ಧಾರವಾಡ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections 2023) ಶ್ರೀ ರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Mutalik) ಅವರು ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಾಗಿ ಕಾರ್ಕಳದಲ್ಲಿ (Karkala) ಬಿಜೆಪಿ ತನ್ನ ಅಭ್ಯರ್ಥಿಯನ್ನು ಹಾಕಬಾರದು ಎಂದು ಶ್ರೀ ರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಅವರು ಆಗ್ರಹಿಸಿದ್ದಾರೆ. ಧಾರವಾಡದಲ್ಲಿ (Dharwad) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದುತ್ವದ ಸಲುವಾಗಿ ಕಾರ್ಕಳ ಕ್ಷೇತ್ರವನ್ನು ಶ್ರೀ ರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಬಿಟ್ಟು ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳದಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಾಗಿ ಬಿಜೆಪಿ ಕಾರ್ಕಳದಲ್ಲಿ ಅಭ್ಯರ್ಥಿ ಹಾಕಬಾರದು ಎಂದಿರುವ ಶ್ರೀ ರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಹಾಕಲಿ. ಆದರೆ ಹಿಂದುತ್ವದ ಸಲುವಾಗಿ ಕಾರ್ಕಳ ಕ್ಷೇತ್ರ ಬಿಟ್ಟು ಕೊಡಬೇಕು. ಹಿಂದುತ್ವದ ಧ್ವನಿಯಾಗಿ ವಿಧಾನಸಭೆ ಪ್ರವೇಶಿಸಲು ಪ್ರಮೋದ್ ಮುತಾಲಿಕ್ ಅವರು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಅಭ್ಯರ್ಥಿ ಹಾಕದೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
'ಬಿಜೆಪಿ ಮುತಾಲಿಕ್‌ರಿಗೆ ಅವಮಾನ ಮಾಡಿದೆ'
ಕರ್ನಾಟಕದಲ್ಲಿ ಬಿಜೆಪಿ ಬೆಳೆಯಲು ಪ್ರಮೋದ್ ಮುತಾಲಿಕ್ ಅವರ ಕೊಡುಗೆ ಬಹಳ ಇದೆ ಎಂದ ಶ್ರೀ ರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಈ ಬಾರಿಯ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಕಿದ್ದೇ ಆದಲ್ಲಿ ನಾವು ಉಳಿದ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿ ಹಾಕುತ್ತೇವೆ. ಉಳಿದ ಕ್ಷೇತ್ರಗಳಲ್ಲಿ ಹಿಂದುತ್ವದ ಅಭ್ಯರ್ಥಿ ಹಾಕುತ್ತೇವೆ. ಬಿಜೆಪಿ ಪಕ್ಷ ಪ್ರಮೋದ್ ಮುತಾಲಿಕ್‌ರಿಗೆ ಬಹಳಷ್ಟು ಅವಮಾನ ಮಾಡಿದೆ. ಹೀಗಾಗಿ ಈಗಲಾದರೂ ಅದನ್ನು ಸುಧಾರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಇನ್ನು 2014ರಲ್ಲಿ ಪ್ರಮೋದ್ ಮುತಾಲಿಕ್ ಅವರನ್ನು ಬಿಜೆಪಿಗೆ ತೆಗೆದುಕೊಂಡು ಬಳಿಕ ಹೊರಗೆ ಹಾಕಿದ್ದರು ಎಂದ ಗಂಗಾಧರ ಕುಲಕರ್ಣಿ, ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿಯೂ ಅವಕಾಶ ಕೊಡುವ ಮಾತು ಆಗಿತ್ತು. ಆದರೂ ಅವಕಾಶ ಕೊಡಲಿಲ್ಲ. ಪ್ರಮೋದ್ ಮುತಾಲಿಕ್ 45 ವರ್ಷ ಹಿಂಧುತ್ವಕ್ಕಾಗಿ ಹೋರಾಟ ಮಾಡಿದವರು. ಬಿಜೆಪಿಗಾಗಿಯೂ ಸಾಕಷ್ಟು ಕೆಲಸ ಮಾಡಿದ್ದಾರೆ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಕದೆ ಸುಮಲತಾಗೆ ಬೆಂಬಲ ಕೊಟ್ಟಿದ್ದರು. ಅದೇ ರೀತಿ ಈಗ ಕಾರ್ಕಳದಲ್ಲಿ ಅಭ್ಯರ್ಥಿ ಹಾಕದೆ ಬೆಂಬಲ ಕೊಡಬೇಕು ಎಂದು ಹೇಳಿದರು.
ಇದನ್ನೂ ಓದಿ: Pramod Mutalik: ಶ್ರೀರಾಮಸೇನೆಯಿಂದ 25 ಪ್ರಖರ ಹಿಂದುತ್ವವಾದಿಗಳ ಸ್ಪರ್ಧೆ! ಹಿಂದೂಗಳ ರಕ್ಷಣೆಗಾಗಿ ಚುನಾವಣೆ ಎಂದ ಮುತಾಲಿಕ್
'ಕಾರ್ಕಳದಲ್ಲಿ ಬಿಜೆಪಿ ಸೋಲುತ್ತದೆ'
ಇನ್ನು ಪ್ರಮೋದ್ ಮುತಾಲಿಕ್ ಅವರು ಕಾರ್ಕಳದಲ್ಲಿ ಚುನಾವಣೆಗೆ ನಿಲ್ಲದಿದ್ದರೂ ಕೂಡ ಬಿಜೆಪಿ ಸೋಲುತ್ತದೆ ಎಂದ ಶ್ರೀ ರಾಮಸೇನೆಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಅಲ್ಲಿ ಮೂರು ಸಲ ಶಾಸಕರಾದವರು ಹಿಂದೂ ಕಾರ್ಯಕರ್ತರಿಗೆ ಏನೂ ಮಾಡಿಲ್ಲ. ಬದಲಾಗಿ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಹಾಕಿಸಿದ್ದಾರೆ. ಒಂದೇ ಒಂದು ಹಿಂದೂ ಸಮಾವೇಶ ಮಾಡಲು ಬಿಟ್ಟಿಲ್ಲ. ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಾರೆ. ಹೀಗಾಗಿ ಅಲ್ಲಿ ಬಿಜೆಪಿ ಗೆಲ್ಲುವುದು ಅನುಮಾನ. ಹೀಗಾಗಿ ಪ್ರಮೋದ್ ಮುತಾಲಿಕ್‌ರಿಗೆ ಬೆಂಬಲ ಕೊಟ್ಟು ಕ್ಷೇತ್ರ ಉಳಿಸಿಕೊಳ್ಳಬೇಕು. ಅಲ್ಲಿನ ಜನ, ಕಾರ್ಯಕರ್ತರೇ ಸ್ವಯಂ ಪ್ರೇರಣೆಯಿಂದ ಬೆಂಬಲ ಕೊಡುತ್ತಿದ್ದಾರೆ ಎಂದು ಹೇಳಿದರು.
'ಎಲ್ಲರೂ ಮುತಾಲಿಕ್ ಜತೆ ಚೆನ್ನಾಗಿದ್ದಾರೆ'
ಇನ್ನು ಬಿಜೆಪಿಗೆ ಪ್ರಮೋದ್ ಮುತಾಲಿಕ್ ಅವರನ್ನು ಸೇರಿಸಿಕೊಳ್ಳಲು ವಿರೋಧ ವ್ಯಕ್ತವಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಗಂಗಾಧರ ಕುಲಕರ್ಣಿ, ಯಾರೂ ಕೂಡ ಬಹಿರಂಗವಾಗಿ ವಿರೋಧ ತೋರಿಸಿಲ್ಲ. ಎಲ್ಲರೂ ಪ್ರಮೋದ್ ಮುತಾಲಿಕ್ ಅವರ ಜೊತೆಗೆ ಚೆನ್ನಾಗಿಯೇ ಇದ್ದಾರೆ. ಆದರೂ ಪಕ್ಷಕ್ಕೆ ತೆಗೆದುಕೊಳ್ಳುತ್ತಿಲ್ಲ. ಮುತಾಲಿಕ್ ಬಂದ್ರೆ ನಾವು ನೇಪಥ್ಯಕ್ಕೆ ಹೋಗುತ್ತೆವೆಂಬ ಭಯ ಕೆಲವರಲ್ಲಿ ಇರಬಹುದು ಎಂದರಲ್ಲದೇ, ಫೆ. 8 ಮತ್ತು 9ರಂದು ಕಾರ್ಕಳದಲ್ಲಿ ಪ್ರಚಾರ ಕಚೇರಿ ಉದ್ಘಾಟನೆ ಇದೆ. ಅದೇ ಸಮಯದಲ್ಲಿ ಸಂಘಟನಾ ಸಭೆಯೂ ನಡೆಯುತ್ತದೆ. ಈ ವೇಳೆ ಮುಂದಿನ ನಡೆಯ ಬಗ್ಗೆ ನಿರ್ಣಯ ಮಾಡುತ್ತೇವೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ