾನ ನೀಡಬೇಕಾಗಿದೆ.

ಹೀಗೆ ಹಲವಾರು ಪ್ರಮುಖ ಬೇಡಿಕೆಗಳೊಂದಿಗೆ ಇನ್ನಷ್ಟು ನಿರೀಕ್ಷೆಯಲ್ಲಿ ಜನರಿದ್ದಾರೆ. ಅದಕ್ಕೆ ಯಡಿಯೂರಪ್ಪ ಏನು ಗಿಫ್ಟ್ ಕೊಡುತ್ತಾರೊ ಕಾದು ನೋಡಬೇಕು.
Published by:Latha CG
First published: