ಬಾಗಲಕೋಟೆ: ಇಂಧನ ಸಚಿವ ವಿ ಸುನೀಲ್ ಕುಮಾರ್ (V Sunil Kumar) ಅವರ ಸುತ್ತ ಇರುವವರೆಲ್ಲ ಕಾಂಗ್ರೆಸ್ಸಿನವರು ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Mutalik) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮುತಾಲಿಕ್ ಅವರು, ಬಿಜೆಪಿ ಕಾರ್ಯಕರ್ತರು, ಸಿದ್ದಾಂತವನ್ನು ಕಡೆಗಣಿಸಿ ಸುನೀಲ್ ಕುಮಾರ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ನಾನೇ ಸುನೀಲ್ ಕುಮಾರ್ ಅವರನ್ನ ಚಿಕ್ಕಮಗಳೂರಲ್ಲಿ ದತ್ತಪೀಠದ ಹೋರಾಟದಲ್ಲಿ ಜಿಲ್ಲೆಯಿಂದ ರಾಜ್ಯದವರೆಗೂ ಪರಿಚಯ ಮಾಡಿಸಿದೆ. ಇವತ್ತು ಅವರು ಬರೀ ಡೋಂಗಿ ಹಿಂದೂವಾದ ಮಾಡುತ್ತಿದ್ದಾರೆ. ಇದಕ್ಕೆ ಬುದ್ದಿ ಕಲಿಸಲು ನಾನು ಕಾರ್ಕಳ (Karkala) ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಿದ್ದೇನೆ ಎಂದು ಹೇಳಿದರು.
ತೇರದಾಳ, ಕಾರ್ಕಳ ವಿಧಾನಸಭಾ ಕ್ಷೇತ್ರ ಸೇರಿ ಒಟ್ಟು ಹತ್ತು ಕಡೆಗಳಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮಸೇನೆಯ ಅಭ್ಯರ್ಥಿಗಳು ಸ್ಪರ್ಧೆ ಮಾಡ್ತೀವಿ ಎಂದು ಹೇಳಿದ ಪ್ರಮೋದ್ ಮುತಾಲಿಕ್, ನನಗೆ ಬಾಗಲಕೋಟೆಯ ತೇರದಾಳ ಹಾಗೂ ಕಾರ್ಕಳ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರ ಚರ್ಚೆಗೆ ಬಂತು. ಈಗ ಕಾರ್ಕಳ ಕ್ಷೇತ್ರವೇ ಫೈನಲ್ ಆಗಿದೆ. ನೂರಕ್ಕೆ ನೂರು ನಾನು ಗೆದ್ದು ಹಿಂದುತ್ವದ ಪತಾಕೆಯನ್ನು ಕಾರ್ಕಳದ ಮೂಲಕ ಹಾರಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.
ಇನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಒಲೈಕೆ ರಾಜಕಾರಣ ನಡೆದಿದೆ ಎಂದು ಆರೋಪಿಸಿದ ಪ್ರಮೋದ್ ಮುತಾಲಿಕ್, ರಾಜ್ಯದಲ್ಲಿ ಬಿಜೆಪಿ ವಿರುದ್ದ ಕಾರ್ಯಕರ್ತರು ಅಲಿಪ್ತರಾಗಿದ್ದಾರೆ. ಈ ಸರ್ಕಾರದಿಂದ ಭ್ರಮನಿರಸನ ಗೊಂಡಿದ್ದಾರೆ, ಸಂಘದ ಮೂಲ ಮನೆಯವರೇ ಓಟು ಹಾಕದೆ ಪ್ರವಾಸಕ್ಕೆ ಹೋಗಲು ರೆಡಿ ಆಗಿದ್ದಾರೆ. ಹೀಗಾಗಿ ನಾಟಕ ಮಾಡುತ್ತಿರುವ ಬಿಜೆಪಿಯ ಹಿಂದುತ್ವವಾದವನ್ನು ಎಲ್ಲಾ ಹಿಂದೂ ಸಂಘಟನೆಗಳು ಒಟ್ಟಾಗಿ ತಿದ್ದಬೇಕಿದೆ. ಬಿಜೆಪಿ ಸರ್ಕಾರದಿಂದ ಮುಸ್ಲಿಂ ಒಲೈಕೆ ನಡೆದಿದೆ. ಕೇಂದ್ರ ಸರ್ಕಾರ ಮುಲಾಯಮ್ ಸಿಂಗ್‌ಗೆ ಪದ್ಮವಿಭೂಷಣ ಕೊಟ್ಟಿದೆ. ರಾಮದ್ರೋಹಿಗೆ ಪದ್ಮವಿಭೂಷಣ ಕೊಟ್ಟು ಆ ಪ್ರಶಸ್ತಿಗೆ ಕಳಂಕ ತಂದಿದ್ದಾರೆ. ಬಿಜೆಪಿಯ ಈ ನಾಟಕದ ಹಿಂದುತ್ವವಾದವನ್ನು ಬದಲಾವಣೆ ಮಾಡಬೇಕಿದೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಡಿಪಿಐ ವಿರುದ್ಧವೂ ಆಕ್ರೋಶ
ಇನ್ನು ಎಸ್‌ಡಿಪಿಐ ಒಂದು ದೇಶದ್ರೋಹಿ, ಸಮಾಜಘಾತಕ ಪಕ್ಷ ಎಂದ ಮುತಾಲಿಕ್, ಇಡೀ ಕರ್ನಾಟಕದ 23 ಹಿಂದು ಕೊಲೆಗಳ ಪ್ರಕರಣದಲ್ಲಿ ಒಂಬತ್ತು ಕೇಸ್‌ಗಳಲ್ಲಿ ಎಸ್‌ಡಿಪಿಐಯ ಹೆಸರಿದೆ. ಎಫ್‌ಐಆರ್‌ನಲ್ಲಿ ಪಿಎಫ್‌ಐ ಕಾರ್ಯಕರ್ತರ ಹೆಸರಿದೆ. ಎಸ್‌ಡಿಪಿಐ ರಾಜ್ಯಾಧ್ಯಕ್ಷ, ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿ ಶಫಿ ಬೆಳ್ಳಾರೆಯನ್ನು ಪುತ್ತೂರಿನಲ್ಲಿ ಅಭ್ಯರ್ಥಿ ಎಂದು ಘೋಷಣೆ ಮಾಡುತ್ತಾರೆ. ಇದು ನೇರವಾಗಿ ಕೊಲೆಗೆ ಸಹಕಾರ ಹಾಗೂ ಪ್ರೋತ್ಸಾಹವನ್ನು ಕೊಟ್ಟಂಗೆ ಆಯ್ತು. ಇದು ಮೊದಲ ಬಾರಿಯಲ್ಲ, ಹಿಂದಿನಿಂದಲೂ ಇಸ್ಲಾಮಿಕ್ ಕಿಡಿಗೇಡಿಗಳು, ಗೂಂಡಾಗಳಿಗೆ ಮಣೆ ಹಾಕುವ ಸಂಸ್ಕೃತಿ ಸಂಪ್ರದಾಯ ಇಸ್ಲಾಮ್‌ನಲ್ಲಿ ನಡೆದುಕೊಂಡು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Pramod Muthalik: ಡೋಂಗಿ ಹಿಂದುತ್ವ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕಾರ್ಕಳಕ್ಕೆ ಬಂದಿದ್ದೇನೆ: ಮುತಾಲಿಕ್
ಅರುಣ್ ಕುಮಾರ್ ಪುತ್ತಿಲ ಉತ್ತಮ ಅಭ್ಯರ್ಥಿ
ಬಿಜೆಪಿ ಸರಕಾರ ಇಂತಹ ಆರೋಪಿಗಳಿಗೆ ಟಿಕೆಟ್ ಕೊಡದಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಬೇಕು ಎಂದ ಮುತಾಲಿಕ್, ಎಸ್‌ಡಿಪಿಐಯನ್ನು ರದ್ದು ಮಾಡುವಂತೆ ಮನವಿ ಕೊಡಬೇಕು. ನಾವು ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ ಎಂದರು. ಇದೇ ವೇಳೆ ಪುತ್ತೂರಲ್ಲಿ ಎಸ್‌ಡಿಪಿಐ ವಿರುದ್ದ ಅರುಣ ಕುಮಾರ್ ಪುತ್ತಿಲ ಅವರೇ ಉತ್ತಮ ಅಭ್ಯರ್ಥಿ. ಈಗಲೂ ಕಾಲ ಮಿಂಚಿಲ್ಲ, ಹಿಂದೂ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟರೆ, ಬಿಜೆಪಿಗೆ 25ಕ್ಕೂ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ