ಶ್ರೀರಾಮುಲು ಆಪ್ತ ಮಹೇಶ್ ರೆಡ್ಡಿ ಸಾವು ಪ್ರಕರಣ; ಅನುಮಾನಗಳಿಗೆ ಸಿಕ್ಕಿಲ್ಲ ಇನ್ನೂ ಉತ್ತರ

ಏಪ್ರಿಲ್ 29ರಂದು ಶ್ರೀರಾಮುಲು ಆಪ್ತ ಉಮಾಮಹೇಶ್ವರ್ ರೆಡ್ಡಿ ಅಲಿಯಾಸ್ ಮಹೇಶ್ ಅವರು ಬೆಂಗಳೂರಿನಲ್ಲಿ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಅವರ ಶವವನ್ನು ರಾತ್ರೋರಾತ್ರಿ ಬಳ್ಳಾರಿಗೆ ಸಾಗಿಸಿ ಅಂತ್ಯಕ್ರಿಯೆ ಮಾಡಲಾಗಿತ್ತು.

ಸಚಿವ ಬಿ ಶ್ರೀರಾಮುಲು

ಸಚಿವ ಬಿ ಶ್ರೀರಾಮುಲು

 • Share this:
  ಬೆಂಗಳೂರು(ಜುಲೈ 13): ಆರೋಗ್ಯ ಸಚಿವ ಬಿ ಶ್ರೀರಾಮುಲ ಅವರ ಬೆಂಬಲಿಗರಾಗಿದ್ದ ಮಹೇಶ್ ರೆಡ್ಡಿ ಅವರ ಸಾವು ಪ್ರಕರಣ ಇನ್ನೂ ಹೊಗೆಯಾಡುತ್ತಿದೆ. ಏಪ್ರಿಲ್ 29ರಂದು ಸಂಭವಿಸಿದ ಅವರ ಸಾವಿನಿಂದ ಎಡೆ ಮಾಡಿಕೊಟ್ಟಿರುವ ಹಲವು ಅನುಮಾನಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಮೂರು ದಿನಗಳ ಹಿಂದೆ ಕರ್ನಾಟಕ ರಾಷ್ಟ್ರ ಸಮಿತಿ ಸಂಘಟನೆಯ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ಈ ಘಟನೆಯ ತನಿಖೆ ಆಗಬೇಕೆಂದು ಆಗ್ರಹಿಸಿದ್ದರು. ಇದು ಅಸಹಜ ಸಾವಾಗಿದೆ ಎಂಬ ವದಂತಿಗಳು ಇರುವ ಹಿನ್ನೆಲೆಯಲ್ಲಿ ತನಿಖೆಯಾಗಿ ಸತ್ಯಾಂಶ ಹೊರಬರಲಿ ಎಂಬುದು ರವಿಕೃಷ್ಣಾರೆಡ್ಡಿ ಅವರ ಆಗ್ರಹ.

  ಏಪ್ರಿಲ್ 29ರಂದು ಸಚಿವರೊಬ್ಬರ ಅಧಿಕೃತ ನಿವಾಸದಲ್ಲಿ ಮಹೇಶ್ ರೆಡ್ಡಿ ಮೃತಪಟ್ಟಿದ್ದರು. ನಂತರ ಅವರ ಶವವನ್ನು ರಾತ್ರೋರಾತ್ರಿ ಬಳ್ಳಾರಿ ಸಾಗಿಸಿ ರಹಸ್ಯವಾಗಿ ಅಂತ್ಯಕ್ರಿಯೆ ನಡೆಸಲಾಯಿತು ಎನ್ನಲಾಗುತ್ತಿದೆ. ಶ್ರೀರಾಮುಲು ಅವರ ಕೆಲ ಅವ್ಯವಹಾರಗಳ ರಹಸ್ಯಗಳು ಮಹೇಶ್ ರೆಡ್ಡಿ ಅವರಿಗೆ ಗೊತ್ತಾಗಿದ್ದಿರಬಹುದು ಎಂದು ರವಿಕೃಷ್ಣಾ ರೆಡ್ಡಿ ಅನುಮಾನ ವ್ಯಕ್ತಪಡಿಸಿದ್ಧಾರೆ. ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷರು ತಮ್ಮ ಪತ್ರವನ್ನು ಮುಖ್ಯಮಂತ್ರಿಗಳು, ಗೃಹ ಸಚಿವರು, ಪೊಲೀಸ್ ಮಹಾನಿರ್ದೇಶಕರು ಮತ್ತು ನಿರೀಕ್ಷಕರಿಗೆ ಬರೆದು ತನಿಖೆಗೆ ಒತ್ತಾಯಿಸಿದ್ದಾರೆ.

  ಮೂಲಗಳಿಂದ ನ್ಯೂಸ್18 ಕನ್ನಡಕ್ಕೆ ಸಿಕ್ಕ ಮಾಹಿತಿ ಪ್ರಕಾರ, ಶ್ರೀರಾಮುಲು ಅವರ ಆಪ್ತರಾದ ಸಂಜಯ್ ಬೆಟಗೇರಿ, ರಾಜು ಮತ್ತು ಮಹೇಶ್ ರೆಡ್ಡಿ ಈ ಮೂರು ಕೂಡ ಮದ್ಯ ಸೇವನೆ ಮಾಡುತ್ತಿರುತ್ತಾರೆ. ಈ ವೇಳೆ, ವೈದ್ಯಕೀಯ ಉಪಕರಣ ಖರೀದಿಯಲ್ಲಿ ಕಿಕ್​ಬ್ಯಾಕ್ ಪಡೆದಿರುವ ವಿಚಾರವನ್ನು ಬೆಟಗೇರಿ ಬಹಿರಂಗಪಡಿಸುತ್ತಾರೆ. ಈ ವೇಳೆ ಸಂಜಯ್ ಮತ್ತು ಮಹೇಶ್ ಮಧ್ಯೆ ವಾಗ್ವಾದವಾಗುತ್ತದೆ. ಬಳಿಕ ಮಹೇಶ್ ಮೇಲೆ ಬೆಟಗೇರಿ ಹಲ್ಲೆ ಮಾಡುತ್ತಾರೆ. ಕುಡಿತದ ನಶೆಯಲ್ಲಿದ್ದ ಮಹೇಶ್ ಸ್ಥಳದಲ್ಲೇ ಮೃತಪಡುತ್ತಾರೆ.

  ಇದನ್ನೂ ಓದಿ: ಕೊರೋನಾ ಸಲಕರಣೆ ಖರೀದಿಯಲ್ಲಿ ಅವ್ಯವಹಾರ ಆರೋಪ - ದಾಖಲೆಯಿದ್ದರೆ ಬಿಡುಗಡೆ ಮಾಡಲಿ ; ಸಚಿವ ಶ್ರೀರಾಮುಲು

  ನಂತರ ಬೆಂಜ್ ಕಾರಿನ ಮೂಲಕ ಮಹೇಶ್ ಶವವನ್ನು ರಹಸ್ಯವಾಗಿ ಬಳ್ಳಾರಿಗೆ ಸಾಗಿಸಿ ಅಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ. ಶ್ರೀರಾಮುಲು ಅವರು ಮಹೇಶ್ ರೆಡ್ಡಿ ಅವರ ಪತ್ನಿಗೆ 50 ಲಕ್ಷ ರೂ ಪರಿಹಾರ ಹಾಗೂ ಒಂದು ಮನೆ ಕೊಡಿಸುತ್ತಾರೆ. ಆ ನಂತರ ಮಹೇಶ್ ಪತ್ನಿ ಸೋಷಿಯಲ್ ಮೀಡಿಯಾದಲ್ಲಿ ಶ್ರೀರಾಮುಲು ವಿರುದ್ಧ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು. ಆ ನಂತರ ಆ ವಿಡಿಯೋವನ್ನು ಡಿಲೀಟ್ ಮಾಡಲಾಗಿತ್ತು. ಶ್ರೀರಾಮುಲು ಬೆಂಬಲಿಗರೇ ಈ ವಿಡಿಯೋವನ್ನು ಬಲವಂತವಾಗಿ ಡಿಲೀಟ್ ಮಾಡಿಸಿದರು ಎಂಬ ಆರೋಪ ಇದೆ.

  ಅಲ್ಲದೆ, ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮೃತಪಟ್ಟರೂ ಅವರಿಗೆ ಯಾವುದೇ ಕೋವಿಡ್ ಪರೀಕ್ಷೆ ಮಾಡಿಸದೆ ಹಾಗೇ ಅಂತ್ಯಕ್ರಿಯೆ ಮಾಡಲಾಗಿದೆ. ತಮ್ಮ ಆಪ್ತ ವ್ಯಕ್ತಿ ಮೃತಪಟ್ಟಾಗ ಅವರನ್ನ ಶ್ರೀರಾಮುಲು ನೋಡಲು ಹೋಗಲಿಲ್ಲ ಎಂಬ ಮಾತೂ ಕೇಳಿಬರುತ್ತಿದೆ.  ಲಾಕ್​ಡೌನ್ ವೇಳೆ ಸಿಗರೇಟ್ ಮಾರಾಟಕ್ಕೆ ಅವಕಾಶ ಕೊಡಲು ಲಂಚ ಸ್ವೀಕರಿಸಿದ್ದು, ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರವಾಗಿದ್ದು ಇತ್ಯಾದಿಗಳ ಮಾಹಿತಿ ಮೃತ ಮಹೇಶ್ ರೆಡ್ಡಿ ಅವರಿಗೆ ತಿಳಿದಿತ್ತೆಂಬುದು ರವಿಕೃಷ್ಣಾ ರೆಡ್ಡಿ ಅವರ ಅನುಮಾನ.

  ಇವೆಲ್ಲ ಅನುಮಾನಗಳು ಬಗೆಹರಿಯಬೇಕೆಂದರೆ ಘಟನೆಯ ತನಿಖೆ ಆಗಬೇಕಿದೆ.
  Published by:Vijayasarthy SN
  First published: