ಈ ಗ್ರಾಮದಲ್ಲಿ ಗೌರಿಗೆ ಅಗ್ರಸ್ಥಾನ; ಈ ದೇವಿಗಿದೆ ಬರೋಬ್ಬರಿ ಮುನ್ನೂರು ವರ್ಷಗಳ ಇತಿಹಾಸ

ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸೇರಿದಂತೆ ಹಳೇ ಮೈಸೂರು ಭಾಗಕ್ಕೆ ಈ ಗೌರಿ ಚಿರಪರಿಚಿತಳು. ಅರಿಶಿನ, ಕಡಲೆಬೇಳೆ, ಬೆಣ್ಣೆ, ಕೇಸರಿಯನ್ನು ಬಳಸಿ ಗೌರಿ ಶಾಸ್ತ್ರೋಕ್ತವಾಗಿ ಗೌರಿ ಮೂರ್ತಿಯನ್ನು ತಯಾರಿಸಲಾಗುತ್ತೆ. ಮುನ್ನೂರು ವರ್ಷಗಳಿಂದಲೂ ಈ ಗ್ರಾಮದ ಐದು ಕುಟುಂಬಗಳು ಇಂದಿಗೂ ಈ ರೂಢಿ-ಪದ್ಧತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬರುತ್ತಿದ್ದಾರೆ

G Hareeshkumar | news18-kannada
Updated:September 24, 2019, 10:56 PM IST
ಈ ಗ್ರಾಮದಲ್ಲಿ ಗೌರಿಗೆ ಅಗ್ರಸ್ಥಾನ; ಈ ದೇವಿಗಿದೆ ಬರೋಬ್ಬರಿ ಮುನ್ನೂರು ವರ್ಷಗಳ ಇತಿಹಾಸ
ಧಾನ್ಯಗಳಿಂದ ತಯಾರಾದ ಗೌರಿ
  • Share this:
ಚಿಕ್ಕಮಗಳೂರು (ಸೆ.24): ಗೌರಿ-ಗಣೇಶ ಹಬ್ಬ ಅಂದರೆ ಅಲ್ಲಿ ಗಣೇಶನಿಗೆ ಅಗ್ರಸ್ಥಾನ. ಆದರೆ ಈ ಊರಲ್ಲಿ ಮಾತ್ರ ಗೌರಿಗೆ ಅಗ್ರಸ್ಥಾನ. ಎಲ್ಲಾ ಕಡೆ ಗೌರಿ ವಿಗ್ರಹ ಚಿಕ್ಕದಾಗಿದ್ದರೆ, ಇಲ್ಲಿ ಗಣೇಶನ ವಿಗ್ರಹ ಚಿಕ್ಕದಾಗಿರುತ್ತೆ. ವಿವಿಧ ಧಾನ್ಯಗಳಿಂದಲೇ ತಯಾರಾಗುವ ಇಲ್ಲಿನ ಗೌರಿ ಮೂರು ದಿನಗಳಿಗೊಮ್ಮೆ ಒಂದೊಂದು ರೀತಿಯಲ್ಲಿ ಬದಲಾಗುತ್ತಾಳೆ. ಒಂದೇ ಮೂರ್ತಿಗೆ ಮೂರು ದಿನಗಳಿಗೊಮ್ಮೆ ವಿವಿಧ ರೀತಿಯ ಅಲಂಕಾರ ಮಾಡಿ ಪೂಜೆ ಸಲ್ಲಿಸುವುದು ಇಲ್ಲಿನ ಮತ್ತೊಂದು ವಿಶೇಷ. ಒಂದು ತಿಂಗಳ ಕಾಲ ನಿರಂತರವಾಗಿ ಪೂಜೆ ಸಲ್ಲಿಸುವ ಈ ಗೌರಿ ಮೂರ್ತಿಯನ್ನು ಗಣೇಶನ ವಿಗ್ರಹದೊಂದಿಗೆ ವಿಸರ್ಜಿಸುವ ಈ ಆಚರಣೆಗೆ ಮುನ್ನೂರು ವರ್ಷಗಳ ಇತಿಹಾಸವಿದೆ.

ಗಣೇಶನ ಹಬ್ಬದಂದು ರಾಜ್ಯದಲ್ಲಿ ಪ್ರತಿಷ್ಠಾಪಿಸುವ ಕೆಲವೇ ಗೌರಿ ಮೂರ್ತಿಗಳಲ್ಲಿ ಇದು ಒಂದು. ಚಿಕ್ಕಮಗಳೂರು ತಾಲೂಕಿನ ಮುಗುಳುವಳ್ಳಿಯ ಚಾವಡಿ ವಂಶಸ್ಥರು ಕಳೆದ ಮುನ್ನೂರಕ್ಕೂ ಅಧಿಕ ವರ್ಷಗಳಿಂದಲೂ ಗೌರಿಯನ್ನು ಪೂಜಿಸುತ್ತಾ ಬಂದಿದ್ದಾರೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸೇರಿದಂತೆ ಹಳೇ ಮೈಸೂರು ಭಾಗಕ್ಕೆ ಈ ಗೌರಿ ಚಿರಪರಿಚಿತಳು. ಅರಿಶಿನ, ಕಡಲೆಬೇಳೆ, ಬೆಣ್ಣೆ, ಕೇಸರಿಯನ್ನು ಬಳಸಿ ಗೌರಿ ಶಾಸ್ತ್ರೋಕ್ತವಾಗಿ ಗೌರಿ ಮೂರ್ತಿಯನ್ನು ತಯಾರಿಸಲಾಗುತ್ತೆ. ಮುನ್ನೂರು ವರ್ಷಗಳಿಂದಲೂ ಈ ಗ್ರಾಮದ ಐದು ಕುಟುಂಬಗಳು ಇಂದಿಗೂ ಈ ರೂಢಿ-ಪದ್ಧತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬರುತ್ತಿದ್ದಾರೆ. ತಿಂಗಳಲ್ಲಿ 11 ದಿನ ವಿಶೇಷ ಪೂಜೆ ಸಲ್ಲಿಸುವ ಈ ಗೌರಿಯನ್ನ ಪ್ರತಿ ಮೂರು ದಿನಗಳಿಗೊಮ್ಮೆ ಹೊಸ ರೂಪ-ಅಲಂಕಾರ ನೀಡಲಾಗುತ್ತೆ. ಪ್ರತಿ ದಿನ ಹೆಂಗಳೆಯರು ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸಿ ಗೌರಿಯಲ್ಲಿ ಹರಕೆ ಕಟ್ಟಿಕೊಳ್ಳುತ್ತಾರೆ.

ಗೌರಿ ಯಾವ ನಕ್ಷತ್ರದಲ್ಲಿ ಬಂದಿರುತ್ತಾಳೋ ಅದೇ ನಕ್ಷತ್ರದಲ್ಲಿ ಚಿಕ್ಕಮಗಳೂರಿನ ಮುಗುವಳ್ಳಿಯ ದೇವಿ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ತಿಂಗಳಿಗೆ ಒಂದು ದಿನ ಕಡಿಮೆ ಅಥವಾ ಮೂರು ದಿನ ಕಡಿಮೆಯಾಗಿ ಗೌರಿಯನ್ನು ವಿಸರ್ಜಿಸಲಾಗುತ್ತದೆ. ಕಳೆದ ನೂರಾರು ವರ್ಷಗಳಿಂದಲೂ ಈ ಪದ್ದತಿ ಇದೇ ರೀತಿ ನಡೆದುಕೊಂಡು ಬಂದಿದೆ. ಅಷ್ಟೇ ಅಲ್ಲದೇ ಹರಕೆಗಳನ್ನು ಈಡೇರಿಸುವುದರಲ್ಲಿ ಈ ದೇವಿ ಎತ್ತಿದ ಕೈ ಅಂತೆ. ಮಕ್ಕಳಿಲ್ಲದವರು ಈಕೆ ಬಳಿ ಹರಕೆ ಕಟ್ಟಿಕೊಂಡರೆ ಅವರಿಗೆ ಮಕ್ಕಳಾಗುತ್ತಂತೆ. ಕಷ್ಟ ಎಂದು ಯಾರೇ ಈಕೆಯ ಬಳಿ ಬಂದರೂ ಅವರ ಕಷ್ಟವನ್ನೆಲ್ಲಾ ನಿವಾರಣೆ ಮಾಡುತ್ತಾಳೆ. ಆದ್ದರಿಂದಲೇ ವರ್ಷದಿಂದ ವರ್ಷಕ್ಕೆ ಈ ದೇವಿ ತನ್ನ ಭಕ್ತರ ಸಂಖ್ಯೆಯನ್ನ ಹೆಚ್ಚಿಸಿಕೊಳ್ಳುತ್ತಿದ್ದಾಳೆ. ಒಟ್ಟು ಒಂದು ತಿಂಗಳ ಬಳಿಕ ಗಣೇಶನೊಂದಿಗೆ ಈ ಗೌರಿ ಕೂಡ ಮುಗುಳುವಳ್ಳಿಯ ದೇವಿ ಕೆರೆಯಲ್ಲಿ ವಿಸರ್ಜನೆಗೊಳ್ಳುತ್ತಾಳೆ.

ಇದನ್ನೂ ಓದಿ : ಸಂಸದ ತೇಜಸ್ವಿ ಸೂರ್ಯ ಪ್ರವಾಹ ಸಂತ್ರಸ್ತರ ಕಾಲಿಗೆ ಬಿದ್ದು ಕ್ಷಮೆ ಕೇಳಲಿ; ಮಾಜಿ ಸಚಿವ ಹೆಚ್.ಕೆ. ಪಾಟೀಲ್​​

ಒಟ್ಟಾರೆ, ಈ ಗೌರಿ ಲಕ್ಷಾಂತರ ಜನರ ಕಷ್ಟಗಳನ್ನು ನಿವಾರಿಸುವ ಇಷ್ಟದೇವತೆಯಾಗಿದ್ದಾಳೆ. ಗ್ರಾಮದ ಜನರು ಕೂಡ ಪ್ರತಿ ವರ್ಷ ಭಯ-ಭಕ್ತಿಯಿಂದ ಗೌರಿಯನ್ನು ಕೂರಿಸುತ್ತಾ ಬಂದಿದ್ದಾರೆ. ಮುಂದಿನ ದಿನಗಳಲ್ಲೂ ಈ ಗೌರಿ ಹೀಗೆ ಜನರ ಕಷ್ಟಗಳನ್ನು ನಿವಾರಿಸಲಿ ಎನ್ನುವುದು ನಮ್ಮ ಆಶಯ ಕೂಡ. ಅದೇನೆ ಇದ್ದರೂ, ಗಣೇಶ ಹಬ್ಬದಂದು ದೇಶದಾದ್ಯಂತ ವಿಜೃಂಭಣೆಯಿಂದ ಗಣೇಶನನ್ನ ಕೂರಿಸಿದರೆ, ಈ ಗ್ರಾಮ ಎಲ್ಲರಿಗಿಂತ ತುಸು ಭಿನ್ನ ಎಂಬಂತೆ ಗಣೇಶನ ಜೊತೆ ಗೌರಿಯನ್ನೂ ಕೂರಿಸಿ ಅಷ್ಟೆ ವಿಜೃಂಭಣೆಯಿಂದ ಪೂಜೆ ಸಲ್ಲಿಸುತ್ತಾ ಬರುತ್ತಿರುವುದು ಮತ್ತೊಂದು ವಿಶೇಷ.

ವರದಿ : ವೀರೇಶ್ ಜಿ ಹೊಸೂರ್

First published: September 24, 2019, 7:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading