ತುಮಕೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಸ್.ಆರ್.ಶ್ರೀನಿವಾಸ್ (SR Srinivas) ಇಂದು ಕಾಂಗ್ರೆಸ್ (Congress) ಸೇರ್ಪಡೆಯಾಗಲಿದ್ದಾರೆ. ಇಂದು ಬೆಂಗಳೂರಿಗೆ ತೆರಳುವ ಮುನ್ನ ತುಮಕೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎಸ್.ಆರ್.ಶ್ರೀನಿವಾಸ್, ಮೂಲತಃ ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದವನು. ಮಾನಸಿಕವಾಗಿ ನನಗೆ ಬಿಜೆಪಿ (BJP) ಒಗ್ಗಲ್ಲ. ಅವರ ಸಿದ್ದಾಂತಕ್ಕೂ ನನಗೂ ಅಜಗಜಾಂತರ ಇದೆ. ನಾನು ಜಾತ್ಯತೀತ (Secular) ನಿಲುವಿನಿಂದ ಬಂದಿದ್ದೇನೆ. ಅವರು ಕೋಮುಗಲಭೆಯನ್ನ ಎಬ್ಬಿಸಿ ಧಾರ್ಮಿಕ ಭಾವನೆ ಭಿತ್ತಿ ಅವರು ಅಧಿಕಾರ ಪಡೆಯುತ್ತಾರೆ. ಅವರ ಅಜೆಂಡಾ ನನಗೆ ಇಷ್ಟ ಆಗಲ್ಲ. ಅದಕ್ಕೆ ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದರು.
1999ರಲ್ಲಿ ನಮ್ಮ ತಂದೆಗೆ ಕಾಂಗ್ರೆಸ್ನಿಂದ ಟಿಕೆಟ್ ಸಿಗದೇ ಇದ್ದಿದ್ರಿಂದ, ಜನತಾ ಪಕ್ಷದ ಟ್ರಾಕ್ಟರ್ ಗುರುತಿಗೆ ವೀರಣ್ಣ ಗೌಡರರನ್ನ ನಿಲ್ಲಿಸಿಕೊಂಡು ಆ ತಾಲೂಕಿನಲ್ಲಿ ಜನತಾ ಪಕ್ಷ ಗೆಲುವಿಗೆ ಹೋರಾಟ ಮಾಡಲಾಯ್ತು. ಮತ್ತೆ 2000ರಲ್ಲಿ ಮತ್ತೆ ಕಾಂಗ್ರೆಸ್ಗೆ ಹೋಗಿ ಜಿಲ್ಲಾ ಪಂಚಾಯ್ತಿ ಸದಸ್ಯನಾದೆ. 2002ರಲ್ಲಿ ಕುಮಾರಸ್ವಾಮಿ ಟಿಕೆಟ್ ಕೊಡ್ತಿನಿ ಅಂದ್ರು ಮತ್ತೆ ಜನತಾ ದಳಕ್ಕೆ ಹೋದೆ.
18 ವರ್ಷದ ಜನತಾದಳದಲ್ಲಿ ಕೆಲಸ
2004 ರಲ್ಲಿ ಜೆಡಿಎಸ್ನವರು ನನಗೆ ಟಿಕೆಟ್ ಕೊಡಲಿಲ್ಲ. ಆಗ ನಾನು ಸ್ವತಂತ್ರವಾಗಿ ಸ್ಪರ್ಧೆ ಮಾಡಿ ಗೆದ್ದೆ. ಆಗ ಕುಮಾರಸ್ವಾಮಿ ಮನೆಗೆ ಬಂದು ಮಾತುಕತೆ ಮಾಡಿದಾಗ ನಾನು ಜೆಡಿಎಸ್ ಸೇರಿಕೊಂಡೆ. ನಿರಂತರವಾಗಿ 18 ವರ್ಷಗಳ ಕಾಲ ಜನತಾದಳದಲ್ಲಿ ಕೆಲಸ ಮಾಡಿದ್ದೇನೆ.
ಆದರೆ 2021ಅಕ್ಟೋಬರ್ನಲ್ಲಿ ಗುಬ್ಬಿಗೆ ಬಂದು ಏಕಾಏಕಿ ನಾಗರಾಜು ಅವರನ್ನು ಜೆಡಿಎಸ್ ಅಭ್ಯರ್ಥಿಯನ್ನ ಘೋಷಣೆ ಮಾಡಿದರು. ನಾನು ಜನತಾದಳ ಬಿಡಲ್ಲ ಅಂದ್ರು ನನ್ನನ್ನ ತೆಗೆದು ಬೇರೆ ಅಭ್ಯರ್ಥಿ ಹಾಕಿದರು. ಇದೇ ಕಾರಣಕ್ಕೆ ನನಗೆ ಕುಮಾರಸ್ವಾಮಿ ನಡುವೆ ಭಿನ್ನಾಭಿಪ್ರಾಯ ಶುರುವಾಯ್ತು ಎಂದು ಹೇಳಿದರು.
ಟಿಕೆಟ್ ಸಿಗುವ ವಿಶ್ವಾಸ
ಮೊನ್ನೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೀನಿ. ಇವತ್ತು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದೇನೆ. ಇವತ್ತು ನಾಳೆ ಕಾಂಗ್ರೆಸ್ ಪಕ್ಷದ ಎರಡನೇ ಲಿಸ್ಟ್ ಘೋಷಣೆಯಾಗಲಿದ್ದು, ಶೇಕಡಾ ನೂರರಷ್ಟು ಟಿಕೆಟ್ ಸಿಗುವ ಭರವಸೆ ಇದೆ. ಟಿಕೆಟ್ ಕೊಡಿಸುವ ಬಗ್ಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಾತುಕೊಟ್ಟಿದ್ದಾರೆ.
ಹೈಕಮಾಂಡ್ ನಿರ್ಧಾರಕ್ಕೆ ಬದ್ಧ
ಕಾಂಗ್ರೆಸ್ ಯಾರಿಗೆ ಟಿಕೆಟ್ ಕೊಟ್ರು ನಾನು ಪಕ್ಷಕ್ಕಾಗಿ ದುಡಿಯುತ್ತೇನೆ. 2013ರಲ್ಲಿ ಕಾಂಗ್ರೆಸ್ ನಿಂದ ಗುಬ್ಬಿಯ ಹೊನ್ನಗಿರಿ ಗೌಡ ನನ್ನ ವಿರುದ್ಧ ಸ್ಪರ್ಧೆ ಮಾಡಿದ್ದರು. ಹಾಗಾಗಿ ಅವರ ನಮ್ಮ ನಡುವೆ ಅಸಮಾಧಾನ ಇದೆ. 2018 ರಲ್ಲಿ ಅವರಿಗೆ ಟಿಕೆಟ್ ಸಿಗಲಿಲ್ಲ. ಈಗಲೂ ಕೂಡಾ ಹೊನ್ನಗಿರಿಗೌಡ ಹಾಗೂ ಪ್ರಸನ್ನಕುಮಾರ್ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳು. ನಮಗೆ ಟಿಕೆಟ್ ಕೊಡಿ ಅಂತ ಒತ್ತಾಯಿಸುತ್ತಿದ್ದಾರೆ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ ಎಂದು ಎಸ್ಆರ್ ಶ್ರೀನಿವಾಸ್ ಹೇಳಿದ್ದಾರೆ.
ಇದನ್ನೂ ಓದಿ: Hindi Imposition: ನಂದಿನಿ ಕನ್ನಡಿಗರ ಸ್ವಾಭಿಮಾನ; ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಹೆಚ್ಡಿಕೆ
ನಾವು ಚುನಾವಣೆಗೆ ಹೋಗ್ತಿರೋದ್ರಿಂದ ಯಾರನ್ನು ದ್ವೇಷಿಸದೇ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ. ಗುಬ್ಬಿ ಕ್ಷೇತ್ರದ ಇನ್ನಿಬ್ಬರು ಆಕಾಂಕ್ಷಿಗಳು ನನ್ನ ಸಂಪರ್ಕದಲ್ಲಿಲ್ಲ ಎಂದು ಹೇಳಿದರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ