ಬಳ್ಳಾರಿ ಬಿಟ್ಟು ದುರ್ಗಕ್ಕೆ ಲಗ್ಗೆಯಿಟ್ಟ ಶ್ರೀರಾಮುಲು; ಬಂಡಾಯವಿದ್ದರೂ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ

news18
Updated:April 12, 2018, 10:49 PM IST
ಬಳ್ಳಾರಿ ಬಿಟ್ಟು ದುರ್ಗಕ್ಕೆ ಲಗ್ಗೆಯಿಟ್ಟ ಶ್ರೀರಾಮುಲು; ಬಂಡಾಯವಿದ್ದರೂ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ
  • Advertorial
  • Last Updated: April 12, 2018, 10:49 PM IST
  • Share this:
-ಶರಣು ಹಂಪಿ, ನ್ಯೂಸ್, ಕನ್ನಡ

ಬಳ್ಳಾರಿ (ಮಾ.12) :  ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಬದಲಾದ ಸನ್ನಿವೇಶದಲ್ಲಿ ಸಂಸದ ಶ್ರೀರಾಮುಲು ಬಳ್ಳಾರಿ ಜಿಲ್ಲೆ ಬಿಡಬೇಕಾಗಿದೆ. ವಾಲ್ಮೀಕಿ ಸಮುದಾಯವೇ ಹೆಚ್ಚಿರುವ ನೆರೆಯ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಇದಕ್ಕೆ ಸ್ಥಳೀಯ ಶಾಸಕ ತಿಪ್ಪೇಸ್ವಾಮಿ ಬೆಂಬಲಿಗರು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಂಡಾಯದ ನಡುವೆ ಡಿಸಿಎಂ ಪಟ್ಟದ ಕನಸಿನೊಂದಿಗೆ ದುರ್ಗದ ಕೋಟೆಗೆ ಲಗ್ಗೆಯಿಟ್ಟಿದ್ದಾರೆ.

ರೆಡ್ಡಿ ಸಹೋದರರು ರಾಜಕೀಯ ಹಿನ್ನಡೆ ಸಂದರ್ಭದಲ್ಲಿ ರೆಡ್ಡಿ ಪಾಳಯಕ್ಕೆ ಆಧಾರ ಸ್ತಂಭವಾಗಿರುವ ಶ್ರೀರಾಮುಲು ದೆಹಲಿ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಶಿಫ್ಟ್ ಆಗುತ್ತಿದ್ದಾರೆ. ವಾಲ್ಮೀಕಿ ಸಮುದಾಯದ ದೊಡ್ಡ ನಾಯಕನಾಗಿ ಬೆಳೆಯುತ್ತಿರುವ ಬಿ ಶ್ರೀರಾಮುಲನ್ನು ಬಿಜೆಪಿ ಪಕ್ಷ ಭರ್ಜರಿಯಾಗಿ ಬಳಸಿಕೊಳ್ಳಲು ನಿರ್ಧಾರ ಮಾಡಿದೆ.

ಚಿತ್ರದುರ್ಗ ಜಿಲ್ಲೆಯ ವಾಲ್ಮೀಕಿ ಸಮುದಾಯ ಪ್ರಾಬಲ್ಯವಿರುವ ಮೊಳಕಾಲ್ಮೂರು ಮೀಸಲು ಎಸ್ಟಿ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಹೈಕಮಾಂಡ್ ಸೂಚನೆ ನೀಡಿದೆ. ಶ್ರೀರಾಮುಲು ಬಳ್ಳಾರಿ ಜಿಲ್ಲೆ ಸೇರಿದಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಸ್ಪರ್ಧಿಸುವುದರಿಂದ ತುಮಕೂರು ಹಾಗೂ ದಾವಣಗೆರೆ ಜಿಲ್ಲೆಯ ಎಲ್ಲಾ ನಾಯಕರ ಗೆಲುವಿಗೆ ಶ್ರಮಿಸುವಂತೆ ಶ್ರಿರಾಮುಲಿಗೆ ಹೈಕಮಾಂಡ್ ಸೂಚಿಸಿದೆ.

ಇದರಿಂದಾಗಿ ಕಳೆದ ಬಾರಿ ತಮ್ಮದೇ ಪಕ್ಷದ ಚಿನ್ಹೆಯಿಂದ ಗೆದ್ದಿದ್ದ ತಿಪ್ಪೇಸ್ವಾಮಿ ಬದಿಗಿರಿಸಿ ತಾನು ಸ್ಪರ್ಧಿಸಲು ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಬಿಟ್ಟು ವಾರಣಾಸಿಯಲ್ಲಿ ಕಣಕ್ಕಿಳಿದಂತೆ ನನ್ನನ್ನು ಬಳ್ಳಾರಿಯಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಸ್ಪರ್ಧಿಸಲು ಹೈಕಮಾಂಡ್ ಸೂಚಿಸಿದೆ. ಈ ಕಾರಣಕ್ಕೆ ವರಿಷ್ಠರು ಸೂಚಿಸಿದಂತೆ ನಾನು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಮೊಳಕಾಲ್ಮೂರು ಎಸ್ ಟಿ ಮೀಸಲು ಕ್ಷೇತ್ರದಲ್ಲಿ ಈ ಬಾರಿ ಟಿಕೆಟ್ ಸಿಕ್ಕೇ ಸಿಗುತ್ತದೆಂದು ಎಂಬ ನಂಬಿಕೆ ತಿಪ್ಪೇಸ್ವಾಮಿ ಅವರದ್ದಾಗಿತ್ತು. ಆದರೆ ಯಾವಾಗ ಅವರಿಗೆ ಟಿಕೆಟ್ ಸಿಗಲಿಲ್ಲವೇ ಅವರ ಸಾವಿರಾರು ಬೆಂಬಲಿಗರು ಬಳ್ಳಾರಿಗೆ ಆಗಮಿಸಿ ಶ್ರೀರಾಮುಲು ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದರು. ಮ್ಯಾಸ ಬೇಡ ನಾಯಕರಾದ ತಿಪ್ಪೇಸ್ವಾಮಿ ಟಿಕೆಟ್ ವಂಚಿತರಾಗಿರುವುದರ ಬಗ್ಗೆ ಬೆಂಬಲಿಗರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಊರ ಬೇಡ ನಾಯಕರಾದ ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸುವುದು ಬೇಡ ಸಾಮಾಜಿಕ ನ್ಯಾಯದಡಿ ಸಮುದಾಯದೊಳಗಿರುವ ಸ್ಥಳೀಯ ಶಾಸಕರಿಗೆ ಟಿಕೆಟ್ ನೀಡಿ ಎಂದು ಒತ್ತಾಯಿಸಿದ್ದರು. ಈಗಾಗಲೇ ಮುನಿಸಿಕೊಂಡಿರುವ ತಿಪ್ಪೇಸ್ವಾಮಿ ಅವರನ್ನು ಮನವೊಲಿಸಿ ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ತಿಪ್ಪೇಸ್ವಾಮಿ ಜೊತೆ ಪ್ರಚಾರ ಮಾಡಿ ಗೆಲ್ಲಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.ಇನ್ನು ಬಿಜೆಪಿ ಅಧಿಕಾರಕ್ಕೆ ಬಂದ್ರೆ ಶ್ರೀರಾಮುಲು ಡಿಎಸಿಎಂ ಪಟ್ಟ ಕಟ್ಟುತ್ತಾರೆ ಎಂಬ ಮಾತು ಹರಿಬಡಿಲಾಗಿದೆ. ಇದು ಹಿಂದುಳಿದ ಸಮುದಾಯದ ಮತಗಳನ್ನು ಪಡೆಯಲು ಪಕ್ಷ ಹೈಕಮಾಂಡ್ ಇದರ ಸದುಪಯೋಗ ಪಡೆಯಲು ಮುಂದಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ, ಗದಗ ಸೇರಿದಂತೆ ನಾಯಕ ಸಮುದಾಯ ಹೆಚ್ಚಿರುವ ಕ್ಷೇತ್ರದಲ್ಲಿ ಶ್ರೀರಾಮುಲು ಪ್ರಚಾರ ಮಾಡಿ ಓಟುಗಳ ಗಳಿಕೆ ಹೆಚ್ಚು ಮಾಡಲು ಬಿಜೆಪಿ ನಿರ್ಧರಿಸಿದೆ. ಆದರೆ ಚುನಾವಣೆಯಲ್ಲಿ ಈ ಸ್ಟ್ರಾಟಜಿ ಎಷ್ಟರಮಟ್ಟಿಗೆ ಯಶಸ್ವಿಗೊಳ್ಳುತ್ತೆ ಎನ್ನುವುದನ್ನು ಕಾದುನೋಡಬೇಕು.
First published:April 12, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ