ಡಿಸಿಎಂ ಇಲ್ಲದಿದ್ದರೆ ಮಂತ್ರಿ ಸ್ಥಾನವೂ ಬೇಡ: ಶ್ರೀರಾಮುಲು ಹೊಸ ವರಸೆ ಹಿಂದೆ ರೆಡ್ಡಿ ಗೇಮ್ ಪ್ಲಾನ್?
ಶ್ರೀರಾಮುಲು ಅವರ ಬಳಿ ಸದ್ಯಕ್ಕೆ ಆರೋಗ್ಯ ಖಾತೆ ಇದೆ. ಇದಕ್ಕಿಂತೂ ಪ್ರಬಲವಾಗಿರುವ ಒಂದು ಖಾತೆ ಮತ್ತು ಬಳ್ಳಾರಿಯ ಉಸ್ತುವಾರಿ ಸಚಿವ ಸ್ಥಾನದ ಮೇಲೆ ಶ್ರೀರಾಮುಲು ಕಣ್ಣಿಟ್ಟಿದ್ಧಾರೆ. ಬಳ್ಳಾರಿ ಉಸ್ತುವಾರಿ ಮೇಲೆ ಕಣ್ಣಿಡಲೂ ಅವರಿಗೆ ಪ್ರಬಲ ಕಾರಣವಿದೆ.
ಬೆಂಗಳೂರು(ಜ. 04): ವಿಧಾನಸಭಾ ಚುನಾವಣೆಯ ಪೂರ್ವದಿಂದಲೂ ಉಪ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಶ್ರೀರಾಮುಲು ಇದೀಗ ನೇರವಾಗಿ ಹಕ್ಕು ಚಲಾಯಿಸಲು ಮುಂದೆ ಬಂದಿದ್ದಾರೆ. ಬೆಂಬಲಿಗರು, ಸಮುದಾಯ ಮುಖಂಡರು, ಸ್ವಾಮೀಜಿಗಳ ಮೂಲಕ ಸಾರ್ವಜನಿಕವಾಗಿ ಒತ್ತಡ ಹಾಕುತ್ತಿದ್ದ ಅವರು ಈಗ ನೇರವಾಗಿ ಪ್ರಯತ್ನಕ್ಕೆ ಕೈ ಹಾಕಿದ್ಧಾರೆ. ತನಗೆ ಡಿಸಿಎಂ ಸ್ಥಾನ ಸಿಗದಿದ್ದರೆ ಮಂತ್ರಿ ಸ್ಥಾನವೂ ಬೇಡ ಎಂಬ ಹಠಕ್ಕೆ ಬಿದ್ದಿದ್ದಾರೆ.
ತನ್ನನ್ನ ಉಪ ಮುಖ್ಯಮಂತ್ರಿ ಮಾಡದೇ ಇದ್ದರೆ ಮಂತ್ರಿಮಂಡಲದಿಂದ ಹೊರಗೆ ಬರುತ್ತೇನೆ ಎಂಬ ಸಂದೇಶವನ್ನು ಶ್ರೀರಾಮುಲು ತಮ್ಮ ಆಪ್ತರ ಮೂಲಕ ಸಿಎಂ ಯಡಿಯೂರಪ್ಪಗೆ ಕಳುಹಿಸಿದ್ದಾರೆ ಎಂಬ ಮಾಹಿತಿ ಬಿಜೆಪಿಯ ಉನ್ನತ ಮೂಲಗಳಿಂದ ತಿಳಿದುಬಂದಿದೆ. ಆದರೆ, ಶ್ರೀರಾಮುಲು ಅವರ ಈ ಹಠಮಾರಿತನದ ಹಿಂದೆ ಜನಾರ್ದನ ರೆಡ್ಡಿ ಅವರಿದ್ದಾರೆ ಎಂಬ ಮಾಹಿತಿಯೂ ಬಿಜೆಪಿ ವಲಯದಲ್ಲಿ ಕೇಳಿಬಂದಿದೆ.
ನೀವು ಯಾರಿಗಾದರೂ ಯಾವುದೇ ಹುದ್ದೆ ಬೇಕಾದರೂ ಕೊಡಿ. ತನಗೆ ಉಪಮುಖ್ಯಮಂತ್ರಿ ಸ್ಥಾನವೇ ಬೇಕು. ನೀವು ಆ ಹುದ್ದೆ ನೀಡದಿದ್ದರೆ ನಾನು ಸಾಮಾನ್ಯ ಶಾಸಕನಾಗಿ ಬಿಜೆಪಿಯಲ್ಲಿರುತ್ತೇನೆ ಎಂದು ಶ್ರೀರಾಮುಲು ಬಹಳ ಸ್ಪಷ್ಟವಾಗಿ ತಿಳಿಸಿದ್ದಾರೆನ್ನಲಾಗಿದೆ. ವಾಲ್ಮೀಕಿ ಸಮುದಾಯದಿಂದ ಇದಾಗಲೇ ರಮೇಶ್ ಜಾರಕಿಹೊಳಿ ಅವರಿಗೆ ಡಿಸಿಎಂ ಸ್ಥಾನ ನಿಗದಿಯಾಗಿರುವುದರಿಂದ ಶ್ರೀರಾಮುಲುಗೆ ಆ ಸ್ಥಾನ ಸಿಗುವ ಸಾಧ್ಯತೆ ತೀರಾ ಕಡಿಮೆ. ಇದು ಗೊತ್ತಿದ್ದರೂ ಶ್ರೀರಾಮುಲು ಅವರು ಆ ಸ್ಥಾನಕ್ಕೆ ಹಠ ಹಿಡಿಯುತ್ತಿರುವುದರ ಹಿಂದೆ ಬೇರೆ ರಾಜಕೀಯ ತಂತ್ರಗಾರಿಕೆ ಇದೆ. ಮೂಲಗಳ ಪ್ರಕಾರ, ಶ್ರೀರಾಮುಲು ಅವರು ಡಿಸಿಎಂ ಸ್ಥಾನಕ್ಕೆ ಹಠ ಹಿಡಿದರೆ ಅವರಿಗೆ ಕನಿಷ್ಠ ಪ್ರಬಲ ಖಾತೆಯಾದರೂ ಸಿಗಬಹುದು ಎಂಬ ಲೆಕ್ಕಾಚಾರ ಇದೆ.
ಶ್ರೀರಾಮುಲು ಅವರ ಬಳಿ ಸದ್ಯಕ್ಕೆ ಆರೋಗ್ಯ ಖಾತೆ ಇದೆ. ಇದಕ್ಕಿಂತೂ ಪ್ರಬಲವಾಗಿರುವ ಒಂದು ಖಾತೆ ಮತ್ತು ಬಳ್ಳಾರಿಯ ಉಸ್ತುವಾರಿ ಸಚಿವ ಸ್ಥಾನದ ಮೇಲೆ ಶ್ರೀರಾಮುಲು ಕಣ್ಣಿಟ್ಟಿದ್ಧಾರೆ. ಬಳ್ಳಾರಿ ಉಸ್ತುವಾರಿ ಮೇಲೆ ಕಣ್ಣಿಡಲೂ ಅವರಿಗೆ ಪ್ರಬಲ ಕಾರಣವಿದೆ.
ಆನಂದ್ ಸಿಂಗ್ ಅವರು ಮಂತ್ರಿ ಆಗುವುದು ನಿಶ್ಚಿತ. ಅವರು ಸಚಿವರಾದರೆ ಬಳ್ಳಾರಿಯಲ್ಲಿ ಇನ್ನಷ್ಟು ಪ್ರಭಾವಶಾಲಿಯಾಗುತ್ತಾರೆ. ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಇನ್ನಷ್ಟು ಶಕ್ತಿ ಬರುತ್ತದೆ. ಈ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಅವರ ಬೆಳವಣಿಗೆಗೆ ಸೀಮೆ ಹಾಕಲು ಮತ್ತು ವಿಜಯನಗರ ಜಿಲ್ಲೆ ರಚನೆಯ ಪ್ರಯತ್ನ ತಡೆಯಲು ಶ್ರೀರಾಮುಲು ಅವರಿಗೆ ಬಳ್ಳಾರಿ ಉಸ್ತುವಾರಿ ಸ್ಥಾನದ ಅಗತ್ಯ ಇದೆ. ಹೀಗಾಗಿ, ಈ ದೃಷ್ಟಿಯಿಂದ ಶ್ರೀರಾಮುಲು ಡಿಸಿಎಂ ಸ್ಥಾನದ ಬೇಡಿಕೆಯನ್ನು ಮುಂದಿಟ್ಟುಕೊಂಡು ದಾಳ ಉರುಳಿಸುತ್ತಿದ್ಧಾರೆ. ನೇರ ರಾಜಕಾರಣಕ್ಕೆ ಬರಲು ಸಾಧ್ಯವಿಲ್ಲದ ಗಣಿ ದಣಿ ಮತ್ತು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಶ್ರೀರಾಮುಲು ಮೂಲಕ ಈ ದಾಳಗಳನ್ನ ಹಾಕಿಸುತ್ತಿದ್ದಾರೆ. ಶ್ರೀರಾಮುಲು ಮೂಲಕ ರಾಜ್ಯ ರಾಜಕಾರಣ, ಅದರಲ್ಲೂ ಬಳ್ಳಾರಿ ರಾಜಕಾರಣದ ಹಿಡಿತ ಸಾಧಿಸುವುದು ರೆಡ್ಡಿ ತಂತ್ರಗಾರಿಕೆಯಾಗಿದೆ.