ಗದಗ: ಕಳೆದ ವರ್ಷ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Praveen Nettar Wife) ಪತ್ನಿಯನ್ನು ಗುತ್ತಿಗೆ ಕೆಲಸದಿಂದ ವಜಾಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ (Pramod Mutalik) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರಮೋದ್ ಮುತಾಲಿಕ್, ಪ್ರವೀಣ್ ನೆಟ್ಟಾರು ಪತ್ನಿಗೆ ಬಿಜೆಪಿ ಸರ್ಕಾರ ಗುತ್ತಿಗೆ ಆಧಾರದ ಮೇಲೆ ನೌಕರಿ ಕೊಟ್ಟಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣವೇ ಕೆಲಸದಿಂದ ವಜಾ ಮಾಡಿದೆ. ಇದು ಅಮಾನವೀಯ, ಅಮಾನುಷ ಕೃತ್ಯ ಅಂತ ಕಿಡಿಕಾರಿದರು. 150 ಜನ್ರನ್ನು ತೆಗೆದಿದ್ದೇವೆ ಅದರ ಜೊತೆಗೆ ಪ್ರವೀಣ್ ನೆಟ್ಟಾರು ಪತ್ನಿಯನ್ನ ತೆಗೆದಿದ್ದೇವೆ ಅನ್ನೋದು ಸಮರ್ಥ ಹೇಳಿಕೆ ಅಲ್ಲ ಎಂದ ಮುತಾಲಿಕ್, ಅವಳ ಕೆಲಸ ರದ್ದು ಮಾಡಿದ್ದು ಸೇಡು, ದ್ವೇಷದ ಕೃತ್ಯ ಅಂತ ಕಿಡಿಕಾರಿದರು.
ಇದನ್ನೂ ಓದಿ: Praveen Nettar Wife: ಸರ್ಕಾರ ಬದಲಾದ ಬೆನ್ನಲ್ಲೇ ಪ್ರವೀಣ್ ನೆಟ್ಟಾರ್ ಪತ್ನಿಗೆ ನೀಡಿದ್ದ ಉದ್ಯೋಗವೂ ರದ್ದು!
ದೇಶ ಭಕ್ತ ಸಂಘಟನೆ ಭಜರಂಗದಳ
ಇನ್ನು, ದ್ವೇಷ ,ಸೇಡಿನ ಕೃತ್ಯ ಮಾಡಿನೇ ಕೇಂದ್ರದಲ್ಲಿ ನೀವು ಧೂಳಿಪಟ ಆಗಿದ್ದೀರಿ ಎಂದ ಮುತಾಲಿಕ್, ಭಜರಂಗದಳ ಬ್ಯಾನ್ ಮಾಡುತ್ತೇವೆ ಅಂತಾ ಹೇಳುತ್ತಿದ್ದಾರೆ. ಭಜರಂಗದಳ ಏನು ದ್ರೋಹ ಮಾಡಿದೆ? ಕೊಲೆ, ರೇಪ್, ಖೋಟಾ ನೋಟು ಪ್ರಿಂಟ್ ಮಾಡಿದೇಯಾ? ನಿಮ್ಮ ಹಾಗೆ ಭ್ರಷ್ಟ ವ್ಯವಸ್ಥೆಯಲ್ಲಿ ತೊಡಗಿಕೊಂಡಿದೆಯಾ.? ದೇಶ ಭಕ್ತ ಸಂಘಟನೆ ಭಜರಂಗದಳ. ಮುಸ್ಲಿಂ ತುಷ್ಟೀಕರಣ, ಮುಸ್ಲಿಮರು ಒಟ್ಟಾಗಿ ವೋಟ್ ಹಾಕಿದ್ದರಿಂದ ತಲೆಯ ಮೇಲೆ ಹೊತ್ತುಕೊಂಡು ಇಟ್ಟಿದ್ದೀರಲ್ಲ. ನಾಳೆ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿದರು.
ಇನ್ನು ಸಮಾಜದಲ್ಲಿ ಶಾಂತಿ ಕದಡಿದ್ರೆ ಬಾಬಾ ಸಾಹೇಬರ ಸಂವಿಧಾನ ಶಕ್ತಿ ತೋರಿಸಬೇಕಾಗುತ್ತೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಎಚ್ಚರಿಕೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಪ್ರಮೋದ್ ಮುತಾಲಿಕ್, ಇದು ಎಲ್ಲರೂ ಹೇಳುವಂಥ ಮಾತು. ಯಾರೂ ಕೂಡ ಶಾಂತಿ ಕದಡುವ ಕೆಲಸ ಮಾಡಲೇಬಾರದು. ಸಂವಿಧಾನ ಬದ್ಧವಾಗಿ, ಪ್ರಜಾಪ್ರಭುತ್ವದ ಆಧಾರದಲ್ಲಿ ಕಾನೂನ ಬದ್ಧ ಪ್ರಕ್ರಿಯೆ ಮಾಡಬೇಕು. ಶ್ರೀರಾಮಸೇನೆ, ವಿಎಚ್.ಪಿ, ಭಜರಂಗದಳ ಕಾನೂನ ಬಾಹಿರ ಯಾವುದೇ ಕೆಲಸ ಮಾಡಿಲ್ಲ ಮಾಡುವುದೂ ಇಲ್ಲ. ಶಾಂತಿ ಕದಡುವ ಅನಾವಶ್ಯಕ ಕೆಲಸ ಯಾವುದೂ ಮಾಡುವುದಿಲ್ಲ ಎಂದರು.
ಇದನ್ನೂ ಓದಿ: Nalin Kumar Kateel: ಪ್ರವೀಣ್ ನೆಟ್ಟಾರ್ ಪತ್ನಿಗೆ ಅನುಕಂಪದ ಆಧಾರದ ಮೇಲೆ ಮತ್ತೆ ಉದ್ಯೋಗ ನೀಡಿ: ಕಟೀಲ್ ಆಗ್ರಹ
ದೇಶದ್ರೋಹಿ ಚಟವಟಿಕೆಗೆ ಅವಕಾಶ ಕೊಡಬಾರದು.
ಗೋಹತ್ಯೆ ನಿಷೇಧ ಇದ್ರೂ ಕಸಾಯಿಖಾನೆ ಗೋವುಗಳು ಹೋಗ್ತಾಯಿವೆ. ಸರ್ಕಾರಕ್ಕೆ ಗೊತ್ತು, ಪೊಲೀಸ್ ಇಲಾಖೆಗೂ ಗೊತ್ತು, ಕಾಂಗ್ರೆಸ್‌ನವರಿಗೂ ಗೊತ್ತು ಎಂದ ಪ್ರಮೋದ್ ಮುತಾಲಿಕ್, ಅದನ್ನು ನಿಲ್ಲಿಸದಿದ್ರೆ ಹೋರಾಟ ಮಾಡಬೇಕಾಗುತ್ತೆ. ಅಲ್ಲಿ ಸಂಘರ್ಷ ಆದ್ರೆ ಸರ್ಕಾರ, ಪೊಲೀಸ್ ಇಲಾಖೆಯೇ ಕಾರಣ. ಅಜಾನ್, ಮತಾಂತರ ತಡೆಯದಿದ್ರೆ ನೀವು ಕಾರಣ. ದೇಶದ್ರೋಹಿ ಚಟವಟಿಕೆಗೆ ಅವಕಾಶ ಕೊಡಬಾರದು. ಕೇಂದ್ರ ಸರ್ಕಾರ ಪಿಎಫ್ಐ ಬ್ಯಾನ್ ಮಾಡಿದೆ. 24 ಕೊಲೆ ಕೇಸ್ ಗಳಲ್ಲಿ 13 ಕೊಲೆಯಲ್ಲಿ ಪಿಎಫ್ಐ, ಎಸ್ ಡಿಪಿಐ ಹೆಸರಿದೆ. ಇದು ವಿರೋಧಿಸಿ ಪ್ರತಿಭಟನೆ ಮಾಡಿದಾಗ ಸಂಘರ್ಷ ಆದ್ರೆ ಅದಕ್ಕೆ ಕಾರಣ ನೀವು ಎಂದು ಸಚಿವ ಪ್ರಿಯಾಂಕ್ ಖರ್ಗೆಗೆ ತಿರುಗೇಟು ಕೊಟ್ಟರು.
ಕಾಂಗ್ರೆಸ್ ಸರ್ಕಾರಕ್ಕೆ ಶುಭ ಹಾರೈಸಿದ ಮುತಾಲಿಕ್
ಕಾಂಗ್ರೆಸ್ ಬಹುಮತದಿಂದ ಸರ್ಕಾರ, ಮಂತ್ರಿ ಮಂಡಲ ರಚನೆ ಮಾಡಿದೆ. ನಾನು ಕಾಂಗ್ರೆಸ್ ಸರ್ಕಾರಕ್ಕೆ ಶುಭ ಹಾರೈಸುತ್ತೇನೆ ಎಂದ ಮುತಾಲಿಕ್, ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಒಳ್ಳೆಯ ಆಡಳಿತವನ್ನ ನೀಡಬೇಕು. ಭ್ರಷ್ಟಾಚಾರ ರಹಿತವಾದಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದರಲ್ಲದೇ, ಭ್ರಷ್ಟಾಚಾರದ ಮೂಲವೇ ಕಾಂಗ್ರೆಸ್ಸಿಗರು. ಆ ಭ್ರಷ್ಟಾಚಾರ ಪ್ರವಾಹದಲ್ಲಿ ಈಡೀ ರಾಜ್ಯ ಕೊಚ್ಚಿಕೊಂಡು ಹೋಗುತ್ತಿದೆ. ಎಲ್ಲಾ ಪಕ್ಷಗಳು ಭ್ರಷ್ಟಾಚಾರದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿವೆ. ಕಾಂಗ್ರೆಸ್ ಬಿಜೆಪಿಯ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿ ಗೆಲುವು ಸಾಧಿಸಿದೆ. ಭ್ರಷ್ಟಾಚಾರ ರಹಿತ ಆಡಳಿತವನ್ನ ಕಾಂಗ್ರೆಸ್ ಪಕ್ಷ ನೀಡಬೇಕು ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ