news18-kannada Updated:January 13, 2021, 9:06 AM IST
ಕೊಡವರು
ಕೊಡಗು(ಜ.13): ನೀವು ಓಟದ ಸ್ಪರ್ಧೆ, ಹಗ್ಗ-ಜಗ್ಗಾಟ, ಇಲ್ಲ ಯಾರು ಹೆಚ್ಚು ಮುದ್ದೆ ತಿನ್ನುತ್ತಾರೆ ಎನ್ನೋ ಸ್ಪರ್ಧೆಗಳನ್ನು ನೋಡಿರ್ತಿರಾ ಅಲ್ವಾ. ಆದ್ರೆ ಇಲ್ಲಿ ಕೊಂಬು ಮೀಸೆಗೂ, ಉದ್ದುದ್ದ ಜಡೆಗೂ ಸ್ಪರ್ಧೆ ನಡೆದಿದೆ. ಇಂದು ಜಡೆ ಬೆಳೆಸೋದು ಅಂದರೆ ಬಹುತೇಕ ಮಹಿಳೆಯರಿಗೆ, ಯುವತಿಯರಿಗೆ ಇಷ್ಟವೇ ಆಗೋಲ್ಲ. ಆದರೆ ಇಲ್ನೋಡಿ ಮೊಣಕಾಲಿಗಿಂತಲೂ ಕೆಳಕ್ಕೆ ಇಳಿಬಿದ್ದ ಜಡೆ. ರಟ್ಟೆಘಾತ್ರಕೆ ಕಡುಕಪ್ಪು ಬಣ್ಣದಿಂದ ಹೊಳೆಯೋ ಜಡೆ. ಇನ್ನು ಕೊಬ್ಬಿದ ಟಗರು ಕೊಂಬಿನಂತೆ ಇರುವ ಮೀಸೆ ಮೇಲೆ ಬೆರಳಿಟ್ಟು ತಿರುವುತ್ತಾ ಗಹಗಹಿಸಿ ನಗೋ ಸ್ಪರ್ಧಿಗಳು. ಹೌದು ಇಂತಹ ವಿಶೇಷ ಸ್ಪರ್ಧೆ ನಡೆದಿದ್ದು ವೀರತೆ, ಶೂರತೆಗೆ ಹೆಸರು ವಾಸಿಯಾಗಿರುವ ಕೊಡಗು ಜಿಲ್ಲೆಯಲ್ಲಿ.
ಇಲ್ಲಿನ ಸಂಸ್ಕೃತಿ ಆಚಾರ, ವಿಚಾರ ಬಿಂಬಿಸಲು, ಊರ್ ಮಂದ್ ನಮ್ಮೆಯಲ್ಲಿ ಅನಾವರಣಗೊಂಡ ದೃಶ್ಯಗಳಿವು. ನೃತ್ಯ ಮಾಡುತ್ತಲೇ ಕಾವೇರಮ್ಮನಿಗೆ ನಮಿಸುತ್ತಿರುವ ಕೊಡವತ್ತಿಯರು, ಧೀರತೆಯಿಂದ ಗನ್ನು ಹೆಗಲೇರಿಸಿ ತೆಂಗಿನಕಾಯಿಗೆ ಶೂಟ್ ಮಾಡುತ್ತಿರುವ ಯುವಕರು, ಆಗಷ್ಟೇ ಶೂಟ್ ಮುಗಿಸಿ ಗನ್ ಹಿಡಿದು ಫೋಸ್ ಕೊಡುತ್ತಿರೋ ಕೊಡವ ಯುವತಿಯರು. ಹೌದು, ಹೀಗೆ ವೀರತೆ, ಶೂರತೆಯ ಹಾಗೂ ದೇಶದಲ್ಲೇ ವಿಶೇಷ ಸಂಸ್ಕೃತಿಯನ್ನು ಬಿಂಬಿಸಲು ಯುನೈಟೆಡ್ ಕೊಡವ ಆರ್ಗನೈಸೇಷನ್ ವಿರಾಜಪೇಟೆ ತಾಲ್ಲೂಕಿನ ಕಣ್ಣಂಗಾಲದಲ್ಲಿ ಆಯೋಜಿಸಿದ್ದ ಊರ್ ಮಂದ್ ಕಾರ್ಯಕ್ರಮದಲ್ಲಿ ಈ ಸ್ಪಧೆಗಳು ಸಾವಿರಾರು ನೋಡುಗರ ಕಣ್ಮನ ಕೋರೈಸಿದವು.
Makar Sankranti 2021: ಚನ್ನಪಟ್ಟಣದ ಕರಿಕಬ್ಬಿಗೆ ಎಲ್ಲೆಡೆ ಬೇಡಿಕೆ; ಕೊರೋನಾ ಗಾಳಿಗೆ ಇಳಿಮುಖವಾದ ಕಬ್ಬಿನ ಬೆಲೆ
ಕೊಡಗಿನಾದ್ಯಂತ ಇರುವ ಕೊಡವರ ವಿಶೇಷ ಸಾಂಸ್ಕೃತಿಕ ಸ್ಥಾನವಾದ ಮಂದ್ಗಳ ಮೂಲಕ ಎಲ್ಲರನ್ನೂ ಒಂದುಗೂಡಿಸಿ, ಕೊಡವರ ಜಾನಪದ ಕಲಾ ಪ್ರಕಾರಗಳನ್ನು, ಸಂಸ್ಕೃತಿ ಪರಂಪರೆಯನ್ನು ಉಳಿಸುವ ಕಾರ್ಯವನ್ನು ಯುಕೋ ಸಂಸ್ಥೆ ಕಳೆದ 7 ವರ್ಷಗಳಿಂದ ನಡೆಸುತ್ತಿದೆ. ಇಂದು ನಡೆದ ಊರ್ ಮಂದ್ ನಮ್ಮೆಯಲ್ಲಿ ಕೊಡವ ಸಾಂಪ್ರದಾಯಿಕ ಉಡುಗೆ ಧರಿಸಿದ್ದ ಯುವಕರು ಕೋಲಾಟ ಪ್ರದರ್ಶಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಜನರ ಮೈ ರೋಮಾಂಚನಗೊಳಿಸಿದರು.
ಅಷ್ಟೇ ಅಲ್ಲ ಉದ್ದುದ್ದ ಜಡೆ ಬಿಟ್ಟು ಕೊಡವ ಸೀರೆಯನ್ನುಟ್ಟು ಯುವತಿಯರು, ಮಹಿಳೆಯರು ಎಲ್ಲರ ಹುಬ್ಬೇರುವಂತೆ ಮಾಡಿದರು. ಮತ್ತೊಂದೆಡೆ ಕೊಂಬು ಮೀಸೆ ಬಿಟ್ಟಿದ್ದ ಕೊಡಗಿನ ವೀರರು ವೇದಿಕೆ ಮುಂದಿದ್ದ, ಇತರರನ್ನು ದಂಗುಬಡಿಸಿದರು. ಉದ್ದುದ್ದ ಮೀಸೆ ತಿರುಗಿಸಿ ಎಲ್ಲರ ಹುಬ್ಬೇರುವಂತೆ ಮಾಡಿದರು.
ಇನ್ನು ಯುವಕರು ಯುವತಿಯರು, ಮಹಿಳೆಯರು ಎನ್ನೋ ಬೇಧ ಭಾವವಿಲ್ಲದೆ ಎಲ್ಲರೂ ತೆಂಗಿನ ಕಾಯಿಗೆ ಗುಂಡು ಹೊಡೆದು ಶೌರ್ಯ ಮೆರೆದು ಆ ಮೂಲಕ ಎಂಜಾಯ್ ಮಾಡಿದ್ರು. ಇನ್ನು ಕೋಲಾಟ, ಉಮ್ಮತ್ ಆಟ, ಬೊಳಕ್ ಆಟಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಅಷ್ಟೇ ಅಲ್ಲ, ಪರಿಯಕಳಿ ನೃತ್ಯದ ಮೂಲಕ ಸ್ಪರ್ಧಿಗಳು ನೋಡಗರನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದರು.
ಒಟ್ಟಿನಲ್ಲಿ ಕೊರೋನಾದಿಂದಾಗಿ ಕಳೆದ ಒಂದು ವರ್ಷದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲದೆ ಮನೆಯಲ್ಲೇ ಲಾಕ್ ಆಗಿದ್ದ ಕೊಡವರು, ಧಾರ್ಮಿಕ ಕ್ಷೇತ್ರಗಳ ಪ್ರತೀಕವಾದ ಊರ್ ಮಂದ್ ನಮ್ಮೆ ಕಾರ್ಯಕ್ರಮದಲ್ಲಿ ವರ್ಷದ ಬೇಸರಕ್ಕೆ ಬೈ ಹೇಳಿ ಎಂಜಾಯ್ ಮಾಡಿದರು.
Published by:
Latha CG
First published:
January 13, 2021, 9:02 AM IST