ರಾಜ್ಯಾದ್ಯಂತ ಎಸ್ಎಸ್ಎಲ್​ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭ!

ಇನ್ನು ರೂಪಾಂತರ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಆದರೆ, ಕೊರೋನಾದಂತೆ ಈ ರೂಪಾಂತರಿ ವೈರಸ್ ಅಷ್ಟು ಪರಿಣಾಮಕಾರಿ ಅಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಹೀಗಾಗಿ ಪೋಷಕರು ಆತಂಕ ಪಡುವ ಅಗತ್ಯ ಇಲ್ಲ. ಆದರೂ ಯಾವ ಪೋಷಕರಿಗೂ ಒತ್ತಾಯ ಇಲ್ಲ. ತರಗತಿಗೆ ತಮ್ಮ ಮಕ್ಕಳನ್ನು ಕಳುಹಿಸುವವರು ಕಳುಹಿಸಬಹುದು. ಎಂದಿನಂತೆ ತರಗತಿಗಳು ನಾಳೆಯಿಂದ ನಡೆಯಲಿದೆ ಎಂದರು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಬೆಂಗಳೂರು; ಏಳೆಂಟು ತಿಂಗಳ ಬಳಿಕ ಹೊಸ ವರ್ಷದ ಮೊದಲ ದಿನದಂದು ಎಸ್​ಎಸ್​ಎಲ್​ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಮರು ಆರಂಭಗೊಳ್ಳುತ್ತಿವೆ. ಕೊರೋನಾ ಹಾಗೂ ಲಾಕ್ ಡೌನ್ ಕಾರಣದಿಂದ ಮುಚ್ಚಲ್ಪಟ್ಟಿದ್ದ ಈ ತರಗತಿಗಳು ಶುಕ್ರವಾರದಿಂದ ಓಪನ್ ಆಗುತ್ತಿವೆ. ಹೀಗಾಗಿ ರಾಜ್ಯಾದ್ಯಂತ ಇರುವ ಎಲ್ಲಾ ಶಾಲೆಗಳಲ್ಲೂ ವಿಧ್ಯಾರ್ಥಿಗಳ ಕಲರವ ಶುರುವಾಗಲಿದೆ. ಸಾಕಪ್ಪಾ ಸಾಕು ಅನ್ನೋಷ್ಟರ ಮಟ್ಟಿಗೆ ಈ ಅವಧಿ ವಿಧ್ಯಾರ್ಥಿಗಳನ್ನು‌ ಕಾಡಿದೆ. ಈಗ ಜನವರಿ 1ರಂದು ಮತ್ತೆ ತರಗತಿಗಳು ಆರಂಭಗೊಳ್ಳುತ್ತಿವೆ.

  ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಹಿಂದೆಯೇ ಸುದ್ದಿಗೋಷ್ಠಿ ನಡೆಸಿ, ಈ ವಿಚಾರ ಬಹಿರಂಗ ಪಡಿಸಿದ್ದರು. ಅಲ್ಲದೇ ರಾಜ್ಯ ಅಷ್ಟೂ ಸರ್ಕಾರಿ ಹಾಗೂ ಖಾಸಗಿ ಶಾಲೆ ಮತ್ತು ಕಾಲೇಜುಗಳಿಗೆ ಈ ಬಗ್ಗೆ ಸರ್ಕ್ಯುಲರ್ ಪಾಸ್ ಮಾಡಿಸಿ, ಕೋವಿಡ್ ರೀತಿ ರಿವಾಜುಗಳನ್ನು ಕಠಿಣವಾಗಿ ಪಾಲಿಸಲು ಸೂಚಿಸಿದ್ದರು. ಹೀಗಾಗಿ ಈಗ ಸಚಿವರು ನಗರದ ಕೆಲ ಕಾಲೇಜುಗಳಿಗೆ ಭೇಟಿ ನೀಡಿ ಬಹಳ ಸಮಯದ ಬಳಿಕ ವಿದ್ಯಾರ್ಥಿಗಳನ್ನು ಬರ ಮಾಡಿಕೊಳ್ಳಲು ಹೇಗೆ ಶಿಕ್ಷಣ ಸಂಸ್ಥೆಗಳು ಸಿದ್ದಗೊಂಡಿವೆ ಅನ್ನೋದರ ಬಗ್ಗೆ ಪರಿಶೀಲಿಸಿದರು.

  ನಿನ್ನೆ ಯಲಹಂಕ ಹಾಗೂ ಮಲ್ಲೇಶ್ವರಂನ ಸುತ್ತಮುತ್ತಲಿನ ಶಾಲೆಗಳಿಗೆ ಭೇಟಿ ನೀಡಿದ ಸಚಿವರು ಸಂಕ್ಷಿಪ್ತವಾಗಿ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.‌ ಇದರ ಮುಂದುವರೆದ ಭಾಗವೆಂಬಂತೆ ಬಸವನಗುಡಿಯ ಬಿಎಂಎಸ್, ಜಯನಗರದ ನ್ಯಾಷನಲ್ ಕಾಲೇಜು ಹಾಗೂ ಎನ್ ಎಮ್ ಕೆಆರ್ ವಿ ಸೇರಿದಂತೆ ಕೆಲವು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ಕೊಟ್ಟು ಸಿದ್ಧತೆಗಳ ಬಗ್ಗೆ ಪರಿಶೀಲನೆ ಮಾಡಿದರು.

  ಇದನ್ನು ಓದಿ: ಉಜಿರೆಯ ಅಪರೂಪದ ಉರಗ ರಕ್ಷಕ; ಕಾಳಿಂಗ ಸರ್ಪ ಸೇರಿ ಇವರು ಹಿಡಿದ ಹಾವುಗಳ ಸಂಖ್ಯೆ ಎಷ್ಟು ಗೊತ್ತಾ?

  ಈ ವೇಳೆ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು ಸೇರಿದ ಶಿಕ್ಷಕ ವೃಂದದೊಂದಿಗೆ ಚರ್ಚೆ ಮಾಡಿದರು. ಚರ್ಚೆಯಲ್ಲಿ, ನಾಳೆ ಮಕ್ಕಳಿಗೆ ನೇರವಾಗಿ ಪಠ್ಯಕ್ರಮ ಬೋಧಿಸದೆ ಕೋವಿಡ್ ಸಮಯದಲ್ಲಿ ಅವರ ಅನುಭವಗಳನ್ನು ಕೇಳಿ ತಿಳಿಯಲು ಸೂಚಿಸಿದರು. ಲಾಕ್ ಡೌನ್ ಅವಧಿಯಲ್ಲಿ ಮನೆಯಲ್ಲೇ ಉಳಿದುಕೊಂಡಿದ್ದ ಮಕ್ಕಳ ಮಾನಸಿಕ ಸ್ಥಿತಿ ಹೇಗಿತ್ತು ಹಾಗೂ ಮುಂದೆ ಹೇಗೆ ಅವರಿಗೆ ಪಾಠ ಮಾಡಬೇಕು ಅನ್ನುವುದಕ್ಕೆ ಇದು ಸಹಕಾರಿಯಾಗಲಿದೆ ಎಂದರು. ಇನ್ನು ನಾಳೆ ಶಾಲಾ ಕಾಲೇಜು ಆರಂಭಗೊಳ್ತಿರೋ ದಿನದಂದು ಶಿಕ್ಷಣ ಸಚಿವರು ಬೆಂಗಳೂರು ಗ್ರಾಮಾಂತರ ಆನೇಕಲ್ ನಲ್ಲಿ ಕೆಲ ಶಾಲೆ ಕಾಲೇಜುಗಳಿಗೂ ಭೇಟಿಕೊಡಲಿದ್ದಾರೆ.

  ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಮರು ಆರಂಭಕ್ಕೂ ಮುನ್ನ ಹೇಗಿದೆ ಸಿದ್ಧತೆ ಅನ್ನೋದನ್ನ ಗಮನಿಸಲು ಭೇಟಿಕೊಡುತ್ತಿದ್ದೇನೆ. ಇಲಾಖೆ ಮುಖಾಂತರವಾಗಿ ಈಗಾಗಲೇ ಸಿಲಬಸ್ ಮುಟ್ಟಿಸಲಾಗಿದೆ. ಎಲ್ಲಾ ಕಡೆಯಿಂದಲೂ ಸಕಾರಾತ್ಮಕ ಸ್ಪಂದನೆ ಸಿಗ್ತಿದೆ. ವಿದ್ಯಾರ್ಥಿಗಳಲ್ಲಿ ಶಾಲೆ ಆರಂಭದ ಬಗ್ಗೆ ಸಂತೋಷ ಇದೆ. ಕೆಲವು ಕಾಲೇಜುಗಳಲ್ಲಿ ಬ್ಯಾಂಡ್ ಹಾಗೂ ತೋರಣ ಕಟ್ಟಿ ವಿಧ್ಯಾರ್ಥಿಗಳನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಅವರ ಹುಮ್ಮಸ್ಸು ಕಂಡು ಖುಷಿ ಆಗಿದೆ. ಇದು ಶಿಕ್ಷಣ ಸಂಸ್ಥೆಗಳು ಯಾವ ರೀತಿ ಸಜ್ಜಾಗಿದೆ ಅನ್ನೋದಕ್ಕಿರುವ ಸಾಕ್ಷ್ಯ. ಇನ್ನು ರೂಪಾಂತರ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಆದರೆ, ಕೊರೋನಾದಂತೆ ಈ ರೂಪಾಂತರಿ ವೈರಸ್ ಅಷ್ಟು ಪರಿಣಾಮಕಾರಿ ಅಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಹೀಗಾಗಿ ಪೋಷಕರು ಆತಂಕ ಪಡುವ ಅಗತ್ಯ ಇಲ್ಲ. ಆದರೂ ಯಾವ ಪೋಷಕರಿಗೂ ಒತ್ತಾಯ ಇಲ್ಲ. ತರಗತಿಗೆ ತಮ್ಮ ಮಕ್ಕಳನ್ನು ಕಳುಹಿಸುವವರು ಕಳುಹಿಸಬಹುದು. ಎಂದಿನಂತೆ ತರಗತಿಗಳು ನಾಳೆಯಿಂದ ನಡೆಯಲಿದೆ ಎಂದರು.

  ವರದಿ; ಆಶಿಕ್ ಮುಲ್ಕಿ
  Published by:HR Ramesh
  First published: