ಬೆಂಗಳೂರು(ಡಿ. 10): ರಾಜ್ಯ ಸರ್ಕಾರ ರೂಪಿಸಿರುವ ಗೋಹತ್ಯೆ ನಿಷೇಧ ಕಾನೂನನ್ನು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸ್ವಾಗತಿಸಿದ್ದಾರೆ. ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯನ್ನು ಈಡೇರಿಸುವ ಮೂಲಕ ಬಿಜೆಪಿ ಸರ್ಕಾರ ತನ್ನ ಮಾತನ್ನು ಉಳಿಸಿಕೊಂಡಿದೆ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನ್ಯೂಸ್18 ಕನ್ನಡ ವಾಹಿನಿ ಜೊತೆ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಕಾನೂನನ್ನು ಇನ್ನಷ್ಟು ಬಿಗಿಗಿಳಿಸಬಹುದಾಗಿತ್ತು ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಕಸಾಯಿಖಾನೆಗಳನ್ನ ಹದ್ದುಬಸ್ತಿನಲ್ಲಿಡಲು ಕಾನೂನಿನಲ್ಲಿ ಒಂದು ಅಂಶ ಇಡಬೇಕಿತ್ತು. ಹಾಗೆಯೇ, ಗೋಹತ್ಯೆ ಮಾಡುವವರಿಗೆ ಜೈಲು ಶಿಕ್ಷೆಯನ್ನು ಏಳು ವರ್ಷದ ಬದಲು 10 ವರ್ಷಕ್ಕೆ ಹೆಚ್ಚಿಸಬೇಕಿತ್ತು. ಈ ಮೊದಲೇ ಇರುವ ಕಾನೂನಿನಲ್ಲಿ 3 ವರ್ಷದವರೆಗೆ ಜೈಲುಶಿಕ್ಷೆಗೆ ಅವಕಾಶ ಇದೆ. ಇದನ್ನ ಈಗ 7 ವರ್ಷಕ್ಕೆ ಹೆಚ್ಚಿಸಲಾಗಿದೆ. ಆದರೂ ಆರೋಪಿಗಳು ಜಾಮೀನು ತೆಗೆದುಕೊಳ್ಳಲು ಸಾಧ್ಯವಿದೆ. ಶಿಕ್ಷೆಯ ಅವಕಾಶವನ್ನ 10 ವರ್ಷಕ್ಕೆ ಏರಿಸಿದರೆ ಆರೋಪಿಗಳು ಜಾಮೀನು ಪಡೆಯಲು ಕಷ್ಟಸಾಧ್ಯವಾಗುತ್ತದೆ. ಹೀಗಾಗಿ ಶಿಕ್ಷೆ ಪ್ರಮಾಣದ ಅವಕಾಶವನ್ನು ಹೆಚ್ಚಿಸಬೇಕಿತ್ತು ಎಂದು ಪ್ರಮೋದ್ ಮುತಾಲಿಕ್ ಸಲಹೆ ನೀಡಿದ್ದಾರೆ.
ಗೋಹತ್ಯೆ ನಿಷೇಧ ಸಂಬಂಧ 1964ರ ಕಾನೂನು ಇದೆ. ಇದು ವರ್ಷದವರೆಗೆ ಶಿಕ್ಷೆ ನೀಡುತ್ತದೆ. ಆದರೆ, ಕಾಂಗ್ರೆಸ್ ಆಡಳಿತದಲ್ಲಿ ಗೋಕಳ್ಳರು ಮತ್ತು ಗೋರಕ್ಷಕರು ಇಬ್ಬರಿಗೂ ಶಿಕ್ಷೆ ವಿಧಿಸುವಂಥ ಕಾನೂನು ಇತ್ತು. ಗೋ ರಕ್ಷಣೆ ಮಾಡಿದವರಿಗೂ ಶಿಕ್ಷೆ ನೀಡುತ್ತಿತ್ತು ಕಾಂಗ್ರೆಸ ಸರ್ಕಾರ. ಅಲ್ಲದೆ 1964ರ ಕಾನೂನಿನಲ್ಲಿ ಬಹಳ ಲೋಪದೋಷಗಳಿದ್ದವು. ಈಗ ಹೊಸ ಕಾಯ್ದೆಯಲ್ಲಿ ಸಾಕಷ್ಟು ಕಾನೂನು ಬಿಗಿಗೊಳಿಸಲಾಗಿದೆ. ವಧೆಗಾಗಿ ಸಾಗಿಸುವ ಗೋವುಗಳಿಗೆ ಪಶುವೈದ್ಯಾಧಿಕಾರಿಯಿಂದ ಪ್ರಮಾಣಪತ್ರ ತರಬೇಕು; ಪ್ರಕರಣದಲ್ಲಿ ಕ್ರಮ ತೆಗೆದುಕೊಳ್ಳಲು ಪಿಎಸ್ಐ ಮಟ್ಟದ ಅಧಿಕಾರಿಗಳಿಗೆ ಅಧಿಕಾರ ನೀಡಿರುವುದು ಸೇರಿದಂತೆ ಹಲವು ಕಾನೂನುಗಳು ಚೆನ್ನಾಗಿವೆ ಎಂದು ಮುತಾಲಿಕ್ ಪ್ರಶಂಸೆ ಮಾಡಿದ್ದಾರೆ.
ಇದನ್ನೂ ಓದಿ: Karnataka Assembly Session: ಗೋಹತ್ಯೆ ನಿಷೇಧ ಮಸೂದೆಗೆ ವಿರೋಧ; ಕಾಂಗ್ರೆಸ್ ಶಾಸಕರಿಂದ ಸದನ ಬಹಿಷ್ಕಾರ
ರಾಜ್ಯ ಸರ್ಕಾರಗಳಿಂದ ಮಾತ್ರವೇ ಗೋಹತ್ಯೆ ಕಾನೂನು ಜಾರಿ ಸಾಧ್ಯವಿಲ್ಲ. ಕೇಂದ್ರ ಸರ್ಕಾರವೇ ಗೋಹತ್ಯೆ ನಿಷೇಧ ಕಾನೂನು ರೂಪಿಸುವುದು ಸರಿಯಾದ ಕ್ರಮ. ಇಲ್ಲದಿದ್ದರೆ ಗೋವಧೆ ಸಂಪೂರ್ಣ ನಿಯಂತ್ರಿಸಲು ಸಾಧ್ಯವಾಗದು ಎಂದು ಅವರು ನ್ಯೂಸ್18 ಕನ್ನಡ ವಾಹಿನಿಗೆ ತಿಳಿಸಿದ್ದಾರೆ.
ಗೋಹತ್ಯೆ ನಿಷೇಧ ಕಾನೂನಿನಿಂದ ಸಾವಿರಾರು ಕೋಟಿ ರೂ ಆದಾಯನಷ್ಟವಾಗುತ್ತದೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಶ್ರೀರಾಮ ಸೇನೆ ಮುಖ್ಯಸ್ಥರು, ಗೋಮೂತ್ರ ಇತ್ಯಾದಿ ಗೋ-ಉತ್ಪನ್ನಗಳ ಮೂಲಕ ಆದಾಯ ಮಾಡಬಹುದು. ಒಂದು ಲೀಟರ್ ಗೋ ಮೂತ್ರ 100 ರೂಗೆ ಮಾರಬಹುದು. ರಾಮಚಂದ್ರಾಪುರ ಮಠ ಇದನ್ನ ಪ್ರಾಯೋಗಿಕವಾಗಿ ಮಾಡಿ ತೋರಿಸಿದೆ ಎಂದಿದ್ದಾರೆ.
ಚರ್ಚೆ ಮಾಡದೇ ಗೋಹತ್ಯೆ ನಿಷೇಧ ಮಸೂದೆ ಪಾಸ್ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಮಾಡಿದ ಆರೋಪವನ್ನು ಮುತಾಲಿಕ್ ಈ ವೇಳೆ ತಳ್ಳಿಹಾಕಿದ್ದಾರೆ. ಈ ಕಾನೂನಿನ ಬಗ್ಗೆ ಚರ್ಚೆ ಮಾಡುವಂಥದ್ದೇನಿದೆ? ಗೋವು ನಮ್ಮ ತಾಯಿ. ರೈತರಿಗೆ ಗೋವು ಬಹಳ ಅಗತ್ಯ. ಇದು ಸಿದ್ದರಾಮಯ್ಯಗೆ ಅರ್ಥ ಆಗುವುದಿಲ್ಲವಾ? ಬಿಜೆಪಿಗೆ ಯಾವ ಮುಸ್ಲಿಮರೂ ವೋಟ್ ಹಾಕುವುದಿಲ್ಲ. ಏನೇ ಆದರೂ ಅವರು ಕಾಂಗ್ರೆಸ್ಗೆ ಮತ ಹಾಕುತ್ತಾರೆ. ಹೀಗಿರುವಾಗ ಸಿದ್ದರಾಮಯ್ಯ ಇನ್ನೂ ಯಾಕೆ ತುಷ್ಟೀಕರಣ ಧೋರಣೆ ತೋರುತ್ತಾರೆ. ವಿರೋಧ ಮಾಡಬೇಕೆಂದು ವಿರೋಧಿಸುವುದು ಸರಿಯಲ್ಲ ಎಂದು ಮುತಾಲಿಕ್ ಕುಟುಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ