Bangalore: ಬೆಂಗಳೂರು ಪ್ರಯಾಣಿಕನ ಲಗೇಜ್ ಕೊಂಡೊಯ್ಯದ ಸ್ಪೈಸ್​ ಜೆಟ್​ಗೆ 18 ಸಾವಿರ ರೂ. ದಂಡ

SpiceJet: ಬೆಂಗಳೂರಿನಿಂದ ದೆಹಲಿಗೆ ತೆರಳಿದ ವಿಮಾನದಲ್ಲಿ ಲಗೇಜನ್ನು ಮಿಸ್ ಮಾಡಿದ ಬಗ್ಗೆ ದೂರು ನೀಡಿ 10 ತಿಂಗಳ ನಂತರ ತೀರ್ಪು ಬಂದಿದ್ದು, ನವೀನ್​ಗೆ 18 ಸಾವಿರ ರೂ.ಗಳನ್ನು ಪರಿಹಾರವಾಗಿ ನೀಡಬೇಕೆಂದು ಕನ್ಸೂಮರ್ ಫೋರಂ ಸ್ಪೈಸ್​ ಜೆಟ್​ಗೆ ಆದೇಶಿಸಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಬೆಂಗಳೂರು (ಜ. 13): ಬೆಂಗಳೂರಿನಿಂದ ದೆಹಲಿಗೆ ಸ್ಪೈಸ್ ಏರ್​ ಜೆಟ್​ನಲ್ಲಿ ಪ್ರಯಾಣಿಸಿದ್ದ ಯುವಕನೊಬ್ಬನ ಚೆಕ್ ಇನ್ ಬ್ಯಾಗನ್ನು ಬೆಂಗಳೂರಿನಲ್ಲೇ ಉಳಿಸಲಾಗಿತ್ತು. ಇದರಿಂದ ಕನ್ಸೂಮರ್ ಫೋರಂಗೆ ದೂರು ನೀಡಿದ್ದ ಯುವಕನಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ತನ್ನ ಪ್ರಯಾಣಿಕರ ಲಗೇಜನ್ನು ಕೊಂಡೊಯ್ಯದೆ ಅವರಿಗೆ ತೊಂದರೆಯುಂಟು ಮಾಡಿದ್ದಕ್ಕೆ ಮತ್ತು ಸರಿಯಾದ ಸೇವೆ ಒದಗಿಸದಿದ್ದಕ್ಕೆ ಸ್ಪೈಸ್ ಜೆಟ್​ಗೆ ಸುಮಾರು 18 ಸಾವಿರ ರೂ. ದಂಡ ವಿಧಿಸಲಾಗಿದ್ದು, ಆ ಹಣವನ್ನು ಸಂತ್ರಸ್ತ ಪ್ರಯಾಣಿಕನಿಗೆ ನೀಡುವಂತೆ ಆದೇಶಿಸಲಾಗಿದೆ.

ಬೆಂಗಳೂರಿನ ಹನುಮಂತನಗರ ನಿವಾಸಿಯಾಗಿದ್ದ ನವೀನ್ ಎಂಬುವವರು ಸ್ಕಿಲ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸದ ನಿಮಿತ್ತ 2019ರ ಮೇ 2ರಂದು ದೆಹಲಿಗೆ ಬೆಂಗಳೂರಿನಿಂದ ಸ್ಪೈಸ್​ ಜೆಟ್​ನಲ್ಲಿ ಪ್ರಯಾಣ ಮಾಡಿದ್ದರು. ಆದರೆ, ದೆಹಲಿಯಲ್ಲಿ ಇಳಿದ ಮೇಲೆ ತನ್ನ ಚೆಕ್-ಇನ್ ಲಗೇಜನ್ನು ಸ್ಪೈಸ್ ಜೆಟ್ ಸಿಬ್ಬಂದಿ ಮಿಸ್ ಮಾಡಿದ್ದಾರೆ. ಅದನ್ನು ಬೆಂಗಳೂರಿನಿಂದ ದೆಹಲಿಗೆ ತಂದೇ ಇಲ್ಲ ಎಂಬುದು ಆತನಿಗೆ ಗೊತ್ತಾಗಿತ್ತು.

ಸ್ಪೈಸ್​ ಜೆಟ್​ನವರ ನಿರ್ಲಕ್ಷ್ಯದಿಂದ ಆತನ ದಾಖಲಾತಿಗಳು, ಬಟ್ಟೆ, ಮೆಡಿಸಿನ್​ಗಳು, ಆಹಾರ, ಕೆಲಸಕ್ಕಾಗಿ ತಂದಿದ್ದ ಡಾಕ್ಯುಮೆಂಟ್​ಗಳೆಲ್ಲವೂ ಮಿಸ್ ಆಗಿತ್ತು. ಇದರಿಂದ ಆತನ ಉದ್ಯೋಗಕ್ಕೂ ತೊಂದರೆಯಾಗಿತ್ತು. ಹೀಗಾಗಿ, ಸ್ಪೈಸ್​ ಜೆಟ್​ ಅಧಿಕಾರಿಗಳನ್ನು ಭೇಟಿಯಾದರೂ ಉಪಯೋಗವಾಗಲಿಲ್ಲ.

ನಿಮ್ಮ ಲಗೇಜನ್ನು ಬೆಂಗಳೂರಿನಿಂದ ಲೋಡ್ ಮಾಡಿಯೇ ಇಲ್ಲ. ನಿಮ್ಮ ಲಗೇಜ್ ನಿಗದಿತ ತೂಕಕ್ಕಿಂತ ಹೆಚ್ಚು ಗಾತ್ರದ್ದಾಗಿದ್ದರಿಂದ ಅದನ್ನು ಬೆಂಗಳೂರಿನಲ್ಲೇ ಇರಿಸಲಾಯಿತು. ಇನ್ನೊಂದು ಗಂಟೆಯಲ್ಲಿ ಬರುವ ವಿಮಾನದಲ್ಲಿ ಆ ಲಗೇಜನ್ನು ತರಿಸಿ ಕೊಡುತ್ತೇವೆ ಎಂದು ಹೇಳಿದ್ದರು. ಅವರ ಮಾತನ್ನು ನಂಬಿ ನವೀನ್ 6 ಗಂಟೆಗಳ ಕಾಲ ದೆಹಲಿ ಏರ್ ಪೋರ್ಟ್​ನಲ್ಲಿ ಕಾಯುತ್ತಾ ಕುಳಿತಿದ್ದರು. ಸ್ಪೈಸ್​ ಜೆಟ್​ನ ಮತ್ತೊಂದು ವಿಮಾನ ಬೆಂಗಳೂರಿನಿಂದ ಬರುವ ವೇಳೆಗೆ ನವೀನ್ ಹಿಮಾಚಲ ಪ್ರದೇಶದ ಸೋಲನ್​ಗೆ ಹೋಗಬೇಕಾಗಿದ್ದ ಬಸ್​ ಹೋಗಿ ಆಗಿತ್ತು. ಆ ಬಸ್​ನಲ್ಲಿ ಹೋಗಿ ಮಾರನೇ ದಿನವೇ ನವೀನ್ ಇಂಟರ್​ವ್ಯೂಗೆ ಹಾಜರಾಗಬೇಕಿತ್ತು. ಆದರೆ, ಸ್ಪೈಸ್​ ಜೆಟ್​ನವರ ನಿರ್ಲಕ್ಷ್ಯದಿಂದ ನವೀನ್ ಸಂದರ್ಶನಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: ಪ್ರತಿದಿನ ರಸಂ ಕುಡಿದರೆ ಕೊರೋನಾ ಸಾಯುತ್ತೆ!; ತಮಿಳುನಾಡು ಸಚಿವರ ವಿಡಿಯೋ ವೈರಲ್

ಒಂದು ಗಂಟೆಯಲ್ಲಿ ಮುಂದಿನ ವಿಮಾನ ಬರುತ್ತದೆ ಎಂದು ಕಾಯಿಸಿದ ಸಿಬ್ಬಂದಿ 7 ಗಂಟೆಗಳಾದ ನಂತರ ಲಗೇಜನ್ನು ತಲುಪಿಸಿದರು. ತನಗಾದ ತೊಂದರೆಯನ್ನು ಹೇಳಿ ಸ್ಪೈಸ್​ ಜೆಟ್​ನವರ ಬಳಿ ತಡವಾಗಿದ್ದಕ್ಕೆ ಕಾರಣ ಕೇಳಿದಾಗ ಅವರ ಬಳಿ ಉತ್ತರವಿರಲಿಲ್ಲ. ಇದರಿಂದ 2020ರ ಫೆಬ್ರವರಿ 12ರಂದು ಅಂದರೆ ಈ ಘಟನೆ ನಡೆದ 1 ವರ್ಷದ ಬಳಿಕ ನ್ಯಾಯ ಕೋರಿ ನವೀನ್ ಬೆಂಗಳೂರಿನ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು.

ದೂರು ನೀಡಿ 10 ತಿಂಗಳ ನಂತರ ನವೀನ್​ ಪರವಾಗಿ ತೀರ್ಪು ಬಂದಿದ್ದು, ನವೀನ್​ಗೆ 18 ಸಾವಿರ ರೂ.ಗಳನ್ನು ಪರಿಹಾರವಾಗಿ ನೀಡಬೇಕೆಂದು ಕನ್ಸೂಮರ್ ಫೋರಂ ಸ್ಪೈಸ್​ ಜೆಟ್​ಗೆ ಆದೇಶಿಸಿದೆ. ನವೀನ್ ಬಸ್ ಮಿಸ್ ಮಾಡಿಕೊಂಡು ಟ್ಯಾಕ್ಸಿ ಮೂಲಕ ಹೋಗಬೇಕಾಗಿದ್ದಕ್ಕೆ 3,200 ರೂ., ಕೋರ್ಟ್​ ಖರ್ಚು 5,000 ರೂ., ತೊಂದರೆಯಿಂದ ಉಂಟಾದ ನಷ್ಟದ ಬಾಬ್ತು 10,000 ರೂ. ಒಟ್ಟಾರೆ 18 ಸಾವಿರ ರೂ.ಗಳನ್ನು 30 ದಿನಗಳೊಳಗೆ ನವೀನ್​ಗೆ ನೀಡಬೇಕೆಂದು ತೀರ್ಪು ನೀಡಲಾಗಿದೆ ಎಂದು ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದೆ.
Published by:Sushma Chakre
First published: