Davanagere: ಈ ಜಾತ್ರೆ ವೇಳೆ ಊರವರು ಚಪ್ಪಲಿ ಧರಿಸಲ್ವಂತೆ, ಗ್ರಾಮಕ್ಕೆ ಮುಳ್ಳಿನ ಬೇಲಿ ಹಾಕ್ತಾರೆ ಯಾಕೆ ಗೊತ್ತಾ?
ದಾವಣಗೆರೆಯ ಈ ಜಾತ್ರೆಯ ಸಮಯದಲ್ಲಿ ಗ್ರಾಮದ ಗಡಿ ಭಾಗದ ತುಂಬ ಮುಳ್ಳಿನ ಬೇಲಿ (Fence) ಹಾಕಿ ಅಲ್ಲಿ ಇಲ್ಲಿ ಕಣ್ಣುತಪ್ಪಿಸಿ ಗ್ರಾಮದ ಹೊರಗೆ ಹೋಗುವವರನ್ನ ತಪಾಸಣೆ ಮಾಡಲು ಓರ್ವ ಯುವಕನನ್ನು ಕಾವಲಿಗೆ ನಿಲ್ಲಿಸಿರಲಾಗುತ್ತದೆ.
ದಾವಣಗೆರೆ (ಮಾರ್ಚ್ 9): ಗ್ರಾಮೀಣ ಭಾಗಗಳಲ್ಲಿ ಗ್ರಾಮದ ದೇವತೆಗಳ ಜಾತ್ರೆಯನ್ನು (Fair) ಹೇಗೆಲ್ಲ ಆಚರಣೆ ಮಾಡುತ್ತಾರೆ ಅಂತ ಎಲ್ಲರಿಗೂ ಗೊತ್ತಿದೆ. ಆದರೆ, ದಾವಣಗೆರೆಯ (Davanagere) ಗ್ರಾಮವೊಂದರಲ್ಲಿ ಮಾತ್ರ ವಿಶೇಷವಾಗಿ ಗ್ರಾಮ ದೇವತೆ ಜಾತ್ರೆ ಆಚರಣೆ ಮಾಡುತ್ತಾರೆ. ಹೌದು, 9 ದಿನ ನಡೆಯೋ ಈ ಜಾತ್ರೆಗೆ ಆಚಾರ ಮತ್ತು ಪದ್ದತಿಗಳು ಬೇರೆಲ್ಲೂ ಇಲ್ಲ ಅನಿಸುತ್ತೆದೆ. ಏಕೆಂದರೆ ನೀವು ಈ ಜಾತ್ರೆ ಬಗ್ಗೆ ಕೇಳಿದರೆ ಹೀಗೂ ಮಾಡ್ತಾರಾ ಜಾತ್ರೆನಾ ಅಂದುಕೊಳ್ಳೊದಂತು ಸತ್ಯ. ಜಾತ್ರೆಯ ಸಮಯದಲ್ಲಿ ಗ್ರಾಮದ ಗಡಿ ಭಾಗದ ತುಂಬ ಮುಳ್ಳಿನ ಬೇಲಿ (Fence) ಹಾಕಿ ಅಲ್ಲಿ ಇಲ್ಲಿ ಕಣ್ಣುತಪ್ಪಿಸಿ ಗ್ರಾಮದ ಹೊರಗೆ ಹೋಗುವವರನ್ನ ತಪಾಸಣೆ ಮಾಡಲು ಓರ್ವ ಯುವಕನನ್ನು ಕಾವಲಿಗೆ ನಿಲ್ಲಿಸಿರಲಾಗುತ್ತದೆ. ಇದು ದಾವಣಗೆರೆ ತಾಲೂಕಿನ ಹೊಸ ಕುಂದವಾಡ ಗ್ರಾಮದಲ್ಲಿ ನಡೆಯುವ ಗ್ರಾಮದ ಮಾರಿಕಾಂಬ ಜಾತ್ರೆಯ ವಿಶೇಷವಾಗಿದೆ.
ಜಾತ್ರೆ ವೇಳೆ ಗ್ರಾಮದಿಂದ ಏನನ್ನೂ ಹೊರಗೆ ತೆಗೆದುಕೊಂಡು ಹೋಗುವಂತಿಲ್ಲ:
ಈ ಗ್ರಾಮದಲ್ಲಿ 9 ದಿನಗಳ ಕಾಲ ಮಾರಿಕಾಂಭ ಗ್ರಾಮ ದೇವಿ ಜಾತ್ರೆಯನ್ನು ಮಾಡಲಾಗುತ್ತದೆ. ಈ ಜಾತ್ರೆಯ ಕೆಲ ವಿಚಿತ್ರ ಆಚರಣೆಗಳು ಅನಾಧಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಅದೆನಂದರೆ ಈ ಊರಿನಿಂದ ಯಾವುದೇ ವಸ್ತುಗಳನ್ನು 9 ದಿನಗಳ ಕಾಲ ಹೊರಗೆ ತೆಗೆದುಕೊಂಡು ಹೋಗುವಂತಿಲ್ಲ. ಅದಕ್ಕಾಗಿ ಇಡೀ ಊರಿಗೆ ಮುಳ್ಳಿನ ಬೇಲಿಯನ್ನು ಹಾಕಲಾಗುತ್ತದೆ.
ಜೊತೆಗೆ ಕಣ್ತಪ್ಪಿಸಿ ಬರುವವರನ್ನು ತಪಾಸಣೆ ಮಾಡಲಾಗುತ್ತದೆ. ಹೊಸ ಕುಂದವಾಡ ಗ್ರಾಮದಲ್ಲಿ ಗ್ರಾಮದೇವತೆ ಮಾರಿಕಾಂಭ ಜಾತ್ರೆಯನ್ನು ಇಷ್ಟೊಂದು ಕಟ್ಟುನಿಟ್ಟಾಗಿ ಆಚರಣೆ ಮೂಲ ಆಚರಿಸಲಾಗುತ್ತದೆ. ಇದಕ್ಕೆ ಸಂಪ್ರದಾಯದ ಪ್ರಕಾರ ಸಾರ ಹಾಕುವುದು ಎನ್ನಲಾಗುತ್ತದಂತೆ. ಸಾರ್ ಹಾಕಿದ ಮೇಲೆ ಊರಿನ ಸುತ್ತಲೂ ಬೇಲಿ ಹಾಕಿ ಊರಿನ ಗ್ರಾಮಸ್ಥರನ್ನು ಹೊರತು ಪಡಿಸಿ ಬೇರೆ ಊರಿನಿಂದ ಯಾರು ಕೂಡ ಊರನ್ನ ಪ್ರವೇಶ ಮಾಡುವಂತಿಲ್ಲ ಎಂಬ ನಿಯಮವಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಒಂದು ವೇಳೆ ಅವರು ಊರೊಳಗೆ ಯಾರದರೂ ಬಂದಲ್ಲಿ ಜಾತ್ರೆ ಮುಗಿಯುವ ತನಕ ಅಂದರೆ 9 ದಿನಗಳ ಕಾಲ ಊರು ಬಿಟ್ಟು ಹೊರ ಹೊಗುವಂತಿಲ್ಲ. ಇನ್ನು, ಈ ಜಾತ್ರೆಯು ಪ್ರತಿ 5 ವರ್ಷಕ್ಕೊಮ್ಮೆ, 9 ವರ್ಷಕ್ಕೆ ಹಾಗೂ 11 ವರ್ಷ ಹೀಗೆ ಪ್ರತಿ ಸಲ ಜಾತ್ರೆ ವರ್ಷದಿಂದ ವರ್ಷಕ್ಕೆ ಬದಲಾಗುತ್ತದಂತೆ. ಜಾತ್ರೆಯ ವೇಳೆ ಗ್ರಾಮದ ಯಾವೊಬ್ಬ ವ್ಯಕ್ತಿಯು ಯಾವುದೇ ವಸ್ತುಗಳನ್ನ ತೆಗೆದುಕೊಂಡು ಹೊರಹೋಗುವಂತಿಲ್ಲ. ಬಂಗಾರ, ಬುತ್ತಿ, ಹಾಲು, ಮೊಸರು ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನ ಹೊರ ತೆಗೆದುಕೊಂಡು ಹೋಗುವಂತಿಲ್ಲ. ಇದಕ್ಕೆ ಕಾರಣ ಅಂದರೆ ಊರು ಸಮೃದ್ದವಾಗಿ ಬೆಳೆಯಲಿ. ಎಲ್ಲರ ಸಿರಿವಂತರಾಗಿ ಊರಿನ ಸಂಪತ್ತು ಆಚೆ ಹೋಗಬಾರದು ಎಂದು ಊರಿಗೆ ಮುಳ್ಳಿನ ಬೇಲಿಯನ್ನ ಹಾಕಿ ಕಟ್ಟು ನಿಟ್ಟಿನ ಆಚರಣೆಯನ್ನು ಮಾಡುತ್ತಾರೆ ಈ ಗ್ರಾಮಸ್ಥರು.
ಜಾತ್ರೆಯ 9 ದಿನ ಚಪ್ಪಲಿ ಧರಿಸುವಂತಿಲ್ಲ:
ಅಲ್ಲದೆ ಜಾತ್ರೆಯ 9 ದಿನವು ಯಾರೊಬ್ಬರು ಊರಲ್ಲಿ ಚಪ್ಪಲಿ ಧರಿಸದೆ ಊರಿನಲ್ಲಿ ಓಡಾಡುತ್ತಾರೆ. ಇನ್ನೂ ಜಾತ್ರೆ ನಡೆಯುವ 9 ದಿನವು ಯಾರು ನಿಯಮ ಉಲ್ಲಂಘಿಸುವಂತಿಲ್ಲ. ಒಂದು ವೇಳೆ ಈ ನಿಯಮ ಉಲ್ಲಂಘಿಸಿದರೆ ಜನರು ಸಮಸ್ಯೆ ಸುಳಿಯಲ್ಲಿ ಸಿಲುಕುತ್ತಾರೆ ಎಂಬುದು ಗ್ರಾಮದ ಜನರ ನಂಬಿಕೆ. ಹೀಗಾಗಿ ಗ್ರಾಮದ ಜನರು ಕೂಡ ಇದನ್ನ ನಂಬಿಕೊಂಡೆ ಜಾತ್ರೆಯನ್ನ ಆಚರಣೆ ಮಾಡಿಕೊಂಡು ಬಂದಿದ್ದಾರೆ.
9 ದಿನ ನಡೆಯುವ ಜಾತ್ರೆ ಇದೇ ತಿಂಗಳು 16ಕ್ಕೆ ಮುಗಿಯಲಿದೆ. ಈ ವೇಳೆ ಊರಲ್ಲಿ ಈ ಮೊದಲು ಕೋಣ ಬಲಿ ನೀಡಲಾಗುತಿತ್ತು. ಆದರೆ ಇದೀಗ ಪ್ರಾಣಿ ಬಲಿ ನಿಷೇಧ ಇರುವುದರಿಂದ ಸಿರಂಜ್ ಮೂಲಕ ರಕ್ತ ತೆಗೆದು ದೇವಿಗೆ ಅರ್ಪಣೆ ಮಾಡಲಾಗುತ್ತದೆ. ಅದೆ ವೇಳೆ ಊರಲ್ಲಿ ಕೆಲವರು ಕುರಿ ಬಲಿ ನೀಡಿ ಬಾಡೂಟ ಮಾಡಿದರೆ, ಕೆಲ ಮನೆಗಳಲ್ಲಿ ಸಿಹಿ ಊಟ ಮಾಡಲಾಗುತ್ತದೆ. ಇನ್ನೂ ಊರಿಗೆ ಮುಳ್ಳಿನ ಬೇಲಿ ಆಚರಣೆ ವಿಚಿತ್ರ ಅನಿಸಿದರೂ, ಇಂತಹ ಆಚರಣೆಯಿಂದ ತಮ್ಮ ಗ್ರಾಮಕ್ಕೆ ಒಳಿತೆ ಆಗುತ್ತೆ ಅನ್ನೋದು ಮಾರಿಕಾಂಭ ಭಕ್ತರ ನಂಬಿಕೆಯಾಗಿದೆ.
ವರದಿ: ಸಂಜಯ್ ಕುಂದುವಾಡ
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ