ಸಿಟಿ ರವಿ ಕಚೇರಿ ಪೂಜೆ ಹೆಸರಿನಲ್ಲಿ ಹೈ ಕಮಾಂಡ್​ ಭೇಟಿ ಮಾಡಿದ ರಾಜ್ಯ ಬಿಜೆಪಿ ನಾಯಕರು

ಸಿಟಿ ರವಿ ಕಚೇರಿ ಪೂಜೆ ನೆಪದಲ್ಲಿ ದೆಹಲಿಗೆ ಆಗಮಿಸಿದ ಬಿಜೆಪಿ ನಾಯಕರು ಪಕ್ಷದ ಹೈಕಮಾಂಡ್ ನಾಯಕರ ಭೇಟಿಗೆ ಅದರಲ್ಲೂ ಬಿಜೆಪಿಯ ರಾಷ್ಟ್ರೀಯ ಸಂಘಟನಾ‌ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಭೇಟಿ ನಡೆಸಿದ್ದಾರೆ.

ಸಿಟಿ ರವಿ ಕಚೇರಿ ಪೂಜೆ

ಸಿಟಿ ರವಿ ಕಚೇರಿ ಪೂಜೆ

  • Share this:
ನವದೆಹಲಿ (ನ. 27): ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಿಳಿಯಲಿದ್ದಾರೆ. ಇನ್ನೆರಡ್ಮೂರು ದಿನಗಳಲ್ಲಿ ಸಚಿವ ಸಂಪುಟದ ವಿಸ್ತರಣೆ ಆಗಲಿದೆ. ಇಲ್ಲ ಪುನರ್​ರಚನೆ ಆಗಲಿದೆ ಎಂಬ ವಿಷಯಗಳು ಚಾಲ್ತಿಯಲ್ಲಿರುವಾಗಲೇ ದೆಹಲಿಯಲ್ಲಿ ಬಿಜೆಪಿ ನಾಯಕರು ಪೂಜೆ ಹೆಸರಿನಲ್ಲಿ ರಾಜಕೀಯ ನಡೆಯುತ್ತಿದೆ. ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಶಾಸಕ ಸಿ.ಟಿ. ರವಿ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿರುವ ರಾಷ್ಟ್ರೀಯ ಬಿಜೆಪಿ ಕಚೇರಿಯಲ್ಲಿ ತಮ್ಮ ಕಚೇರಿ ಪೂಜೆ ಇಟ್ಟುಕೊಂಡಿದ್ದರು. ಈ ಪೂಜಾಕಾರ್ಯದ ನೆಪದಲ್ಲಿ ದೆಹಲಿಗೆ ಆಗಮಿಸಿದ ಬಿಜೆಪಿ ನಾಯಕರು ಪಕ್ಷದ ಹೈಕಮಾಂಡ್ ನಾಯಕರ ಭೇಟಿಗೆ ಅದರಲ್ಲೂ ಬಿಜೆಪಿಯ ರಾಷ್ಟ್ರೀಯ ಸಂಘಟನಾ‌ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಭೇಟಿಗೆ ಹೆಚ್ಚು ಹೊತ್ತುಕೊಟ್ಟಿದ್ದಾರೆ. ರಾಜ್ಯದಲ್ಲಿ ಸಚಿವ  ಸಂಪುಟ ಸಭೆಗೆ ಗೈರಾಗಿ ಈ ಭೇಟಿ ನಡೆಸಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಪೂಜೆ ನೆಪದಲ್ಲಿ ನಾಯಕರು ಹೈ ಕಮಾಂಡ್​ ಭೇಟಿ ನಡೆಸಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ. 

ರಾಜ್ಯದ ಮಾಜಿ ಮುಖ್ಯಮಂತ್ರಿಗಳೂ ಆದ ಸಚಿವ ಜಗದೀಶ್ ಶೆಟ್ಟರ್, ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಕಂದಾಯ ಸಚಿವ ಆರ್. ಅಶೋಕ್, ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಶಾಸಕರಾದ ಶಿವನಗೌಡ ನಾಯಕ್, ಅರವಿಂದ ಬೆಲ್ಲದ್, ವಿಧಾನ ಪರಿಷತ್ ಸದಸ್ಯರಾದ ಸಿ.ಪಿ. ಯೋಗೇಶ್ವರ್, ನಾರಾಯಣಸ್ವಾಮಿ, ಸಂಸದರಾದ ಪಿ.ಸಿ. ಮೋಹನ್, ಭಗವಂತ್ ಖೂಬಾ, ತೇಜಸ್ವಿ ಸೂರ್ಯ ಮತ್ತಿತರರು ಪೂಜಾಕಾರ್ಯದಲ್ಲಿ ಭಾಗವಹಿಸಿದ್ದರು. ಆದರೆ, ಇವರೆಲ್ಲರೂ ಪೂಜಾ‌ಕಾರ್ಯಕ್ಕೂ ಮೊದಲು ಅಥವಾ ನಂತರ ಬಿಜೆಪಿಯ ರಾಷ್ಟ್ರೀಯ ಸಂಘಟನಾ‌ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿದ್ದರು.

ಅತ್ತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ರಾಜ್ಯದಲ್ಲಿ ಸಚಿವ ಸಂಪುಟ ಸಭೆ ಕರೆದಿದ್ದರು. ಆದರೆ ಸಚಿವರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ, ರಮೇಶ್ ಜಾರಕಿಹೊಳಿ, ಆರ್. ಅಶೋಕ್, ಕೋಟಾ ಶ್ರೀನಿವಾಸ್ ಪೂಜಾರಿ ಸಂಪುಟ ಸಭೆಗೆ ಗೈರು ಹಾಜರಾಗಿ ಪೂಜೆ ನೆಪದಲ್ಲಿ ದೆಹಲಿಗೆ ಬಂದು ಸಂತೋಷ್ ಭೇಟಿಮಾಡಿದರು.‌ ಈ ಪೈಕಿ ಲಕ್ಷ್ಮಣ್ ಸವದಿ ಮತ್ತು ಆರ್. ಅಶೋಕ್ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಜೊತೆಗೂ ಸಮಾಲೋಚನೆ ನಡೆಸಿದರು.

ರಾಜ್ಯ ಬಿಜೆಪಿ ಸಂಸದರ ಸಭೆಗೂ ಗೈರಾದ ಸಂಸದರಾದ ಪಿ.ಸಿ. ಮೋಹನ್, ಭಗವಂತ್ ಖೂಬಾ, ತೇಜಸ್ವಿ ಸೂರ್ಯ ಮುಖ್ಯಮಂತ್ರಿಗಳ ಸಭೆಗೆ ಗೈರು ಹಾಜರಾಗಿ ಸಂತೋಷ್ ಭೇಟಿ ಮಾಡಿದರು.

ಇದನ್ನು ಓದಿ: ದೆಹಲಿ ಭೇಟಿ ಬಳಿಕ ಲಿಂಗಾಯತ-ವೀರಶೈವ ಸಮುದಾಯಕ್ಕೆ ಒಬಿಸಿ ಮೀಸಲು ಕುರಿತು ನಿರ್ಧಾರ; ಸಿಎಂ ಬಿಎಸ್​ ಯಡಿಯೂರಪ್ಪ

ಸಂತೋಷ್ ಭೇಟಿ ಬಳಿಕ ಮಾತನಾಡಿದ ಜಗದೀಶ್ ಶೆಟ್ಟರ್, ಸಿ.ಟಿ. ‌ರವಿ ವಾರದ ಹಿಂದೆಯೇ ಕಚೇರಿ ಪೂಜೆಗೆ ‌ಆಹ್ವಾನ ನೀಡಿದ್ದರು. ಹೀಗಾಗಿ ಇಂದು ದೆಹಲಿಗೆ ಬಂದಿದ್ದೇನೆ. ಜತೆಗೆ ಇಲಾಖೆ ಕೆಲಸದ ನಿಮಿತ್ತ ಕೇಂದ್ರದ ಸಚಿವರನ್ನು ಭೇಟಿಯಾಗುವೆ ಎಂದು ಹೇಳಿದರು.
ಲಿಂಗಾಯತರಿಗೆ ಓಬಿಸಿ ಮೀಸಲಾತಿ ನೀಡಿಕೆ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡುತ್ತೇವೆ ಎಂದ ಜಗದೀಶ್ ಶೆಟ್ಟರ್, ಪರೋಕ್ಷವಾಗಿ ಯಡಿಯೂರಪ್ಪ ನಡೆಗೆ ವಿರೋಧ ವ್ಯಕ್ತಪಡಿಸಿದರು. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಇನ್ನೂ ಉಪಚುನಾವಣೆ ಘೋಷಣೆ ಆಗಿಲ್ಲ. ಚುನಾವಣೆಯೇ ಘೋಷಣೆ ಆಗದೇ ಅಭ್ಯರ್ಥಿಗಳ ಬಗ್ಗೆ ಚರ್ಚೆ ಮಾಡಲ್ಲ ಎಂದು ಜಾರಿಕೊಂಡರು.

ಸಂತೋಷ್ ಭೇಟಿ ಬಳಿಕ ಮಾತನಾಡಿದ ರಮೇಶ್ ಜಾರಕಿಹೊಳಿ, ಸಂತೋಷ್ ಭೇಟಿ ಮಾಡಿದ್ದಕ್ಕೆ ಯಾವುದೇ ಮಹತ್ವ ಇಲ್ಲ. ಈವರೆಗೆ ಸಂತೋಷ್ ಅವರನ್ನು 10-15 ಸಲ ಭೇಟಿ ಮಾಡಿದ್ದೇನೆ‌.‌ ಸಚಿವ ಸಂಪುಟದ ಬಿಕ್ಕಟ್ಡು ಏಕೆ ಬಗೆಹರಿದಿಲ್ಲ ಅಂತಾ ಗೊತ್ತಿಲ್ಲ. ಸರ್ಕಾರ ರಚನೆಗೆ ಯಾರು ತ್ಯಾಗ ಮಾಡಿದರೋ ಅವರಿಗೆಲ್ಲಾ ಕೊಡಬೇಕು. ಇದರ ಬಗ್ಗೆ ಎಲ್ಲಾ ನಾಯಕರ ಜೊತೆ ಚರ್ಚೆಯಾಗಿದೆ. ಪದೇ ಪದೇ ಗಮನಕ್ಕೆ ತರುವುದು ಸರಿಯಲ್ಲ. ಎಲ್ಲಾ ನಾಯಕರ ಬಳಿಯೂ ಯೋಗೇಶ್ವರ್ ಬಳಿ ಚರ್ಚಿಸಿದ್ದೇನೆ. ಮಹೇಶ್ ಕುಮಟಹಳ್ಳಿ ಅವರಿಗೆ ಮುಂದಿನ ದಿನದಲ್ಲಿ ನೋಡೋಣ. ವಿಶ್ವನಾಥ್ ಗೆ ಕೊಡುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು ಎಂದು ಹೇಳಿದರು.
Published by:Seema R
First published: