ಉಡುಪಿ: ವಿಧಾನಸಭಾ ಚುನಾವಣೆಗೆ (Karnataka Assembly Election) ದಿನಾಂಕ ನಿಗದಿ ಘೋಷಣೆ ಆಗದಿದ್ದರೂ ಕೂಡ ಈಗಿಂದಲೇ ಚುನಾವಣಾ ಪ್ರಚಾರ (Election Campaign) ಶುರುವಾಗಿದೆ. ಹಾಲಿ ಸಚಿವರು, (V Sunil Kumar) ಶಾಸಕರು ತಮ್ಮ ಕ್ಷೇತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ಹೊಸ ಅಭ್ಯರ್ಥಿಗಳು, (Pramod Muthalik) ಹಿಂದಿನ ಚುನಾವಣೆಯಲ್ಲಿ ಸೋತವರೂ ಕೂಡ ತಮ್ಮ ಕ್ಷೇತ್ರಗಳಲ್ಲಿ ಜನರನ್ನು ಮನ ಓಲೈಸಲು ಆರಂಭಿಸಿದ್ದಾರೆ. ಇತ್ತ ಉಡುಪಿಯ ಕಾರ್ಕಳ ವಿಧಾನಸಭಾ ಕ್ಷೇತ್ರ ಕೂಡ ಈ ಬಾರಿ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ.
ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಈ ಬಾರಿಯ ಚುನಾವಣೆಯಲ್ಲಿ ಇಂಧನ ಸಚಿವ ಸುನೀಲ್ ಕುಮಾರ್ ಅವರ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಲು ನಿರ್ಧಾರ ಮಾಡಿರುವುದರಿಂದ ಇದು ಹಾಲಿ ಸಚಿವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸದ್ಯ ಕಾರ್ಕಳದಲ್ಲಿ ಅಸಲಿ ಹಿಂದುತ್ವ ಮತ್ತು ನಕಲಿ ಹಿಂದುತ್ವದ ಬಗ್ಗೆ ಚುನಾವಣೆ ನಡೆಯಲಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಕ್ಕೆ ಸಚಿವ ಸುನೀಲ್ ಕುಮಾರ್ ಅವರು ಮುತಾಲಿಕ್ ವಿರುದ್ಧ ಹರಿಹಾಯ್ದಿದ್ದರು. ನೀವು ಹಣ ಮಾಡಲು ಕಾರ್ಕಳಕ್ಕೆ ಬಂದಿದ್ದೀರಾ ಎಂದು ಪ್ರಶ್ನಿಸಿದ್ದರು.
'ದುಡ್ಡು ಮಾಡ್ಬೇಕಿದ್ರೆ 45 ವರ್ಷ ಬೇಕಿರಲಿಲ್ಲ'
ಇದೀಗ ಸಚಿವ ಸುನೀಲ್ ಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು, ಸಚಿವ ವಿ. ಸುನಿಲ್ ಕುಮಾರ್ ಆತಂಕಕ್ಕೆ ಒಳಗಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ದುಡ್ಡಿಗೋಸ್ಕರ ನಾನು ಬೆಳಗಾವಿಯಿಂದ ಕಾರ್ಕಳಕ್ಕೆ ಬರಬೇಕಾಗಿಲ್ಲ. ದುಡ್ಡೇ ಗಳಿಸಬೇಕಾಗಿದ್ದರೆ ನನಗೆ 45 ವರ್ಷ ಬೇಕಾಗಿರಲಿಲ್ಲ. ನಾನು ದುಡ್ಡಿಗೋಸ್ಕರ ಕಾರ್ಕಳಕ್ಕೆ ಬಂದಿಲ್ಲ ಸುನಿಲ್ ಕುಮಾರ್ ಅವರೇ ಎಂದು ತಿರುಗೇಟು ನೀಡಿದ್ದಾರೆ.
'ಸುನೀಲ್ ಕುಮಾರ್ ಹಿಂದೆ ಎಲ್ಲಿದ್ದರು?'
ಕಾರ್ಕಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರಮೋದ್ ಮುತಾಲಿಕ್, ಈ ಸುನಿಲ್ ಕುಮಾರ್ ಹಿಂದೆ ಎಲ್ಲಿದ್ದರು? ಈಗ ಎಲ್ಲಿ ತಲುಪಿದ್ದಾರೆ ಎಂದು ಹೇಳಿರುವುದಲ್ಲದೇ, ನೀವು ಹಿಂದೆ ಏನು ಆಗಿದ್ರಿ, ಈಗೇನು ಆಗಿದ್ದೀರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ. ನೀವು ಹತಾಶೆಯ ಮನೋಭಾವನೆಯನ್ನು ವ್ಯಕ್ತಪಡಿಸಿದ್ದೀರಿ. ಪ್ರಮೋದ್ ಮುತಾಲಿಕ್ ಹಣ ಮಾಡುವವನಲ್ಲ, ಇಂತಹ ಸುಳ್ಳು ಆರೋಪ ನಿಮಗೆ ಶೋಭೆ ತರೋದಿಲ್ಲ ಎಂದು ಕಿಡಿಕಾರಿದ್ದಾರೆ.
'ಅಸಲಿ ಹಿಂದುತ್ವ ತೋರಿಸಿಕೊಡುತ್ತೇನೆ'
ನಾನು ಚುನಾವಣಾ ಪ್ರಚಾರ ಮಾಡುತ್ತಿರುವ ಕಾರ್ಯಕರ್ತರ ಓಡಾಟ, ಊಟ ತಿಂಡಿ ಪ್ರವಾಸಕ್ಕೆ ನೂರು ರೂಪಾಯಿ ಕೇಳಿದ್ದೇನೆ ಎಂದಿರುವ ಪ್ರಮೋದ್ ಮುತಾಲಿಕ್, ಕಾರ್ಕಳದ 40 ಹಳ್ಳಿಗಳನ್ನು ತಲುಪಲು ನಾನೊಬ್ಬನೇ ಪಾದಯಾತ್ರೆ ಮಾಡಲು ಸಾಧ್ಯವಿಲ್ಲ. ಡೋಂಗಿ ಹಿಂದೂವಾದ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ನಾನು ಬಂದಿದ್ದೇನೆ. ಅಸಲಿ ಹಿಂದುತ್ವ ತೋರಿಸಿ ಕೊಡಲು ಕಾರ್ಕಳಕ್ಕೆ ಬಂದಿದ್ದೇನೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
'ನಾನು ಮತದ ಜೊತೆ ನೂರು ರೂಪಾಯಿ ಕೇಳುತ್ತಿದ್ದೇನೆ'
ಇನ್ನು ಮತದ ಜೊತೆಗೆ ಮತದಾರರಿಂದ ನೂರು ರೂಪಾಯಿ ಕೇಳುತ್ತಿದ್ದೇನೆ ಎಂದು ಹೇಳಿರುವ ಪ್ರಮೋದ್ ಮುತಾಲಿಕ್, ನಾನು ನಿಮ್ಮ ತರ ಆಸ್ತಿ, ಬ್ಯಾಂಕ್ ಬ್ಯಾಲೆನ್ಸ್, ಬೇನಾಮಿ ಜಮೀನು ಮಾಡಿದ್ದರೆ ಹಣ ಕೇಳುತ್ತಿರಲಿಲ್ಲ. ನನ್ನತ್ರ ಏನೂ ಇಲ್ಲ, ನಾನು ಜನರಿಂದ ಹಣ ಕೇಳುತ್ತಿದ್ದೇನೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ