HOME » NEWS » State » ST COMMUNITY STARTS CAMPAIGN IN SOCIAL MEDIA AGAINST STATE GOVERNMENT LG

ಎಸ್​ಟಿ ಸಮುದಾಯದಿಂದ ‘ನಾಟಕ ಬಿಡಿ, ಮೀಸಲಾತಿ ಕೊಡಿ‘ ಅಭಿಯಾನ; ಕೊಟ್ಟ ಮಾತು ಉಳಿಸಿಕೊಳ್ಳುವಂತೆ ಸಿಎಂಗೆ ಆಗ್ರಹ

ಪರಿಶಿಷ್ಟ ಪಂಗಡದ ಸಮುದಾಯ ಸಾಮಾಜಿಕ ಜಾಲತಾಣಗಳಲ್ಲಿ ನಾಟಕ ಬಿಡಿ, ಮೀಸಲಾತಿ ಕೊಡಿ ಅಭಿಯಾನ ಆರಂಭಿಸಿದೆ. ಆ ಮೂಲಕ ರಾಜ್ಯ ಸರ್ಕಾರದ ನಡೆಯ ವಿರುದ್ಧ ಆಕ್ರೋಶ ಹೊರ ಹಾಕಿದೆ.

news18-kannada
Updated:March 5, 2021, 10:14 AM IST
ಎಸ್​ಟಿ ಸಮುದಾಯದಿಂದ ‘ನಾಟಕ ಬಿಡಿ, ಮೀಸಲಾತಿ ಕೊಡಿ‘ ಅಭಿಯಾನ; ಕೊಟ್ಟ ಮಾತು ಉಳಿಸಿಕೊಳ್ಳುವಂತೆ ಸಿಎಂಗೆ ಆಗ್ರಹ
ಸಿಎಂ ಬಿಎಸ್​ ಯಡಿಯೂರಪ್ಪ
  • Share this:
ಬೆಂಗಳೂರು(ಮಾ.5): ಪರಿಶಿಷ್ಟ ಪಂಗಡಕ್ಕೆ ಶೇ. 7.5 ಮೀಸಲಾತಿ ಘೋಷಣೆ ಮಾಡುವುದಾಗಿ ಹೇಳಿದ್ದ ರಾಜ್ಯ ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಲಿ ಎಂದು ವಾಲ್ಮೀಕಿ ಸಮುದಾಯದ ಒಕ್ಕೂಟ ಅಭಿಯಾನ ಆರಂಭಿಸಿದೆ. ಸರ್ಕಾರ ರಚಿಸಿರುವ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಆ ವರದಿ ಅನುಷ್ಠಾನಕ್ಕಾಗಿ ಪರಿಶೀಲನೆ ನಡೆಸಲು ರಾಜ್ಯ ಸರ್ಕಾರವೇ ಸಂಪುಟ ಉಪಸಮಿತಿ ರಚಿಸಿತ್ತು. ಇದರಿಂದಾಗಿ ಮಾರ್ಚ್ 9ರೊಳಗೆ ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ಘೋಷಣೆ ಮಾಡುವುದಾಗಿ ಸ್ವತಃ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಫೆ.9 ರಂದು ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ವಚನ ನೀಡಿದ್ದರು.

ಆದರೆ ಇನ್ನೂ ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಆದರೂ ಸರ್ಕಾರವೇ ರಚಿಸಿದ್ದ ಸಂಪುಟ ಸಮಿತಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ವರದಿ ನೀಡಿಲ್ಲ. ಇದರ ನಡುವೆ ಲಿಂಗಾಯತ ಪಂಚಮಸಾಲಿ ಹೋರಾಟ, ಕುರುಬರ ಹೋರಾಟ, ನೇಕಾರರ ಹೋರಾಟ, ಸವಿತಾ ಸಮಾಜದ ಹೋರಾಟಗಳು ನಡೆದು ಎಲ್ಲರೂ ಅವರದ್ದೇ ಆದ ಮೀಸಲಾತಿಗೆ ಪಟ್ಟು ಹಿಡಿದಿವೆ.

ಆದ್ರೆ ಪರಿಶಿಷ್ಟ ವರ್ಗದ ಮೀಸಲಾತಿ ಹೋರಾಟಕ್ಕೂ ಉಳಿದ ಸಮುದಾಯಗಳ ಹೋರಾಟಕ್ಕೂ ಯಾವುದೇ ಸಂಬಂಧ ಇರದಿದ್ದರೂ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಮೀಸಲಾತಿ ಅನುಷ್ಠಾನದ ಕುರಿತು ಮತ್ತೊಬ್ಬ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚನೆ ಮಾಡಲು ನಿರ್ಧರಿಸಿದೆ. ಒಬ್ಬ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ನೀಡಿದ ವರದಿ ಅನುಷ್ಠಾನಕ್ಕೆ ಮತ್ತೊಬ್ಬ ನಿವೃತ್ತ ನ್ಯಾಯಮೂರ್ತಿಯ ಪರಿಶೀಲನೆ ವರದಿ ಬೇಕಾ? ಇಂತಹ ನಾಟಕವನ್ನ ರಾಜ್ಯ ಸರ್ಕಾರ ನಡೆಸಬೇಕಾದ ಅಗತ್ಯವಿದೆಯಾ ಎಂಬುದು ವಾಲ್ಮೀಕಿ ಅಥವಾ ಪರಿಶಿಷ್ಟ ವರ್ಗದ ಪ್ರಶ್ನೆ.

ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದಿರುವ ಪರಿಶಿಷ್ಟ ಪಂಗಡದ ಸಮುದಾಯ ಸಾಮಾಜಿಕ ಜಾಲತಾಣಗಳಲ್ಲಿ "ನಾಟಕ ಬಿಡಿ, ಮೀಸಲಾತಿ ಕೊಡಿ" ಅಭಿಯಾನ ಆರಂಭಿಸಿದೆ. ಆ ಮೂಲಕ ರಾಜ್ಯ ಸರ್ಕಾರದ ನಡೆಯ ವಿರುದ್ಧ ಆಕ್ರೋಶ ಹೊರ ಹಾಕಿದೆ. ರಾಜ್ಯ ಸರ್ಕಾರ ನೀಡಿರುವ ವಚನವನ್ನ ಉಳಿಸಿಕೊಳ್ಳಬೇಕು ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲದೆ ಹೋದರೆ ಈ ಸರ್ಕಾರ ಪರಿಶಿಷ್ಟ ವರ್ಗದ ವಿರೋಧಿ ಸರ್ಕಾರ ಜೊತೆಗೆ ವಚನ ಭ್ರಷ್ಟ ಸರ್ಕಾರ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಒಪ್ಪಿಕೊಳ್ಳಲಿ ಎಂದು ಸಮುದಾಯದ ನಾಯಕರ ಒಕ್ಕೂಟ ಆಗ್ರಹಿಸಿದೆ.

ನಾಯಕ ಸಮುದಾಯಕ್ಕೆ ಬಿಜೆಪಿ ಸರ್ಕಾರ ಡಿಸಿಎಂ ಹುದ್ದೆಯನ್ನೂ ನೀಡಲಿಲ್ಲ, ಸರಿಯಾದ ಸಚಿವ ಸ್ಥಾನವನ್ನೂ ನೀಡಿಲ್ಲ. ಈಗ ಮೀಸಲಾತಿ ಘೋಷಣೆ ಮಾಡುವುದಾಗಿ ಹೇಳಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡ್ತಿದೆ. ಇದು ಸರಿಯಾದ ಕ್ರಮವಲ್ಲ. ತಕ್ಷಣ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ತನ್ನ ತಪ್ಪು ಸರಿಪಡಿಸಿಕೊಳ್ಳಬೇಕು. ಜೊತೆಗೆ ತಕ್ಷಣವೇ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಶೇ. 7.5 ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಈ ರಾಜ್ಯ ಸರ್ಕಾರದ ವಿರುದ್ಧ ಬಹಿರಂಗವಾಗಿ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ನಾಯಕರ ಒಕ್ಕೂಟ ಎಚ್ಚರಿಸಿದೆ.
Published by: Latha CG
First published: March 5, 2021, 10:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories