ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ಸ್ಪೀಕರ್​ಗೆ ಕೊಟ್ಟಿದ್ದೇ ತಪ್ಪು: ಬಿ.ವಿ. ಆಚಾರ್ಯ

ಸ್ಪೀಕರ್​ಗಳು ಆಡಳಿತ ಪಕ್ಷದ ಹಿತಾಸಕ್ತಿ ಪ್ರಕಾರ ನಡೆದುಕೊಳ್ಳುತ್ತಾರೆ. ಹಿಂದೆಲ್ಲಾ ಸ್ಪೀಕರ್​ಗಳು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದೇ ಹೆಚ್ಚು. ಈ ಹಿನ್ನೆಲೆಯಲ್ಲಿ ಸ್ಪೀಕರ್​ಗೆ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ನೀಡಬಾರದು ಎಂದು ಹಿರಿಯ ಅಡ್ವೊಕೇಟ್ ಆಗಿರುವ ಆಚಾರ್ಯ ವಾದಿಸಿದ್ದಾರೆ.

news18
Updated:July 11, 2019, 4:52 PM IST
ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ಸ್ಪೀಕರ್​ಗೆ ಕೊಟ್ಟಿದ್ದೇ ತಪ್ಪು: ಬಿ.ವಿ. ಆಚಾರ್ಯ
ಬಿವಿ ಆಚಾರ್ಯ
  • News18
  • Last Updated: July 11, 2019, 4:52 PM IST
  • Share this:
ಬೆಂಗಳೂರು(ಜುಲೈ 11): ಒಂದೆಡೆ ಮೈತ್ರಿಪಕ್ಷಗಳ ಶಾಸಕರಿಂದ ಸಾಲು ಸಾಲು ರಾಜೀನಾಮೆ; ಇನ್ನೊಂದೆಡೆ ಮೈತ್ರಿಪಕ್ಷಗಳ ಮುಖಂಡರಿಂದ ವಿಪ್ ಮತ್ತು ಅನರ್ಹತೆಯ ಅಸ್ತ್ರ. ಶಾಸಕರು ನೀಡಿದ ರಾಜೀನಾಮೆ ಅಂಗೀಕಾರ ಆಗುತ್ತೋ, ಅಥವಾ ಶಾಸಕರನ್ನೇ ಅನರ್ಹಗೊಳಿಸಲಾಗುತ್ತದೋ ಎಂದು ಹಲವರ ಕುತೂಹಲದ ನೋಟ ಸ್ಪೀಕರ್​ ಅವರತ್ತ ನೆಟ್ಟಿದೆ. ರಾಮಲಿಂಗಾ ರೆಡ್ಡಿ ಹೊರತುಪಡಿಸಿ ರಾಜೀನಾಮೆ ನೀಡಿದ ಉಳಿದ ಶಾಸಕರನ್ನು ಅನರ್ಹಗೊಳಿಸಲು ಕಾಂಗ್ರೆಸ್ ಮನವಿ ಮಾಡಿಕೊಂಡಿದೆ. ಸ್ಪೀಕರ್ ಅವರು ಶಾಸಕರನ್ನು ಏನು ಮಾಡಬೇಕೆಂದು ನಿರ್ಧರಿಸಲಿದ್ದಾರೆ. ಈ ಮಧ್ಯೆ, ಮಾಜಿ ಅಡ್ವೊಕೇಟ್ ಜನರಲ್ ಹಾಗೂ ಹಿರಿಯ ವಕೀಲ ಬಿ.ವಿ. ಆಚಾರ್ಯ ಅವರು ಸ್ಪೀಕರ್ ಅವರಿಂದ ಅಧಿಕಾರ ದುರುಪಯೋಗ ಆಗುವ ಸಾಧ್ಯತೆಯೇ ಹೆಚ್ಚು ಎಂದು ಶಂಕಿಸಿದ್ದಾರೆ.

ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ಬಿ.ವಿ. ಆಚಾರ್ಯ, ಶಾಸಕರನ್ನು ಅನರ್ಹಗೊಳಿಸುವ ಅಧಿಕಾರವನ್ನು ಸ್ಪೀಕರ್​ಗೆ ಕೊಟ್ಟಿದ್ದೇ ತಪ್ಪು ಎಂದು ಅಭಿಪ್ರಾಯಪಟ್ಟಿದ್ಧಾರೆ. ಸ್ಪೀಕರ್​ಗಳು ಆಡಳಿತ ಪಕ್ಷದ ಹಿತಾಸಕ್ತಿ ಪ್ರಕಾರ ನಡೆದುಕೊಳ್ಳುತ್ತಾರೆ. ಹಿಂದೆಲ್ಲಾ ಸ್ಪೀಕರ್​ಗಳು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದೇ ಹೆಚ್ಚು. ಬಿಜೆಪಿ ಸರ್ಕಾರದ ವೇಳೆ ಇದ್ದ ಬೋಪಯ್ಯ ಕೂಡ ಅಧಿಕಾರ ದುರುಪಯೋಗಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಪೀಕರ್​ಗೆ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ನೀಡಬಾರದು ಎಂದು ಹಿರಿಯ ಅಡ್ವೊಕೇಟ್ ಆಗಿರುವ ಆಚಾರ್ಯ ವಾದಿಸಿದ್ದಾರೆ.

ಇದನ್ನೂ ಓದಿ: ಡಿಕೆಶಿ ಮುಂಬೈನಲ್ಲಿ ಹೋಟೆಲ್​ ಮುಂಭಾಗ ನಿಂತಿದ್ದಾಗ ನಾನು ಹೋಟೆಲ್​ ಒಳಗಡೆಯೇ ಇದ್ದೆ; ಬಿಜೆಪಿ ನಾಯಕ ಆರ್.ಅಶೋಕ್​

ಶಾಸಕರನ್ನು ಅನರ್ಹಗೊಳಿಸಬೇಕೋ ಬೇಡವೋ ಎಂಬುದನ್ನು ತೀರ್ಮಾನಿಸಲು ಸ್ಪೀಕರ್ ಬದಲು ಸ್ವತಂತ್ರ ಸಂಸ್ಥೆಗೆ ಅಧಿಕಾರ ಕೊಡಬೇಕು. ಆಗ ನಿಷ್ಪಕ್ಷಪಾತವಾಗಿ ತೀರ್ಮಾನ ಮಾಡಲು ಸಾಧ್ಯ ಎಂದು ಬಿ.ವಿ. ಆಚಾರ್ಯ ಹೇಳುತ್ತಾರೆ.

ಇನ್ನು, ರಾಜೀನಾಮೆ ನೀಡಿರುವ ಮೈತ್ರಿಪಕ್ಷಗಳ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಮಾಡಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಸಾಧ್ಯವಿಲ್ಲ ಎಂಬ ತಮ್ಮ ಅನಿಸಿಕೆಯನ್ನು ಆಚಾರ್ಯರು ಇವತ್ತು ಪುನರುಚ್ಚರಿಸಿದ್ದಾರೆ. ಪಕ್ಷಾಂತರ ಕಾಯ್ದೆ ಅನ್ವಯವಾದರೆ ಶಾಸಕ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಆದರೆ, ಶಾಸಕರೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವಾಗ ಅವರ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆ ಹೇಗೆ ಅನ್ವಯಿಸುತ್ತೀರಿ ಎಂದು ಬಿ.ವಿ. ಆಚಾರ್ಯ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಇಬ್ಬರು ಶಾಸಕರ ಅನರ್ಹತೆಗೆ ಮನವಿ ಮಾಡಿದ್ದೇವೆ; ದಿನೇಶ್ ಗುಂಡೂರಾವ್; ಅತೃಪ್ತರ ಮೇಲೆ ವಿಪ್​ ಅಸ್ತ್ರ ಪ್ರಯೋಗಕ್ಕೆ ಚಿಂತನೆ

ಇನ್ನು, ಶಾಸಕರ ಅನರ್ಹತೆ ವಿಚಾರದಲ್ಲಿ ಸುಪ್ರೀಂ ಕೋರ್ಟ್​ಗಿಂತ ಸ್ಪೀಕರ್ ಅವರಿಗೇ ಪರಮಾಧಿಕಾರ ಇದೆ ಎಂದು ಕೇಳಿಬರುತ್ತಿರುವ ವಾದವನ್ನು ಬಿ.ವಿ. ಆಚಾರ್ಯ ತಳ್ಳಿಹಾಕಿದ್ದಾರೆ. ಸಂವಿಧಾನದ ಪ್ರಕಾರ ದೇಶದಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೇ ಪರಮೋಚ್ಚ ಅಧಿಕಾರ ಇರುವುದು. ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಒಂದು ವೇಳೆ, ಶಾಸಕರ ರಾಜೀನಾಮೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದೇ ಇದ್ದಲ್ಲಿ ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ಮೈತ್ರಿ ಸರ್ಕಾರಕ್ಕೆ ಬಿ.ವಿ. ಆಚಾರ್ಯ ಎಚ್ಚರಿಕೆ ನೀಡಿದ್ದಾರೆ.
Loading...

ಮೈತ್ರಿಪಕ್ಷಗಳು ಅತೃಪ್ತರನ್ನು ಹಣಿಯಲು ವಿಪ್ ಮತ್ತು ಅನರ್ಹತೆಯ ಅಸ್ತ್ರ ಪ್ರಯೋಗಿಸುತ್ತಿವೆ. ಅಧಿವೇಶನ ಕರೆಯಲಾಗಿದ್ದು, ಈ ವೇಳೆ ಹಣಕಾಸು ಮಸೂದೆಯ ಮಂಡನೆಯಾಗುತ್ತದೆ. ಹೀಗಾದಲ್ಲಿ ಶಾಸಕರು ಕಡ್ಡಾಯವಾಗಿ ಹಾಜರಾಗಲೇಬೇಕಾಗುತ್ತದೆ. ಇದಕ್ಕೆ ವಿಪ್ ಹೊರಡಿಸಲಾಗುತ್ತದೆ. ಶಾಸಕರ ರಾಜೀನಾಮೆಯನ್ನ ಸ್ಪೀಕರ್ ಇನ್ನೂ ಅಂಗೀಕರಿಸಿಲ್ಲವಾದ್ದರಿಂದ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಶಾಸಕರಾಗಿಯೇ ಇರುತ್ತಾರೆ. ವಿಪ್ ಹೊರಡಿಸಿದರೆ ಇವರು ಪಕ್ಷದ ಆದೇಶ ಪಾಲಿಸಲೇಬೇಕು. ಇಲ್ಲದಿದ್ದರೆ ಶಾಸಕ ಸ್ಥಾನದಿಂದಲೇ ಅನರ್ಹಗೊಳಿಸಬಹುದು.

ಇದನ್ನೂ ಓದಿ: ಜೈಲಾದ ಶಕ್ತಿಸೌಧ, ಬಿಗಿ ಪೊಲೀಸ್ ಕಣ್ಗಾವಲು, ಮಾಧ್ಯಮಗಳಿಗೆ ನೋ ಎಂಟ್ರಿ; ಅಸ್ಥಿರ ಸರ್ಕಾರದ ಅರಾಜಕ ನೀತಿ!

ಇದೆಲ್ಲವನ್ನೂ ಪೂರ್ವವಾಗಿ ಅಂದಾಜಿಸಿರುವ ಅತೃಪ್ತ ಶಾಸಕರು ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಇವತ್ತು ಸಂಜೆಯವೊಳಗೆ ರಾಜೀನಾಮೆ ವಿಚಾರವಾಗಿ ತೀರ್ಮಾನಕ್ಕೆ ಬರಬೇಕೆಂದು ಸ್ಪೀಕರ್ ಅವರಿಗೆ ಕೋರ್ಟ್ ಸೂಚನೆ ನೀಡಿದೆ. 10 ಶಾಸಕರ ರಾಜೀನಾಮೆ ಕ್ರಮಬದ್ಧವಾಗಿಲ್ಲವೆಂದು ಸ್ಪೀಕರ್ ಹೇಳಿದ್ದರಿಂದ ಅವರೆಲ್ಲರೂ ಮತ್ತೊಮ್ಮೆ ಕ್ರಮಬದ್ಧವಾಗಿ ರಾಜೀನಾಮೆ ನೀಡುತ್ತಿದ್ಧಾರೆ. ಸಭಾಧ್ಯಕ್ಷರು ಇವತ್ತು ಸಂಜೆಯ ಒಳಗೆ ರಾಜೀನಾಮೆ ನೀಡಿದ ಶಾಸಕರ ವಿಚಾರಣೆ ನಡೆಸಿ ಒಂದು ತೀರ್ಮಾನಕ್ಕೆ ಬಂದು ಅದನ್ನು ಕೋರ್ಟ್​ಗೆ ತಿಳಿಸಬೇಕಿದೆ. ಇಲ್ಲದಿದ್ದರೆ ನ್ಯಾಯಾಂಗ ನಿಂದನೆ ಆಗುವ ಸಾಧ್ಯತೆ ಇದೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:July 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...