ಈ ಮಾಸ್ತರ್ ರಾತ್ರಿಲೂ ಕ್ಲಾಸ್ ತಗೋತಾರೆ.. ಮಕ್ಕಳ ಪಾಲಿನ ಆರಾಧ್ಯ ದೈವ ಈ ಗುರು...!

news18
Updated:September 5, 2018, 12:45 PM IST
ಈ ಮಾಸ್ತರ್ ರಾತ್ರಿಲೂ ಕ್ಲಾಸ್ ತಗೋತಾರೆ.. ಮಕ್ಕಳ ಪಾಲಿನ ಆರಾಧ್ಯ ದೈವ ಈ ಗುರು...!
news18
Updated: September 5, 2018, 12:45 PM IST
-ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ ( ಸೆ.05) :  ಹೈದರಾಬಾದ್ ಕರ್ನಾಟಕ ಶೈಕ್ಷಣಿಕವಾಗಿ ತೀರಾ ಹಿಂದುಳಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಪ್ರತಿ ಬಾರಿಯೂ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಫಲಿತಾಂಶ ಬಂದಾಗ ಪ್ರತಿ ಬಾರಿಯೂ ಈ ಭಾಗದ ಜಿಲ್ಲೆಗಳು ಕೊನೆಯ ಸ್ಥಾನ ಅಲಂಕರಿಸುವುದು ಸಾಮಾನ್ಯ. ಹತ್ತಾರು ಶಾಲೆಗಳು ಶೂನ್ಯ ಫಲಿತಾಂಶ ತರುವ ಮೂಲಕ ಗಮನ ಸೆಳೆದಿದೆ.  ಇಂತಹ ಪರಿಸ್ಥಿತಿ ಇರುವ ಹೈ.ಕ. ಭಾಗದಲ್ಲಿ ಶಾಲೆಯೊಂದು ಗಮನ ಸೆಳೆಯುತ್ತಿದೆ.

ಸರ್ಕಾರಿ ಶಾಲೆಯ ಮಕ್ಕಳಿಗೆ ವರವಾಗಿ ಸಿಕ್ಕಿರುವ ಅಪರೂಪದ ಈ ಶಿಕ್ಷಕರ ಹೆಸರು ನಾಗೇಂದ್ರಪ್ಪ ಅವರಾದಿ. ಕಲಬುರಗಿ ಜಿಲ್ಲೆಯ ಡೊಂಗರಗಾಂವ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ಮೂರು ವರ್ಷದ ಹಿಂದೆ ಇದೇ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಬಡ್ತಿ ಹೊಂದಿದ್ದಾರೆ.

ಅವರ ಮುತುವರ್ಜಿಯ ಪರಿಣಾಮ ಎಸ್.ಎಸ್.ಎಲ್.ಸಿ. ಫಲಿತಾಂಶ ತೀವ್ರಗತಿಯಲ್ಲಿ ಸುಧಾರಣೆ ಕಂಡಿದೆ. ರಾತ್ರಿ ವೇಳೆಯೂ ವಿಶೇಷ ತರಗತಿಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಎಂಥದೇ ಡೌಟ್ ಇದ್ದರೂ ಶಿಕ್ಷಕರು ಮುತುವರ್ಜಿಯಿಂದ ಹೇಳಿಕೊಡುತ್ತಾರೆ. ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಸ್ಥಿತಿಯಲ್ಲಿರುವ ಈ ದಿನಗಳಲ್ಲಿ ಈ ಶಾಲೆಗೆ ಬರಲು ಪುಣ್ಯ ಮಾಡಿದ್ದೇವೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಡೊಂಗರಗಾಂವ ಮತ್ತು ಸುತ್ತಲಿನ ತಾಂಡಾ ಹಳ್ಳಿಗಳ ಮಕ್ಕಳು ಇದೇ ಶಾಲೆಗೆ ಬರುತ್ತಿದ್ದಾರೆ. ಡೊಂಗರಗಾಂವ ಪ್ರೌಢ ಶಾಲೆಯಲ್ಲಿ 8 ರಿಂದ 10ನೇ ತರಗತಿವರೆಗಿದ್ದು, 223 ವಿದ್ಯಾರ್ಥಿಗಳು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಖಾಸಗಿ ಶಾಲೆಗಿಂತಲೂ ಈ ಶಾಲೆಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಅದಕ್ಕೆ ಕಾರಣ ಈ ಶಾಲೆಯಲ್ಲಿ ಬರುವ ಫಲಿತಾಂಶ. ನಾಗೇಂದ್ರಪ್ಪ ಅವರಾದಿ ಅವರು ಮುಖ್ಯೋಪಾಧ್ಯಾಯರಾದ ನಂತರ ಶಾಲೆಯಲ್ಲಿ ಹತ್ತಾರು ಬದಲಾವಣೆಗಳನ್ನು ತಂದಿದ್ದಾರೆ.

ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಪರಿವರ್ತನೆ ತರುವ ಉದ್ದೇಶದಿಂದಲೇ ಡೊಂಗರಗಾಂವ ಶಾಲೆ ಆಯ್ಕೆ ಮಾಡಿಕೊಂಡೆ. ಮಕ್ಕಳಲ್ಲಿ ಪರಿವರ್ತನೆ ತರಲು, ಗುಣಾತ್ಮಕ ಶಿಕ್ಷಣ ನೀಡಲು ಹಲವಾರು ಪ್ರಯತ್ನಗಳನ್ನು ಮಾಡಿದ್ದೇನೆ. ತರಗತಿಯಲ್ಲಿನ ಪಾಠಗಳ ಜೊತೆ ಪ್ರೊಜೆಕ್ಟರ್ ಮೂಲಕ ಪಾಠ ಬೋಧನೆ, ಆಡಿಯೋಗಳ ಮೂಲಕ ಪಠ್ಯ ಮನನ ಮಾಡಿಸುವ ಪ್ರಯತ್ನಗಳನ್ನು ಮಾಡಲಾಗಿದೆ.
Loading...

ಪರಿಣಾಮವಾಗಿ ಎಸ್.ಎಸ್.ಎಲ್.ಸಿಯಲ್ಲಿ ಕಳೆದ ವರ್ಷ ಶೇ.94 ರಷ್ಟು ಫಲಿತಾಂಶ ಬಂದರೆ, ಈ ವರ್ಷ ಶೇ.95 ರಷ್ಟು ಫಲಿತಾಂಶ ಬಂದಿದೆ ಎನ್ನುತ್ತಾರೆ ಮುಖ್ಯೋಪಾಧ್ಯಾಯ ನಾಗೇಂದ್ರಪ್ಪ ಅವರಾದಿ. ಶೇ.95 ರಷ್ಟು ಅಂಕ ಪಡೆಯುವ ಮೂಲಕ ಭುವನೇಶ್ವರಿ ಎಂಬ ವಿದ್ಯಾರ್ಥಿನಿ ಕಲಬುರ್ಗಿ ತಾಲೂಕಿಗೆ ಪ್ರಥಮ ರಾಂಕ್ ಗಳಿಸಿದ್ದುದು ತಮ್ಮ ಶಾಲೆಯ ಹೆಗ್ಗಳಿಕೆ ಎನ್ನುತ್ತಾರೆ ನಾಗೇಂದ್ರಪ್ಪ.

8ನೇ ತರಗತಿಗೆ ಪ್ರವೇಶ ಪಡೆಯುತ್ತಿದ್ದಂತೆಯೇ ವಿದ್ಯಾರ್ಥಿಗಳ ಮನಸ್ಥಿತಿಯನ್ನು ಅರಿತುಕೊಂಡು ಅವರಿಗೆ ತಕ್ಕಂತೆಯೇ ಪಾಠ ಬೋಧನೆ ಮಾಡಿ, ವಿಶೇಷ ತರಬೇತಿ ನೀಡಲಾಗುತ್ತದೆ. ಎ ಮತ್ತು ಬಿ ಗುಂಪು ರಚಿಸಿ ಪ್ರತಿ ಮಕ್ಕಳ ಅಭ್ಯಾಸದ ಮೇಲೂ ಗಮನ ಹರಿಸಲಾಗುತ್ತದೆ. ಪ್ರತಿ ಪಾಠ ಬೋಧನೆ ಮುಗಿಯುತ್ತಿದ್ದಂತೆಯೇ ಟೆಸ್ಟ್ ಇಡುವುದು, ಉತ್ತಮ ಪ್ರತಿಭೆ ತೋರುವ ಮಕ್ಕಳಿಗೆ ಶಿಕ್ಷಕರೇ ಬಹುಮಾನ ನೀಡುವುದು.

ಪರೀಕ್ಷೆ ಹತ್ತಿರ ಬರುತ್ತಿದ್ದಂತೆಯೇ ನಾಲ್ಕು ತಿಂಗಳ ಕಾಲ ಹಗಲು ಹೊತ್ತಿನ ಪಾಠದ ಜೊತೆಗೆ ರಾತ್ರಿ ಹೊತ್ತಿನಲ್ಲಿಯೂ ಪಾಠ ಹೇಳಿ ಕೊಡುವುದು. ಮುಖ್ಯೋಪಾಧ್ಯಾಯ ನಾಗೇಂದ್ರಪ್ಪ ಅವರು ರಾತ್ರಿ ಹೊತ್ತಿನಲ್ಲಿಯೂ ಶಾಲೆಯಲ್ಲಿ ಉಳಿದುಕೊಂಡು ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ, ಅಭ್ಯಾಸಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಪಾಠದ ಜೊತೆಗೆ ಆಟ ಮತ್ತಿತರ ಚಟುವಟಿಕೆಗಳಿಗೂ ಶಾಲೆಯಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಮುಖ್ಯೋಪಾಧ್ಯಾಯರ ಪ್ರಯತ್ನಕ್ಕೆ ಇತರೆ ಶಿಕ್ಷಕರೂ ಬೆಂಬಲವಾಗಿ ನಿಂತಿದ್ದು, ಶಾಲೆ ತೀವ್ರಗತಿಯಲ್ಲಿ ಶೈಕ್ಷಣಿಕ ಪ್ರಗತಿ ಕಾಣುವಂತಾಗಿದೆ.

ನಾಗೇಂದ್ರಪ್ಪ ಅವರು ಕೇವಲ ತಮ್ಮ ಸಮಯವನ್ನು ಮಾತ್ರ ವಿದ್ಯಾರ್ಥಿಗಳಿಗೆ ಮೀಸಲಿಟ್ಟಿಲ್ಲ. ಅದರ ಜೊತೆಗೆ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ತಮ್ಮ ವೇತನವನ್ನೂ ವಿನಿಯೋಗಿಸುತ್ತಿದ್ದಾರೆ. ರಾತ್ರಿ ವೇಳೆ ಶಾಲೆಗೆ ಬರುವ ಮಕ್ಕಳಿಗೆ ಊಟ, ಉಪಹಾರದ ವ್ಯವಸ್ಥೆಗೆ ತಮ್ಮ ವೇತನದ ಹಣವನ್ನು ವ್ಯಯಿಸುತ್ತಿದ್ದಾರೆ. ಜೊತೆಗೆ ವಿಷಯ ತಜ್ಞರನ್ನು ತಮ್ಮ ಸ್ವಂತ ಖರ್ಚಿನಲ್ಲಿ ಕರೆಯಿಸಿ, ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾಗೇಂದ್ರಪ್ಪ ಅವರ ಕಾರ್ಯಕ್ಕೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಬಿ.ಇ.ಒ. ಸಿ.ಎಸ್.ಮುಧೋಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿಕ್ಷಕರು ಮನಸ್ಸು ಮಾಡಿದರೆ ಶಾಲೆಯ ಫಲಿತಾಂಶವನ್ನು ಹೇಗೆ ಸುಧಾರಿಸಬಹುದು, ಉತ್ತಮ ವಿದ್ಯಾರ್ಥಿಯನ್ನು ಹೇಗೆ ರೂಪಿಸಬಹುದು ಎಂಬುದಕ್ಕೆ ಮುಖ್ಯೋಪಾಧ್ಯಾಯ ನಾಗೇಂದ್ರಪ್ಪ ಅವರಾದಿ ಅವರ ಕಾರ್ಯವೈಖರಿಯೇ ಸಾಕ್ಷಿ. ವಿದ್ಯಾರ್ಥಿಗಳ ಏಳ್ಗೆಗಾಗಿ ಮನೆಯನ್ನೂ ಬಿಟ್ಟು, ಶಾಲೆಯಲ್ಲಿಯೇ ವಾಸ ಮಾಡುತ್ತಾ, ಬಂದ ಸಂಬಳವನ್ನೂ ವಿದ್ಯಾರ್ಥಿಗಳ ಪ್ರಗತಿಗಾಗಿ ಖರ್ಚು ಮಾಡುತ್ತಿರುವ ನಾಗೇಂದ್ರಪ್ಪ ಅಪರೂಪದ ಶಿಕ್ಷಕ ಎನಿಸಿಕೊಳ್ಳುತ್ತಾರೆ. ನಾಗೇಂದ್ರಪ್ಪ ಅವರ ಪ್ರಯತ್ನದ ಫಲವಾಗಿ ಫಲಿತಾಂಶದಿಂದ ಹಿಡಿದು, ಇತರೆ ಚಟುವಟಿಕೆಗಳ ಮೂಲಕವೂ ಡೊಂಗರಗಾಂವ ಪ್ರೌಢ ಶಾಲೆ ಗಮನ ಸೆಳೆಯುತ್ತಿದೆ.

First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...