ರಶ್​ ಆಗುತ್ತೆ, ನಿಧಾನವಾಗಿ ಹೋಗಿ: ಬಿಜೆಪಿ ನಾಯಕರ ಕಾಲೆಳೆದ ಸ್ಪೀಕರ್​ ರಮೇಶ್​ ಕುಮಾರ್​

news18
Updated:July 12, 2018, 7:34 PM IST
ರಶ್​ ಆಗುತ್ತೆ, ನಿಧಾನವಾಗಿ ಹೋಗಿ: ಬಿಜೆಪಿ ನಾಯಕರ ಕಾಲೆಳೆದ ಸ್ಪೀಕರ್​ ರಮೇಶ್​ ಕುಮಾರ್​
news18
Updated: July 12, 2018, 7:34 PM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಜುಲೈ 12): ಸಂಜೆಯ ನಂತರ ಹಲವು ವಾಗ್ವಾದಗಳಿಗೆ ಕಾರಣವಾದ ಸದನದಲ್ಲಿ ಇಂದೂ ಕೆಲ ಸ್ವಾರಸ್ಯಕರ ಸಂಗತಿಗಳು ನಡೆದವು. ರೈತರ ಸಾಲಮನ್ನಾ, ನೇಕಾರರ ಸಾಲಮನ್ನಾ, ಪೆಟ್ರೋಲ್​-ಡೀಸೆಲ್ ಮೇಲಿನ ತೆರಿಗೆಯ ಹೆಚ್ಚಳವನ್ನು ವಾಪಾಸ್​ ಪಡೆಯುವ ಬಗ್ಗೆ ಸಿಎಂ ಕುಮಾರಸ್ವಾಮಿ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಆರೋಪಿಸಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿ.ಎಸ್​. ಯಡಿಯೂರಪ್ಪ ಸಭಾತ್ಯಾಗ ಮಾಡುವುದಾಗಿ ಘೋಷಿಸಿದರು.

ಸಭಾತ್ಯಾಗ ಮಾಡುವುದಾಗಿ ಯಡಿಯೂರಪ್ಪ ಘೋಷಿಸುತ್ತಿದ್ದಂತೆ ಬಿಜೆಪಿ ಸದಸ್ಯರೆಲ್ಲ ಅವರನ್ನು ಹಿಂಬಾಲಿಸಿದರು. ಆಗ 'ಬಿಜೆಪಿಯವರು ಪಲಾಯನ ಮಾಡುತ್ತಿದ್ದಾರೆ' ಎಂದು ಕಾಂಗ್ರೆಸ್​ ನಾಯಕರು ಕುಳಿತಲ್ಲಿಂದಲೇ ಗೇಲಿ ಮಾಡಿದರು.

ಹೊರಹೋಗುವ ಬಿಜೆಪಿ ಸದಸ್ಯರ ಗದ್ದಲ ಹೆಚ್ಚುತ್ತಿದ್ದಂತೆ, 'ಸದನದಲ್ಲಿ ಜನ ಜಾಸ್ತಿ ಇದ್ದಾರೆ, ಸ್ವಲ್ಪ ಜನ ಹೊರಗೆ ಹೋಗಲಿ ಬಿಡಿ ಎಂದು ಹೇಳಿದ ಸ್ಪೀಕರ್​ ರಮೇಶ್​ ಕುಮಾರ್​. ಹೊರಗೆ ರಶ್​ ಆಗುತ್ತೆ, ಗದ್ದಲ ಮಾಡದೆ ನಿಧಾನವಾಗಿ ಹೋಗಿ ಸ್ವಾಮಿ' ಎಂದು ಸಲಹೆ ನೀಡಿದ ಸ್ಪೀಕರ್​ ರಮೇಶ್​ ಕುಮಾರ್ ಬಿಜೆಪಿಯವರ ಕಾಲೆಳೆದರು.

ಯಡಿಯೂರಪ್ಪ ಅಸಮಾಧಾನ:

ಸದನದಲ್ಲಿ ನಾವು ಕೇಳಿದ ಯಾವ ಪ್ರಶ್ನೆಗೂ ಸಿಎಂ ಕುಮಾರಸ್ವಾಮಿ ಸರಿಯಾದ ಉತ್ತರ ಕೊಟ್ಟಿಲ್ಲ. ಕರ್ನಾಟಕದ ಇತಿಹಾಸದಲ್ಲೇ ಈ ಸಿಎಂ ಬೇಜವಬ್ದಾರಿಯಿಂದ ಉತ್ತರ ಕೊಟ್ಟಿದ್ದಾರೆ. ಇದನ್ನು ‌ನಾವು ಖಂಡಿಸುತ್ತೇವೆ. ಪೆಟ್ರೋಲ್ ಡೀಸೇಲ್ ದರ ಏರಿಕೆ ಮಾಡಿ ಅಕ್ಕಿಯ ವಿತರಣೆಯಲ್ಲಿ 2 ಕೆಜಿ ಕಡಿತ ಮಾಡಿದ್ದಾರೆ.  ಸಾಲಮನ್ನಾದಿಂದ ಅನುಕೂಲ ಆಗಬಹುದು ಎಂದುಕೊಂಡಿದ್ದ ರೈತರಿಗೆ ‌ಸಿಎಂ ದ್ರೋಹ ಮಾಡಿದ್ದಾರೆ. ಎಸ್ಸಿ, ಎಸ್ಟಿ ಸಾಲ, ಸ್ತ್ರೀಶಕ್ತಿ ಸಾಲ, ನೇಕಾರರು, ಮೀನುಗಾರರ ಸಾಲದ ಬಗ್ಗೆ ಚಕಾರ ಎತ್ತಿಲ್ಲ. ಚುನಾವಣೆಯಲ್ಲಿ ಕೊಟ್ಟ ಸುಳ್ಳು ಭರವಸೆಗಳು ಈಡೇರಿಲ್ಲ. ಈ ಸುಳ್ಳು ಭರವಸೆ ನಂಬಿ ಜನರು 37 ಸೀಟು ಕೊಟ್ಟಿದ್ದಾರೆ. ಇಲ್ಲವಾದರೆ ಅವರಿಗೆ 20 ಸೀಟೂ ಸಿಗುತ್ತಿರಲಿಲ್ಲ. ಅಧಿವೇಶನ ಮುಗಿಸಿದ ನಂತರ ಈ ಬಗ್ಗೆ ಅಂಕಿಅಂಶಗಳನ್ನು ಜನರ ಮುಂದೆ ತೆಗೆದುಕೊಂಡು ಹೋಗುತ್ತೇವೆ. ಮೈತ್ರಿ ಸರ್ಕಾರದ ದ್ರೋಹದ ಕೆಲಸವನ್ನು ಜನರಿಗೆ, ರೈತರಿಗೆ ತಿಳಿಸುತ್ತೇವೆ. ಇದನ್ನು ಖಂಡಿಸಿ ಪ್ರತಿ ಜಿಲ್ಲೆಯಲ್ಲೂ ಹೋರಾಟ ‌ಮಾಡುತ್ತೇವೆ ಎಂದು ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...