news18-kannada Updated:September 20, 2020, 9:39 AM IST
ವಿಧಾನಸೌಧ
ಬೆಂಗಳೂರು (ಸೆಪ್ಟೆಂಬರ್ 20): ಕೊರೋನಾ ವೈರಸ್ ಹಿನ್ನೆಲೆಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಸಲು ಸಾಧ್ಯವಾಗಿಲ್ಲ. ನಿಯಮದ ಪ್ರಕಾರ ಆರು ತಿಂಗಳಿಗೆ ಒಮ್ಮೆಯಾದರೂ ಅಧಿವೇಶನ ನಡೆಸಲೇಬೇಕು. ಹೀಗಾಗಿ, ಮಾರ್ಚ್ ಅಧಿವೇಶನದ ಬಳಿಕ ಸೆಪ್ಟೆಂಬರ್ನಲ್ಲಿ ಮತ್ತೆ ಅಧಿವೇಶನ ನಡೆಸಬೇಕಿದೆ. ಹೀಗಾಗಿ, ನಾಳೆಯಿಂದ 10 ದಿನಗಳ ಕಾಲ ವಿಧಾನ ಮಂಡಲ ಅಧಿವೇಶನ ನಡೆಸಲಾಗುತ್ತಿದೆ. ಅಧಿವೇಶನದಲ್ಲಿ ಸರ್ಕಾರದ ಮೇಲೆ ಮುಗಿ ಬೀಳಲು ಕಾಂಗ್ರೆಸ್ ಸಜ್ಜಾಗಿದೆ. ಕೊರೋನಾ ವೈರಸ್, ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ವಿಫಲವಾದ ವಿಚಾರ ಸೇರಿ ಸಾಕಷ್ಟು ವಿಚಾರಗಳಲ್ಲಿ ಮುಖ್ಯಮಂತ್ರಿ ಬಿಎ.ಸ್. ಯಡಿಯೂರಪ್ಪ ಸರ್ಕಾರದ ವಿರುದ್ಧ ಹರಿಹಾಯಲು ಬಿಜೆಪಿ ಮುಂದಾಗಿದೆ.
ಅಧಿವೇಶನದಲ್ಲಿ ಬಿಜೆಪಿ ಮುಂದಿಡಲು ಕಾಂಗ್ರೆಸ್ 1200 ಪ್ರಶ್ನೆಗಳ ಅಸ್ತ್ರದೊಂದಿಗೆ ತಯಾರಿ ನಡೆಸಿದೆ. ಕಾಂಗ್ರೆಸ್ ಕೇಳುವ ಪ್ರಶ್ನೆಗಳಿಗೆ ಹೇಗೆ ತಿರುಗೇಟು ನೀಡಬೇಕು ಎಂಬುದಕ್ಕೆ ಸರ್ಕಾರ ಸಜ್ಜಾಗಿದೆ. ಪ್ರವಾಹ, ಕೊರೋನಾ ನಿಯಂತ್ರಣ ವೈಫಲ್ಯ ವಿಚಾರವನ್ನು ಕಾಂಗ್ರೆಸ್ ಪ್ರಮುಖವಾಗಿ ಚರ್ಚೆ ಮಾಡುವ ಸಾಧ್ಯತೆ ಇದೆ. ಇನ್ನು, ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣದ ಮೂಲಕ ಕಾಂಗ್ರೆಸ್ ಅನ್ನು ಕಟ್ಟಿಹಾಕಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ.
ಜೆಡಿಎಸ್ ನಡೆ ನಿಗೂಢ:
ಇತ್ತೀಚೆಗೆ ಜೆಡಿಎಸ್ ವರಿಷ್ಠ, ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಿಎಸ್ವೈ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಈ ಭೇಟಿ ಬಗ್ಗೆ ಮಾತನಾಡಿದ್ದ ಯಡಿಯೂರಪ್ಪ, ಇದೊಂದು ಸೌಹಾರ್ದಯುತ ಭೇಟಿ ಅಷ್ಟೇ ಎಂದು ಹೇಳಿದ್ದರು. ಆದರೆ ಈ ಭೇಟಿ ನಂತರ ಎಚ್ಡಿಕೆ ಸೈಲೆಂಟ್ ಆಗಿದ್ದಾರಾ ಎನ್ನುವ ಅನುಮಾನ ಕಾಡುತ್ತಿದೆ.
ಅಧಿವೇಶನದ ಬಗ್ಗೆ ಕುಮಾರಸ್ವಾಮಿ ಏನನ್ನೂ ಮಾತನಾಡುತ್ತಿಲ್ಲ. ಸರ್ಕಾರದ ವೈಫಲ್ಯದ ಪ್ರಶ್ನೆ ಬಗ್ಗೆ ಅವರು ಇತ್ತೀಚೆಗೆ ಪ್ರಶ್ನೆ ಮಾಡಿಲ್ಲ. ಸದನದಲ್ಲಿ ಯಾವ ರೀತಿ ಇರಬೇಕು ಎಂಬುದರ ಬಗ್ಗೆ ನಾಯಕರ ಜೊತೆ ಚರ್ಚಿಸಿಲ್ಲ. ಆ ಬಗ್ಗೆ ಶಾಸಕರಿಗೆ ಸೂಚನೆ ಕೊಟ್ಟಿಲ್ಲ. ವಿಪಕ್ಷ ಕಾಂಗ್ರೆಸ್ ಸರ್ಕಾರದ ಮೇಲೆ ಮುಗಿಬೀಳಲು ತಯಾರಾಗಿದೆ. ಆದರೆ, ಜೆಡಿಎಸ್ ಮಾತ್ರ ಇನ್ನೂ ಯಾವುದೇ ನಿರ್ಧಾರ ಮಾಡಿದಂತೆ ಕಾಣುತ್ತಿಲ್ಲ. ಸರ್ಕಾರದ ಮೇಲೆ ಮುಗಿಬೀಳದೆ ವಿಷಯಕ್ಕೆ ತಕ್ಕಂತೆ ಮಾತನಾಡಲು ಹಾಗೂ ಜಾಣ್ಮೆಯ ನಡೆ ಪ್ರದರ್ಶನ ಮಾಡಲು ಎಚ್ಡಿಕೆ ಮುಂದಾಗಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
ಕೋವಿಡ್ ಟೆಸ್ಟ್ ಕಡ್ಡಾಯ:ಸೋಮವಾರದಿಂದ ಹತ್ತು ದಿನಗಳ ಕಾಲ ಮುಂಗಾರು ಅಧಿವೇಶನ ಪ್ರಾರಂಭವಾಗಲಿದೆ. ಕೊರೋನಾ ಸಂಕಷ್ಟ ಸಮಯದಲ್ಲಿ ಅಧಿವೇಶನ ಆರಂಭ ಮಾಡುತ್ತಿರುವ ಹಿನ್ನೆಲೆ ಸಾಕಷ್ಟು ಮುಂಜಾಗ್ರತಾ ಕ್ರಮವಹಿಸಲಾಗಿದೆ. ಸಾಮಾಜಿಕ ಅಂತರ, ಸ್ಯಾನಿಟೈಸೆಷನ್, ಮಾಸ್ಕ್ ಕಡ್ಡಾಯದಂತ ಹಲವು ನಿಯಮಗಳನ್ನು ಕಟ್ಟುನಿಟ್ಟಿನಿಂದ ಜಾರಿಗೆ ತರಲಾಗಿದೆ. ಅಲ್ಲದೇ ಅಧಿವೇಶನಕ್ಕೆ ಹಾಜರಾಗುವ ಸಮಯದಲ್ಲಿ ಶಾಸಕರು, ಅಧಿಕಾರಿಗಳು ಕೊರೋನಾ ಸೋಂಕು ಇಲ್ಲದಿರುವ ಬಗ್ಗೆ ವೈದ್ಯರ ದೃಢೀಕರಣ ಪತ್ರವನ್ನು ತರುವುದು ಕಡ್ಡಾಯವಾಗಿದೆ.
Published by:
Rajesh Duggumane
First published:
September 20, 2020, 9:39 AM IST