ವಿಧಾನಸಭೆ ಕಲಾಪ; ಸದನದಿಂದ ಹೊರಹೋದ ಸಚಿವ ಆರ್​. ಶಂಕರ್ ವಿರುದ್ಧ ಸ್ಪೀಕರ್ ಕಾಗೇರಿ ಗರಂ

ಯಾರಿಗೂ ಹೇಳದೆ ಸಚಿವ ಆರ್. ಶಂಕರ್ ಸದನದಿಂದ ಹೊರಗೆ ಹೋಗಿದ್ದರಿಂದ ಜೆಡಿಎಸ್ ಶಾಸಕ ಮಾಗಡಿ ಮಂಜುನಾಥ ಕೇಳಿದ್ದ ಪ್ರಶ್ನೆಗೆ ಡಿಸಿಎಂ ಅಶ್ವಥ್ ನಾರಾಯಣ ಉತ್ತರ ನೀಡಲು ಮುಂದಾದರು. ಇದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಿದ್ದರಾಮಯ್ಯನವರ ಅಸಮಾಧಾನಕ್ಕೆ ಕಾರಣವಾಯಿತು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

  • Share this:
ಬೆಂಗಳೂರು (ಜ. 29): ಇಂದು ನಡೆಯುತ್ತಿರುವ ವಿಧಾನಸಭೆ ಕಲಾಪದಲ್ಲಿ ನೂತನ ಸಚಿವ ಆರ್. ಶಂಕರ್ ವಿರುದ್ಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದನದಲ್ಲಿ ಪ್ರಶ್ನೆಗೆ ಉತ್ತರ ಕೊಡದೆ ಹೊರಹೋಗಿದ್ದ ಸಚಿವ ಆರ್. ಶಂಕರ್ ಮೇಲೆ ಸ್ಪೀಕರ್ ಕಾಗೇರಿ ಬೇಸರ ಹೊರಹಾಕಿದ್ದಾರೆ. ಸಚಿವ ಆರ್​. ಶಂಕರ್ ವರ್ತನೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೂತನ ಸಚಿವರನ್ನು ಪರಿಚಯ ಮಾಡಿಕೊಡುವಾಗ ಸದನದಲ್ಲೇ ಇದ್ದ ಆರ್​. ಶಂಕರ್ ಪ್ರಶ್ನೆಗೆ ಉತ್ತರಿಸುವಾಗ ಯಾರಿಗೂ ಹೇಳದೆ ಹೊರಗೆ ಹೋಗಿದ್ದರು. ಆಗ ಶಂಕರ್ ಬದಲಾಗಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಉತ್ತರ ನೀಡಲು ಎದ್ದು ನಿಂತರು. ಇದು ಸ್ಪೀಕರ್ ಹಾಗೂ ವಿಪಕ್ಷ ನಾಯಕರ ಕೋಪಕ್ಕೆ ಕಾರಣವಾಯಿತು. ಸಚಿವರನ್ನು ಪರಿಚಯ ಮಾಡುವಾಗ ಸಚಿವ ಆರ್. ಶಂಕರ್ ಸದನದಲ್ಲಿ ಇರುತ್ತಾರೆ. ಆದರೆ, ಪ್ರಶ್ನೆಗೆ ಉತ್ತರ ಕೊಡುವಾಗ ಮಾತ್ರ ಯಾರ ಗಮನಕ್ಕೂ ಬಾರದೆ ಹೊರಗೆ ಹೋಗುತ್ತಾರೆ. ಆರ್. ಶಂಕರ್ ನೀಡಬೇಕಾದ ಉತ್ತರವನ್ನು ಡಿಸಿಎಂ ಆದ ನೀವು ಕೊಡಲು ಮುಂದಾಗುತ್ತಿದ್ದೀರಿ. ಸದನಕ್ಕೆ ಮಾಹಿತಿ ಕೊಟ್ಟು ಹೊರಗೆ ಹೋಗುವ ಸೌಜನ್ಯವೂ ಶಂಕರ್ ಅವರಿಗೆ ಇಲ್ಲವೇ? ಸದನದೊಳಗೆ ಒಂದು ಪದ್ಧತಿಯನ್ನು ಪಾಲಿಸಬೇಕಲ್ಲವೇ? ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ಹೊರಹಾಕಿದರು.

ಸದನಕ್ಕೆ ಒಂದು ಪದ್ಧತಿ ಇರುತ್ತದೆ ಅನ್ನೋದನ್ನು ಅವರಿಗೆ ಹೇಳಿ ಎಂದು ಡಿಸಿಎಂ ಅಶ್ವಥ್ ನಾರಾಯಣ ಅವರಿಗೆ ಸ್ಪೀಕರ್ ಕಾಗೇರಿ ಹೇಳಿದರು. ಜೆಡಿಎಸ್ ಶಾಸಕ ಮಾಗಡಿ ಮಂಜುನಾಥ ಕೇಳಿದ್ದ ಪ್ರಶ್ನೆಗೆ ಸಚಿವ ಆರ್. ಶಂಕರ್ ಬದಲಾಗಿ ಡಿಸಿಎಂ ಅಶ್ವಥ್ ನಾರಾಯಣ ಉತ್ತರ ನೀಡಲು ಮುಂದಾಗಿದ್ದು ಚರ್ಚೆಗೆ ಕಾರಣವಾಯಿತು.

ಇದನ್ನೂ ಓದಿ: ಕಲಾಪ ಸಲಹಾ ಸಮಿತಿ ಸಭೆಗೆ ಕಾಂಗ್ರೆಸ್ ಬಹಿಷ್ಕಾರ; ಇಂದಿನ ಸಭೆ ಮುಂದೂಡಿಕೆ

ಸದನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ಕೊಡಲು ಸಚಿವ ಆರ್. ಶಂಕರ್ ಇಲ್ಲದಿದ್ದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಆಕ್ರೋಶ ವ್ಯಕ್ತಪಡಿಸಿದರು. ಇಲಾಖೆಗೆ ಸಂಬಂಧಿಸಿದಂತೆ ಪ್ರಶ್ನೆಗಳಿಗೆ ಆಯಾ ಸಚಿವರೇ ಉತ್ತರ ಕೊಡಬೇಕು. ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗೆ ಶಂಕರ್ ಬದಲು ಡಿಸಿಎಂ ಅಶ್ವಥ್ ನಾರಾಯಣ್ ಉತ್ತರ ನೀಡಲು ಮುಂದಾಗಿದ್ದು ಸರಿಯಲ್ಲ. ಇಲ್ಲಿ ಉತ್ತರ ಕೊಡಬೇಕಾದ ಸಚಿವರು ಕೌನ್ಸಿಲ್​ಗೆ ಯಾಕೆ ಹೋದರು? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನನಗೆ ಪತ್ರ ಕೊಟ್ಟು ಅನುಮತಿ ಪಡೆದಿದ್ದಾರೆ. ಉಪ ಸಭಾಪತಿ ಚುನಾವಣೆ ಹಿನ್ನೆಲೆಯಲ್ಲಿ ವಿಧಾನ ಪರಿಷತ್​ಗೆ ಹೋಗಲು ಅನುಮತಿ ಪಡೆದಿದ್ದಾರೆ ಎಂದು ಸ್ಪೀಕರ್ ಸ್ಪಷ್ಟನೆ ನೀಡಿದರು. ಅನಿವಾರ್ಯ ಪರಿಸ್ಥಿತಿಯನ್ನು ಹೊರತುಪಡಿಸಿ ಇನ್ನುಮುಂದೆ ಈ ರೀತಿ ಆಗಬಾರದು ಎಂದು ಸಿದ್ದರಾಮಯ್ಯ ಹೇಳಿದರು.

ಇಂದಿನ ವಿಧಾನಸಭೆ ಕಲಾಪದಲ್ಲಿ 20 ಸಚಿವರು, 30 ಬಿಜೆಪಿ ಶಾಸಕರು, 25 ಕಾಂಗ್ರೆಸ್ ‌ಶಾಸಕರು, 10 ಜೆಡಿಎಸ್ ಶಾಸಕರು ಪಾಲ್ಗೊಂಡಿದ್ದರು. ಇಂದಿನ ಸದನದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೈರಾಗಿದ್ದರು.
Published by:Sushma Chakre
First published: