news18-kannada Updated:January 28, 2021, 4:07 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು; ಕೊರೋನಾ ಮಹಾಸಂಕಷ್ಟದ ನಂತರ ಶಾಲೆಗಳು ಈಗೀಗ ಆರಂಭವಾಗಿವೆ. ಇದರ ನಡುವೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಶಿಕ್ಷಣ ಇಲಾಖೆ ದಿನಾಂಕ ನಿಗದಿ ಮಾಡಿದೆ. ಈ ವಿಚಾರವಾಗಿ ಇಂದು ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು, ಇಂದು 2021ರ ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.
2021 ಜೂನ್ 14ರಿಂದ ಜೂನ್ 25ರವರೆಗೂ ಹತ್ತನೇ ತರಗತಿ ಪರೀಕ್ಷೆಗಳು ನಡೆಯಲಿವೆ. ಕಳೆದ ವರ್ಷ 2020 ಜೂನ್ 25ರಂದು ಪರೀಕ್ಷೆ ಪ್ರಾರಂಭ ಮಾಡಲಾಗಿತ್ತು. ಈ ವರ್ಷ ಜೂನ್ 25ಕ್ಕೆ ಪರೀಕ್ಷೆಗಳು ಕೊನೆಯಾಗಲಿವೆ. ಕೋರ್ ಸಬ್ಜೆಕ್ಟ್ ಗಳಿಗೆ 3 ತಾಸು ಕಾಲಾವಧಿ ನೀಡಲಾಗಿದೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷೆಗಳಿಗೆ 2.45 ತಾಸು ಬರೆಯಲು ಹಾಗೂ 15 ನಿಮಿಷ ಉತ್ತರ ಪತ್ರಿಕೆ ಪರಿಶೀಲನೆ ಸಮಯ ನಿಗದಿ ಮಾಡಲಾಗಿದೆ. ಪರೀಕ್ಷೆ ದಿನಾಂಕ ಸಂಬಂಧ ಆಕ್ಷೇಪಣೆ ಸಲ್ಲಿಸಬೇಕು ಅನ್ನೋರಿಗೆ ಜನವರಿ 28ರಿಂದ ಫೆ. 26ರವರೆಗೆ ಸಮಯ ನೀಡಲಾಗಿದೆ. ನಿರ್ದೇಶಕರು, ಪರೀಕ್ಷಾ ವಿಭಾಗ, ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಕಚೇರಿಗೆ ಪತ್ರ ಬರೆದು ಕಳಿಸಬಹುದು ಎಂದು ತಿಳಿಸಿದರು.
ಕೊರೋನಾ ಸಮಯದಲ್ಲಿ ಶಾಲೆ ಆರಂಭ ಸಂಬಂಧ ಆರೋಗ್ಯ ಸಚಿವರ ಜತೆ ಸಭೆ ನಡೆಸಿದೆವು. ತಾಂತ್ರಿಕ ಸಲಹಾ ಸಮಿತಿ ಜತೆ ಸಭೆ ನಡೆಸಿದೆವು. ನವೆಂಬರ್ನಲ್ಲಿ ನಡೆದ ಸಭೆಯಲ್ಲಿ ತರಗತಿ ಪ್ರಾರಂಭಿಸೋದು ಬೇಡ ಎನ್ನಲಾಗಿತ್ತು. ಬಳಿಕ ಡಿಸೆಂಬರ್ನಲ್ಲಿ ಸಭೆ ಸೇರಿ ಜನವರಿ 1ರಿಂದ, 10 ಹಾಗೂ 12ನೇ ತರಗತಿ ಪ್ರಾರಂಭ ಮಾಡಲು ನಿರ್ಧರಿಸಲಾಯಿತು. 6ರಿಂದ 9ನೇ ತರಗತಿವರೆಗೆ ಪರಿಷ್ಕೃತ ವಿದ್ಯಾಗಮ ಶುರು ಮಾಡಲಾಯಿತು. ಶಾಲೆಗಳಲ್ಲಿ ಸರಾಸರಿ ಹಾಜರಾತಿ 12ನೇ ತರಗತಿಯಲ್ಲಿ ಶೇ. 75 ಹಾಗೂ 10ನೇ ತರಗತಿಯಲ್ಲಿ ಶೇ. 70 ಹಾಜರಾತಿ ಇದೆ. ಹಾಗೂ 6ನೇ ತರಗತಿಯಿಂದ 9ನೇ ತರಗತಿವರೆಗೆ ವಿದ್ಯಾಗಮ ಹಾಜರಾತಿಯಲ್ಲಿ ಶೇ. 45 ರಷ್ಟು ಹಾಜರಾತಿ ಇದೆ ಎಂದು ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದರು.
ಇದನ್ನು ಓದಿ: ಕೊಡಗಿನ ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ 25 ವಿದ್ಯಾರ್ಥಿಗಳಿಗೆ ಕೋವಿಡ್
ಈವರೆಗೆ ಯಾವುದೇ ಶಾಲೆಯಲ್ಲಿ ಮಕ್ಕಳಿಗೆ, ಶಿಕ್ಷಕರಿಗೆ ಸೋಂಕು ಹರಡುವಿಕೆ ಬಗ್ಗೆ ವರದಿಯಾಗಿಲ್ಲ. ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಾಗಿದೆ. ಆನ್ಲೈನ್ಗಿಂತ ಆಫ್ ಲೈನ್ ತರಗತಿಗಳಿಗೆ ಹೋಗುವ ಇಂಗಿತ ರಾಜ್ಯದ ಹಲವೆಡೆ ವಿದ್ಯಾರ್ಥಿಗಳು ವ್ಯಕ್ತಪಡಿಸಿದ್ದಾರೆ. ಪೋಷಕರೂ ಸಹ ಎಲ್ಲ ತರಗತಿಗಳನ್ನೂ ಪ್ರಾರಂಭ ಮಾಡಿ ಎನ್ನುತ್ತಿದ್ದಾರೆ. ವಿದ್ಯಾಗಮ ಸದ್ಯ ದಿನ ಬಿಟ್ಟು ದಿನ ತರಗತಿಗಳು ನಡೆಯುತ್ತಿವೆ. ಹೀಗಾಗಿ ಹಾಜರಾತಿ ಕಡಿಮೆ ಇದೆ ಎಂದು ಹೇಳಿದರು.
2021ರ ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕ
- ಜೂನ್ 14 - ಪ್ರಥಮ ಭಾಷೆ
- ಜೂನ್ 16 - ಕೋರ್ ವಿಷಯಗಳು ಮತ್ತು ಗಣಿತ
- ಜೂನ್ 18 - ದ್ವಿತೀಯ ಭಾಷೆ
- ಜೂನ್ 21 - ವಿಜ್ಞಾನ
- ಜೂನ್ 23 - ತೃತೀಯ ಭಾಷೆ
- ಜೂನ್ 25 - ಸಮಾಜ ವಿಜ್ಞಾನ
8ನೇ ತರಗತಿ ನಂತರದ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲವಾದ್ದರಿಂದ ತುಂಬಾ ಜನ ಮಕ್ಕಳು ಪೋಷಕರ ಜತೆ ವಲಸೆ, ಕೂಲಿ ಹೋಗುತ್ತಿರುವ ಬಗ್ಗೆ ಮಾಹಿತಿ ಇದೆ. ಅಂಥವರನ್ನು ಮತ್ತೆ ಶಾಲೆಗೆ ಕರೆತರುವುದು ಕಷ್ಟವಿದೆ. ಈಗ ನೀಡಿರುವ ಎಸ್ಓಪಿ ಪ್ರಕಾರ 6ರಿಂದ 9ನೇ ತರಗತಿ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಹಾಗೇ 1ರಿಂದ 5ನೇ ತರಗತಿವರೆಗೆ ವಿದ್ಯಾಗಮ ಪ್ರಾರಂಭ ಮಾಡುವ ಬಗ್ಗೆ ಚರ್ಚೆ ಮಾಡಲಾಗಿದೆ. ಅದರಂತೆ ಫೆಬ್ರುವರಿ 1ರಿಂದ 9, 10, 11 ಹಾಗೂ 12ರ ತರಗತಿಗಳು ಪೂರ್ತಿ ದಿನ ನಡೆಯಲಿದೆ ಎಂದರು.
Published by:
HR Ramesh
First published:
January 28, 2021, 4:06 PM IST