HOME » NEWS » State » SRI RAM SENA STATE PRESIDENT SIDDALING SWAMIJI SLAMS AT KALBURGI POLICE SAKLB HK

ಕಲಬುರ್ಗಿ ಪೊಲೀಸರು ಕುಂಭಕರ್ಣ ವಂಶದವರು - ಕೆಲಸ ಮಾಡಲಾಗದಿದ್ದಲ್ಲಿ ಖಾಕಿ ಕಳಚಿ ಹೋಗಲಿ: ಆಂದೋಲಶ್ರೀ ಕಿಡಿ

ಬಿಜೆಪಿ ಸರ್ಕಾರವಿದ್ದರೂ ಹಿಂದೂ ದೇವಸ್ಥಾನವೊಂದನ್ನು ನೆಲಸಮಗೊಳಿಸಲಾಗಿದೆ. ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ಜಾಣ ನಿದ್ರೆಗೆ ಜಾರಿದ್ದಾರೆ. ಸರ್ಕಾರವೇ ಭೂಗಳ್ಳರ ಜೊತೆ ಶಾಮೀಲಾಗಿದೆ

news18-kannada
Updated:December 22, 2020, 5:09 PM IST
ಕಲಬುರ್ಗಿ ಪೊಲೀಸರು ಕುಂಭಕರ್ಣ ವಂಶದವರು - ಕೆಲಸ ಮಾಡಲಾಗದಿದ್ದಲ್ಲಿ ಖಾಕಿ ಕಳಚಿ ಹೋಗಲಿ: ಆಂದೋಲಶ್ರೀ ಕಿಡಿ
ಆಂದೋಲಶ್ರೀ
  • Share this:
ಕಲಬುರ್ಗಿ(ಡಿಸೆಂಬರ್​. 22): ಕಲಬುರ್ಗಿ ಪೊಲೀಸರು ಕುಂಭಕರ್ಣ ವಂಶದವರು ಎಂದು ಆಂದೋಲಶ್ರೀ ಹಾಗೂ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮಿ ಲೇವಡಿ ಮಾಡಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ, ಪಾಕ್ ಪರ ಗೋಡೆ ಬರಹ ಬರೆದವರನ್ನು ಇದುವರೆಗೂ ಕಲಬುರ್ಗಿ ಪೊಲೀಸರು ಬಂಧಿಸಿಲ್ಲ. ಈ ರೀತಿಯ ಗೋಡೆ ಬರಹ ಬರೆದವರನ್ನು ಮಂಗಳೂರಿನಲ್ಲಿ 24 ತಾಸುಗಳಲ್ಲಿ ಬಂಧಿಸಲಾಯಿತು. ದೇಶದ್ರೋಹಿ ಬರಹ ಬರೆದವರನ್ನು ಯಾಕೆ ಬಹಿರಂಗಪಡಿಸಬೇಕೆಂದು ಪೊಲೀಸರ ಲೆಕ್ಕ ಹಾಕಿದಂತಿದೆ. ಕುಂಭಕರ್ಣ ನಿದ್ರೆಗೆ ಜಾರಿದಂತೆ ಇವರೂ ನಿದ್ರೆಗೆ ಜಾರಿದ್ದಾರೆ ಎಂದು ಕಿಡಿಕಾರಿದರು. ಅಕ್ರವಾಗಿ ಮರಳು ಮಾಫಿಯಾ ರಾಜಾರೋಷವಾಗಿ ನಡೀತಿದ್ದರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೆ, ಗಣೇಶ ದೇವಸ್ಥಾನ ಒಡೀತಾರೆ ಎಂದರೆ ಅಲ್ಲಿ ಬಂದು ಭದ್ರತೆ ಕಲ್ಪಿಸುತ್ತಾರೆ. ಪೊಲೀಸ್ ಇಲಾಖೆಯಿಂದ ಸಂಪೂರ್ಣ ನಿರ್ಲಕ್ಷ್ಯ ನಡೆದಿದೆ. ಜಿಲ್ಲೆಯಲ್ಲಿ ಪೊಲೀಸರೇ ಕಾನೂನು ಸುವ್ಯವಸ್ಥೆ ಹದಗೆಡಿಸುತ್ತಿದ್ದು, ಪೊಲೀಸರಿಗೆ ನಾಚಿಕೆಯಾಗಬೇಕೆಂದು ಕಿಡಿಕಾರಿದರು. ದೇಶದ್ರೋಹಿ ಬರಹ ಬರೆದೋರನ್ನು ಬಂಧಿಸಲಾಗದಿದ್ದರೆ ಖಾಕಿ ಬಟ್ಟೆ ಕಳಚಿ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಪೊಲೀಸರ ವಿರುದ್ಧ ಆಂದೋಲಶ್ರೀ ಹರಿಹಾಯ್ದರು.

ಮಠಾಧೀಶರ ನೇತೃತ್ವದಲ್ಲಿ ಉಗ್ರ ಹೋರಾಟದ ಎಚ್ಚರಿಕೆ

ಕಲಬುರ್ಗಿಯ ಸಾರಡಾ ಲೇಔಟ್ ನಲ್ಲಿ ಗಣೇಶ ಮಂದಿರ ತೆರವಿಗೆ ಇದೇ ಸಂದರ್ಭದಲ್ಲಿ ಆಂದೋಲಶ್ರೀ ಖಂಡಿಸಿದ್ದಾರೆ. ಸಾರಡಾ ಲೇಔಟ್ ನಲ್ಲಿ 20 ವರ್ಷಗಳ ಹಿಂದೆ ನಿರ್ಮಿಸಿದ್ದ ದೇವಸ್ಥಾನ ಕೆಡವಲಾಗಿದೆ. ನ್ಯಾಯಾಲಯ ಆದೇಶ ಮುಚ್ಚಿಟ್ಟು ದೇವಸ್ಥಾನ ನೆಲಸಮ ಮಾಡಲಾಗಿದೆ. ಲೇಔಟ್ ಮಾಲೀಕ ವಲ್ಲಭ್ ಸಾರ್ಡಾ, ಪಾಲಿಕೆ ಆಯುಕ್ತ, ಸಿಬ್ಬಂದಿ ಕುಮ್ಮಕ್ಕಾಗಿ ಕೃತ್ಯ ಎಸಗಿದ್ದಾರೆ. ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಘಜನಿ ಮಹ್ಮದ್ ರೀತಿಯಲ್ಲಿ ವರ್ತಿಸಿದ್ದಾರೆ. ಶಿವಾಜಿ ಕಾವಳೆ ಎಂಬಾತನಿಗೆ ಉದ್ಯಾನವನ ಜಾಗವನ್ನು ಮಾರಲಾಗಿದ್ದು, ದೇವಸ್ಥಾನ ಕೆಡವಿ ಖಾಲಿ ಜಾಗವನ್ನು ಆತನಿಗೆ ಒಪ್ಪಿಸಲಾಗಿದೆ. ಬಿಜೆಪಿ ಸರ್ಕಾರವಿದ್ದರೂ ಹಿಂದೂ ದೇವಸ್ಥಾನವೊಂದನ್ನು ನೆಲಸಮಗೊಳಿಸಲಾಗಿದೆ. ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ಜಾಣ ನಿದ್ರೆಗೆ ಜಾರಿದ್ದಾರೆ. ಸರ್ಕಾರವೇ ಭೂಗಳ್ಳರ ಜೊತೆ ಶಾಮೀಲಾಗಿದೆ ಎಂದರು

ಇದನ್ನೂ ಓದಿ : Asha workers: ಕೊರೋನಾ ವಾರಿಯರ್ಸ್​​​ಗೆ ವಿಶೇಷ ನಮನ : ಆಶಾ ಕಾರ್ಯಕರ್ತೆಯರ ಪಾದಪೂಜೆ ಮಾಡುವ ಮೂಲಕ ಗೌರವ

ಬಹುಮನಿ ಕೋಟೆಯಲ್ಲಿ ನೂರಾರು ಅಕ್ರಮ ಮನೆಗಳಿವೆ. ಕೋಟೆ ಅತಿಕ್ರಮ ತೆರವುಗೊಳಿಸಿ ಐತಿಹಾಸಿಕ ಸ್ಮಾರಕವನ್ನು ಸಂರಕ್ಷಿಸಿ ಎಂದು ನ್ಯಾಯಾಲಯದ ಆದೇಶವಿದ್ದರೂ ಅವುಗಳನ್ನು ತೆರವುಗೊಳಿಸುವ ಧೈರ್ಯ ಪಾಲಿಕೆ ಮಾಡುತ್ತಿಲ್ಲ. ಆದರೆ, ಸಾರ್ಡಾ ಲೇಔಟ್ ನಲ್ಲಿರುವ ದೇವಸ್ಥಾನವನ್ನು ಮಾತ್ರ ರಾಜಾರೋಷವಾಗಿ ಕೆಡವಲಾಗಿದೆ. ಕಲಬುರ್ಗಿಯಲ್ಲಿ ಹಲವಾರು ಅಕ್ರಮ ಕಟ್ಟಡಗಳು, ಮಸೀದಿಗಳಿವೆ. ಅವ್ಯಾವುಗಳನ್ನು ಕೆಡವದೆ ಗಣೇಶ ಮಂದಿರವನ್ನೇಕೆ ಕೆಡವಿದ್ದಾರೆ ಎಂದು ಆಂದೋಲಶ್ರೀ ಪ್ರಶ್ನಿಸಿದ್ದಾರೆ.

ಕೆಡವುದಾದರೆ ಎಲ್ಲವನ್ನೂ ಕೆಡವಲಿ. ಅದನ್ನು ಬಿಟ್ಟು ಕಾನೂನು ಬಾಹಿರವಾಗಿ ದೇವಸ್ಥಾನ ಕೆಡವಿ, ಪಾರ್ಕ್ ಅತಿಕ್ರಮ ಮಾಡಲು ನಾವು ಬಿಡುವುದಿಲ್ಲ. ಕೂಡಲೇ ಭೂಗಳ್ಳರನ್ನು ಜೈಲಿಗೆ ಕಳಿಸಬೇಕು. ಅದೇ ಸ್ಥಳದಲ್ಲಿಯೇ ಗಣೇಶ ಮಂದಿರ ನಿರ್ಮಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲೆಯ ವಿವಿಧ ಮಠಾಧೀಶರ ನೇತೃತ್ವದಲ್ಲಿ ಪಾಲಿಕೆ ಎದುರು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ನ್ಯಾಯಾಲಯದ ಮೂಲಕವೂ ಕಾನೂನು ಹೋರಾಟ ಮುಂದುವರೆಸುವುದಾಗಿ ಅವರು ತಿಳಿಸಿದ್ದಾರೆ.
Published by: G Hareeshkumar
First published: December 22, 2020, 5:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories