ಬಾಗಲಕೋಟೆ(ಜು.29): ಆಪರೇಷನ್ ಕಮಲ ಎಂದರೇನು ನನಗೆ ಗೊತ್ತಿಲ್ಲಾ. ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದೇನೆ. ಇದಕ್ಕೆ ನೀವೂ ಆಪರೇಷನ್ ಕಮಲ, ದುಡ್ಡು ತಂಗಡ್ರು ಎನ್ನುವುದಾದರೇ ನಾನೇನು ಮಾಡೋಕ್ಕಾಗಲ್ಲ. ನನ್ನ ಮಗನ ಮೇಲೆ ಪ್ರಮಾಣ ಮಾಡಿ ಹೇಳ್ತೇನೆ ನಾನು ಒಂದೇ ಒಂದು ರೂಪಾಯಿ ಕೂಡ ತೆಗೆದುಕೊಂಡಿಲ್ಲ ಎಂದು ಅಲ್ಪಸಂಖ್ಯಾತ, ಜವಳಿ, ಕೈಮಗ್ಗ ಇಲಾಖೆ ಸಚಿವ ಶ್ರೀಮಂತ ಪಾಟೀಲ್ ಹೇಳಿದ್ದಾರೆ.
ಇಂದು ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸಚಿವ ಶ್ರೀಮಂತ ಪಾಟೀಲ್, ಆಪರೇಷನ್ ಕಮಲ ಅಂದ್ರೇನು. ಇದಕ್ಕೆ ಎಷ್ಟು ದುಡ್ಡು ಖರ್ಚು ಮಾಡಿದ್ರು ನನಗೆ ಗೊತ್ತೇ ಇಲ್ಲ. ಹೀಗೆ ನನ್ನ ಬಗ್ಗೆ ಏನೋ ಹೇಳಿದ್ರೆ ನಾನೇನು ಮಾಡಲಿಕ್ಕೆ ಆಗೋದಿಲ್ಲ ಎಂದರು.
ಮೆಡಿಕಲ್ ಕಿಟ್ ಖರೀದಿಯಲ್ಲಿ ಹಗರಣ ಆಗಿದೆ ಎನ್ನುವುದು ರಾಜಕಾರಣಿಗಳಿಗೆ ಹೇಗೆ ಗೊತ್ತಾಗುತ್ತದೆ. ಟೆಕ್ನಿಕಲ್ ವಸ್ತುಗಳಿರುತ್ತವೆ. ಈ ವೈರಸ್ ಬೇರೆ ಹೊಸದು. ಮೆಡಿಕಲ್ ಕಿಟ್ ಖರೀದಿ ಬಗ್ಗೆ ಎಕ್ಸ್ಪರ್ಟ್ಸ್ ಹೇಳಬೇಕು. ಇಲ್ಲಿ ಯಾವುದೇ ಮೆಡಿಕಲ್ ಕಿಟ್ ಹಗರಣ ನಡೆದಿಲ್ಲ ಎಂದು ಶ್ರೀಮಂತ ಪಾಟೀಲ್.
ಇನ್ನು, ಪಠ್ಯದಿಂದ ಟಿಪ್ಪು ಸುಲ್ತಾನ್ ವಿಚಾರ ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ ಯಾಕೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಪಾಟೀಲ್ ಉತ್ತರಿಸಿದರು. ಸಿಎಂ ಜತೆಗೆ ನಾನು ಚರ್ಚೆ ಮಾಡುತ್ತೇನೆ. ನಮ್ಮ ಪಕ್ಷದಲ್ಲಿ ಜಾತಿ, ಧರ್ಮ ಬೇಧ ಮಾಡುವುದಿಲ್ಲ. ನಮ್ಮಲ್ಲಿ ಆ ರೀತಿ ಏನು ಇಲ್ಲ. ಇದು ಸೆನ್ಸಿಟಿವ್ ಆಗಿರೋದ್ರಿಂದ ಸಿಎಂ ಜೊತೆಗೆ ಮಾತನಾಡುತ್ತೇನೆ ಎಂದರು.
ಲಕ್ಷ್ಮಣ್ ಸವದಿ ಸಿಎಂ ಆಗುವಷ್ಟು ಪ್ರಬಲರೇ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀಮಂತ ಪಾಟೀಲ್, ರಾಜಕೀಯದಲ್ಲಿ ಯಾರು ಪ್ರಬಲರೋ ಅವರಿಗೆ ಸಿಎಂ ಪಟ್ಟ ಸಿಗುತ್ತೇ. ಸಿಎಂ ಆಗುವ ಕ್ರೆಟಿರಿಯಾ ಏನು ಅನ್ನೋದು ನನಗೆ ಗೊತ್ತಿಲ್ಲಾ. ನಾನು ಇನ್ನೂ ಆ ಲೇವಲ್ಗೆ ಬೆಳೆದಿಲ್ಲ. ಸಿಎಂ ಬಿಎಸ್ ಯಡಿಯೂರಪ್ಪ ಬದಲಾವಣೆ ಮಾಡುತ್ತಾರೆ ಎಂಬ ವಿಚಾರ ನಾನು ಮಾಧ್ಯಮದಲ್ಲೇ ನೋಡಿದ್ದು ಎಂದೇಳಿದರು.
ಇನ್ನು, ಸಿಎಂ ಬದಲಾವಣೆ ಎನ್ನುವುದು ಬಿಜೆಪಿಯಲ್ಲಿಲ್ಲ. ನಾನು ಹೋಗಿದ್ದೇನೆ, ಸಿಎಂ ಭೇಟಿಯಾಗಿದ್ದೇನೆ. ಇದು ಆಂತರಿಕ ವಿಚಾರ ಹೌದಾದರೂ ಹೀಗೆ ಆಗುವುದಿಲ್ಲ ಎಂದು ತಿಳಿಸಿದರು.
ಲಕ್ಷ್ಮಣ ಸವದಿಗೆ ದೆಹಲಿಯಲ್ಲಿ ಎಷ್ಟೋ ಕೆಲಸವಿರುತ್ತದೆ. ನಾವು ಕೂಡಾ ಹೋಗ್ತೇವೆ. ನಮ್ಮ ಕೆಲಸ ಮಾಡಿಕೊಂಡು ಬರ್ತಿವಿ. ಇಲಾಖೆ ಕೆಲಸದ ಬಗ್ಗೆ ಹೋಗಿರುತ್ತೇವೆ. ಹಾಗೆಯೇ ಅವರು ಹೋಗಿರಬೇಕು ಎಂದರು.
ಖಾತೆ ಬದಲಾವಣೆ ಹೈಕಮಾಂಡ್ ಸಿಎಂ ನಿರ್ಧಾರ. ರಾಜ್ಯಕ್ಕೆ ಯಾರನ್ನು ಮಾಡಿದ್ರೆ ಉಪಯೋಗ ಆಗುತ್ತೆ. ಅದನ್ನು ಮಾಡ್ತಾರೆ. ನನಗೆ ನನ್ನ ಖಾತೆ ಬಗ್ಗೆ ತೃಪ್ತಿಯಿದೆ. ಟೆಕ್ಸ್ಟೈಲ್ ಇಂಡಸ್ಟ್ರಿ ರಾಜ್ಯದಲ್ಲಿ ಬೇಕಾದಷ್ಟು ಬೆಳೆಸಬಹುದು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ