SSLC EXAM ವಿಜಯಪುರದಲ್ಲಿ ಎಡವಟ್ಟು ತಪ್ಪಿತಲು ಹೋಗಿ ಮತ್ತೊಂದು ಎಡವಟ್ಟು ; ವಿದ್ಯಾರ್ಥಿಗಳಲ್ಲಿ ಆತಂಕ

ಪ್ರಶ್ನೆ ಪತ್ರಿಕೆ ವಿತರಿಸುವಲ್ಲಿ ಕಣ್ತಪ್ಪಿನಿಂದ ಎಡವಟ್ಟಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಎಡವಟ್ಟಾಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಬಿಇಒ ತನಿಖೆ ನಡೆಸುತ್ತಿದ್ದಾರೆ ಎಂದು ವಿಜಯಪುರ ತಹಶೀಲ್ದಾರ್​ ಮೋಹನಕುಮಾರಿ ತಿಳಿಸಿದ್ದಾರೆ

ತಹಶೀಲ್ದಾರ್​ ಜೊತೆ ಚರ್ಚಿಸುತ್ತಿರುವ ಪಾಲಕರು

ತಹಶೀಲ್ದಾರ್​ ಜೊತೆ ಚರ್ಚಿಸುತ್ತಿರುವ ಪಾಲಕರು

  • Share this:
ವಿಜಯಪುರ(ಜುಲೈ. 01): ಜಿಲ್ಲೆಯ ಪರೀಕ್ಷಾ ಕೇಂದ್ರವೊಂದರಲ್ಲಿ ಭಾರಿ ಎಡವಟ್ಟು ನಡೆದಿದೆ. ಪರೀಕ್ಷಾ ಕೇಂದ್ರದ ಉಸ್ತುವಾರಿಗಳು ಒಂದು ಎಡವಟ್ಟು ತಪ್ಪಿಸಲು ಹೋಗಿ ಮತ್ತೊಂದು ಎಡವಟ್ಟು ನಡೆಸಿದ್ದಾರೆ. ಧಾರವಾಡ ಶಿಕ್ಷಣ ಇಲಾಖೆ ಆಯುಕ್ತರು ವಿಜಯಪುರ ಜಿಲ್ಲೆಯಲ್ಲಿ ಇರುವ ದಿನವೇ ಈ ಘಟನೆ ನಡೆದಿದ್ದು, ವಿದ್ಯಾರ್ಥಿಗಳು ಬೆಚ್ಚಿ ಬೀಳುವಂತಾಗಿದೆ.

ಪ್ರಶ್ನೆ ಪತ್ರಿಕೆ ನೀಡುವಲ್ಲಿ ಅದಲು ಬದಲು ಮಾಡಿ ಎಡವಟ್ಟು ಮಾಡಿದ ಪರೀಕ್ಷಾ ಕೇಂದ್ರದ ಸಿಬ್ಬಂದಿ ಈ ವಿಷಯವನ್ನು ಜಿಲ್ಲಾಡಳಿತದ ಗಮನಕ್ಕೆ ತರದೇ ಮತ್ತೆ ವಿದ್ಯಾರ್ಥಿಗಳನ್ನು ಕರೆಯಿಸಿ ಪರೀಕ್ಷೆ ಬರೆಸಿದ ಆರೋಪ ಕೇಳಿ ಬಂದಿದ್ದು, ಇದರಿಂದಾಗಿ ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ.

ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ಅಧ್ವಾನಗಳಿಲ್ಲದೆ ಸುಸೂತ್ರವಾಗಿ ಪರೀಕ್ಷೆಗಳು ನಡೆಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಪ್ರತಿವರ್ಷ ಒಂದಿಲ್ಲೊಂದು ಎಡವಟ್ಟಿನಿಂದಾಗಿ ವಿಜಯಪುರ ಜಿಲ್ಲೆಯ ಹೆಸರನ್ನು ಶಿಕ್ಷಣ ಇಲಾಖೆ ಹಾಳು ಮಾಡುತ್ತಿದೆ.

ಈ ಘಟನೆ ನಡೆದಿದ್ದು, ವಿಜಯಪುರ ನಗರದ ಡಿ. ಎನ್. ದರಬಾರ ಬಾಲಕಿಯರ ಪರೀಕ್ಷಾ ಕೇಂದ್ರದಲ್ಲಿ. ಅಷ್ಟಕ್ಕೂ ಆಗಿದ್ದೇನೆಂದರೆ, ಇಂದು ಸಮಾಜ ವಿಜ್ಞಾನ ಪರೀಕ್ಷೆ ನಡೆದಿದೆ. ಈ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಹಳೆಯ ಪಠ್ಯಕ್ರಮದ ಪ್ರಶ್ನೆ ಪತ್ರಿಕೆ ನೀಡಲಾಗಿದೆ.  ಇಲ್ಲಿನ ಬ್ಲಾಕ್ ನಂಬರ 1, 2, 3 ಮತ್ತು 4ರಲ್ಲಿ ಈ ಎಡವಟ್ಟು ನಡೆದಿದೆ.

ಪ್ರಶ್ನೆ ಪತ್ರಿಕೆ ನೋಡಿ ಗಾಬರಿಯಾದ ವಿದ್ಯಾರ್ಥಿಗಳು ಈ ವಿಷಯವನ್ನು ಕೊಠಡಿ ಮೇಲ್ವಿಚಾರಕರ ಗಮಕ್ಕೆ ತಂದಿದ್ದಾರೆ. ಆದರೆ, ಅವರು ಅದನ್ನು ನಿರ್ಲಕ್ಷಿಸಿದ್ದಾರೆ. 38 ಪ್ರಶ್ನೆಗಳಿರಬೇಕಾದ ಪ್ರಶ್ನೆ ಪತ್ರಿಕೆಯಲ್ಲಿ 47 ಪ್ರಶ್ನೆಗಳಿರುವ ಹಳೆಯ ಪ್ರಶ್ನೆ ಪತ್ರಿಕೆ ನೀಡಲಾಗಿದೆ.  ಇದರಿಂದ ಗೊಂದಲಕ್ಕಿಡಾದ ವಿದ್ಯಾರ್ಥಿಗಳು ತಮ್ಮ ಅಳಲು ಕೇಳದ ಹಿನ್ನೆಲೆಯಲ್ಲಿ ಪರೀಕ್ಷೆ ಮುಗಿದ ನಂತರ ಮನೆಗೆ ಹೋಗಿ ವಿಷಯ ತಿಳಿಸಿದ್ದಾರೆ.

ಈಗ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಎದುರಾಗಿದೆ ಎಂದು ವಿದ್ಯಾರ್ಥಿನಿಯೊಬ್ಬರ ಚಿಕ್ಕಪ್ಪ ಸುರೇಶ ರಾಠೋಡ ಅಳಲು ತೋಡಿಕೊಂಡಿದ್ದಾರೆ.

ಸಮಾಜ ವಿಜ್ಞಾನ ಪರೀಕ್ಷೆ ಇಂದು ಮಧ್ಯಾಹ್ನ 1.45ಕ್ಕೆ ಮುಕ್ತಾಯವಾಗಿದೆ. ಈ ಪರೀಕ್ಷೆ ಮುಗಿದ ಒಂದೂವರೆ ಗಂಟೆಯ ಒಳಗೆ ಅಂದರೆ ಮಧ್ಯಾಹ್ನ 3.15ರ ಒಳಗೆ ಪರೀಕ್ಷಾ ಕೇಂದ್ರದ ಉಸ್ತುವಾರಿಗಳು ಉತ್ತರ ಪತ್ರಿಕೆಗಳನ್ನು ಶಿಕ್ಷಣ ಇಲಾಖೆಗೆ ಒಪ್ಪಿಸಬೇಕು. ಆದರೆ, ಉತ್ತರ ಪತ್ರಿಕೆ ಸಂಗ್ರಹಿಸಲು ಬಂದ ವಾಹನ ಸಂಜೆ 5 ಗಂಟೆಯಾದರೂ ಅಲ್ಲಿಯೇ ನಿಂತಿದೆ.

ಈ ವಿಷಯ ತಿಳಿದು ಮಾಧ್ಯಮದವರು ಪರೀಕ್ಷಾ ಕೇಂದ್ರಕ್ಕೆ ತೆರಳುವಷ್ಟರಲ್ಲಿ ವಿದ್ಯಾರ್ಥಿಗಳು ಅಲ್ಲಿಂದ ಹೊರ ಹೋಗಿದ್ದಾರೆ. ನಂತರ ಈ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ವಿಜಯಪುರ ತಹಶೀಲ್ದಾರ್ ಮೋಹನಕುಮಾರಿ, ವಿಜಯಪುರ ನಗರ ಬಿಇಓ ಷರೀಫ್ ನದಾಫ್, ಡೈಟ್ ಅಧಿಕಾರಿ ಲಿಮಕರ್ ಪರೀಕ್ಷಾ ಕೇಂದ್ರದಲ್ಲಿ ಪರಿಶೀಲನೆ ನಡೆಸಿದ್ದಾರೆ. ಆಗ ಸಂ. 5 ಗಂಟೆಯ ಬಳಿಕ ಉತ್ತರ ಪತ್ರಿಕೆಗಳನ್ನು ಸಂಗ್ರಹಿಸಿದ ವಾಹನ ಅಲ್ಲಿಂದ ನಿರ್ಗಮಿಸಿದೆ.

ಒಂದು ಮೂಲದ ಮೂಲದ ಪ್ರಕಾರ, ಪರೀಕ್ಷಾ ಅವಧಿ ಮುಗಿದ ಬಳಿಕ ಎಡವಟ್ಟಿನ ಬಗ್ಗೆ ಆತಂಕಕ್ಕೆ ಒಳಗಾದ ಪರೀಕ್ಷಾ ಮೇಲ್ವಿಚಾರಕ ಕಸ್ಟೋಡಿಯನ್ ದಿಲೀಪ ಚೌಧರಿ ಮತ್ತು ಪ್ರಶ್ನೆ ಪತ್ರಿಕೆ ಪಾಲಕ ಲಿಂಗದಳ್ಳಿ ಪರೀಕ್ಷೆ ಮುಗಿದ ಬಳಿಕ ಬಂದ ಕೆಲವು ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಹೊಸ ಪ್ರಶ್ನೆ ಪತ್ರಿಕೆ ನೀಡಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದಾರೆ.  ಇದು ಶಿಕ್ಷಣ ಇಲಾಖೆಯ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಮಂಗಳೂರಿನಲ್ಲಿ ಕೊರೋನಾ ಆರ್ಭಟ ; ಲೇಡಿಗೋಶನ್ ಸರ್ಕಾರಿ ಹೆರಿಗೆ ಆಸ್ಪತ್ರೆ ಬಂದ್

ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಪ್ರತಿಕ್ರಿಯೆ ನೀಡಿದ ವಿಜಯಪುರ ತಹಶೀಲ್ದಾರ್​ ಮೋಹನಕುಮಾರಿ, ಹೊಸ ವಿದ್ಯಾರ್ಥಿಗಳಿಗೆ ರಿಪಿಟರ್ಸ್ ಪ್ರಶ್ನೆಪತ್ರಿಕೆ ಕೊಟ್ಟಿರುವುದು ಗಮನಕ್ಕೆ ಬಂದಿದೆ. ಪ್ರಶ್ನೆ ಪತ್ರಿಕೆ ವಿತರಿಸುವಲ್ಲಿ ಕಣ್ತಪ್ಪಿನಿಂದ ಎಡವಟ್ಟಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಎಡವಟ್ಟಾಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಬಿಇಒ ತನಿಖೆ ನಡೆಸುತ್ತಿದ್ದಾರೆ. ಬಿಇಒ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ನ್ಯೂಸ್ 18ಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಈ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 9 ವಿದ್ಯಾರ್ಥಿಗಳಿಗೆ ಬೇರೆ ಪ್ರಶ್ನೆ ಪತ್ರಿಕೆ ನೀಡಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದ್ದು, ವರದಿಯ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಮತ್ತೋಂದು ಗಮನಾರ್ಹ ವಿಷಯವೆಂದರೆ, ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಇಂದು ವಿಜಯಪುರದಲ್ಲಿಯೇ ಇರುವಾಗ ಇಂಥ ಘಟನೆ ಬೆಳಕಿಗೆ ಬಂದಿರುವುದು ವಿಪರ್ಯಾಸವಾಗಿದೆ.
First published: