ಬೆಂಗಳೂರು (ಫೆ. 7): ಕುರುಬ ಸಮುದಾಯ ಬೃಹತ್ ಸಮಾವೇಶಕ್ಕೆ ಇಂದು ರಾಜಧಾನಿ ಸಾಕ್ಷಿಯಾಗಲಿದೆ. ಈ ಮೂಲಕ ತಮ್ಮ ಮೀಸಲಾತಿಯ ಕೂಗನ್ನು ಸರ್ಕಾರಕ್ಕೆ ಮುಟ್ಟಿಸಲು ಸಮುದಾಯ ನಿರ್ಧರಿಸಿದೆ. ಈಗಾಗಲೇ ಕಾಗಿನೆಲೆ ಪೀಠದ ಶ್ರೀ ನಿರಂಜನಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರಿಗೆ ಯಶಸ್ವಿ ಪಾದಯಾತ್ರೆಯನ್ನು ನಡೆಸಲಾಗಿದೆ. ನಗರದ ಹೊರವಲದಲ್ಲಿರುವ ಮಾದಾವರ ಅಂತಾರಾಷ್ಟ್ರೀಯ ಪ್ರದರ್ಶನ ಮೈದಾನದಲ್ಲಿ ಇಂದು ಬೃಹತ್ ಸಮಾವೇಶ ನಡೆಯಲಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರ ನಮ್ಮ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕೆಂಬ ಶಿಫಾರಸನ್ನು ಕೇಂದ್ರಕ್ಕೆ ಕಳುಹಿಸಬೇಕು. ಸಮುದಾಯದ ಎಲ್ಲರೂ ಈಗಾಗಲೇ ಈ ಕುರಿತು ಬೇಡಿಕೆಯನ್ನು ಇಟ್ಟಿದ್ದೇವೆ. ಸರ್ಕಾರ ನಮ್ಮ ಭರವಸೆಯನ್ನು ಈಡೇರುಸುತ್ತದೆ ಎಂಬ ನಿರೀಕ್ಷೆ ಇದೆ ಎಂದು ನಿರಂಜನಾನಂದ ಸ್ವಾಮೀಜಿಗಳು ತಿಳಿಸಿದ್ದಾರೆ.
"ಎಸ್‌ಟಿ ನಮ್ಮ ಹಕ್ಕು" ಹೆಸರಿನೆ ಕುರುಬ ಸಮುದಾಯದ ಬೃಹತ್ ಸಮಾವೇಶ ನಡೆಯಲಿದ್ದು, ಮನೆಗೊಬ್ಬ ರಾಯಣ್ಣ, ಸಮಾವೇಶಕ್ಕೆ ಬಾರಣ್ಣ ಎನ್ನುವ ಶ್ರೀಗಳ ಕರೆಯಂತೆ ಸುಮಾರು ಹತ್ತು ಲಕ್ಷ ಜನ ಕುರುಬ ಸಮುದಾಯದವರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಜನವರಿ 15 ರಂದು ಕಾಗಿನೆಲೆಯಿಂದ ಪಾದಯಾತ್ರೆ ಪ್ರಾರಂಭವಾಗಿ ಫೆಬ್ರವರಿ 4 ರಂದು ಬೆಂಗಳೂರಿನ ಅಣ್ಣಮ್ಮ ದೇವಾಲಯದಲ್ಲಿ ಪಾದಯಾತ್ರೆ ಸಮಾಪ್ತಿ ಮಾಡಲಾಯಿತು. ಇನ್ನೂ ನಾಳೆ ನಡೆಯುವ ಸಮಾವೇಶದಲ್ಲಿ ನಿರಂಜನಾನಂದ ಶ್ರೀಗಳು ನೇತೃತ್ವದಲ್ಲಿ ಸಚಿವ ಈಶ್ವರಪ್ಪ ಹಾಗೂ ಮಾಜಿ ಸಚಿವ ಹೆಚ್‌ಎಂ ರೇವಣ್ಣ ಸಾರಥ್ಯ ವಹಿಸಲಿದ್ದಾರೆ. ಸಮಾವೇಶದಲ್ಲಿ ಭಾಗವಹಿಸುವವರಿಗಾಗಿ 15 ಲಕ್ಷ ರೊಟ್ಟಿ, 60 ಸಾವಿರ ಲೀಟರ್ ಮೊಸರು ಸೇರಿದಂತೆ ವಿವಿದ ಖಾದ್ಯಗಳನ್ನ ತಯಾರಿಸಲಾಗಿದೆ.
ಬೆಂಗಳೂರಿಗರಿಗೆ ತಟ್ಟಲಿದೆ ಟ್ರಾಫಿಕ್ ಬಿಸಿ
ಸಮಾವೇಶದ ಹಿನ್ನೆಲೆ ಬೆಂಗಳೂರಿಗರಿಗೆ ಟ್ರಾಫಿಕ್ ಬಿಸಿ ತಟ್ಟಲಿದೆ. ಬೆಂಗಳೂರಿನಿಂದ ನೆಲಮಂಗಲ ಮಾರ್ಗವಾಗಿ ತುಮಕೂರು, ದಾವಣಗೆರೆ ಸೇರಿದಂತೆ ಉತ್ತರದ ಜಿಲ್ಲೆಗಳು ಹಾಗೂ ಹಾಸನ ಮಂಗಳೂರು ಸೇರಿದಂತೆ ಪಶ್ಚಿಮಘಟ್ಟಗಳ ಜಿಲ್ಲೆಗಳಿಗೆ ಹೋಗುವವರು ಈ ಸಮಸ್ಯೆ ಕಾಡಲಿದೆ. ಯಶವಂತಪುರದಿಂದ ನೆಲಮಂಗಲದವರೆಗೂ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಲಿದೆ. ಅಲ್ಲದೆ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಜನ ಸಮಾವೇಶಕ್ಕೆ ಆಗಮಿಸಲಿದ್ದು, ನೈಸ್ ರೋಡ್, ಔಟರ್ ರಿಂಗ್ ರೋಡ್ ಸೇರಿದಂತೆ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಬಿಸಿ ತಟ್ಟಲಿದೆ.
ಕುರುಬ ಸಮುದಾಯದ ಶಕ್ತಿ ಪ್ರದರ್ಶನದಿಂದ ಮೀಸಲಾತಿ ವಿಚಾರದಲ್ಲಿ ನಾನು ನೇರ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಸದನದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದು, ಕುರುಬರ ಶಕ್ತಿ ಪ್ರದರ್ಶನಕ್ಕೆ ಫಲ ಸಿಗುತ್ತಾ ಎಂದು ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ