Sringeri Rape Case: ಶೃಂಗೇರಿಯ ಬಾಲಕಿ ಅತ್ಯಾಚಾರ ಪ್ರಕರಣಕ್ಕೆ ಮಹತ್ವದ ತಿರುವು; ಹೆತ್ತಮ್ಮನೇ ವಿಲನ್ ಆದಳು!

Sringeri Rape Case: ಮಲೆನಾಡನ್ನು ಬೆಚ್ಚಿ ಬೀಳಿಸಿದ್ದ ಶೃಂಗೇರಿಯ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಆಕೆಯ ಹೆತ್ತ ತಾಯಿಯೇ ಎಲ್ಲದರ ಸೂತ್ರಧಾರಳು ಎಂಬುದು ತನಿಖೆ ವೇಳೆ ಬಯಲಾಗಿದೆ. ತಾನು ಬಾಲಕಿಯ ಚಿಕ್ಕಮ್ಮ ಎಂದು ಸುಳ್ಳು ಹೇಳಿದ್ದ ತಾಯಿ ಹಣಕ್ಕಾಗಿ ಮಗಳನ್ನು ಕಾಮುಕರ ಬಳಿ ಕಳುಹಿಸುತ್ತಿದ್ದಳು.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಚಿಕ್ಕಮಗಳೂರು (ಮಾ. 24): ಚಿಕ್ಕಮಗಳೂರಿನ ಶೃಂಗೇರಿಯಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ 5 ತಿಂಗಳು ನಿರಂತರ ಅತ್ಯಾಚಾರ ನಡೆಸಿದ್ದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಜನವರಿ 30ರಂದು ನಡೆದಿದ್ದ ಈ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಬಾಲಕಿಯ ಚಿಕ್ಕಮ್ಮನ ಸಹಕಾರದಿಂದ 17 ಜನರು 5 ತಿಂಗಳ ಕಾಲ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಬಾಲಕಿಯ ಚಿಕ್ಕಮ್ಮ ಸೇರಿದಂತೆ ಎಲ್ಲ ಆರೋಪಿಗಳನ್ನೂ ಬಂಧಿಸಲಾಗಿತ್ತು. ಆದರೆ, ಆಕೆ ಆ ಅಪ್ರಾಪ್ತೆಯ ಚಿಕ್ಕಮ್ಮ ಅಲ್ಲ, ಹೆತ್ತ ಅಮ್ಮ ಎಂಬುದು ಈಗ ಬಯಲಾಗಿದೆ! ಈ ಮೂಲಕ ಕೆಟ್ಟ ತಾಯಿ ಇರಲಾರಳು ಎಂಬ ಗಾದೆಯನ್ನು ಈ ಮಹಾತಾಯಿ ಸುಳ್ಳಾಗಿಸಿದ್ದಾಳೆ.

  ಹೆತ್ತ ತಾಯಿಯೇ ತನ್ನ 15 ವರ್ಷದ ಮಗಳನ್ನು ಬಳಸಿಕೊಂಡು ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಳು. ತನಗೆ ಮದುವೆಯಾಗಿರುವ ವಿಚಾರ ಗೊತ್ತಾಗಬಾರದು ಎಂಬ ಕಾರಣಕ್ಕೆ ಸುತ್ತಲಿನವರಿಗೆ ಅಕ್ಕನ ಮಗಳು ಎಂದು ಹೇಳಿಕೊಂಡು ಆ ಬಾಲಕಿಯನ್ನು ಸಾಕುತ್ತಿದ್ದಳು. ಹೆತ್ತ ತಾಯಿಯೇ ತನ್ನ ಮಗಳ ಮೇಲೆ ಅತ್ಯಾಚಾರ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾಳೆ ಎಂಬ ವಿಷಯ ಬಯಲಾಗುತ್ತಿದ್ದಂತೆ ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

  ಶೃಂಗೇರಿ ಅತ್ಯಾಚಾರ ಪ್ರಕರಣದಲ್ಲಿ ಬಾಲಕಿಯ ತಾಯಿಯೇ ಈ ಹೀನಕೃತ್ಯದ ಸೂತ್ರಧಾರಳು ಎಂಬ ವಿಷಯ ಬಯಲಾಗಿದೆ. ತನಿಖೆಯ ಮೊದಲು ಬಾಲಕಿಗೆ ತಾನು ಚಿಕ್ಕಮ್ಮ ಎಂದು ಹೇಳಿಕೊಂಡಿದ್ದ ಮಹಿಳೆಯ ವಿಚಾರಣೆ ನಡೆಸಿದಾಗ ತಾನು ಆ ಬಾಲಕಿಯ ಚಿಕ್ಕಮ್ಮ ಅಲ್ಲ, ಹೆತ್ತಮ್ಮ ಎಂಬ ಸತ್ಯವನ್ನು ಒಪ್ಪಿಕೊಂಡಿದ್ದಾಳೆ.

  ಇದನ್ನೂ ಓದಿ: Sringeri: ಕಾಮುಕರ ಅಟ್ಟಹಾಸಕ್ಕೆ ನಲುಗಿದ ಶೃಂಗೇರಿಯ ಅಪ್ರಾಪ್ತೆ; ಅತ್ಯಾಚಾರದ ವಿರುದ್ಧ ಮಲೆನಾಡಲ್ಲಿ ಆಕ್ರೋಶ

  ಉತ್ತರ ಕರ್ನಾಟಕದ ಮಹಿಳೆ ಶೃಂಗೇರಿಗೆ ಕೆಲಸಕ್ಕೆ ಬಂದು ಮತ್ತೊಬ್ಬನ ಜೊತೆ ಮದುವೆಯಾಗಿದ್ದಳು. ಈ ವೇಳೆ ತನ್ನ ಜೊತೆಗಿದ್ದ ಬಾಲಕಿಯನ್ನು ಶೃಂಗೇರಿಯಲ್ಲಿ ತನ್ನ ಅಕ್ಕನ ಮಗಳು ಎಂದು ಹೇಳಿಕೊಂಡು ಜೀವನ ನಡೆಸುತ್ತಿದ್ದಳು. ಕೆಲವು ವರ್ಷಗಳ ನಂತರ ಎರಡನೇ ಗಂಡನಿಂದಲೂ ಆಕೆ ದೂರವಾಗಿದ್ದಳು. ಶೃಂಗೇರಿಯಲ್ಲೇ ಮಗಳೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದಳು. ಇದೇ ಸಮಯದಲ್ಲಿ ಮಗಳನ್ನು ಹಣದ ಆಸೆಗೆ ಅನೈತಿಕ ದಾರಿಗೆ ಎಳೆದು ನಿರಂತರ ಆತ್ಯಾಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಳು.

  ಮಲೆನಾಡನ್ನು ಬೆಚ್ಚಿ ಬೀಳಿಸಿದ್ದ ಶೃಂಗೇರಿ ಅತ್ಯಾಚಾರ ಪ್ರಕರಣದ ಸಂಬಂಧ ಈವರೆಗೂ ಒಟ್ಟು 32 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಮಣ್ಯ ಶೃಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ನೀಡಿದ ದೂರಿನ ಮೇರೆಗೆ ಜ.30ರಂದು ಚಿಕ್ಕಮಗಳೂರಿನ ಶೃಂಗೇರಿ ಪೊಲೀಸ್ ಠಾಣೆಯಲ್ಲಿ 17ಕ್ಕೂ ಹೆಚ್ಚು ಮಂದಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಎಫ್ ಐಆರ್ ದಾಖಲಿಸಿದ್ದರು.

  3 ವರ್ಷದ ಹಿಂದೆ ಬಾಲಕಿಯ ತಾಯಿ ತೀರಿಕೊಂಡ ನಂತರ ಆಕೆ ತನ್ನ ಚಿಕ್ಕಮ್ಮನ ಜೊತೆ ವಾಸವಾಗಿದ್ದಳು ಎನ್ನಲಾಗಿತ್ತು. ಆದರೆ, ಆಕೆಯ ತಾಯಿ ಸಾವನ್ನಪ್ಪಿಲ್ಲ. ಆ ರೀತಿ ಸುಳ್ಳು ಹೇಳಿ ತನ್ನನ್ನು ಆಕೆಯ ಚಿಕ್ಕಮ್ಮ ಎಂದು ಹೇಳಿಕೊಂಡು ತಾಯಿಯೇ ತನ್ನ ಮಗಳನ್ನು ಕಾಮುಕರ ಕೈಗೆ ಒಪ್ಪಿಸುತ್ತಿದ್ದಳು.

  (ವರದಿ: ವೀರೇಶ್ ಹೊಸೂರ್)
  Published by:Sushma Chakre
  First published: