ಸಿಸಿಬಿ ದಾಳಿ ವೇಳೆ ರೆಡ್ಡಿ ಬೆಂಬಲಕ್ಕೆ ನಿಂತ ರಾಮುಲು ಹಾಗೂ ರೆಡ್ಡಿ ಅತ್ತೆ ಮಾಡಿದ ರಂಪಾಟವೇನು?

ಇ.ಡಿ. ಪ್ರಕರಣದಲ್ಲಿ ಡೀಲ್ ಮಾಡಲು ಹೋಗಿ ಸಂಕಷ್ಟದಲ್ಲಿ ಸಿಲುಕಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸಂಕಷ್ಟ ಮುಂದುವರೆದಿದೆ. ಗಣಿನಾಡು ಬಳ್ಳಾರಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ರೆಡ್ಡಿ ನಿವಾಸ ಹಾಗೂ ಕಚೇರಿ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಇಂಚಿಂಚೂ ಜಾಗ ಬಿಡದೆ ಪರಿಶೀಲನೆ ಮುಂದುವರೆಸಿದ್ದಾರೆ. ದಾಳಿ ವಿಷಯ ತಿಳಿಯುತ್ತಿದ್ದಂತೆ ಆಪ್ತಸ್ನೇಹಿತ ರಾಮುಲು ನೆರವಿಗೆ ಧಾವಿಸಿದ್ದಾರೆ. ರೆಡ್ಡಿ ಅತ್ತೆ ರಂಪಾಟ ಮಾಡಿದರೆ, ಸೈಲೆಂಟಾಗಿ ರೆಡ್ಡಿ ಪತ್ನಿ ಅರುಣಾಲಕ್ಷ್ಮಿ ಮನೆಯಲ್ಲಿಯೇ ಇದ್ದರು. ರೆಡ್ಡಿ ಮನೆ, ಕಚೇರಿ ರೇಡ್ ಸಂದರ್ಭದಲ್ಲಿ ಜರುಗಿದ ಪಿನ್ ಟು ಪಿನ್ ಮಾಹಿತಿ ಇಲ್ಲಿದೆ‌.


Updated:November 8, 2018, 6:40 PM IST
ಸಿಸಿಬಿ ದಾಳಿ ವೇಳೆ ರೆಡ್ಡಿ ಬೆಂಬಲಕ್ಕೆ ನಿಂತ ರಾಮುಲು ಹಾಗೂ ರೆಡ್ಡಿ ಅತ್ತೆ ಮಾಡಿದ ರಂಪಾಟವೇನು?
ಜನಾರ್ದನ್ ರೆಡ್ಡಿ

Updated: November 8, 2018, 6:40 PM IST
- ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ನ. 8): ದೀಪಾವಳಿಯಂದು ಜನರು ರಾತ್ರಿ ಪಟಾಕಿ ಸಿಡಿಸಿ, ಲಕ್ಷ್ಮಿ ಪೂಜಾ ದೀಪಾವಳಿ ಹಬ್ಬ ಮಾಡುತ್ತಿದ್ದರೆ, ಮಾಜಿ ಸಚಿವ ಜನಾರ್ದನ ರೆಡ್ಡಿ ಮಾತ್ರ ಸಂಕಷ್ಟ ಮೇಲೆ ಸಂಕಷ್ಟ ಅನುಭವಿಸುತ್ತಿದ್ದಾರೆ. ನಿನ್ನೆ ಬೆಂಗಳೂರಿನ ಪಾರಿಜಾತ ಅಪಾರ್ಟ್ಮೆಂಟ್​ನಲ್ಲಿರುವ ರೆಡ್ಡಿ ನಿವಾಸ ಜಾಲಾಡಿರುವ ಸಿಸಿಬಿ ಪೊಲೀಸರು ಇಂದು ಗಣಿನಾಡು ಬಳ್ಳಾರಿಯಲ್ಲಿ ದಾಳಿ ಮಾಡಿದ್ದಾರೆ‌. ಬೆಳ್ಳಗ್ಗೆ 6 ಗಂಟೆಗೆ ಆಗಮಿಸಿದ ಬೆಂಗಳೂರಿನ ಸಿಸಿಬಿ ಎಸಿಪಿ ಮಂಜುನಾಥ್ ಚೌಧರಿ ನೇತೃತ್ವದಲ್ಲಿ ಎಂಟು ಅಧಿಕಾರಿಗಳ ತಂಡ ಪರಿಶೀಲನೆ ಮುಂದುವರೆಸಿದ್ದಾರೆ‌. ರೇಡ್ ವಿಷಯ ತಿಳಿಯುತ್ತಿದ್ದಂತೆ ರೆಡ್ಡಿ ಮನೆಗೆ ಆಗಮಿಸಿದ ಆಪ್ತಸ್ನೇಹಿತ ಶ್ರೀರಾಮುಲು ಸಿಸಿಬಿ ಪೊಲೀಸರು ಕೇಳುವ ಮಾಹಿತಿಗೆ ಉತ್ತರ ನೀಡುತ್ತಿದ್ದರು. ರೆಡ್ಡಿ ನಿವಾಸಕ್ಕೆ ಆಗಮಿಸಿದ್ದ ರೆಡ್ಡಿ ಮಾವ ಪರಮೇಶ್ವರ್, ರೆಡ್ಡಿ ಅತ್ತೆ ನಾಗಲಕ್ಷ್ಮಮ್ಮ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದ ಸಿಸಿಬಿ ಪೊಲೀಸರ ಮುಂದೆ ರಂಪಾಟ ಮಾಡಿದ್ದಾರಂತೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಯಾಕೆ ರೇಡ್ ಮಾಡಿದ್ದೀರಿ? ನಿಮಗೆ ಯಾರು ಬರಲು‌ ಹೇಳಿದ್ದು? ಎಂದು ಅತ್ತು ಕರೆದು ರಂಪಾಟ ಮಾಡಿದ್ದಾರಂತೆ. ಜೊತೆಗೆ ಮನೆಯಲ್ಲಿ ತಣ್ಣಗೇ ಕುಳಿತಿದ್ದ ರೆಡ್ಡಿ ಪತ್ನಿ ಅರುಣಾಲಕ್ಷ್ಮಿಯನ್ನು ಸಹ ವಿಚಾರಣೆಗೊಳಪಡಿಸಿ ತನಿಖೆ ಮಾಡಿದ್ದಾರೆ. ಈ ಕಾರಣಕ್ಕೆ ಸಿಸಿಬಿ ಪೊಲೀಸರು ಕೂಡಲೇ ಸ್ಥಳೀಯ ಕೌಲ್ ಬಜಾರ್ ಠಾಣೆಯಿಂದ ಮಹಿಳಾ ಪೊಲೀಸರನ್ನು ಕರೆತಂದು ಪರಿಶೀಲನೆ ಮುಂದುವರೆಸಿದರು. ಮನೆಯಲ್ಲಿ ದಾಳಿ ಮುಗಿದ ನಂತರ ಪತ್ನಿ ಅರುಣಾಲಕ್ಷ್ಮಿ ಪಂಚನಾಮೆಗೆ ಸಹಿ ಮಾಡಿದರು.

ಟಿವಿ ದೃಶ್ಯ


ಬೆಳಗ್ಗೆ ರೇಡ್ ಆಗುತ್ತಿದ್ದಂತೆ ಮನೆಗೆ ಆಗಮಿಸಿದ ಆಪ್ತ ಸ್ನೇಹಿತ ಶ್ರೀರಾಮುಲು ದಾಳಿ ಪ್ರಕ್ರಿಯೆ ಮುಗಯುವವರೆಗೂ ಅಲ್ಲಿಯೇ ಇದ್ದು ರೆಡ್ಡಿ ಬೆಂಬಲಕ್ಕೆ ನಿಂತರು. ಇನ್ನು ರೆಡ್ಡಿ ಆಪ್ತರಲ್ಲೊಬ್ಬರಾದ ಆಂಧ್ರ ವೈಎಸ್ ಆರ್ ಪಕ್ಷದ ಮುಖಂಡ, ಮಾಜಿ ಶಾಸಕ ಕಾಪು ರಾಮಚಂದ್ರರೆಡ್ಡಿ ಸಹ ಆಗಮಿಸಿ ರೇಡ್ ವೇಳೆ ರೆಡ್ಡಿಗೆ ಬೆಂಬಲ ನೀಡಿದರು. ಅದೇ ರೀತಿ ರೆಡ್ಡಿ ಮಾಲಿಕತ್ವದ ಓಎಂಸಿ ಕಚೇರಿಯ ಮೇಲೂ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ರೆಡ್ಡಿ ಮನೆ, ಕಚೇರಿ ದಾಳಿ ಪ್ರತಿಯೊಂದು ಮಾಹಿತಿಯನ್ನು ಸಿಸಿಬಿ ಪೊಲೀಸರು ಜಿಪಿಆರ್ ಎಸ್ ಮೂಲಕ ವೀಡಿಯೋ ಹಾಗೂ ಫೋಟೋ ತೆಗೆದು ದಾಖಲು‌ ಮಾಡುತ್ತಿದ್ದ ದೃಶ್ಯ ಕಂಡುಬಂದಿತು. ಟೆರೇಸ್ ಮೇಲಿನ ಸಿಂಟೆಕ್ಸ್, ವಾಷ್ ರೂಂ ಸಹ ಬಿಡದೆ ಪರಿಶೀಲನೆ ಮುಂದುವರೆಸಿದರು. ಈ ವೇಳೆ ರೆಡ್ಡಿ ನಿವಾಸದಲ್ಲಿ ರಾಮುಲು, ರೆಡ್ಡಿ ಅತ್ತೆ ನಾಗಲಕ್ಷ್ಮಮ್ಮ, ರೆಡ್ಡಿ ಪತ್ನಿ ಅರುಣಾಲಕ್ಷ್ಮಿ ಅಸಹಾಯಕರಾಗಿ ನಿಂತಿದ್ದ ದೃಶ್ಯ ನ್ಯೂಸ್ 18 ಕ್ಯಾಮರಾದಲ್ಲಿ ಸೆರೆಯಾಗಿದೆ.

ಇನ್ನು ಬಳ್ಳಾರಿಯ ರೆಡ್ಡಿ ನಿವಾಸ ದಾಳಿ ಮುನ್ನ ಆಪ್ತ ಅಲಿಖಾನ್ ನಿವಾಸದಲ್ಲಿ ಮೊದಲು ದಾಳಿ ಮಾಡಲು ಮುಂದಾದರು. ಆದರೆ ಬಳ್ಳಾರಿಯ ಅಲಿಖಾನ್ ನಿವಾಸ ಬೀಗ ಹಾಕಿದ್ದರಿಂದ ರೆಡ್ಡಿ ನಿವಾಸದಲ್ಲಿ ದಾಳಿ ಮುಂದುವರೆಸಿದ್ದಾರೆ. ಇತ್ತ ರಾಜ್ ಮಹಲ್ ಜ್ಯುಯಲರಿ ಮಾಲಿಕ ರಮೇಶ್ ನಿವಾಸದಲ್ಲಿ ಕಳೆದೊಂದು ವಾರದ ಹಿಂದೆಯೇ ಪೊಲೀಸರು ಕರೆದುಕೊಂಡು‌ಹೋಗಿದ್ದರು ಎಂದು ಅಲ್ಲಿಯ ಕೆಲಸದವರು ಮಾಹಿತಿ ನೀಡಿದ್ದಾರೆ‌. ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟ ಹೊರಗಡೆ ತರಿಸಿಕೊಂಡ ಸಿಸಿಬಿ ಪೊಲೀಸರು ದಾಳಿ ಮುಂದುವರೆಸಿದ್ದಾರೆಂದರೆ ಮಹತ್ವದ ದಾಖಲೆಗಳು, ಮಾಹಿತಿ ಸಿಕ್ಕಿದೆಯೇ ಎಂದುಕೊಳ್ಳಬಹುದೇನೋ?
First published:November 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ