ಶೃಂಗೇರಿ ಸಾಹಿತ್ಯ ಸಮ್ಮೇಳನ ವಿವಾದ; ತೀವ್ರ ವಿರೋಧದ ನಡುವೆ ಇಂದಿನ ಕಾರ್ಯಕ್ರಮ ರದ್ದು

ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನಾಗಿ ಸಾಹಿತಿ ಕಲ್ಕುಳಿ ವಿಠ್ಠಲ್ ಹೆಗ್ಡೆ ಯವರನ್ನು ಆಯ್ಕೆ ಮಾಡಿದ್ದಕ್ಕೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.

news18-kannada
Updated:January 11, 2020, 8:58 AM IST
ಶೃಂಗೇರಿ ಸಾಹಿತ್ಯ ಸಮ್ಮೇಳನ ವಿವಾದ; ತೀವ್ರ ವಿರೋಧದ ನಡುವೆ ಇಂದಿನ ಕಾರ್ಯಕ್ರಮ ರದ್ದು
ಶೃಂಗೇರಿ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕಲ್ಕುಳಿ ವಿಠ್ಠಲ್ ಹೆಗ್ಡೆ ಅವರನ್ನು ಶುಕ್ರವಾರ ಸನ್ಮಾನಿಸಿದ ಸಂದರ್ಭ
  • Share this:
ಚಿಕ್ಕಮಗಳೂರು (ಜ.11): ಭಾರೀ ವಿವಾದಕ್ಕೆ ಕಾರಣವಾಗಿದ್ದ ಚಿಕ್ಕಮಗಳೂರಿನ ಶೃಂಗೇರಿ ಸಾಹಿತ್ಯ ಸಮ್ಮೇಳನದ ಇಂದಿನ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಸಮ್ಮೇಳನಾಧ್ಯಕ್ಷರ ಆಯ್ಕೆಯನ್ನು ವಿರೋಧಿಸಿ ಸಾಹಿತ್ಯ ಸಮ್ಮೇಳನದ ಮೊದಲ ದಿನವಾದ ಶುಕ್ರವಾರ ಭಾರೀ ಪ್ರತಿಭಟನೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವ ಸಲುವಾಗಿ ಹಾಗೂ ಇಂದಿನ ಸಮ್ಮೇಳನದ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನೀಡದ ಕಾರಣದಿಂದ ಸಮ್ಮೇಳನವನ್ನು ಮುಂದೂಡಲಾಗಿದೆ.

ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ನಡೆಯುತ್ತಿದ್ದ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನಾಗಿ ಸಾಹಿತಿ ಕಲ್ಕುಳಿ ವಿಠಲ ಹೆಗ್ಡೆಯವರನ್ನು ಆಯ್ಕೆ ಮಾಡಿದ್ದಕ್ಕೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಕೂಡ ಕಲ್ಕುಳಿ ವಿಠಲ ಹೆಗ್ಡೆ ನಕ್ಸಲ್ ಹಿನ್ನೆಲೆಯನ್ನು ಹೊಂದಿದ್ದಾರೆ ಎಂದು ಆರೋಪಿಸುವ ಮೂಲಕ ವಿರೋಧ ವ್ಯಕ್ತಪಡಿಸಿದ್ದರು. ಈ ನಡುವೆ ಸಮ್ಮೇಳಾನಾಧ್ಯಕ್ಷರನ್ನು ಬದಲಾಯಿಸಲು ಸಂಘಟಕರು ಸಮ್ಮತಿ ಸೂಚಿಸದಿದ್ದಾಗ ಎರಡು ದಿನಗಳ ಸಾಹಿತ್ಯ ಸಮ್ಮೇಳನಕ್ಕೆ ನೀಡಬೇಕಾಗಿದ್ದ ಅನುದಾನವನ್ನು ರದ್ದು ಮಾಡಲಾಗಿತ್ತು.

ಸಚಿವ ಸಿ.ಟಿ. ರವಿ ನಡೆಗೆ ಕನ್ನಡಪರ ಹೋರಾಟಗರಾರು ಹಾಗೂ ಸಾಹಿತಿಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ನಿನ್ನೆ ನಡೆದಿದ್ದ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ಆಯ್ಕೆ ವಿರೋಧಿಸಿ ಹಿಂದೂಪರ ಸಂಘಟನೆಗಳು ಶೃಂಗೇರಿ ಬಂದ್‌ ನಡೆಸಿದ್ದವು. ಬಂದ್ ನಡುವೆಯೂ ಶೃಂಗೇರಿಯಲ್ಲಿ ಕಲ್ಕುಳಿ ವಿಠಲ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಿತು.

ಇದನ್ನೂ ಓದಿ: M Chidananda Murthy Passed Away: ಹಿರಿಯ ಸಾಹಿತಿ, ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಇನ್ನಿಲ್ಲ

ಸಾಹಿತ್ಯ ಸಮ್ಮೇಳನವನ್ನು ವಿರೋಧಿಸಿ ನಡೆದ ಹಿಂದೂಪರ ಸಂಘಟನೆಗಳು ಮತ್ತು ನಕ್ಸಲ್ ವಿರೋಧಿ ಸಂಘಟನೆಗಳ ಪ್ರತಿಭಟನೆ ವೇಳೆ ಶೃಂಗೇರಿಯಲ್ಲಿ 15 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಸಮ್ಮೇಳನಕ್ಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶೃಂಗೇರಿಯಲ್ಲಿ ಬಿಗು ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದಿನ ಸಮ್ಮೇಳನಕ್ಕೆ ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದರು. ಅನುಮತಿ ಪಡೆಯದೆ ಧ್ವನಿವರ್ಧಕ ಬಳಸಿದ್ದರಿಂದ ಕಾರ್ಯಕ್ರಮ ನಿಲ್ಲಿಸುವಂತೆ ನಿನ್ನೆ ಸೂಚನೆ ನೀಡಿದ್ದ ಪೊಲೀಸರು ನೋಟಿಸ್ ಕೂಡ ನೀಡಿದ್ದರು.

ಇಂದು ನಡೆಯಬೇಕಿದ್ದ ಎರಡನೇ ದಿನದ ಗೋಷ್ಟಿ ಸೇರಿದಂತೆ ಸಮಾರೋಪ ಸಮಾರಂಭವನ್ನು ಮುಂದೂಡಲಾಗಿದೆ. ಪೊಲೀಸರ ಅನುಮತಿ ಇಲ್ಲದ ಕಾರಣ ಎರಡನೇ ದಿನದ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ಮುಂದೂಡಿದೆ. ಬಾಕಿ ಇರುವ ಸನ್ಮಾ ನ ಕಾರ್ಯಕ್ರಮವನ್ನು ಬೇರೆ ದಿನ ಮಾಡುವುದಾಗಿ ಆಯೋಜಕರು ತಿಳಿಸಿದ್ದಾರೆ.
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ