ಅಂಜನಾದ್ರಿಯಲ್ಲಿ ಹನುಮಮಾಲಾಧಾರಿಗಳಿಗೆ ನಿರ್ಬಂಧ; ತಾಕತ್ತಿದ್ದರೆ ತಡೆಯಿರಿ ಎಂದು ಶ್ರೀರಾಮಚಂದ್ರ ಸೇನೆ ಸವಾಲು

ಡಿ. 16ರಂದು ಕೊಪ್ಪಳದ ಆನೆಗೊಂದಿಯ ಅಂಜನಾದ್ರಿ ಪ್ರವೇಶಿಸದಂತೆ ಹನುಮ ಮಾಲಾಧಾರಿಗಳನ್ನ ನಿರ್ಬಂಧಿಸಿದ ಜಿಲ್ಲಾಡಳಿತದ ಕ್ರಮಕ್ಕೆ ಶ್ರೀರಾಮಚಂದ್ರ ಸೇನೆ ಆಕ್ರೋಶ ವ್ಯಕ್ತಪಡಿಸಿದೆ. ಅಂದು ಮಾಲಾಧಾರಿಗಳನ್ನ ತಾಕತ್ತಿದ್ದರೆ ತಡೆಯಿರಿ ಎಂದು ಸವಾಲು ಹಾಕಿದೆ.

ಅಂಜನಾದ್ರಿಯಲ್ಲಿ ಹನುಮ ಮಾಲಾಧಾರಿಗಳು

ಅಂಜನಾದ್ರಿಯಲ್ಲಿ ಹನುಮ ಮಾಲಾಧಾರಿಗಳು

  • Share this:
ಕೊಪ್ಪಳ: ಈ ತಿಂಗಳ 16 ರಂದು ನಡೆಯಲಿದ್ದ ಹನುಮನ ಮಾಲಾ ವಿಸರ್ಜನೆ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಸಾಂಪ್ರದಾಯಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಬೇಕು, ಆದರೆ ಅದ್ದೂರಿಯಾಗಿ ಸಾವಿರಾರು ಜನ ಸೇರಬಾರದು ಎಂದು ಹನುಮ ಮಾಲಾ ವಿಸರ್ಜನೆ ಕಾರ್ಯಕ್ರವನ್ನು ನಿರ್ಬಂಧಿಸಿ ಕೊಪ್ಪಳ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಹನುಮ ಮಾಲಾಧಾರಿಗಳಲ್ಲಿ ನಿರಾಸೆ ಮೂಡಿಸಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಶ್ರೀರಾಮಚಂದ್ರ ಸೇನೆಯ ಬೆಳಗಾವಿ ವಿಭಾಗೀಯ ಸಂಚಾಲಕರು, ನಾವು ಅಂಜನಾದ್ರಿ ಹತ್ತುತ್ತೇವೆ, ಏನು ಮಾಡ್ತೀರಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಕೊಪ್ಪಳ ಜಿಲ್ಲೆಯ ಆನೇಗೊಂದಿಯ ಬಳಿಯಲ್ಲಿರುವ ಅಂಜನಾದ್ರಿ ಪುರಾಣದ ಹನುಮಂತನ ಜನ್ಮಸ್ಥಾನ ಎಂಬ ನಂಬಿಕೆ ಇದೆ. ಇಲ್ಲಿ ಪ್ರತಿ ವರ್ಷ ಹನುಮ ಮಾಲಾ ವಿಸರ್ಜನೆ ನಡೆಯುತ್ತಿದೆ. ರಾಜ್ಯದಲ್ಲಿ ಹನುಮ ಭಕ್ತರು ತಿಂಗಳ ಕಾಲ ಹನುಮ ಮಾಲೆಯನ್ನು ಧರಿಸಿ ವ್ರತವನ್ನು ಆಚರಿಸುತ್ತಾರೆ. ಅಯ್ಯಪ್ಪ ಸ್ವಾಮಿ ವ್ರತದ ಮಾದರಿಯಲ್ಲಿಯೇ ಹನುಮ ಮಾಲಾಧಾರಿಗಳು ವೃತವನ್ನಾಚರಿಸುತ್ತಾರೆ. 41 ದಿನ ಹನುಮದೃತ ಆಚರಣೆ ಮಾಡುವವರು ಆಂಜನೇಯನ ಜನ್ಮ ಸ್ಥಳವಾಗಿರುವ ಅಂಜನಾದ್ರಿಯಲ್ಲಿ ಮಾಲೆಯನ್ನು ವಿಸರ್ಜಿಸುತ್ತಾರೆ.

ಈ ಸಂದರ್ಭದಲ್ಲಿ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಹನುಮ ಮಾಲಾಧಾರಿಗಳು ಆಗಮಿಸುತ್ತಾರೆ. ಮಾಲಾಧಾರಿಗಳು ಗಂಗಾವತಿಯಿಂದ ಮೆರವಣಿಗೆಯನ್ನು ನಡೆಸಿ ಅಂಜನಾದ್ರಿಯಲ್ಲಿ ವಿವಿಧ ಧಾರ್ಮಿಕ ಆಚರಣೆಯ ಮೂಲಕ ಮಾಲೆಯನ್ನು ವಿಸರ್ಜಿಸುತ್ತಾರೆ.

ಇದನ್ನೂ ಓದಿ: ಆಪರೇಷನ್ JDSಗೆ ಇಳಿದಿದ್ದಾರಾ ಸಿದ್ದರಾಮಯ್ಯ? ದೇವೇಗೌಡ್ರು-ಕುಮಾರಸ್ವಾಮಿಗೆ ಚೆಕ್​​ಮೆಟ್​​​ ಅಂದ್ರಾ?

ಹನುಮ ಮಾಲಾ ವಿಸರ್ಜನೆ ನಿರ್ಬಂಧ ಯಾಕೆ?

ಆದರೆ ಕೋವಿಡ್ ಕಾರಣಕ್ಕೆ ಈ ಬಾರಿಯ ಹನುಮ ಮಾಲೆ ವಿಸರ್ಜನೆಗೆ ಕೊಪ್ಪಳ ಜಿಲ್ಲಾಡಳಿತ ನಿರ್ಬಂಧ ಹಾಕಿದೆ. ರಾಜ್ಯದಲ್ಲಿ ಓಮೈಕ್ರಾನ್ ಹಾಗು ಕೊರೊನಾ ಮೂರನೆಯ ಅಲೆ ಭೀತಿಯ ಹಿನ್ನೆಲೆಯಲ್ಲಿ ಜನರು ಗುಂಪು ಕೂಡುವುದಕ್ಕೆ ನಿರ್ಬಂಧಿಸಲಾಗಿದೆ. ಈ ನಿಯಮದಂತೆ ಸಾವಿರಾರು ಜನರು ಆಗಮಿಸುವ ಹನುಮ ಮಾಲೆ ವಿಸರ್ಜನೆಗೆ ಜನರ ಸೇರುವುದನ್ನು ನಿರ್ಬಂಧಿಸಿದೆ. ಈಗಾಗಲೇ ಕೊಪ್ಪಳ ಜಿಲ್ಲಾಡಳಿತ ಸಭೆ ನಡೆಸಿ ಹನುಮ ಮಾಲೆ ಹಾಕಿಕೊಂಡ ಹೊರ ಜಿಲ್ಲೆಯವರು ಬಾರದಂತೆ ಗಂಗಾವತಿಯಿಂದ ಮೆರವಣಿಗೆ ನಡೆಸದಂತೆ ನಿರ್ಬಂಧಿಸಲಾಗಿದೆ. ಆದರೆ ಎಂದಿನಂತೆ ಕೋವಿಡ್ ನಿಯಮ ಪಾಲಿಸಿಕೊಂಡು ಅಂಜನಾದ್ರಿಯಲ್ಲಿ ಆಂಜನೇಯನ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಈ ಕುರಿತು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಹನುಮ ಮಾಲಾಧಾರಿಗಳು ತಮ್ಮ ಮಾಲೆಯನ್ನು ಸ್ಥಳೀಯವಾಗಿ ಇಲ್ಲವೇ ಮನೆಯಲ್ಲಿ ಭಕ್ತಿಯಿಂದ ವಿಸರ್ಜಿಸಬೇಕು, ಕೋವಿಡ್ ನಿಯಮ ಪಾಲನೆಗೆ ಸಹಕರಿಸಬೇಕೆಂದು ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.

ಹಿಂದೂಪರ ಸಂಘಟನೆ ಸವಾಲು: 

ಈ ಮಧ್ಯೆ ಭಾನುವಾರ ಕುಷ್ಟಗಿಯಲ್ಲಿ ಮಾತನಾಡಿದ ಶ್ರೀರಾಮಚಂದ್ರಸೇನೆಯ ಬೆಳಗಾವಿ ವಿಭಾಗೀಯ ಸಂಚಾಲಕರು, ಬೆಳಗಾವಿ, ವಿಜಯಪುರ ಹಾಗು ಬಾಗಲಕೋಟೆಯಿಂದ 3.50 ಸಾವಿರ ಹನುಮ ಮಲಾಧಾರಿಗಳು ನಾವು ಅಂಜನಾದ್ರಿ ಹತ್ತುತ್ತೇವೆ. ತಡೆಯುವಿರಾ ನೋಡೋಣ ಎಂದು ಸವಾಲು ಹಾಕಿದ್ದಾರೆ.

ರಾಜಕೀಯ ಚುನಾವಣೆ ಪ್ರಚಾರ ಹಾಗು ಜಯಗಳಿದ ಪಕ್ಷದವರು ವಿಜಯೋತ್ಸವ ಆಚರಿಸುತ್ತಾರೆ. ಆಗ ಇಲ್ಲದ ನಿರ್ಬಂಧ ದೇವಾಲಯಗಳ ಮೇಲೆ ಯಾಕೆ. ಕೋವಿಡ್ ತಡೆಯುವ ನಿಟ್ಟಿನಲ್ಲಿ ನಿಮ್ಮ ಜಿಲ್ಲೆಯಲ್ಲಿ ಚುನಾವಣೆ ನಿರ್ಬಂಧಿಸಿ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕುಂಬಳಕಾಯಿ ಕಳ್ಳ ಎಂದರೆ HDK ಹೆಗಲು ಮುಟ್ಟಿ ನೋಡಿಕೊಳ್ಳೋದು ಯಾಕೆ? Siddaramaiah ವ್ಯಂಗ್ಯ

ಒಬ್ಬ ಜಿಲ್ಲಾಧಿಕಾರಿ ಇನ್ನೊಬ್ಬ ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಲು ಬರುವುದಿಲ್ಲ. ಆದರೆ ಕೊಪ್ಪಳ ಹಾಗು ಬಳ್ಳಾರಿ ಜಿಲ್ಲಾಧಿಕಾರಿಗಳು ಬೇರೆ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ. ಬೇರೆ ಜಿಲ್ಲಾಧಿಕಾರಿಗಳಿಗೆ ಇವರು ಮನವಿ ಮಾಡಿಕೊಳ್ಳಬಹುದು ಅಷ್ಟೇ ಎಂದು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಹನುಮ ಮಾಲಾ ವಿಸರ್ಜನೆಯ ನಿರ್ಬಂಧ ಆದೇಶವು ಈಗ ವಿವಾದವಾಗಿದ್ದು ಡಿ 16 ರಂದು ಹನುಮ ಮಲಾಧಾರಿಗಳು ಏನು ಮಾಡುತ್ತಾರೆ, ಜಿಲ್ಲಾಡಳಿತ ತಡೆಯುತ್ತಾ ಕಾದು ನೋಡಬೇಕು.

ವರದಿ: ಶರಣಪ್ಪ ಬಾಚಲಾಪುರ
Published by:Vijayasarthy SN
First published: