ಕಲಬುರ್ಗಿ(ಆ.27): ರಾಜ್ಯದಲ್ಲಿ ಕಾಂಗ್ರೆಸ್ ನೀಚ ರಾಜಕಾರಣ ಮಾಡುತ್ತಿದೆ. ಅಧಿಕಾರದಲ್ಲಿ ಇಲ್ಲದೇ ಇದ್ದಾಗ ರಾಜ್ಯದಲ್ಲಿ ಬೆಂಕಿ ಹಚ್ಚೋ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ಕಲ್ಯಾಣ ಕರ್ನಾಟಕ ಪ್ರವಾಸ ಕೈಗೊಂಡಿರುವ ನಳಿನ್ ಕಟೀಲ್ ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದೇ ಇದ್ದಾಗ ಗೊಂದಲ ಸೃಷ್ಟಿಸುತ್ತದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕರು ಗೊಂದಲ ಸೃಷ್ಟಿಸಿ ಬೆಂಕಿ ಹಚ್ಚಿ ಸುಖ ಅನುಭವಿಸುತ್ತಾರೆ. ಡಿಜೆ ಹಳ್ಳಿ ಗಲಭೆ ಕಾಂಗ್ರೆಸ್ ನ ಆಂತರಿಕ ಗೊಂದಲದಿಂದ ಆಗಿದೆ. ಸಿದ್ದರಾಮಯ್ಯ-ಡಿಕೆಶಿ ನಡುವಿನ ಗೊಂದಲದಿಂದಲೇ ಕೆಜಿ ಹಳ್ಳಿ , ಡಿಜೆ ಹಳ್ಳಿ ಗಲಭೆ ಆಗಿದ್ದು, ಕಾಂಗ್ರೆಸ್ ಇಂದು ವೃದ್ದಾಶ್ರಮವಾಗುತ್ತಿದೆ. ಅವರಿಗೆ ಪಕ್ಷದ ಅಧ್ಯಕ್ಷ ರನ್ನು ನೇಮಕ ಮಾಡಲು ಆಗುತ್ತಿಲ್ಲ. ಇಂತಹ ಅಧೋಗತಿಗೆ ಕಾಂಗ್ರೆಸ್ ಪಕ್ಷ ಇಳಿದಿದೆ. ವಿನಾಕಾರಣ ಗೊಂದಲ ಸೃಷ್ಟಿಸಿ ನಮ್ಮ ಮೇಲೆ ಗೂಬೆ ಕೊಡಿಸುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ ಎಂದರು.
ಸಿಎಂ ಪುತ್ರ ವಿಜಯೇಂದ್ರ ವಿರುದ್ಧ 5 ಸಾವಿರ ಕೋಟಿ ಭ್ರಷ್ಟಾಚಾರ ಆರೋಪಕ್ಕೆ ಪ್ರತಿಕ್ರಿಯಿಸಿದ ಕಟೀಲ್, ವಿಜಯೇಂದ್ರ ವಿರುದ್ಧ ಯಾರೋ ದಾರಿಹೋಕರು ಮಾತನಾಡಿದ್ರೆ ಯೋಚನೆ ಮಾಡುತ್ತಾ ಕೂರಲು ಆಗಲ್ಲ ಎಂದಿದ್ದಾರೆ. ಬಿಜೆಪಿ ಶಾಸಕರೇ ವಿಜಯೇಂದ್ರ ವಿರುದ್ಧ ಪತ್ರ ಬರೆದಿರುವ ವಿಚಾರವನ್ನು ಅಲ್ಲಗಳೆದ ಕಟೀಲ್, ಕಾಂಗ್ರೆಸ್ನವರೇ ಪತ್ರ ಸೃಷ್ಟಿ ಮಾಡಿರಬಹುದು. ಪತ್ರ ಹಾಕೋದ್ರಲ್ಲಿ ಕಾಂಗ್ರೆಸ್ ನವರು ನಿಸ್ಸೀಮರು. ಪತ್ರ ಹಾಕಿಕೊಂಡೇ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರ ನೀಡಿದ ಟಾರ್ಗೆಟ್ಗಿಂತ ಹೆಚ್ಚು ಕೋವಿಡ್ ಪರೀಕ್ಷೆ; ಟೆಸ್ಟಿಂಗ್ ಟ್ರಾಕಿಂಗ್ನಲ್ಲಿ ಕೋಲಾರ ಜಿಲ್ಲೆ ಮುಂಚೂಣಿ
ವಿಜಯೇಂದ್ರ ವಿರುದ್ದ ಆಧಾರ ಇಲ್ಲದ ಆರೋಪ ಮಾಡುತ್ತಿದ್ದಾರೆ. ಜನರಲ್ಲಿ ಗೊಂದಲ ಸೃಷ್ಠಿಸುವುದರಲ್ಲಿ ಕಾಂಗ್ರೆಸ್ ನವರು ನಿಸ್ಸೀಮರು. ಯಡಿಯೂರಪ್ಪರಂತಹ ನಾಯಕ ಕಾಂಗ್ರೆಸ್ ನಲ್ಲಿ ಒಬ್ಬರೂ ಇಲ್ಲ. ಯಡಿಯೂರಪ್ಪ ದಕ್ಷರಿದ್ದಾರೆ, ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗಿನ ಹಗರಣಗಳನ್ನು ಬಯಲಿಗೆಳೆಯುತ್ತೇವೆ ಎಂದು ಕಟೀಲ್ ಎಚ್ಚರಿಕೆ ನೀಡಿದ್ದಾರೆ.
ಟಿಪ್ಪು ಕುರಿತ ವಿಶ್ವನಾಥ್ ಹೇಳಿಕೆ ವೈಯಕ್ತಿಕ
ಟಿಪ್ಪು ಬಗ್ಗೆ ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಹೇಳಿಕೆ ವಿಚಾರ ಅವರ ವೈಯಕ್ತಿಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಟಿಪ್ಪು ವಿರುದ್ಧ ಹೋರಾಡುತ್ತಾ ಬಂದಿದೆ. ಟಿಪ್ಪುವಿನ ವಿಚಾರದಲ್ಲಿ ಬಿಜೆಪಿಗೆ ಸ್ಪಷ್ಟ ನಿಲುವಿದೆ. ಅದಕ್ಕೆ ಬಿಜೆಪಿ ಮುಂದೆಯೂ ಬದ್ಧವಾಗಿರುತ್ತೆ. ವಿಶ್ವನಾಥ್ ಅವರು ನಮ್ಮ ಪಕ್ಷದಲ್ಲಿದ್ದರೂ ಟಿಪ್ಪುವಿನ ಕುರಿತಾದ ಹೇಳಿಕೆ ಅವರ ವೈಯಕ್ತಿಕ ಎಂದು ಕಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮ ಪಂಚಾಯ್ತಿಗಳಲ್ಲಿ ಶೇ.80 ರಷ್ಟು ಸ್ಥಾನ ಗೆಲ್ಲುತ್ತೆ. ಮುಂಬರುವ ಗ್ರಾಮ ಪಂಚಾಯ್ತಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಈಗಿನಿಂದಲೇ ಸನ್ನದ್ಧರಾಗುತ್ತಿದ್ದೇವೆ. ಶೇ.80 ರಷ್ಟು ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದು ನಳಿನಕುಮಾರ್ ಕಟೀಲ್ ಅಭಿಪ್ರಾಯಪಟ್ಟಿದ್ದಾರೆ. ಹಿರಿಯ ಮುಖಂಡರ ಮಾರ್ಗದರ್ಶನ, ಕಾರ್ಯಕರ್ತರ ಸಹಕಾರದಿಂದ ನಾನು ರಾಜ್ಯಾಧ್ಯಕ್ಷನಾಗಿ ಒಂದು ವರ್ಷ ಪೂರೈಸಿದ್ದೇನೆ. ಪಕ್ಷದ ಸಂಘಟನೆಗೂ ಸಾಕಷ್ಟು ಶ್ರಮಿಸಿದ್ದೇನೆ. ಜಿಲ್ಲಾ ಪಂಚಾಯ್ತಿ ಮಟ್ಟದಲ್ಲಿ ಶಕ್ತಿ ಕೇಂದ್ರಗಳನ್ನು ಮಾಡೋ ಜೊತೆಗೆ, ಬೂತ್ ಮಟ್ಟದಲ್ಲಿಯೂ ಅಲ್ಲಲ್ಲಿ ಸಭೆಗಳನ್ನು ಮಾಡಿ ಪಕ್ಷದ ಸಂಘಟನೆ ಮಾಡುತ್ತಿದ್ದೇವೆ. ಶೀಘ್ರದಲ್ಲಿಯೇ ನಡೆಯಲಿರೋ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಒಳ್ಳೆಯ ಫಲಿತಾಂಶ ಪಡೆಯಲಿದೆ ಎಂದು ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ